ಬೆಂಗಳೂರು: “ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ಆಕಾಶದಿಂದ ಹನಿಯಾಗಿ ಬಿದ್ದ ಮಳೆ ನೀರು, ಹೊಳೆ, ನದಿಯಾಗಿ ಸಾಗರ ಸೇರಬೇಕು. ಅದೇ ರೀತಿ ಹುಟ್ಟಿನಿಂದಲೇ ರಕ್ತಗತ ಕಾಂಗ್ರೆಸ್ಸಿಗರಾಗಿರುವ ಮಧು ಬಂಗಾರಪ್ಪ ಅವರೂ ಕಾಂಗ್ರೆಸ್‌ಗೆ ಮರಳಲಿದ್ದಾರೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:
ರಾಜಕಾರಣದ ಆರಂಭದ ದಿನಗಳಲ್ಲಿ ನನ್ನನ್ನು ಗುರುತಿಸಿ, ಬೆಳೆಸಿದ ಧಿಮಂತ ನಾಯಕ ಬಂಗಾರಪ್ಪನವರನ್ನು ನಾನಿವತ್ತು ಸ್ಮರಿಸುತ್ತೇನೆ. ಬಹಳ ಚಿಕ್ಕ ವಯಸ್ಸಿನಲ್ಲೇ, ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ, ನಾನು ಸೇರಿದಂತೆ ಬಹಳ ಯುವಕರನ್ನು ಅವರು ಆಕರ್ಷಿಸಿದ್ದರು. ಅವರ ರಾಜಕಾರಣದ ಗರಡಿಯಲ್ಲಿ ಬೆಳೆದವನು ನಾನು. ಇಲ್ಲಿವರೆಗೂ ಬಂದಿದ್ದೇನೆ. ಇವತ್ತು ಅವರ ಸುಪುತ್ರ ಮಧು ಬಂಗಾರಪ್ಪ ಅವರು ನನ್ನನ್ನು ಭೇಟಿ ಮಾಡಿದ್ದಾರೆ.
ಬಹಳ ದಿನಗಳಿಂದ ನಾನು ಅವರಿಗೆ ಗಾಳ ಹಾಕಿಕೊಂಡೇ ಬಂದಿದ್ದೆ. ಅವರ ತಂದೆ ನಮ್ಮ ಪಕ್ಷದ ಸಂಘಟನೆಗೆ ದೊಡ್ಡ ಶಕ್ತಿ ಕೊಟ್ಟಿದ್ದರು. ರಾಜ್ಯದಲ್ಲಿ ಅನೇಕ ನಾಯಕರನ್ನು ಬೆಳೆಸಿ, ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇವೆಲ್ಲವೂ ಶಾಶ್ವತವಾಗಿ ಉಳಿದಿವೆ.
-ಡಿ.ಕೆ. ಶಿವಕುಮಾರ್
ಕೆಲವು ಭಿನ್ನಾಭಿಪ್ರಾಯಗಳಿಂದ ಅವರು ನಮ್ಮ ಪಕ್ಷ ತೊರೆದಿದ್ದರು. ಅದರ ಬಗ್ಗೆ ಈಗ ಚರ್ಚೆ ಬೇಡ. ಆಕಾಶದಿಂದ ಹನಿಯಾಗಿ ಬಿದ್ದ ನೀರು ನದಿ ಮೂಲಕ ಸಮುದ್ರ ಸೇರಲೇಬೇಕು. ಕಾಂಗ್ರೆಸ್ ಪಕ್ಷ ಕೂಡ ಸಾಗರ ಇದ್ದಂತೆ. ನಮ್ಮ ವರಿಷ್ಠರು ನಮಗೆ ಕರೆ ಮಾಡಿ, ಮಧು ಬಂಗಾರಪ್ಪ ನಿಮ್ಮನ್ನು ಬಂದು ಭೇಟಿ ಮಾಡಲಿದ್ದಾರೆ ಎಂದು ಸೂಚಿಸಿದ್ದರು. ವರಿಷ್ಠರು ಮಧು ಬಂಗಾರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಅವರೂ ಕೂಡ ಘಳಿಗೆ, ಮುಹೂರ್ತದ ಬಗ್ಗೆ ಯೋಚಿಸುತ್ತಿದ್ದರು.
