ಚಿಕ್ಕಬಳ್ಳಾಪುರ: ಬಟ್ಟೆ ಒಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದ ತಾಯಿ ಮಗಳು ಗಂಗೆಗೆ ಆಹುತಿಯಾಗಿರುವ ದುರಂತ ಘಟನೆ ಚಿಕ್ಕಬಳ್ಳಾಪುರ ಸಮೀಪದ ಹಾರೋಬಂಡೆ ಬಳಿ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.
ಗ್ರಾಮದ ಶ್ರೀನಿವಾಸ್ ಎಂಬುವವರ ಪತ್ನಿ ಪೂಜಮ್ಮ (೩೦), ಮಗಳು ಮಂಜುಳಾ (8) ಜೀವ ಕಳೆದುಕೊಂಡ ನತದೃಷ್ಟರು.
ಹೇಗಾಯಿತು ದುರಂತ?
ಸಮೀಪದ ಕಲ್ಲು ಕ್ವಾರಿಯಲ್ಲಿ ಆಳವಾಗಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಮಗಳ ಸಮೇತ ಬಟ್ಟೆ ಒಗೆಯಲು ಬಂದ ಪೂಜಮ್ಮ ಒಗೆದ ಬಟ್ಟೆಯನ್ನು ಬಿಸಿಲಿಗೆ ಒಣಗಾಕುವ ಸಮಯದಲ್ಲಿ ಕಾಲು ಜಾರಿ ನೀರಿಗೆ ಬೀಳುತ್ತಿದ್ದ ಕ್ಷಣದಲ್ಲಿ ಅಮ್ಮನ ರಕ್ಷಣೆಗೆ ಬಂದ ಮಂಜುಳಾ ಕೂಡ ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದದ್ದಾರೆ.
ಪೂಜಮ್ಮ ಮತ್ತು ಮಂಜುಳಾ ದುರಂತ ಸಾವು ಹಾರೋಬಂಡೆ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಪೂಜಮ್ಮ, ಮಗಳನ್ನು ಬಹಳ ಅಕ್ಕರೆಯಿಂದ ಸಾಕಿಕೊಂಡಿದ್ದರು. ಅವರ ಪತಿ ಶ್ರೀನಿವಾಸ್ ಇನ್ನೊಂದು ಮದುವೆಯಾಗಿದ್ದು, ದುರಂತಕ್ಕೆ ಆಯತಪ್ಪಿ ನೀರಿಗೆ ಬದ್ದಿದ್ದೇ ಹೊರತು ಕೌಟುಂಬಿಕ ಕಾರಣಗಳಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕ್ವಾರಿಗಳಲ್ಲಿ ಆಳ ಹೊಂಡಗಳು
ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕ್ವಾರಿಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಕಲ್ಲು ಗಣಿಗಾರಿಕೆ ಮಾಡಿ ಆಳವಾದ ಗುಂಡಿಗಳನ್ನು ಮಾಡಲಾಗುತ್ತಿದೆ. ಮಳೆ ಬಂದಾಗ ಆ ಗುಂಡಿಗಳಲ್ಲಿ ನೀರು ಸಂಗ್ರಹವಾಗುತ್ತಿದ್ದು, ಆ ನೀರನ್ನು ಹೊರಹಾಕುವ ಇಲ್ಲವೇ ಅಲ್ಲಿಗೆ ಜನರು ಬರದಂತೆ ತಡೆಯುವ ಕೆಲಸವನ್ನು ಕ್ವಾರಿಗಳ ಮಾಲೀಕರು ಮಾಡುತ್ತಿಲ್ಲ.
ಹಳ್ಳಿಗಳಿಗೆ ಸಮೀಪವಿದ್ದರೆ ಮಹಿಳೆಯರು ಅಂಥ ಜಾಗಗಳಿಗೆ ಬಟ್ಟೆ ಒಗೆಯಲು ಹೋಗುತ್ತಾರೆ, ಜತೆಗೆ ಮಕ್ಕಳೂ ತೆರಳಿ ಅಲ್ಲೆಲ್ಲ ಆಟವಾಡುತ್ತಾರೆ. ಧನಗಾಹಿಗಳು ಇರುತ್ತಾರೆ, ವಿಷಕಾರಕ ಲವಣಾಂಶಗಳುಳ್ಳ ಆ ನೀರನ್ನು ಪಶುಗಳೂ ಕುಡಿಯುತ್ತವೆ. ಯಾರೇ ಆದರೂ ಸ್ವಲ್ಪ ಎಚ್ಚರ ತಪ್ಪಿದರೂ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ.
- Lead Photo: ಚಿಕ್ಕಬಳ್ಳಾಪುರ ಜಿಲ್ಲೆಯ ಕ್ವಾರಿಯೊಂದರ ಸಾಂದರ್ಭಿಕ ಚಿತ್ರ