ಗುಡಿಬಂಡೆ: ಕ್ರೀಡಾ ಅಟಗಾರರಿಗೆ ಸೋಲು ಗೆಲವು ಸಹಜ. ಕ್ರೀಡೆಯನ್ನು ಸವಾಲಾಗಿ ಸ್ವೀಕರಿಸಿ ಎಂದು ಬಿಜೆಪಿ ಪಕ್ಷದ ಮುಖಂಡ ಹಾಗೂ ಸಮಾಜ ಸೇವಕ ಗುಂಜೂರು ಶ್ರೀನಿವಾಸ ರೆಡ್ಡಿ ಕಿವಿಮಾತು ಹೇಳಿದರು.
ತಾಲೂಕಿನ ದಪ್ಪರ್ತಿ ಗ್ರಾಮದ ಅಟದ ಮೈದಾನದಲ್ಲಿ ದಪ್ಪರ್ತಿ, ಗವಿಕುಂಟಹಳ್ಳಿ ಕ್ರಿಕೆಟ್ ಪ್ರೀಮಿಯರ್ ಲೀಗ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು, ಇಂದಿನ ಯುವಕರು ಮತ್ತಷ್ಟು ಕ್ರೀಡಾಭಿಮಾನವನ್ನು ಬೆಳಸಿಕೊಂಡು ಕ್ರೀಡಾ ಅಸಕ್ತಿಯ ಮನೋಭಾವನ್ನು ಬೆಳಸಿಕೊಳ್ಳಬೇಕೆಂದು ಕರೆ ನೀಡಿದರು.
ಎಲ್ಲಾ ಕ್ರೀಡಾ ಅಭಿಮಾನಿಗಳು ಕ್ರೀಡೆಗಳಲ್ಲಿ ಅಸಕ್ತಿ ತೋರಿಸಿ ಮತ್ತಷ್ಟು ಕ್ರೀಡೆಗಳಲ್ಲಿ ಮೊದಲು ಭಾಗವಹಿಸಿ, ನಂತರ ಸೋಲು ಗೆಲವು ಸಾಮಾನ್ಯ ಎಂದರು ಅವರು.
ತಾಲೂಕಿನಲ್ಲಿ ಆಟಗಾರರಿಗೆ ಸುಸಜ್ಜಿತ ಕ್ರೀಡೆಯ ಮೈದಾನ ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕೂಡಲೇ ಸಂಬಂಧಪಟ್ಟವರ ಜತೆ ಮಾತನಾಡಿ ಅಟದ ಮೈದಾನವನ್ನು ಮಾಡಿಸಿಕೊಡುತ್ತೇವೆ ಎಂದು ಅವರು ಭರವಸೆ ನಿಡಿದರು.
ಆಧುನಿಕತೆ ಬೆಳೆದಂತೆ ನಮ್ಮ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿದ್ದು, ಯುವಕರು ಗ್ರಾಮೀಣ ಕ್ರೀಡೆ ಮತ್ತು ಕಲೆಗಳನ್ನು ಉಳಿಸಿ ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂದಿಗೂ ಕ್ರೀಡೆಗಳು ನಿರಂತರವಾಗಿ ನಡೆಯುತ್ತಿದ್ದು, ನಗರ ಪ್ರದೇಶಗಳಲ್ಲಿ ಯುವಕರು ಮೊಬೈಲ್‍ಗೆ ದಾಸರಾಗುತ್ತಿದ್ದಾರೆ. ಕ್ರೀಡೆಗಳು ಪ್ರತಿಯೊಬ್ಬರಲ್ಲೂ ಕ್ರಿಯಾಶೀಲತೆಯನ್ನು ಹೆಚ್ಚಿಸುವುದರ ಜತೆಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ ಎಂದರು.
ಕ್ರೀಡೆಯಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎನ್ನುವುದು ಮುಖ್ಯವಲ್ಲ. ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಬರಬೇಕು. ಗ್ರಾಮೀಣ ಭಾಗದಲ್ಲಿ ಇದೇ ರೀತಿಯ ಕ್ರಿಕೆಟ್ ಸೇರಿದಂತೆ ಇನ್ನಿತರ ಕ್ರೀಡಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಲಿ ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ ನನ್ನ ಸಹಕಾರ ಹಾಗೂ ಸಹಾಯಹಸ್ತ ಇದ್ದೇ ಇರುತ್ತದೆ ಎಂದರು ಕೇಶವರೆಡ್ಡಿ.
ಈ ವೇಳೆ ಪೆರೇಸಂದ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚನ್ನಕೃಷ್ಣ ರೆಡ್ಡಿ, ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಮರೆಡ್ಡಿ, ಹೈಕೋರ್ಟ್ ವಕೀಲ ಚೌಡರೆಡ್ಡಿ, ದಪ್ಪರ್ತಿ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್, ಮುಖಂಡರಾದ ಮುರಳಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.