ಬಿಜೆಪಿ ಮತ್ತು ವಲಸಿಗ ಸಚಿವರು ಸಿಡಿ ತಲೆಬಿಸಿಯಲ್ಲಿದ್ದರೆ, ಜೆಡಿಎಸ್ ಮಾತ್ರ ಹೊಸ ಬಾಂಬ್ ಸಿಡಿಸಿದೆ. ನ್ಯಾಯಾಲಯಕ್ಕೆ ಅರ್ಜಿ ಹಾಕಿರುವ ಎಲ್ಲ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದೆ. ಜೆಡಿಎಸ್ ಆಗ್ರಹಗಳಿಗೆ ಅರ್ಥಗಳೇ ಬೇರೆ!!
ಮೈಸೂರು: ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುದ್ದಿಗಳು ಬರದಂತೆ ತಡೆಯಾಜ್ಞೆ ತರಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಎಲ್ಲ ಸಚಿವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಬೇಕು ಎಂದು ಒಂದು ಕಾಲದ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಒತ್ತಾಯ ಮಾಡಿದೆ!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ತೆರಳಿದ್ದ ಒಂದು ದಿನದ ನಂತರ, ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಈ ಆಗ್ರಹ ಮಾಡಿದ್ದಾರೆ. ಈ ಮೂಲಕ ರಮೇಶ್ ಜಾರಕಿಹೊಳಿ ಪ್ರಕರಣದಿಂದ ಮೊದಲೇ ರಾಜಕೀಯ ಷಡ್ಯಂತ್ರದ ಭೀತಿಯಲ್ಲಿರುವ ವಲಸಿಗರು ಬೇಗುದಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.
ಮೈಸೂರಿನಲ್ಲಿ ಶನಿವಾರ ಸಾ.ರಾ.ಮಹೇಶ್ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿ, ನ್ಯಾಯಾಲಯಕ್ಕೆ ಹೋಗಿರುವ ಸಚಿವರನ್ನು ಸಂಪುಟದಿಂದ ತೆಗೆದುಹಾಕಬೇಕು. ಸದನದಲ್ಲೂ ನಮ್ಮ ಪಕ್ಷ ಇದೇ ಒತ್ತಾಯ ಮಾಡುತ್ತದೆ ಎಂದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ನ್ಯಾಯಾಲಯಕ್ಕೆ ಅರ್ಜಿ ಹಾಕಿರೋದೆ ನಾವೇಲ್ಲ ತಲೆ ತಗ್ಗಿಸುವ ವಿಚಾರ. ಇದೇಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ, ಅದು ಆಚೆಗೆ ಬರಬೇಕು ಎಂದು ಸಾ.ರಾ.ಮಹೇಶ್ ಹೇಳಿದರು.
ಬಾಂಬೆಯಲ್ಲಿ ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡು ಐಷಾರಾಮಿ ಹೊಟೇಲ್‌ನಲ್ಲಿ ಇದ್ದವರು ಯಾಕೆ ಅರ್ಜಿ ಹಾಕಿದ್ದೀರಿ? ಎಂದು ಪ್ರಶ್ನಿಸಿದ ಅವರು, ಇವರನ್ನ ಇಟ್ಟುಕೊಂಡು ಬ್ಲಾಕ್‌ಮೆಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ? ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು.
ಸಚಿವರನ್ನೆ ಬ್ಲಾಕ್‌ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು? ಸಿಎಂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ.
ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೀತೀನಿ ಅಂದಿದ್ರು. ಬಹುಶಃ ಅದರಲ್ಲಿ ಈ ಎಲ್ಲ ಅಂಶಗಳ ಉಲ್ಲೇಖ ಆಗಬಹುದು ಎಂದು ವ್ಯಂಗ್ಯವಾಡಿದರು ಅವರು.
ಬಾಂಬೆಯಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ
ಜನಪರ ಸರಕಾರ ತರಲು ಬಾಂಬೆಗೆ ಹೋಗಿದ್ವಿ ಅಂದಿದ್ರು ಎಲ್ಲರು. ಬಾಂಬೆಯಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ. ಅದನ್ನ ಮಾತನಾಡೋಕು ಅಸಹ್ಯ ಆಗುತ್ತೆ. ವಿಡಿಯೋ ಪ್ರಸಾರಕ್ಕೆ ತಡೆ ಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ ಎಂದು ಸಾ.ರಾ.ಮಹೇಶ್ ಹೇಳಿದರು.
ನಿಮಗೆ ಯಾಕೆ ಅನುಮಾನ. ಮೊನ್ನೆಯು ಅನೇಕ ಶಾಸಕರ ವಿಡಿಯೋ ಇದೆ ಅಂತ ಯಾರೋ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನು ತಕ್ಷಣ ಯಾಕೆ ಅರೆಸ್ಟ್ ಮಾಡಲಿಲ್ಲ ಎಂದ ಅವರು, ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೋ? ಈ ರೀತಿಯ ಸರಕಾರ ತರೋಕಾ ಬಾಂಬೆಗೆ ಹೋಗಿದ್ದು. ಇದೇನಾ ನಿಮ್ಮ ಘನಕಾರ್ಯ ಎಂದು ಪ್ರಶ್ನಿಸಿದರು.
ಶುಕ್ರವಾರವಷ್ಟೇ ಮೈಸೂರಿನಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ; ಸಿ.ಡಿ. ಪುರಾಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ, ಇಂಥ ಸಿ.ಡಿ.ಗಳು ಇವೆ ಎನ್ನುವವರನ್ನು ಮೊದಲು ಬಂಧಿಸಿ ಎಂದು ಗುಡುಗಿದ್ದರು. ಆದರೆ, ಅದಕ್ಕಿಂತ ಮಿಗಿಲಾಗಿ ಸಾ,ರಾ.ಮಹೇಶ್ ಜತೆ ಮಹತ್ವದ ಮಾತುಕತೆ ನಡೆಸಿದ್ದರು. ಆ ಮಾತುಕತೆ ಫಲಶ್ರುತಿಯಾ ಸಾ.ರಾ.ಮಹೇಶ್ ಇವತ್ತಿನ ಹೇಳಿಕೆಯಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
Lead photo coutesy: @Sa Ra Mahesh