ಇವರ ಜತೆ ರಾಜ್ಯದ ಉದ್ದಗಲಕ್ಕೂ ಅನೇಕ ಬೆಂಬಲಿಗರು, ಜೊತೆಯಲ್ಲಿ ಕೆಲಸ ಮಾಡಿದವರು ಇದ್ದಾರೆ. 10 ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಮಧು ಅವರು ಹುಟ್ಟಿನಿಂದಲೇ, ರಕ್ತಗತವಾಗಿ ಕಾಂಗ್ರೆಸಿಗರಾಗಿದ್ದಾರೆ. ಅವರ ಎಲ್ಲ ಆಚಾರ-ವಿಚಾರಗಳು ಕಾಂಗ್ರೆಸ್ ತತ್ವ-ಸಿದ್ದಾಂತ ಆಧಾರದ ಮೇಲೆ ನಿಂತಿವೆ. ಹೀಗಾಗಿ ಕಾಂಗ್ರೆಸ್ ಅವರಿಗೆ ಹೊಸದಲ್ಲ. ಯಾವಾಗ ಪಕ್ಷ ಸೇರುತ್ತಾರೆ ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಮಾತನಾಡಬೇಕಿದೆ. ಇವರು ನಮ್ಮ ವಿರೋಧ ಪಕ್ಷದ ನಾಯಕರನ್ನೂ ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಕಾಗೋಡು ತಿಮ್ಮಪ್ಪ, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ಆಸ್ಕರ್ ಫರ್ನಾಂಡೀಸ್ ಹಾಗೂ ಜಾರ್ಜ್ ಅವರು ಸೇರಿದಂತೆ ಅನೇಕ ಹಿರಿಯ ನಾಯಕರು ಬಂಗಾರಪ್ಪ ಅವರ ಜತೆ ಕೆಲಸ ಮಾಡಿದ್ದರು. ಅವರ ಆಶೀರ್ವಾದವೂ ಇವರಿಗೆ ಇದೆ. ಇವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಸೇರ್ಪಡೆ ದಿನದ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಿ ತಿಳಿಸುತ್ತೇವೆ.
ತಮ್ಮ ಮನೆಗೆ ಮರಳುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಕಾಂಗ್ರೆಸ್ ಪಕ್ಷ ಬಹಳ ಸಂತೋಷದಿಂದ ಅವರನ್ನು ಸ್ವಾಗತ ಮಾಡುತ್ತದೆ.
ಗೀತಾ ಸಾಧಾರಣ ಮಹಿಳೆ ಅಲ್ಲ, ಅವರಿಗೆ ಸೂಕ್ತ ಗೌರವ ನೀಡಬೇಕು
ಗೀತಾ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮಹಿಳೆ ಅಲ್ಲ. ಪಕ್ಷ ಕಷ್ಟಕಾಲದಲ್ಲಿದ್ದಾಗ ಅದಕ್ಕಾಗಿ ಹೋರಾಟ ಮಾಡಿದವರು. ಗೌರವಾನ್ವಿತ ಕುಟುಂಬಕ್ಕೆ ಸೇರಿದವರಾಗಿದ್ದು, ಅವರಿಗೆ ಅವರದೇ ಆದ ಗೌರವವನ್ನು ನಾವು ನೀಡಬೇಕು. ಈ ಬಗ್ಗೆ ನಾನು ದೆಹಲಿ ನಾಯಕರೊಂದಿಗೆ ಚರ್ಚಿಸಿ, ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಅವರೊಂದಿಗೆ ನಾವು ಚರ್ಚಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಂಬಿ ಬರುವವರಿಗೆ ಸ್ವಾಗತ ಎಂದು ಕರೆ ಕೊಟ್ಟಿದ್ದೆವು. ರಾಜ್ಯದಲ್ಲಿ, ರಾಷ್ಟ್ರದಲ್ಲಿ ಬದಲಾವಣೆ ಆಗಬೇಕು ಎಂದು ಜನ ಬಯಸುತ್ತಿದ್ದಾರೆ. ಹೀಗಾಗಿ ನಾಯಕರಿಂದ ಹಿಡಿದು ಗ್ರಾಮ ಪಂಚಾಯ್ತಿ ಮಟ್ಟದ ಕಾರ್ಯಕರ್ತರವರೆಗೂ ಯಾರಿಗೆ ಬದಲಾವಣೆ ತರಬೇಕು ಎಂಬ ಇಚ್ಛೆ ಇದೆಯೋ ಅವರಿಗೆ ಆಹ್ವಾನ ನೀಡಿದ್ದೆವು. ಸಾಮಾನ್ಯ ಜನ ಜೀವನ ನಡೆಸುವುದೇ ಕಷ್ಟವಾಗಿದೆ. ಸಣ್ಣ ಕಾರ್ಮಿಕನಿಂದ ಹಿಡಿದು, ರೈತರು, ಚಾಲಕರು, ಬೀದಿ ವ್ಯಾಪಾರಿಗಳು ಎಲ್ಲರೂ ಈ ಸರ್ಕಾರಗಳಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಬದಲಾವಣೆ ಬಯಸುತ್ತಿದ್ದಾರೆ ಎಂದು ಅವರು ಹೇಳಿದರು.
ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ
ನಾನು ಯಾರನ್ನು ಟಾರ್ಗೆಟ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಿ ಅವರ ಕೆಲಸ ಅವರು ಮಾಡಲಿ. ನಾನು ನಮ್ಮ ಪಕ್ಷ ಬಲಪಡಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ. ಯಾರನ್ನೂ ಗುರಿಯಾಗಿಸಿ ಕೆಲಸ ಮಾಡುತ್ತಿಲ್ಲ. ರಾಜಕೀಯದಲ್ಲಿ ನಾವು ಪಕ್ಷವನ್ನು ಬೆಳಸದಿದ್ದರೆ, ಕವಲುದಾರಿಗೆ ಬಂದು ನಿಲ್ಲುತ್ತದೆ. ಬಿಜೆಪಿಯನ್ನು ರಾಜ್ಯ ಹಾಗೂ ದೇಶದಲ್ಲಿ ಅಧಿಕಾರದಿಂದ ದೂರ ಇಡುವುದಷ್ಟೇ ನಮ್ಮ ಗುರಿ ಎಂದರು ಡಿಕೆಶಿ.
ಎಸ್ಐಟಿ ಮಾಡಿದ್ದಾರೆ, ನೋಡೋಣ
ಸಿಡಿ ಪ್ರಕರಣದ ವಿಚಾರಣೆಗೆ ಎಸ್ಐಟಿ ರಚಿಸಿದ್ದಾರೆ. ನೋಡೋಣ ಏನು ಮಾಡುತ್ತಾರೆ. ಸಿಡಿ ನಕಲಿ ಅಂದಿದ್ದಾರೆ. ನಮ್ಮ ಪಕ್ಷದ ಹೆಸರನ್ನು ಎತ್ತಿದ್ದಾರೆ. ಈ ವಿಚಾರ ಸಾರ್ವಜನಿಕವಾಗಿದ್ದು, ಎಲ್ಲ ಪರೀಕ್ಷೆಯನ್ನು ನಡೆಸಲಿ ಎಂದು ಡಿಕೆಶಿ ಹೇಳಿದರು.
ವಿಡಿಯೋದಲ್ಲಿರುವುದು ರಮೇಶ್ ಜಾರಕಿಹೊಳಿಯೋ ಅಲ್ಲವೋ ಎಂಬುದಕ್ಕಿಂತ, ಯಡಿಯೂರಪ್ಪ ಭ್ರಷ್ಟ, ಕನ್ನಡಿಗರು, ಮಾಧ್ಯಮಗಳ ನಿಂದನೆ, ಬೆಳಗಾವಿ ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಇವೆಲ್ಲವೂ ಗಂಭೀರ ವಿಚಾರಗಳಾಗಿವೆ. ಇವುಗಳ ಬಗ್ಗೆ ಚರ್ಚೆ ಆಗಬೇಕು. ಅವರು ನಮ್ಮ ಮೇಲೆ ಏನೇ ಆರೋಪ ಮಾಡಲಿ, ಈ ವಿಚಾರ ತನಿಖೆಯಾಗಲಿ ಎಂಬುದಷ್ಟೇ ನಮ್ಮ ಆಗ್ರಹ ಎಂದು ಅವರು ತಿಳಿಸಿದರು.
