ಡಿಸಿಎಂ ಸಂಧಾನ; ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕಂಪನಿ ಪ್ರತಿನಿಧಿಗಳು, ಉನ್ನತ ಅಧಿಕಾರಿಗಳ ಜತೆ ಸಭೆ
ಬೆಂಗಳೂರು: ಕಳೆದ 115 ದಿನಗಳಿಂದ ಕಗ್ಗಂಟಾಗಿದ್ದ ಬಿಡದಿಯ ಟೊಯೋಟ ಕಿರ್ಲೋಸ್ಕರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೊನೆಗೂ ಸಫಲರಾಗಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಟೊಯೋಟ ಕಿರ್ಲೋಸ್ಕರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸುದೀಪ್ ದಾಲ್ವೆ, ಉಪಾಧ್ಯಕ್ಷ ಶಂಕರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ ಜತೆ ಮಹತ್ವದ ಮಾತುಕತೆ ನಡೆಸಿದ ಡಿಸಿಎಂ; ಈ ತಿಂಗಳ 5ನೇ ತಾರೀಖಿನೊಳಗೆ ಎಲ್ಲ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಹಾಗೂ ಇಂಥ ಸಮಸ್ಯೆಗಳು ಭವಿಷ್ಯದಲ್ಲಿ ಮರುಕಳಿಸಬಾರದು ಎಂದು ಆಡಳಿತ ಮಂಡಳಿ ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು.
ಬಿಕ್ಕಟ್ಟು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. 2,800 ಕಾರ್ಮಿಕರು ಇದೀಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇನ್ನೂ ಈ ತಿಂಗಳ 5ನೇ ದಿನಾಂಕದವರೆಗೂ ಸಮಯ ಇದೆ. ಅಷ್ಟರೊಳಗೆ ಉಳಿದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 2,800 ಕಾರ್ಮಿಕರು ಈಗಾಗಲೇ ಆಡಳಿತ ಮಂಡಳಿಗೆ ಮುಚ್ಚಳಿಕೆ ಬರೆದುಕೊಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಲ್ಲಿ 1,000 ಕಾರ್ಮಿಕರಿಗೆ ಯೂನಿಯನ್ ಕಡೆಯಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈ ಆಧಾರದ ಮೇಲೆಯೇ ಇವರೆಲ್ಲರೂ ಈಗ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಡಿಸಿಎಂ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರಾಜ್ಯದ ಹೆಗ್ಗಳಿಕೆಗೆ ಧಕ್ಕೆ ಬೇಡ
ಸುದೀರ್ಘವಾಗಿ ಮುಂದುವರಿದಿದ್ದ ಬಿಕ್ಕಟ್ಟು ಬಗೆಹರಿದ್ದು ನನಗೆ ಸಂತೋಷ ಉಂಟು ಮಾಡಿದೆ. ಕಾನೂನು ಪ್ರಕಾರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ ಹಾಗೂ ಕಾರ್ಮಿಕರು ಕೂಡ ಯಾವುದೇ ಸಮಸ್ಯೆಗೆ ಅವಕಾಶ ನೀಡದಂತೆ ಉತ್ತಮವಾಗಿ ಕೆಲಸ ಮಾಡಬೇಕು. ಆ ಮೂಲಕ ಕರ್ನಾಟಕವು ಕೈಗಾರಿಕಾಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು ಉಪ ಮುಖ್ಯಮಂತ್ರಿ.
ಕಾರ್ಮಿಕರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಹಳೆಯದನ್ನು ಕೆದಕುವುದು ಬೇಡ. ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಯೂ ಮುಖ್ಯ. ಅದೇ ರೀತಿ ಕಾರ್ಮಿಕರ ಹಿತರಕ್ಷಣೆಯೂ ಸರಕಾರಕ್ಕೆ ಆದ್ಯತೆಯ ವಿಷಯ. ಹೀಗಾಗಿ ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಬೇಡ. ಕಂಪನಿಯೂ ಚೆನ್ನಾಗಿರಬೇಕು ಮತ್ತು ಕಾರ್ಮಿಕರು ಚೆನ್ನಾಗಿರಬೇಕು ಎಂಬುದು ಸರಕಾರದ ನೀತಿ ಎಂದು ಡಿಸಿಎಂ ಹೇಳಿದರು.
