ಪ್ರಯತ್ನದಿಂದ ಎಲ್ಲರೂ ಸಾಧನೆ ಮಾಡಬಹುದು. ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ. ಪ್ರಯತ್ನ ಪಡದೆ ಉದಾಸೀನತೆಯಿಂದ ಉಳಿಯುವುದೇ ಅಜ್ಞಾನ. ಅಜ್ಞಾನವೇ ಕಹಿಫಲ.
ಸತ್ಯಸಾಯಿ ಗ್ರಾಮ: ಪ್ರಪಂಚದಲ್ಲಿ ಜೀವ ಮತ್ತು ಶಿವ, ಅಥವಾ ಈಶ ಅನೀಶ ಎಂಬ ವೈರುಧ್ಯಗಳಿವೆ. ಅನೀಶನಿಂದ ಈಶತ್ವದ ಕಡೆಗೆ ಸಾಗಬೇಕಾಗಿರುವುದು ಅಧ್ಯಾತ್ಮ ಪಥದ ಪ್ರಮುಖ ಗುರಿ ಎಂದು ಸದ್ಗುರು ಮಧುಸೂದನ ಸಾಯಿ ಅವರು ಹೇಳಿದರು.
ಚಿಕ್ಕಬಳ್ಳಾಪುರ ತಾಲೂಕಿನ ಸತ್ಯಸಾಯಿ ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಯೋಜನೆಗೊಂಡ ʼನವರಾತ್ರಿʼ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು ಅವರು.
ಪ್ರಯತ್ನದಿಂದ ಎಲ್ಲರೂ ಸಾಧನೆ ಮಾಡಬಹುದು. ಪ್ರಯತ್ನದಿಂದ ದೊರೆಯುವ ಸಿದ್ಧಿಯೇ ಪರಮ ಸತ್ಯ. ಪ್ರಯತ್ನ ಪಡದೆ ಉದಾಸೀನತೆಯಿಂದ ಉಳಿಯುವುದೇ ಅಜ್ಞಾನ. ಅಜ್ಞಾನವೇ ಕಹಿಫಲ. ಸುಜ್ಞಾನ ಸಿದ್ಧಿಯೇ ಪರತತ್ವ. ಎಲ್ಲರೂ ಏಕೋಭಾವದಿಂದ ಕಲೆತು ಸತ್ಯ ಶೋಧನೆ ಮಾಡುವುದೇ ಜಾಗರಣೆ. ಇದೇ ಶಿವರಾತ್ರಿ ಆಚರಣೆಯ ಮಹತ್ತ್ವ ಎಂದು ಅವರು ನುಡಿದರು.
ಜಗದ ತಮವನ್ನು ಕಳೆದು ಮಂಗಳದ ಕಡೆಗೆ ಸಾಗುವ ಸಂಕೇತವಾದ ನವರಾತ್ರಿ ಮಹೋತ್ಸವು ಪ್ರೇಮಾಮೃತಂ ಸಭಾ ಭವನದಲ್ಲಿ ಏರ್ಪಾಡಾಗಿತ್ತು. ಆ ನಿಮಿತ್ತ ಆಶ್ರಮದ ಹಿರಿಯ ಋತ್ವಿಜರಾದ ಜೆ.ಜಿ.ಶ್ರೀಧರ್ ರವರು ತಮ್ಮ ಬಳಗದ ಸಹಕಾರದಲ್ಲಿ ಲಿಂಗಾಭಿಷೇಕವನ್ನು ನೆರವೇರಿಸಿದರು.
ಈ ಪುಣ್ಯ ಕಾರ್ಯಕ್ರಮದಲ್ಲಿ ಸದ್ಗುರು ಅವರು ಅಭಿಷೇಕದ ಪವಿತ್ರ ತೀರ್ಥವನ್ನು ನೆರೆದ ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಗೈದು ಹರಸಿದರು.
ಅಖಂಡ ಭಜನೆ
ಸಂಜೆ 6 ಗಂಟೆಯಿಂದ ಮೊದಲ್ಗೊಂಡು ನಾಳೆ (ಶುಕ್ರವಾರ) 6 ಗಂಟೆಯವರೆಗೆ ಅಖಂಡ ಭಜನಾ ಕಾರ್ಯಕ್ರಮ ಆರಂಭವಾಗಿದ್ದು, ಜಗತ್ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಾಜ್ಯದ ಮಾಜಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿ. ಟಿ.ಬಿ.ಜಯಚಂದ್ರ. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಬಿ.ಎನ್ ನರಸಿಂಹ ಮೂರ್ತಿ, ಸಂಸ್ಥೆಯ ಆಡಳಿತ ವರ್ಗದ ಸದಸ್ಯರು ಆಯ್ದ ಭಕ್ತಾದಿಗಳು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ-ಶಿಕ್ಷಕಿಯರು ಆಶ್ರಮದ ಹಿರಿಯ ಕಿರಿಯ ನಿವಾಸಿಗಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿವನನ್ನು ಸ್ತುತಿಸುವ ಗಾಯನ ಕಾರ್ಯಕ್ರಮವು ಎಲ್ಲರ ಮನಸೊರೆಗೊಂಡಿತು.