karnataka budget 2021-22
ಬೆಂಗಳೂರು: ಜಾಗತಿಕ ನಗರವಾಗಿ ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗಾಗಿ 2021-22ನೇ ಸಾಲಿನಲ್ಲಿ 7,795 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಮಾಡಿಕೊಂಡು ಬರುವ ಕ್ಲೇಮಿಗೆ ಸಡ್ಡು ಹೊಡೆಯಲು ಬಿಜೆಪಿ ಹೊರಟಿದ್ದು, ಅದಕ್ಕಾಗಿ ಅನುದಾನದ ಮಹಾಹೊಳೆ ಹರಿಸಿದೆ ಎನ್ನುವುದರಲ್ಲಿ ಸುಳ್ಳೇನಿಲ್ಲ.
ಬ್ರ್ಯಾಂಡ್ ಬೆಂಗಳೂರಿನಲ್ಲಿ ʼಬ್ರ್ಯಾಂಡ್ ಬಿಜೆಪಿʼಯನ್ನು ಅಚ್ಚಳಿಯದೇ ಮೂಡಿಸುವುದು ಪಕ್ಷದ ಲೆಕ್ಕಾಚಾರ. ಮುಂಬರುವ ಬಜೆಟ್ ಒಳಗೆ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಅದರ ಗದ್ದುಗೆ ಹಿಡಿಯಲೇಬೇಕು ಎನ್ನುವುದು ಕೇಸರಿ ಪಡೆಯ ಪರಮ ಗುರಿ.
ಕೋವಿಡ್ ಸಂಕಷ್ಟ ಕಾಲದಲ್ಲೂ ಆರ್ಥಿಕ ಸಂಪನ್ಮೂಲಗಳ ಕೊರತೆ ಇದ್ದಾಗ್ಯೂ ಜನರ ಮೇಲೆ ಯಾವುದೇ ರೀತಿಯ ತೆರಿಗೆ ಹೊರೆ ಹಾಕದ ಮುಖ್ಯಮಂತ್ರಿಗಳು, ರಾಜ್ಯ ಮತ್ತು ರಾಜಧಾನಿಯ ಅಭಿವೃದ್ಧಿಗೆ ಅಗ್ರಪೀಠ ಹಾಕಿದ್ದಾರೆ. ಮುಂದಿನ ಉಪ ಚುನಾವಣೆಗಳು, ಬಿಬಿಎಂಪಿ ಎಲೆಕ್ಷನ್ ʼಲೆಕ್ಕಾಚಾರʼ ಇಲ್ಲಿ ಕೆಲಸ ಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಅದೇ ಪಕ್ಷದ ನಾಯಕರೊಬ್ಬರು.
ಬೆಂಗಳೂರಿಗೆ ಬಿಜೆಪಿ ಮಾಡಿದ್ದೇನು? ಎಂದು ಯಾವಾಗಲೂ ಪ್ರಶ್ನೆ ಮಾಡುವವರಿಗೆ ಬಜೆಟ್‌ನಲ್ಲಿ ಸೂಕ್ತ ಉತ್ತರ ನೀಡಲಾಗಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಅಂದರೆ, ನಗರದಲ್ಲಿ ʼಬ್ರ್ಯಾಂಡ್ ಬಿಜೆಪಿʼ ನಾಯಕತ್ವ ಅವರದ್ದೇನಾ? ಎಂಬ ಚರ್ಚೆಗೆ ಚಾಲನೆ ಸಿಕ್ಕಿದೆ.
ಇನ್ನೊಂದೆಡೆ, ಬಿಬಿಎಂಪಿ ಚುನಾವಣೆಗೆ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಉಸ್ತುವಾರಿ ಹೊಣೆಯನ್ನು ʼಸೈಲಂಟ್ ಟ್ರಬಲ್ ಶೂಟರ್ʼ ಒಬ್ಬರಿಗೆ ಮುಖ್ಯಮಂತ್ರಿ ಹಸ್ತಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಮಟ್ಟಿಗೆ ಬಿಜೆಪಿಯ ʼಸೈಲಂಟ್ ಟ್ರಬಲ್ ಶೂಟರ್ʼ ಅಂದರೆ, ಡಿಸಿಎಂ ಅಶ್ವತ್ಥನಾರಾಯಣ ಮಾತ್ರ.
