ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ಬಿಜೆಪಿಗೆ ವಲಸೆ ಬಂದ ತಂಡದಲ್ಲಿ ಒಂದು ವಿಕೆಟ್ ಪತನವಾದ ಮೇಲೆ ಉಳಿದವರಿಗೆ ಏನೋ ನಡೆಯುತ್ತಿದೆ ಎಂದ ಭಯ ಶುರುವಾಗಿದೆ. ಹೀಗಾಗಿ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಅವರು. ಇನ್ನೊಂದೆಡೆ ಶಿಸ್ತಿನ ಪಕ್ಷ ಬಿಜೆಪಿ ಈ ಬಗ್ಗೆ ಉರಿದುಬೀಳುತ್ತಿದೆ
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ಮಾಧ್ಯಮಗಳನ್ನು ಬಳಸಿಕೊಂಡು ನಮ್ಮೆಲ್ಲರ ತೇಜೋವಧೆ ಮಾಡುವ ಕೆಲಸವಾಗುತ್ತಿದೆ. ಇದನ್ನು ತಡೆಯಲು ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೊದಲು ಮಾಧ್ಯಮಗಳಲ್ಲಿ ಎಲ್ಲವೂ ಬರುತ್ತದೆ. ಇದರಿಂದಾಗಿ ಅನೇಕ ವರ್ಷಗಳಿಂದ ಸಂಪಾದಿಸಿದ ಜನಪ್ರಿಯತೆ ಹೆಸರು, ಗೌರವ ಹಾಳಾಗಿ ಚಾರಿತ್ರ್ಯವಧೆಯಾಗುತ್ತದೆ. ಇದಕ್ಕೆ ಇತಿಶ್ರೀ ಹಾಡಲು ಈ ರೀತಿ ಮಾಡಿದ್ದೇವೆ. ಇದಕ್ಕೆ ತಡೆ ಹಾಕಲು ಬಲವಾದ ಕಾನೂನು ರೂಪಿಸಲು ಚಿಂತನೆ ನಡೆದಿದೆ” ಎಂದರು.
ಅನೈತಿಕ, ಮೌಲ್ಯರಹಿತ ಟ್ರೆಂಡ್
ರಾಜಕಾರಣ ಮಾತ್ರವಲ್ಲದೆ, ಬೇರೆ ಕ್ಷೇತ್ರಗಳಲ್ಲೂ ಈ ರೀತಿ ನಡೆಯುತ್ತದೆ. ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ತಪ್ಪು ಮಾಹಿತಿ ನೀಡಿ, ಅದಕ್ಕಾಗಿ ಸಾಮಾಜಿಕ ಜಾಲತಾಣ, ಮಾಧ್ಯಮ ಬಳಸಿಕೊಳ್ಳಲಾಗುತ್ತಿದೆ. ನೈಜತೆ ಇದ್ದಲ್ಲಿ ಅದನ್ನು ಯಾರೂ ನಿಷೇಧ ಮಾಡಲು ಸಾಧ್ಯವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷಯಾಗಬೇಕು. ಆದರೆ ತೇಜೋವಧೆ ಮಾಡಬಾರದು. ಆರೋಪ ಮಾಡುವವರು ನೇರವಾಗಿ ನ್ಯಾಯಾಲಯಕ್ಕೆ ಹೋಗಬಹುದು. ಆದರೆ ಇಂತಹವರು ನ್ಯಾಯಾಲಯಕ್ಕೆ ಹೋಗದೆ ಬೇರೆ ಮಾರ್ಗ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದು ಹೊಸ ಅನೈತಿಕ, ಮೌಲ್ಯರಹಿತ ಟ್ರೆಂಡ್ ಆಗಿದೆ ಎಂದರು ಡಾ.ಸುಧಾಕರ್.
ರಷ್ಯಾ, ದುಬೈನಿಂದ ವೀಡಿಯೋ ಹಾಕುವುದು, ಸಾಮಾಜಿಕ ಜಾಲತಾಣ ಬಳಸಿಕೊಳ್ಳುವುದನ್ನು ನೋಡಿದರೆ ಇದು ಷಡ್ಯಂತ್ರ ಎನಿಸುವುದಿಲ್ಲವೇ? ಸಾರ್ವಜನಿಕ ಬದುಕಿನಲ್ಲಿ ಹಲವಾರು ವರ್ಷಗಳಿಂದ ಇದ್ದವರಿಗೆ ಸಾಮಾಜಿಕ ಬದ್ಧತೆ, ಕಳಕಳಿ ಇರುತ್ತದೆ. ಯಾವುದೇ ಆರೋಪ ಬಂದಾಗ ಅದನ್ನು ಪರಾಮರ್ಶಿಸಬೇಕು. ನೈಜತೆ ಇದ್ದಲ್ಲಿ 24 ಗಂಟೆಯೂ ಸುದ್ದಿ ಪ್ರಸಾರ ಮಾಡಬಹುದು ಎಂದರು.
ಚಾರಿತ್ರ್ಯಹರಣವಾಗಬಾರದು ಎಂಬ ಕಾರಣಕ್ಕೆ ಇಂಜೆಂಕ್ಷನ್ ಪಡೆಯುವ ಪ್ರಯತ್ನ ಪಡೆಯಲಾಗಿದೆ. ಈಗ ಹಿಟ್ ಆ್ಯಂಡ್ ರನ್ ಜನರಿಂದಾಗಿ ಭಯಪಡಬೇಕಾಗಿದೆ. ಸಂತ್ರಸ್ತರು, ಅನ್ಯಾಯಕ್ಕೊಳಗಾದವರು ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು.
https://twitter.com/mla_sudhakar/status/1367906512341929985
ವಲಸಿಗರ ವಿರುದ್ಧ ಬಿಜೆಪಿಯಲ್ಲಿ ಅತೃಪ್ತಿ
ಏತನ್ಮಧ್ಯೆ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಲಸಿಗರ ವಿರುದ್ಧ ಬಿಜೆಪಿ ಒಂದು ರೀತಿಯ ಅಸಹನೆ ಉಂಟಾಗಿದೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿದೇ ಏಕಾಎಕಿ ನ್ಯಾಯಾಲಯಕ್ಕೆ ಸಚಿವರು ಅರ್ಜಿ ಸಲ್ಲಿಸಿರುವ ಕ್ರಮ ಇತ್ತ ರಾಜ್ಯ, ಅತ್ತ ರಾಷ್ಟ್ರೀಯ ನಾಯಕರಿಗೆ ಬೇಸರ ಉಂಟು ಮಾಡಿದೆ.
ಈಗಾಗಲೇ ಕೇಂದ್ರ ಸಚಿವ ಡಿ.ವಿ.ಸದಾನಂಗೌಡು ಈಗಾಗಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸಚಿವರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರು ಸಚಿವರು ನ್ಯಾಯಾಲಕ್ಕೆ ಹೋಗಿರುವುದು ಅವರ ವೈಯಕ್ತಿಕ ವಿಚಾರವಾದರೂ. ಈ ವಿಷಯದಲ್ಲಿ ಇನ್ನಷ್ಟು ಗೊಂದಲು ಸೃಷ್ಟಿಯಾಗುತ್ತಿದೆ. ಹಾಗೆ ಆಗಬಾರದು ಎಂದಿದ್ದಾರೆ ಡಿವಿಎಸ್.