ಸಚಿವರ ವಿರುದ್ಧ ಪೋಲೀಸರಿಗೆ ದೂರು; ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಬೆಂಗಳೂರು: ಯಾಕೋ ಯಡಿಯೂರಪ್ಪ ಅವರ ಸರಕಾರದ ಟೈಮೇ ಸರಿ ಇಲ್ಲವೇನೋ. ಮೀಸಲು ಹೋರಾಟ, ಆಂತರಿಕ ಭಿನ್ನಮತ ಮತ್ತಿತರೆ ಕಾರಣಗಳಿಂದ ಹೈರಾಣವಾಗಿರುವ ಸರಕಾರಕ್ಕೆ ಇದೀಗ ಬೆಳಗಾವಿ ಮೂಲದ ಸಚಿವರೊಬ್ಬರು ದೊಡ್ಡ ಸಮಸ್ಯೆ ಆಗಿದ್ದಾರೆ.
ಮಹಿಳೆಯೊಬ್ಬರ ಜತೆ ಅವರು ನಡೆಸಿದ್ದಾರೆ ಎನ್ನಲಾದ ರಾಸಲೀಲೆ ಸಿಡಿ ಬಹಿರಂಗವಾಗಿದ್ದು, ಬಿಜೆಪಿಯಲ್ಲಿ ತಳಮಳ ಉಂಟಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಮತ್ತೊಂದೆಡೆ; ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೆರಿ, ಅಸೋಮ್ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ರಣಾಂಗಣದಲ್ಲಿರುವ ಕಮಲ ಪಾಳಯಕ್ಕೆ ಸಿಕ್ಕಾಪಟ್ಟೆ ಮುಜುಗರ ಉಂಟಾಗಿದೆ. ಆ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ದೊಡ್ಡ ಅಸ್ತ್ರವನ್ನಾಗಿ ಈ ವಿಷಯನ್ನೇ ಬಳಸಿಕೊಳ್ಳುವ ಸಾಧ್ಯತೆ ಇದೆ.
ಬುಧವಾರ ಸಂಪುಟ ಸಭೆ ಇದೆ. ಗುರುವಾರದಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಪ್ರತಿಪಕ್ಷಗಳಿಗೆ ಇದೇ ಪ್ರಬಲ ಅಸ್ತ್ರವಾಗಿದ್ದು, ಆಡಳಿತ ಪಕ್ಷಕ್ಕೆ ದೊಡ್ಡ ಮುಜುಗರ ತರುವುದರಲ್ಲಿ ಸಂಶಯವೇನೂ ಅಲ್ಲ. ಹೀಗಾಗಿ ಅವರ ರಾಜೀನಾಮೆ ಪಡೆಯುವ ಬಗ್ಗೆ ಸಿಎಂ ಚಿಂತನೆ ಮಾಡುತ್ತಿದ್ದಾರೆಂದು, ಹೈಕಮಾಂಡ್ ಕೂಡ ರಾಜೀನಾಮೆ ಪಡೆಯಬೇಕು ಎಂದು ಸೂಚಿಸಿದೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ, ಈ ರಾಸಲೀಲೆ ಸಿಡಿ ಈಗಾಗಲೇ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ಮುಟ್ಟಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಪೊಲೀಸರಿಗೆ ದೂರು
ವಿದ್ಯುನ್ಮಾನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲೂ ರಾಸಲೀಲೆ ಪ್ರಸಂಗ ಭಾರೀ ಸದ್ದು ಮಾಡುತ್ತಿದ್ದು, ಟ್ವಿಟರ್‌ನಲ್ಲಿ ವ್ಯಾಪಕವಾಗಿ ಟ್ರೆಂಡ್ ಆಗುತ್ತಿದೆ. ಮತ್ತೊಂದೆಡೆ, ಸಂತ್ರಸ್ತ ಮಹಿಳೆಯ ಪರವಾಗಿ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಾರ್ಟ್ ಫಿಲ್ಮ್ ನಿರ್ಮಿಸಲು ಬೆಂಗಳೂರಿಗೆ ಬಂದಿದ್ದ ಉತ್ತರ ಕರ್ನಾಟಕದ ಯುವತಿಯೊಬ್ಬರಿಗೆ ಕೆಪಿಟಿಸಿಎಲ್ʼನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ ಸಚಿವರು, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಆದರೆ, ಆಕೆಗೆ ಉದ್ಯೋಗವೂ ಕೊಡಿಸದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಆರೋಪಿಸಿದ್ದಾರೆ.
ಎಷ್ಟು ದಿನವಾದರೂ ಕೆಲಸ ಕೊಡಿಸದ ಸಚಿವರ ವಿರುದ್ಧ ಸಿಟ್ಟಿಗೆದ್ದ ಯುವತಿ ವಿಡಿಯೋ ಬಹಿರಂಗ ಮಾಡುವುದಾಗಿ ಹೇಳಿದಾಗ ಸಚಿವರು ಆಕೆಗೆ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಚಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ದೂರು ನೀಡಿದ ನೀಡಿದ ನಂತರ ಕಲ್ಲಹಳ್ಳಿ ಮಾಧ್ಯಮಗಳಿಗೆ ಎಲ್ಲ ವಿವರ ನೀಡಿದ್ದಾರೆ.
ದಿನೇಶ್ ಕಲ್ಲಹಳ್ಳಿ ದೂರು ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಪಿ ಅನುಚೇತ್ ಅವರು; “ದಿನೇಶ್ ಕಲ್ಲಹಳ್ಳಿ ದೂರು ಕೊಟ್ಟಿದ್ದಾರೆ. ಅದನ್ನು ನಾವು ಸ್ವೀಕರಿಸಿದ್ದೇವೆ. ನಾವು ತನಿಖೆ ಆರಂಭಿಸಿದ್ದೇವೆ. ಕಲ್ಲಹಳ್ಳಿ ಮೂರನೇ ವ್ಯಕ್ತಿ, ಅವರು ದೂರು ನೀಡಿದ್ದಾರೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ನಾವು ತನಿಖೆ ಮಾಡುತ್ತಿದ್ದೇವೆ” ಎಂದಿದ್ದಾರೆ.
ಸಿಎಂ ಸಮಾಲೋಚನೆ
ಇನ್ನೊಂಡೆದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ರಾಸಲೀಲೆ ಪ್ರಕರಣಕೆ ಸಂಬಂಧಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತಮ್ಮ ಆಪ್ತ ವಲಯದಲ್ಲಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಆ ಸಚಿವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಕೆಲವರು ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಕಾಂಗ್ರೆಸ್ ಪ್ರತಿಭಟನೆ
ಇದೇ ವೇಳೆ ರಾಸಲೀಲೆ ಬಹಿರಂಗವಾಗುತ್ತಿದ್ದಂತೆಯೇ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್, ಕೂಡಲೇ ಆ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯ ಮಾಡಿದೆ.
ತಪ್ಪಾಗಿದ್ದರೆ ಖಂಡಿತಾ ಕ್ರಮ
ಇದರ ನಡುವೆ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, “ಘಟನೆಯ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ನಮ್ಮ ಬಿಜೆಪಿ ಶುದ್ಧವಾದ ಪಕ್ಷ. ಇಲ್ಲಿರುವ ನಾಯಕರ ಚಾರಿತ್ರ್ಯ ಶುದ್ಧವಾಗಿರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಒಂದು ವೇಳೆ ತಪ್ಪಿದ್ದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಜತೆ ಮಾತನಾಡುತ್ತೇನೆ” ಎಂದಿದ್ದಾರೆ.