ಬಿಕ್ಕಟ್ಟು ಶಮನಕ್ಕೆ ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್. ಮಾಗಡಿ ಶಾಸಕರಾದ ಮಂಜುನಾಥ್ ಸಾಕಷ್ಟು ಶ್ರಮಿಸಿದ್ದಾರೆ ಎಂದ ಉಪ ಮುಖ್ಯಮಂತ್ರಿ, ರಾಜ್ಯವು ಆಟೋಮೊಬೈಲ್ ಕ್ಷೇತ್ರದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಹೊಸ ಹೊಸ ಹೂಡಿಕೆಗಳು ಬರುತ್ತಿವೆ. ಇಂಥ ಹೊತ್ತಿನಲ್ಲಿ ಈ ಪರಿಸ್ಥಿತಿ ಅನಗತ್ಯವಾಗಿತ್ತು. ಈಗ ಎಲ್ಲವೂ ಮುಗಿದ ಅಧ್ಯಾಯವಾಗಿದ್ದು ರಾಜ್ಯಕ್ಕೆ ಕಪ್ಪುಚುಕ್ಕೆ ತರುವ ಕೆಲಸ ಯಾರು ಮಾಡುವುದು ಬೇಡ ಎಂದರು.
ಕೋವಿಡ್ ಕಾರಣಕ್ಕೆ ಕರ್ನಾಟಕ ಎಲ್ಲ ಕ್ಷೇತ್ರಗಳಲ್ಲೂ ಕಷ್ಟಕ್ಕೆ ಸಿಲುಕಿತ್ತು. ಆದರೂ ರಾಜ್ಯದ ಆರ್ಥಿಕತೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಉದ್ಯೋಗ ನಷ್ಟ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.
ವಿಸ್ತರಣಾ ಯೋಜನೆ ನಿಲ್ಲುವುದು ಬೇಡ
ಟೊಯೋಟ-ಕಿರ್ಲೋಸ್ಕರ್ ಕಂಪನಿ ಕೈಗೊಂಡಿರುವ ವಿಸ್ತರಣಾ ಯೋಜನೆ ನಿಲ್ಲುವುದು ಬೇಡ. ಎಲೆಕ್ಟ್ರಿಕ್ ಕಾರು ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕಂಪನಿ ಹಾಕಿಕೊಂಡಿದೆ. ಇದರಿಂದ 25 ಸಾವಿರ ಕುಟುಂಬಗಳಿಗೆ ಪ್ರತ್ಯಕ್ಷ- ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ಈ ವಿಸ್ತರಣಾ ಕಾರ್ಯಕ್ರಮ ನಿಲ್ಲುವುದು ಬೇಡ ಎಂದು ಡಿಸಿಎಂ ಹೇಳಿದರು.
ಈ ಸಂದರ್ಭದಲ್ಲಿ ಟೊಯೋಟ ಕಿರ್ಲೋಸ್ಕರ್ ಅಧಿಕಾರಿಗಳು ಬಿಕ್ಕಟ್ಟು ಶಮನಕ್ಕೆ ಕಾರಣರಾದ ಉಪ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.
ಏನಿದು ಬಿಕ್ಕಟ್ಟು?
115 ದಿನಗಳ ಟೊಯೋಟ ಕಿಲ್ರೋಸ್ಕರ್ ಕಾರ್ಮಿಕರ ಮುಷ್ಕರ 2020ರ ನವೆಂಬರ್ 10ರಿಂದ ಮುಷ್ಕರ ಆರಂಭವಾಗಿತ್ತು. ಕೆಲ ಕ್ಷುಲ್ಲಕ ಕಾರಣಕ್ಕೆ ಇದು ಮುಷ್ಕರದ ಹಾದಿ ಹಿಡಿದಿತ್ತು. ಬಳಿಕ ಕಂಪನಿಯು ಲಾಕೌಟ್ ಘೋಷಣೆ ಮಾಡಿತ್ತು.
ನಂತರ, ರಾಜಿ ಸಂಧಾನ ಹಾಗೂ ಸರಕಾರದ ಪ್ರಯತ್ನದಿಂದಾಗಿ ನವೆಂಬರ್ 19ರಿಂದ ಜಾರಿಗೆ ಬರುವಂತೆ ಲಾಕೌಟ್ ಅನ್ನು ಟೊಯೋಟ ವಾಪಸ್ ಪಡೆದುಕೊಂಡಿತ್ತು. ಅದಾದ ಮೇಲೂ ಅನೇಕ ನೌಕಕರು ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕಂಪನಿ ಮತ್ತೊಮ್ಮೆ ಲಾಕೌಟ್ ಘೋಷಣೆ ಮಾಡಿತ್ತು. ಕೊನೆಗೆ, ನವೆಂಬರ್ 23ರಿಂದ ಕೆಲಸಕ್ಕೆ ಹಾಜರಾಗಲು ಕಾರ್ಮಿಕರಿಗೆ ಆಡಳಿತ ಮಂಡಳಿ ಅವಕಾಶ ನೀಡಿತ್ತು. ಇದೀಗ ಒಟ್ಟಾರೆ ಬಿಕ್ಕಟ್ಟು ಬಗೆಹರಿದಿದೆ.
ಕಾರ್ಮಿಕ ಆಯುಕ್ತ ಅಕ್ರಂ ಪಾಷ, ರಾಮನಗರ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಮಾಗಡಿ ಶಾಸಕ ಮಂಜುನಾಥ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.