ಗುಡಿಬಂಡೆ: ನಿಸರ್ಗ ನಿರ್ಮಿತ ಕೂರ್ಮಗಿರಿಯೆಂದೇ ಪ್ರಸಿದ್ಧಿ ಪಡೆದ ಎಲ್ಲೋಡು ಶ್ರೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನೆರೆವೇರಿತು.
ಪ್ರತಿವರ್ಷ ಮಾಘಮಾಸದಲ್ಲಿ 10 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳ ಮೂಲೆಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ, ಹರಕೆ ಸಲ್ಲಿಸುತ್ತಾರೆ. ಅದರಂತೆ ಈ ವರ್ಷವು ಭಕ್ತ ಸಮೂಹ ಹರಿದು ಬಂದಿತ್ತು.
ಭಾನುವಾರ ಶ್ರೀ ಅದಿನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ, ಸೋಮವಾರ ರಾತ್ರಿ ಹೂವಿನ ಪಲ್ಲಕ್ಕಿ ಮೆರೆವಣಿಗೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಪ್ರತಿನಿತ್ಯ ಅನ್ನ ಸಂತರ್ಪಣೆ, ಪಾನಕ ಹೆಸರು ಬೇಳೆಯನ್ನು ಎತ್ತಿನ ಬಂಡಿಗಳಲ್ಲಿ ಹಂಚುವ ರೂಢಿ ಇದೆ. ತಿಂಡಿ ತಿನಿಸುಗಳು, ಮನರಂಜನೀಯ ಆಟೋಟಗಳು ಇಲ್ಲಿ ವಿಶೇಷ ಆಕರ್ಷಣೀಯವಾಗಿರುತ್ತದೆ.
ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದು
ಎಲ್ಲೋಡು, ಐತಿಹಾಸಿ ಪ್ರಸಿದ್ಧಿ ಹೊಂದಿರುವ ಗುಡಿಬಂಡೆ ತಾಲ್ಲೂಕಿಗೆ ಸೇರಿದ ರಾಜ್ಯದ ಒಂದು ಪ್ರಮುಖ ಯಾತ್ರಾ ಸ್ಥಳ. ಪರಮಪವಿತ್ರ ಪಂಚನಾರಾಯಣ ಕ್ಷೇತ್ರಗಳಲ್ಲಿ ಒಂದೆನಿಸಿರುವ ಶ್ರೀ ಲಕ್ಷ್ಮೀ ಆದಿನಾರಾಯಣಸಾಮಿ ಉಗಮ ಸ್ಥಾನವೇ ಕೂರ್ಮಗಿರಿ.
ಎಲ್ಲೋಡು ಬೆಟ್ಟ ಸಂಪೂರ್ಣವಾಗಿ ಆಮೆಯಾಕಾರದಲ್ಲಿ ಇರುವುದರಿಂದ ಇದಕ್ಕೆ ʼಕೂರ್ಮಗಿರಿʼ ಎಂದು ಹೆಸರು ಬಂದಿದೆ. ಪಂಚನಾರಾಯಣ ಕ್ಷೇತ್ರಗಳ ಉಗಮ ಸ್ಥಾನ ಎಂದು ಪುರಾಣ ಪ್ರಸಿದ್ದವಾಗಿದೆ. ಉತ್ತರ ಭಾರತದ ಬದರಿ ಕ್ಷೇತ್ರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಕೈವಾರ ಕ್ಷೇತ್ರದ ಅಮರನಾರಾಯಣ, ಮೇಲುಕೋಟೆ ಚೆಲುವನಾರಾಯಣ ಹಾಗೂ ಎಲ್ಲೋಡಿನ ಆದಿನಾರಾಯಣ ಶ್ರೀ ಮಹಾವಿಷ್ಣು ಅವತಾರದ ಪಂಚನಾರಾಯಣ ಕ್ಷೇತ್ರಗಳೆಂದು ಕರೆಯಲ್ಪಟ್ಟಿದ್ದು ಮಹತ್ವ ಪಡೆದುಕೊಂಡಿದೆ.
ಎಲ್ಲೋಡು ಗ್ರಾಮದ ಪೂರ್ವದಿಕ್ಕಿನಲ್ಲಿ ಪ್ರಕೃತಿ ಮಾತೆಯಿಂದ ಪವಿತ್ರ ಗಿರಿಯಾಗಿ ಕಂಗೊಳಿಸಿದೆ. ಪ್ರಕೃತಿಯಿಂದ ನಿರ್ಮಾಣವಾಗಿರುವ ಗುಹೆಯಲ್ಲಿ ಮಹಾವಿಷ್ಣುವು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಎಂಬ ಹೆಸರಿನಿಂದ ಶಿಲಾಮೂರ್ತಿಯಾಗಿ ಉದ್ಬವಿಸಿ ಭಕ್ತರ ಕೋರಿಕೆಗಳನ್ನು ಈಡೇರಿಸಿ ಲೋಕ ಕಲ್ಯಾಣ ಮಾಡುತ್ತಿದ್ದಾನೆ ಎಂಬ ನಂಬಿಕೆ ಇದೆ. ಈ ಕ್ಷೇತ್ರ ರಾಜ್ಯ ಸೇರಿದಂತೆ ಆಂದ್ರ, ತಮಿಳುನಾಡು, ಒರಿಸ್ಸಾ ಮುಂತಾದ ಹೊರರಾಜ್ಯಗಳಲ್ಲಿಯೂ ಪ್ರಸಿದ್ಧ ಪಡೆದುಕೊಂಡಿದೆ.