ಈ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ: ಮಧು ಬಂಗಾರಪ್ಪ
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇವರು ಬಂಗಾರಪ್ಪನವರ ಬೆಂಬಲಿಗರಾಗಿ ಅವರ ವಿಚಾರಗಳ ಪರವಾಗಿ ನಿಂತು ಸಹಕಾರ ನೀಡಿದ್ದಾರೆ. ಇಂದಿರಾ ಗಾಂಧಿ ಅವರ ಸಮಯದಲ್ಲಿ ನಮ್ಮ ತಂದೆ ಅವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 28 ಸಂಸದ ಸ್ಥಾನಗಳಲ್ಲಿ 27 ಅನ್ನು ಗೆದ್ದಿತ್ತು. ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ 28ರಲ್ಲಿ 23 ಸ್ಥಾನ ಗೆದ್ದಿದ್ದೆವು. ಬಂಗಾರಪ್ಪ ಅವರ ಅನುಯಾಯಿಯಾಗಿ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಅವರಂತೆಯೇ ಪಕ್ಷಕ್ಕೆ ಶಕ್ತಿ ತುಂಬಿ, ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಶಿವಕುಮಾರ್ ಅವರು ನಾನು ಶಾಸಕನಾಗಿದ್ದಾಗ ವಿರೋಧ ಪಕ್ಷದ ಶಾಸಕನಂತೆ ನನ್ನನ್ನು ನೋಡಲೇ ಇಲ್ಲ. ಸಿದ್ದರಾಮಯ್ಯ ಅವರಿಂದ ಹಿಡಿದು ಇತರೆ ಎಲ್ಲ ನಾಯಕರು ನನ್ನನ್ನು ಬಂಗಾರಪ್ಪನವರ ಮಗ ಎಂದು ವಿಶೇಷ ಪ್ರೀತಿ ಕೊಟ್ಟಿದ್ದರು. ಈ ರಾಜ್ಯಕ್ಕೆ ಕಾಂಗ್ರೆಸ್ ಅವಶ್ಯಕತೆ ಇದೆ ಎನ್ನುವುದು ಜನಸಾಮಾನ್ಯರ ಜತೆಗೆ ನನಗೂ ಅನಿಸಿದೆ. ಹೀಗಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆಯ ನಾನು ಅಧ್ಯಕ್ಷರನ್ನು ಮನವಿ ಮಾಡಿದ್ದೇನೆ ಎಂದರು ಅವರು.
ಅಧಿಕೃತವಾಗಿ ಪಕ್ಷ ಸೇರುವುದು ಬೇರೆ ವಿಚಾರ. ಆದರೆ ನಾನು ನಿನ್ನೆಯಿಂದಲೇ ಕಾಂಗ್ರೆಸಿಗನಾಗಿ ನನ್ನ ಕಾರ್ಯ ಆರಂಭಿಸಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಗೀತಾ ಶಿವರಾಜ್ ಕುಮಾರ್ ಅವರೂ ಕೂಡ ಪಕ್ಷ ಸೇರುವ ಬಗ್ಗೆ ನಿರ್ಧರಿಸಿದ್ದಾರೆ. ಅಧ್ಯಕ್ಷರು ಹಾಗೂ ಪಕ್ಷದ ಎಲ್ಲರೂ ಸೇರಿ ಈ ಬಗ್ಗೆ ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಈ ಹಿಂದಿನ ಪಕ್ಷದ ಬಗ್ಗೆ ನಾನು ಹೆಚ್ಚು ವಿಶ್ಲೇಷಣೆಯಾಗಲಿ, ಚರ್ಚೆಯಾಗಲಿ ಮಾಡುವುದಿಲ್ಲ. ಬಂಗಾರಪ್ಪನವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಹಾಗೂ ನನಗೆ ಇಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ಅಧಿಕಾರ ಸಿಗಲೇಬೇಕು ಅಂತ ಅಲ್ಲ. ರಾಜ್ಯದಲ್ಲಿ ನಾಯಕರಾಗಿ ಬೆಳೆಯಲು ಅವಕಾಶ ಕಲ್ಪಿಸುವುದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಕುಮಾರಸ್ವಾಮಿ ಅವರಿಗೆ ಅಣ್ಣನ ಸ್ಥಾನಕ್ಕೆ ಕೊಡೊ ಗೌರವ ಕೊಡುತ್ತೇನೆ. ಹೀಗಾಗಿ ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಕಳೆದ 10 ವರ್ಷ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.