ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ತಾಲ್ಲೂಕುಗಳಲ್ಲಿ ಕನ್ನಡಾಭಿವೃದ್ಧಿ, ಕನ್ನಡ ಶಾಲೆಗಳ ಉಳಿವಿಗಾಗಿ ಜಿಲ್ಲಾಧಿಕಾರಿಗೆ ಕೋರಿಕೆ I ಚಿಕ್ಕಬಳ್ಳಾಪುರದಲ್ಲಿ ಕನ್ನಡ ಭವನ ಶೀಘ್ರವಾಗಿ ನಿರ್ಮಾಣ I ಆಡಳಿತದಲ್ಲಿ ಕನ್ನಡಕ್ಕಾಗಿ ರಾಜ್ಯದ 20 ಜಿಲ್ಲಾಧಿಕಾರಿಗಳಿಗೂ ಪತ್ರ
ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ (ಫೆ.27-28) ಸರ್ವಾಧ್ಯಕ್ಷರಾಗಿದ್ದ ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು, ಈ ಮೊದಲೇ ಹೇಳಿದಂತೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಅಂಶಗಳು ಹಾಗೂ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲಿ ಪ್ರಯತ್ನ ಆರಂಭಿಸಿದ್ದಾರೆ.
ಜಿಲ್ಲೆಯ ಸಮಸ್ಯೆಗಳ ಬಗ್ಗೆ ರಾಜ್ಯ ಜಲಮಂಡಳಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಹಾಗೂ ಕನ್ನಡ ಅಭಿವೃದ್ಧಿಯ ಬಗ್ಗೆ 20 ಜಿಲ್ಲಾಧಿಕಾರಿಗಳಿಗೆ ಮಾರ್ಚ್ 4ರಂದು ಪತ್ರಗಳನ್ನು ಬರೆದಿದ್ದಾರೆ ಅಮರನಾರಾಯಣ.
ಎಚ್.ಎನ್.ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ
ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಲಾಗುತ್ತಿರುವ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕೆಂದು ಅಮರನಾರಾಯಣ ಅವರು ಸರಕಾರವನ್ನು ಕೋರಿದ್ದಾರೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಅವರಿಗೆ ಪತ್ರ ಬರೆದಿರುವ ಅವರು, ಈ ನೀರು ಜಿಲ್ಲೆಯ ೪೪ ಕೆರೆಗಳನ್ನು ಸೇರುತ್ತದೆ. ಹೀಗಾಗಿ ಉಪೇಕ್ಷೆ ಮಾಡದೇ ಈ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಿ ಹರಿಸಬೇಕೆಂದು ಮನವಿ ಮಾಡಿದ್ದಾರೆ.
ಮನುಷ್ಯರು ಮಾತ್ರವಲ್ಲದೆ, ಪಶುಪಕ್ಷಿಗಳು, ಜಲಚರ ಹಾಗೂ ಇಡೀ ಜೀವ ಸಂಕುಲಕ್ಕೆ ಶುದ್ಧ ನೀರಿನ ಅಗತ್ಯವಿದೆ. ಹೀಗಾಗಿ ಬೆಂಗಳೂರು ಕೊಳಚೆ ನೀರನ್ನು ಮೂರು ಹಂತಗಳಲ್ಲಿ ಸಂಸ್ಕರಿಸಿದ ಮೇಲೆ ಜಿಲ್ಲೆಗೆ ಹರಿಸುವುದು ಸೂಕ್ತವಾಗಿದೆ ಹಾಗೂ ಸರಕಾರದ ಜವಾಬ್ದಾರಿಯೂ ಆಗಿದೆ ಎಂದು ಅವರು ಜಲಮಂಡಳಿ ಅಧ್ಯಕ್ಷರ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಜನರು ಈ ನೀರಿನ ಬಗ್ಗೆ ಆತಂಕದಿಂದಿದ್ದಾರೆ. ಮೂರನೇ ಹಂತದಲ್ಲಿ ನೀರನ್ನು ಸಂಸ್ಕರಿಸದಿರಲು ಕಾರಣಗಳೇನು? ಅದಕ್ಕೆ ಇರುವ ತೊಡಕುಗಳೇನು? ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳೇನು? ಇತ್ಯಾದಿಗಳ ಬಗ್ಗೆ ಮುಕ್ತ ಸಂವಾದ ನಡೆಸಬೇಕಾಗಿದೆ ಎಂದಿರುವ ಅಮರನಾರಾಯಣ, ಈ ಬಗ್ಗೆ ಜನಾಭಿಪ್ರಾಯವನ್ನು ಪರಿಗಣಿಸುವುದು ಅತ್ಯಂತ ಮುಖ್ಯ. ಈ ಸಂವಾದದಲ್ಲಿ ನಾನು ಭಾಗಿಯಾಗಲು ಸಿದ್ಧ ಎಂದಿದ್ದಾರೆ.
