ಬಾಗೇಪಲ್ಲಿ: ಜಾತಿ ತಾರತಮ್ಯ ಮಾಡದೇ ಸಹೋದರರಂತೆ ಬಾಳುವುದರಿಂದ ಜೀವನದಲ್ಲಿ ಮತ್ತು ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ನಾಯಕ ಗುಂಜೂರು ಶ್ರೀನಿವಾಸರೆಡ್ಡಿ ಪ್ರತಿಪಾದಿಸಿದರು.
ತಾಲ್ಲೂಕಿನ ಬಿಳ್ಳೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು; “ಜಾತಿ ವ್ಯವಸ್ಥೆ ಎಂಬುದನ್ನು ನಾವು ಮಾಡಿಕೊಂಡಿರುವುದು. ಮನುಷ್ಯ ಯಾರೂ ಸಹ ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಹುಟ್ಟಿರುವುದಿಲ್ಲ. ಹುಟ್ಟಿದ ಮೇಲೆ ಜಾತಿಯ ಹಣೆಪಟ್ಟಿ ಕಟ್ಟುತ್ತಾರೆ” ಎಂದರು.
ಯಾರು ಯಾವ ಸಮುದಾಯದಲ್ಲಾದರೂ ಹುಟ್ಟಲಿ, ಸಮಾಜದಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಜೀವನ ನಡೆಸಬೇಕು. ಇದರಿಂದಾಗಿ ಮನೆಯಲ್ಲಿ ಶಾಂತಿ ನೆಲೆಸುವುದರ ಜೊತೆಗೆ ಸಮಾಜದಲ್ಲಿಯೂ ಸಹ ಶಾಂತಿ ನೆಲೆಸುತ್ತದೆ. ಗ್ರಾಮೀಣ ಭಾಗಗಳಲ್ಲಿಯೇ ಊರ ಹಬ್ಬಗಳನ್ನು ಅತ್ಯಂತ ಶ್ರದ್ದಾ ಭಕ್ತಿಗಳಿಂದ ಊರ ಜನರೆಲ್ಲರೂ ಸೇರಿ ಆಚರಣೆ ಮಾಡುತ್ತಾರೆ. ಇದರಿಂದಾಗಿ ಗ್ರಾಮಗಳಲ್ಲಿ ಒಗ್ಗಟ್ಟು, ಶಾಂತಿ ನೆಲೆಸುತ್ತದೆ. ಯಾರೂ ಸಹ ಗ್ರಾಮ ಹಬ್ಬಗಳಲ್ಲಿ ರಾಜಕೀಯ ಮಾಡಬೇಡಿ ಎಂದು ಗುಂಜೂರು ಶ್ರೀನಿವಾಸ ರೆಡ್ಡಿ ಮನವಿ ಮಾಡಿದರು.
ಕೊರೋನ ವೈರಸ್ ಎರಡನೇ ಅಲೆ ಪ್ರಾರಂಭವಾಗಿದ್ದು, ಸರಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರಕಾರದ ಜತೆಗೆ ಜನರೂ ಸಹ ಕೊರೋನ ನಿಯಂತ್ರಣ ಕ್ರಮಗಳನ್ನು ಪಾಲಿಸುವುದರ ಮೂಲಕ ಸರಕಾರದೊಂದಿಗೆ ಕೈ ಜೋಡಿಸಬೇಕು. ಇದರಿಂದಾಗಿ ಕೊರೋನ ತಡೆ ಸಾಧ್ಯವಾಗುತ್ತದೆ ಎಂದರು ಅವರು.
ಕಾರ್ಯಕ್ರಮದಲ್ಲಿ ಊರುಸ್ ಕಮಿಟಿಯ ಸದಸ್ಯರು ಗುಂಜೂರು ಶ್ರೀನಿವಾಸರೆಡ್ಡಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಭಾಸ್ಕರರೆಡ್ಡಿ, ತಾ.ಪಂ. ಮಾಜಿ ಸದಸ್ಯ ಶ್ರೀರಾಮುಲು, ಬಿಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಶಿವ, ಮುಖಂಡರಾದ ಸೀತಾರಾಮ ನಾಯಕ್, ಉಗ್ರಾಣಂಪಲ್ಲಿ ಶಂಕರರೆಡ್ಡಿ, ವೆಂಕಟೇಶ್, ಶಿವಾರೆಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.