ಚಿಕ್ಕಬಳ್ಳಾಪುರ: ಜಿಲ್ಲೆಯ ದೇವರಮಳ್ಳೂರು ಗ್ರಾ.ಪಂ. ಆವರಣದಲ್ಲಿ ನಾನಾ ಜಾತಿಯ ಗಿಡಗಳನ್ನು ನೆಟ್ಟಿರುವುದಾಗಿ, ಅದನ್ನು ನರೇಗಾ ಯೋಜನೆಯಡಿ ಕೆಲಸಕ್ಕೆ (ಜಾಬ್ ಕಾರ್ಡುದಾರರು) ಕೂಲಿ ಹಣವನ್ನು ನೀಡಲೆಂದು 61,875 ರೂ.ಗಳನ್ನು ಡ್ರಾ ಮಾಡಿ ಆ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ದೇವರಮಳ್ಳೂರಿನ ವೆಂಕಟೇಶ್ (ಚಕ್ರವರ್ತಿ) ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡದೆಯೇ ನಾಟಿ ಮಾಡಿರುವುದಾಗಿ ವರದಿಗಳನ್ನು ಸಿದ್ಧಪಡಿಸಿಕೊಂಡು ಹಣ ಡ್ರಾ ಮಾಡಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಅವರು ಮನವಿ ಮಾಡಿದ್ದಾರೆ.
ಈ ಸಂಬಂಧ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಅವರ ಸೂಚನೆಯಂತೆ ತಾ.ಪಂ. ನರೇಗಾ ಸಹಾಯಕ ನಿರ್ದೆಶಕ ಚಂದ್ರಪ್ಪ ಸ್ಥಳ ತನಿಖೆ ಮಾಡಿ ಪರಿಶೀಲಿಸಿದ್ದು, ಗ್ರಾ.ಪಂ.ಆವರಣದಲ್ಲಿ ಯಾವುದೆ ರೀತಿಯ ಗಿಡಗಳನ್ನು ನೆಟ್ಟಿರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
61,875 ರೂ. ಅಕ್ರಮವಾಗಿ ಡ್ರಾ
ಗಿಡಗಳನ್ನು ನಾಟಿ ಮಾಡಿರುವುದಾಗಿ ನರೇಗಾ ಯೋಜನೆಯಡಿ 61,875 ರೂ.ಗಳನ್ನು ಅಕ್ರಮವಾಗಿ ಡ್ರಾ ಮಾಡಿರುವುದು ಕಂಡು ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಹಾಗೂ ಇನ್ನಿತರೆ ಹಿರಿಯ ಅಧಿಕಾರಿಗಳಿಗೆ ಚಂದ್ರಪ್ಪ ವರದಿ ಸಲ್ಲಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡದೆಯೇ ನಾಟಿ ಮಾಡಿರುವಂತೆ ಹಣ ಡ್ರಾ ಮಾಡಿರುವುದು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮಾಕಾಂತ್ ಅವರ ನಿರ್ಲಕ್ಷ್ಯ ಹಾಗೂ ಕರ್ತವ್ಯಲೋಪ ಎಂಬುದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಿಡಿಒಗೆ ನೊಟೀಸ್
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಕಾಂತ್ ಅವರು ದೇವರಮಳ್ಳೂರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ರಮಾಕಾಂತ್ ಅವರಿಗೆ ಗಿಡಗಳನ್ನು ನಾಟಿ ಮಾಡದೆಯೆ ನರೇಗಾದಡಿ ಹಣ ಡ್ರಾ ಮಾಡಿರುವ ಬಗ್ಗೆ ಲಿಖಿತವಾಗಿ ಸಮಜಾಯಿಷಿ ನೀಡುವಂತೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೆ ನಿಮ್ಮ ಮೇಲಿನ ಹಣ ದುರುಪಯೋಗದ ದೂರು ಗಂಭೀರ ಸ್ವರೂಪದ್ದಾಗಿದ್ದು ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿದ ನಿಮ್ಮ ವಿರುದ್ದ ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಏಕೆ ಕ್ರಮ ಕೈಗೊಳ್ಳಬಾರು ಎಂದು ನೊಟೀಸ್‍ನಲ್ಲಿ ಪಿಡಿಒ ಅವರನ್ನು ಪ್ರಶ್ನಿಸಲಾಗಿದೆ.
ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಗಿಡಗಳನ್ನು ನಾಟಿ ಮಾಡದೆಯೆ ನಾಟಿ ಮಾಡಿರುವಂತೆ ದಾಖಲೆಗಳನ್ನು ಸೃಷ್ಟಿಸಿ ನರೇಗಾದಡಿ ಹಣ ಡ್ರಾ ಮಾಡಿರುವ ಬಗ್ಗೆ ಕಾರಣ ಕೇಳಿ 3 ದಿನಗಳ ಅವಕಾಶ ನೀಡಿ ಫೆ.23ರಂದು ಪಿಡಿಒ ಅವರಿಗೆ ನೊಟೀಸ್ ನೀಡಲಾಗಿದೆ. ಆದರೂ ಇದುವರೆಗೂ ಅವರಿಂದ ಉತ್ತರ ಬಂದಿಲ್ಲ ಎಂದು ಸಹಾಯಕ ನಿರ್ದೇಶಕರ ಮಾತು.
ಇನ್ನು ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಅಧಿಕಾರಿಗಳ ಸೂಚನೆಯಂತೆ ಕಾನೂನು ಚೌಕಟ್ಟಿನಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನರೇಗಾ ಸಹಾಯಕ ನಿರ್ದೆಶಕ ಚಂದ್ರಪ್ಪ ತಿಳಿಸಿದ್ದಾರೆ.
***
- ಮೇಲಿನ ಚಿತ್ರ: ಗಿಡ ನೆಡದೇ ಬಿಲ್ ಮಾಡಿಕೊಂಡಿರುವ ಜಾಗವನ್ನು ಪರಿಶೀಲನೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ ದೇವರಮಳ್ಳೂರಿನ ವೆಂಕಟೇಶ್ (ಚಕ್ರವರ್ತಿ).