ಯಾವುದೇ ಅಬ್ಬರ, ಆರ್ಭಟ ಇಲ್ಲದೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಡಿಸಿಎಂ ಜಾಯಮಾನ. ಈ ಕಾರಣಕ್ಕೆ ಅವರಿಗೆ ಕೇರಳ ಸಹ ಪ್ರಭಾರಿ ಹೊಣೆ ವಹಿಸಲಾಗಿದೆ. ನೆರೆ ರಾಜ್ಯದ ಚುನಾವಣೆಯಲ್ಲಿ ಕಮಲದ ಸ್ಕೋರ್ ಹೆಚ್ಚಿಸಲು ಅವರು ಬೆಂಗಳೂರಿನಲ್ಲೂ ಸ್ಟ್ಯಾಟಜಿ ಮಾಡುತ್ತಿದ್ದಾರೆ, ಕೇರಳದಲ್ಲೂ ಯಾರ ಊಹೆಗೂ ನಿಲುಕದ ಹೆಜ್ಜೆಗಳನ್ನು ಇಡುತ್ತಿದ್ದಾರೆ.
ಹೀಗಾಗಿ ಬೆಂಗಳೂರು ನಾಯಕತ್ವದ ಡಿಸಿಎಂ ಅವರಿಗೆ ಸಿಗಬಹುದು ಮತ್ತು ಮುಖ್ಯಮಂತ್ರಿ ಅಥವಾ ಪಕ್ಷಕ್ಕೆ ಅತ್ಯಂತ ನಂಬಿಕೆಗೆ ಅರ್ಹ ನಾಯಕತ್ವದ ಅವರದ್ದು ಎಂದು ಸಂಘ ಪರಿವಾರಕ್ಕೆ ನಿಕಟರಾದ ಪಕ್ಷದ ಪ್ರಮುಖ, ಹಿರಿಯ ನಾಯಕರೊಬ್ಬರ ಮಾತು.
ಮುಂಗಡ ಪತ್ರದ ಬಗ್ಗೆ, ಅದರಲ್ಲೂ ಬೆಂಗಳೂರು ಅಭಿವೃದ್ಧಿ ಬಗ್ಗೆ ಬಜೆಟ್ ಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂರುವ ಡಿಸಿಎಂ; ರಾಜಧಾನಿಯ ಬೆಳವಣಿಗೆ ಹಾಗೂ ಮುಂದಿನ ದಿನಗಳಲ್ಲಿ ಅದು ಯಾವ ದಿಕ್ಕಿನಲ್ಲಿ ಬೆಳೆಯಲಿದೆ ಎಂಬ ಬಗ್ಗೆ ಸಿಎಂ ಸ್ಪಷ್ಟ ಕಲ್ಪನೆ ಹೊಂದಿದ್ದಾರೆಂದರು. ಜತೆಗೆ, ಕೆಲ ದಿನಗಳಿಂದ ಡಿಸಿಎಂ ಅವರು ಬೆಂಗಳೂರು ಅಭಿವೃದ್ಧಿ ಬಗ್ಗೆ ಕೆಲ ಮಹತ್ತ್ವದ ವಿಚಾರಗಳನ್ನು ಮುನ್ನೆಲೆಗೆ ತಂದಿದ್ದರು.
ಸುಗಮ ಸಂಚಾರಕ್ಕೆ ಆದ್ಯತೆ
ಸುಗಮ ಸಾರಿಗೆ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದ್ದು, 12,788 ಕೋಟಿ ರೂ. ವೆಚ್ಚದಲ್ಲಿ 58.2 ಕಿ.ಮೀ ಉದ್ದ ಹೊರ ವರ್ತುಲ ರಸ್ತೆ-ವಿಮಾನ ನಿಲ್ದಾಣ ರಸ್ತೆಗೆ ಮೆಟ್ರೋ ಜಾಲವನ್ನು ಸಂಪರ್ಕಿಸುವ 2ಎ, 2ಬಿ ಹಂತಗಳನ್ನು ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದೇ ರೀತಿ ಉಪನಗರ ರೈಲು ಯೋಜನೆಗೆ 850 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದರ ಜತೆಯಲ್ಲೆ ಬೆಂಗಳೂರು ನಗರ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸ್ವಯಂ ಚಾಲಿತ ಪ್ರಯಾಣ ದರ ಸಂಗ್ರಹ ವ್ಯವಸ್ಥೆ (Automatic Fare Collection System) ಯೂ ಜಾರಿಗೆ ಬರಲಿದೆ. ಅದೇ ರೀತಿ ಅಗಸ್ಟ್ 21ರೊಳಗೆ ʼಒಂದು ರಾಷ್ಟ್ರ-ಒಂದು ಕಾರ್ಡ್ʼ ವ್ಯವಸ್ಥೆಯಡಿ ಮೆಟ್ರೋ ಮತ್ತು ಬಿಎಂಟಿಸಿಗೆ ಒಂದೇ ಕಾರ್ಡ್ ಬಳಕೆ ಮಾಡುವ ಕಾರ್ಯಕ್ರಮವನ್ನೂ ಸಿಎಂ ಅವರು ಘೋಷಿಸಿದ್ದಾರೆ. ಇವೆರಡೂ ಉಪ ಕ್ರಮಗಳಿಂದ ನಗರ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಇದರ ಜತೆಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2ನೇ ಹಂತದ ಟರ್ಮಿನಲ್ ಅನ್ನು ಇದೇ ವರ್ಷ ಪೂರ್ಣ ಹಾಗೂ ವರ್ಷಕ್ಕೆ 60 ದಶಲಕ್ಷ ಪ್ರಯಾಣಿಕರು ಸಂಚಾರ ಮಾಡಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.
