ಇದು ಸರಿಯಲ್ಲ, ಇದು ಆರೆಸ್ಸೆಸ್ ಅಜೆಂಡಾ ಎಂದ ಸಿದ್ದರಾಮಯ್ಯ; ಇಲ್ಲ, ಈ ನೀತಿಯಿಂದ ದೇಶ ಉದ್ಧಾರವಾಗುತ್ತದೆ ಎಂದ ಯಡಿಯೂರಪ್ಪ
ಬೆಂಗಳೂರು: ಬಜೆಟ್ ಅಧಿವೇಶನಕ್ಕಾಗಿ ಕರೆಯಲಾಗಿರುವ ರಾಜ್ಯ ವಿಧಾನಸಭೆ ಕಲಾಪವು ಗುರುವಾರ ಅನೇಕ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಫುಲ್ ಗರಂ ಆದ ಪ್ರಸಂಗ ನಡೆಯಿತು.
ಕಲಾಪ ಆರಂಭವಾದ ಕೂಡಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು; ʼಒಂದು ರಾಜ್ಯ, ಒಂದು ಚುನಾವಣೆʼ ವಿಷಯ ಬಗ್ಗೆ ಸ್ಪೀಕರ್ ಚರ್ಚೆಗೆ ಕೈಗೆತ್ತಿಕೊಳ್ಳಲು ವಿಷಯ ಮಂಡನೆ ಮಾಡಲು ಮುಂದಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದರು. ʼಒಂದು ದೇಶ -ಒಂದು ಚುನಾವಣೆ ಎಂಬ ಪರಿಕಲ್ಪನೆಯೇ ವಾಸ್ತವ ಸ್ಥಿತಿಗೆ ದೂರವಾದದ್ದುʼ ಎಂದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಸಿದ್ದರಾಮಯ್ಯ ಮಾತಿಗೆ ದನಿಗೂಡಿಸಿದರು.
ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಅವರು; ಇದೇ ವಿಷಯದ ಬಗ್ಗೆ ಮೊದಲು ಚರ್ಚೆಗೆ ಮಾಡುವುದಾಗಿ ಒಪ್ಪಿಕೊಂಡು ನಂತರ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ಕಾಗದ ಪತ್ರಗಳನ್ನು ಹರಿದು ಎಸೆದರು
“ಇದು ಸರಿಯಲ್ಲ. ಇದು ಆರೆಸ್ಸೆಸ್ ಅಜೆಂಡಾ” ಎಂದು ಸಿದ್ದರಾಮಯ್ಯ ಕೂಗಿ ಹೇಳಿದರು. ಇದೇ ವೇಳೆ ಈ ವಿರೋಧವನ್ನು ಲೆಕ್ಕಿಸದ ಸ್ಪೀಕರ್ ಅವರು ವಿಷಯ ಮಂಡನೆ ಮುಂದುವರಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರೆಲ್ಲರೂ ಸದನ ಬಾವಿಗಿಳಿದು ಪ್ರತಿಭಟನೆಗಿಳಿದರು. ಕಾಗದ ಪತ್ರಗಳನ್ನು ಹರಿದು ಎಸೆದರು.
ಆದಾಗ್ಯೂ ಮಾತು ಮುಂದುವರಿಸಿದ ಸ್ಪೀಕರ್, ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ನಡುವೆಯೂ ನಮ್ಮ ಕೆಲಸವನ್ನು ಪೂರ್ಣಗೊಳಿಸಿದರು. ಇದೇ ಸಂದರ್ಭದಲ್ಲಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಭದ್ರಾವತಿ ಶಾಸಕ ಸಂಗಮೇಶ್ ತಮ್ಮ ಅಂಗಿಬಿಚ್ಚಿ ವಿರೋಧ ವ್ಯಕ್ತಪಡಿಸಿದರು.
ಸಂಗಮೇಶ್ ಅವರ ವರ್ತನೆ ಕಂಡು ಕೆಂಡಾಮಂಡಲರಾದ ಸ್ಪೀಕರ್ ಕಾಗೇರಿ ಅವರು; ಸಂಗಮೇಶ ಅವರಿಗೆ ಕಟುವಾದ ಶಬ್ದಗಳೊಂದಿಗೆ ಎಚ್ಚರಿಕೆ ನೀಡಿದರಲ್ಲದೆ; “ನಿಮ್ಮ ವರ್ತನೆ ನಿಮ್ಮ ಭದ್ರಾವತಿ ಜನರಿಗೆ ಮಾಡಿದ ಅಪಮಾನ. ಇದೇನು ಸದನವಾ ಅಥವಾ ರಸ್ತೆಯಾ? ಮೊದಲು ಸರಿಯಾಗಿರುವುದನ್ನು ಕಲಿತುಕೊಳ್ಳಿ. ಇದು ಒಳ್ಳೆಯದಲ್ಲ ಇದು. ಸದನದಲ್ಲಿ ನಡೆದುಕೊಳ್ಳುವುದನ್ನು ಮೊದಲು ಕಲಿತುಕೊಳ್ಳಿ” ಎಂದು ಹೇಳಿದರು.
Courtesy: B K Sangamesh Bhadravathi facebook
ಸ್ಪೀಕರ್ ಅವರ ಎಚ್ಚರಿಕೆಗೂ ಕಿವಿಗೊಡದ ಸಂಗಮೇಶ್ ಅದೇ ಆವತಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಪೀಕರ್ ಮತ್ತೊಮ್ಮೆ ಎಚ್ಚರಿಕೆ ನೀಡಿದರಲ್ಲದೆ, ಕೂಡಲೇ ಅಂಗಿ ಹಾಕಿಕೊಂಡು ಸ್ವಸ್ಥಾನಕ್ಕೆ ಹೋಗಿ ಕೂರದಿದ್ದರೆ ಸದನದಿಂದ ಹೊರಹಾಕಲಾಗುವುದು ಎಂದು ಎಚ್ಚರಿಕೆ ನೀಡಿದಾಗ ಕೊನೆಗೆ ಡಿ.ಕೆ.ಶಿವಕುಮಾರ್ ಬಂದು ಅವರಿಗೆ ಆಂಗಿ ಹಾಕಿಸಿದರು.
ಇದರ ಮಧ್ಯೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆಯೂ ತಮ್ಮ ಅಭಿಪ್ರಾಯ ಮಂಡಿಸಿದರಲ್ಲದೆ, ಒಂದು ದೇಶ ಮತ್ತು ಒಂದು ಚುನಾವಣೆ ವಿಷಯಕ್ಕೆ ಬೆಂಬಲ ವ್ಯಕ್ತಪಡಿಸಿದರಲ್ಲದೆ ದೇಶಕ್ಕೆ ಈ ನೀತಿಯು ಅತ್ಯಗತ್ಯವಾಗಿದೆ ಎಂದರು.
ತಮ್ಮ ಮಾತು ಮುಗಿಸುವ ಮುನ್ನ ಮುಖ್ಯಮಂತ್ರಿಗಳು ಕೂಡ ಪ್ರತಿಪಕ್ಷ ಸದಸ್ಯರ ವರ್ತನೆಯನ್ನು ಖಂಡಿಸಿದರು. ಕೊನೆಗೆ ಸಭಾಧ್ಯಕ್ಷರು ಕಲಾಪವನ್ನು ಹದಿನೈದು ನಿಮಿಷ ಮುಂದೂಡಿದರು.