ಗಡಿ ತಾಲ್ಲೂಕುಗಳ ಅಭಿವೃದ್ಧಿ: ಜಿಲ್ಲಾಧಿಕಾರಿಗೂ ಪತ್ರ
ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಜಿಲ್ಲೆಗಳಾದ ಗುಡಿಬಂಡೆ, ಬಾಗೇಪಲ್ಲಿ ಹಾಗೂ ಗೌರಿಬಿದನೂರು ತಾಲ್ಲೂಕುಗಳಲ್ಲಿ ಕನ್ನಡ ಅಭಿವೃದ್ಧಿ, ಕನ್ನಡ ಶಾಲೆಗಳನ್ನು ಉಳಿಸುವುದು ಸೇರಿದಂತೆ ಇನ್ನೂ ಅನೇಕ ಕನ್ನಡಪರ ಕೆಲಸಗಳನ್ನು ತುರ್ತಾಗಿ ಕೈಗೊಳ್ಳಬೇಕೆಂದು ಕೋರಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೂ ಅಮರನಾರಾಯಣ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲದೆ, ಈ ತಾಲ್ಲೂಕುಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಅಮರನಾರಾಯಣ ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ಮಾಡಿದ್ದಾರೆ.
ಜಿಲ್ಲೆಯ ಕನ್ನಡ ಶಾಲೆಗಳನ್ನು ಉಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ತಾವು ಗಡಿ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿಯನ್ನು ಕೋರಿರುವ ಅವರು, ಎಲ್ಲ ಸರಕಾರಿ ಕಾರ್ಯಕ್ರಮಗಳಲ್ಲಿ ನೆನಪಿನ ಕಾಣಿಕೆ, ಬಹುಮಾನಗಳನ್ನು ನೀಡಬೇಕಾದರೆ ಕನ್ನಡ ಕೃತಿಗಳನ್ನೇ ನೀಡಿದರೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಬೇಕೆಂದು ಸಲಹೆ ಮಾಡಿದ್ದಾರೆ.
ಆಡಳಿತದಲ್ಲಿ ಕನ್ನಡ: 20 ಜಿಲ್ಲಾಧಿಕಾರಿಗಳಿಗೆ ಪತ್ರ
ಇದೇ ವೇಳೆ ಅಮರನಾರಾಯಣ ಅವರು, ಆಡಳಿತದಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ನೀಡುವ ಜತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಗೆ ಹೆಚ್ಚು ಮಹತ್ತ್ವ ನೀಡಬೇಕೆಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳನ್ನು ಕೋರಿದ್ದಾರೆ.
ರಾಜ್ಯ 20 ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಕೆಲಸಗಳನ್ನು ಮಾಡವುದರ ಜತೆಗೆ ನೂತನ ಆವಿಷ್ಕಾರಗಳೊಂದಿಗೆ ಭಾಷೆ, ಸಾಹಿತ್ಯ ಬೆಳವಣಿಗೆಗೆ ಕಾಣಿಕೆ ನೀಡಬೇಕೆಂದು ಅಮರನಾರಾಯಣ ಮನವಿ ಮಾಡಿದ್ದಾರೆ.
ಜತೆಯಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಅವರಿಗೂ ಪತ್ರ ಬರೆದಿರುವ ಅವರು, ಚಿಕ್ಕಬಳ್ಳಾಪುರ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಕನ್ನಡ ಭವನ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕೆಂದು ಕೇಳಿದ್ದಾರೆ.
ಭವನದ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬೀಳಲು ಕಾರಣವೇನೆಂಬುದನ್ನು ತಿಳಿಸಿದರೆ, ಈ ಬಗ್ಗೆ ನಾನೂ ಕೂಡ ಸಂಬಂಧಪಟ್ಟವರ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಅಮರನಾರಾಯಣ ಅವರು ತಮ್ಮ ಪತ್ರದ ಜತೆಗೆ ಸಮ್ಮೇಳನದ ತಮ್ಮ ಭಾಷಣ ಪ್ರತಿಯನ್ನೂ ಎಲ್ಲರಿಗೂ ಕಳಿಸಿದ್ದಾರೆ.
ಹೊಸ ಸಾಂಪ್ರದಾಯಕ್ಕೆ ನಾಂದಿ
ಸಾಹಿತ್ಯ ಸಮ್ಮೇಳನದ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಅಂಶಗಳು ಹಾಗೂ ಕೈಗೊಂಡ ನಿರ್ಣಯಗಳ ಜಾರಿಯ ಬಗ್ಗೆ ಸ್ವತಃ ತಾವೇ ಪ್ರಯತ್ನ ಆರಂಭಿಸುವ ಮೂಲಕ ಅಮರನಾರಾಯಣ ಅವರು ಹೊಸ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; “ಖ್ಯಾತ ಸಂಶೋಧಕರಾದ ದಿವಂಗತ ಡಾ.ಚಿದಾನಂದ ಮೂರ್ತಿ ಅವರು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳು ಅನುಷ್ಠಾನಕ್ಕೆ ಬರಲೇಬೇಕು ಎಂದು ಒತ್ತಾಯಿಸುತ್ತಲೇ ಇದ್ದರು. ನನ್ನದು ಕೂಡ ಅದೇ ನಿಲವು. ನಿರ್ಣಯಗಳು ಜಾರಿಗೆ ಬರಬೇಕು” ಎಂದರು.
ಮೊದಲ ಪ್ರಯತ್ನವಾಗಿ ಪತ್ರಗಳನ್ನು ಬರೆದಿದ್ದೇನೆ. ಮುಂದಿನ ಹಂತಗಳಲ್ಲಿ ಸಂಬಂಧಪಟ್ಟವರನ್ನು ಭೇಟಿಯಾಗುವುದು, ಚರ್ಚೆ ಮಾಡುವುದು ನಡೆಸುತ್ತೇನೆ. ಸಮ್ಮೇಳನದಲ್ಲಿ ಪ್ರಸ್ತಾಪವಾದ ಎಲ್ಲ ಸಮಸ್ಯೆಗಳು ಪರಿಹಾರ ಆಗಬೇಕು ಎನ್ನುವುದು ನನ್ನ ಕನಸು. ಎಲ್ಲರ ಸಹಕಾರ ಬೇಕು, ಆ ನಿಟ್ಟಿನಲ್ಲೇ ನನ್ನಿಂದಲೇ ಪ್ರಯತ್ನ ಶುರುವಾಗಿದೆ. ಕ್ರಮೇಣ ಜಿಲ್ಲೆಯ ಎಲ್ಲರ ಸಹಕಾರದಿಂದ ಸಮಗ್ರ ರೀತಿಯಲ್ಲಿ ಹೆಜ್ಜೆಗಳನ್ನು ಇಡಲಾಗುವುದು ಎಂದರು ಅಮರನಾರಾಯಣ.
- ಚಿಕ್ಕಬಳ್ಳಾಪುರ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಳನಾಧ್ಯಕ್ಷ ಕೆ. ಅಮರನಾರಾಯಣ ಅವರು ಮಾಡಿದ ಅಧ್ಯಕ್ಷೀಯ ಭಾಷಣದ ಪೂರ್ಣ ಪಾಠ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..