ಆರೋಗ್ಯ ಕ್ಷೇತ್ರಕ್ಕೂ ಅಗ್ರಮಾನ್ಯತೆ
ಜನಸಂಖ್ಯೆಯಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸುವ, ಅತ್ಯಾಧುನಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಹೆಚ್ಚು ಗಮನ ನೀಡಲಾಗಿದೆ.
ಬೆಂಗಳೂರು ಉತ್ತರ ಭಾಗದಲ್ಲಿ ಮಲ್ಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸುವುದು, 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಗ್ಯಾಸ್ಟ್ರೋ ಎಂಟ್ರಾಲಜಿ ವಿಜ್ಞಾನ ಸಂಸ್ಥೆ ಹಾಗೂ ಅಂಗಾಂಗ ಕಸಿ ಸಂಸ್ಥೆ ಕೂಡ ಇದೇ ವರ್ಷ ಆರಂಭ, 20 ಕೋಟಿ ರೂ. ವೆಚ್ಚದಲ್ಲಿ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಉಪಕೇಂದ್ರ ಸ್ಥಾಪನೆ, ಬಿಬಿಎಂಪಿಯ 57 ವಾರ್ಡುಗಳಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಜನಾರೋಗ್ಯ ಕೇಂದ್ರಗಳ ಆರಂಭ; ಇವಿಷ್ಟೂ ಯೋಜನೆಗಳನ್ನು ನಗರದ ಜನರ ಉತ್ತಮ ಆರೋಗ್ಯಕ್ಕಾಗಿಯೇ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಉಳಿದಂತೆ, ಮೈಸೂರ್ ಲ್ಯಾಂಪ್ಸ್ ಕಾರ್ಖಾನೆ ಇದ್ದ ಜಾಗದಲ್ಲಿ ʼಎಕ್ಸ್‌ಪೀರಿಯನ್ಸ್ ಬೆಂಗಳೂರುʼ ಕೇಂದ್ರ ಸ್ಥಾಪನೆ, ಬೈಯ್ಯಪ್ಪನಹಳ್ಳಿಯ ಎನ್‌ಜಿಎಫ್ ಜಾಗವೂ ಸೇರಿ ನಗರದ ಮೂರು ಭಾಗಗಳಲ್ಲಿ ಅರಣ್ಯದ ಅನುಭವ ಕೊಡುವ ವೃಕ್ಷೋದ್ಯಾನ ಸ್ಥಾಪನೆ, ಕೋರಮಂಗಲ ಕಣಿವೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು 169 ಕೋಟಿ ರೂ., ವಿಮಾನ ನಿಲ್ದಾಣದ ಬಳಿ ಸಿಗ್ನೇಚರ್ ಪಾರ್ಕ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ-ಬಿಬಿಎಂಪಿ ಸಹಯೋಗದಲ್ಲಿ ಕೆ.ಸಿ.ವ್ಯಾಲಿ ಯೋಜನೆ ಆವರಣದಲ್ಲಿ 450 ಕೋಟಿ ರೂ. ಅನುದಾನ, ಬೆಂಗಳೂರು ತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸಂಸ್ಥೆ, 33 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿಯ ಎಲ್ಲ ಶಾಲೆಗಳ ಅಭಿವೃದ್ಧಿ, ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಪ್ರತಿ ವಾರಾಂತ್ಯದಲ್ಲಿ ಸಾಂಸ್ಕೃತಿಕ-ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲು 2 ಕೋಟಿ ನೆರವು..
ಇವುಗಳ ಜತೆಗೆ, ವಿವಿಧ ಬಾಬ್ತುಗಳಿಂದ ಇನ್ನಷ್ಟು ಹಣದ ಹೊಳೆ ಬೆಂಗಳೂರಿಗೆ ಹರಿಯಲಿದೆ. ಐಟಿ-ಬಿಟಿ ಹೆಸರಿನಲ್ಲಿ ಕಾಂಗ್ರೆಸ್‌ಗೆ ಅಂಟಿಕೊಂಡಿರುವ ಲೆಗಸಿಯನ್ನು ಬ್ರೇಕ್ ಮಾಡುವುದು ʼಬ್ರ್ಯಾಂಡ್ ಬಿಜೆಪಿʼ ಟಾರ್ಗೆಟ್ ಆಗಿದೆ.
Lead Photo by CKPhotography ಸಿಕೆಪಿ@ckphotographi