ಕೋವಿಡ್ ಎರಡನೇ ಅಲೆ ಬಗ್ಗೆ ಕಂಗಾಲಾಗಿರುವ ಸರಕಾರ, ಎಲ್ಲ ಸಾಧ್ಯತೆಗಳನ್ನು ಇಟ್ಟುಕೊಂಡಿದೆ. ಜನರು ಸಹಕಾರ ಕೊಟ್ಟು ಮುನ್ನಚ್ಚರಿಕೆ ವಹಿಸದಿದ್ದರೆ ಲಾಕ್ಡೌನ್, ಕರ್ಫ್ಯೂ ಜಾರಿ ಬಗ್ಗೆಯೂ ಮುಕ್ತ ಮನಸ್ಸು ಹೊಂದಿರುವುದು ಗೊತ್ತಾಗಿದೆ!!
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಅಟ್ಟಹಾಸ ಮತ್ತೆ ಶುರುವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ತುರ್ತುಸಭೆ ನಡೆಸಿದರು.
ಕೆಲ ಹಿರಿಯ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ತಜ್ಞರ ಜತೆ ಮಹತ್ವದ ಮಾತುಕತೆ ನಡೆಸಿದ ಅವರು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.
ನೆರೆ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್, ಕರ್ಫ್ಯೂ ಮತ್ತಿತರೆ ಕ್ರಮಗಳನ್ನು ಕೈಗೊಳ್ಳಬೇಕೆ ಬೇಡವೇ ಎಂಬ ಬಗ್ಗೆ ಸಿಎಂ ಅವರು ತಜ್ಞರ ಜತೆ ಸಮಾಲೋಚಿಸಿದರು.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ರಾಜ್ಯದಲ್ಲಿರುವ ಸದ್ಯದ ಕೋವಿಡ್ ಪರಿಸ್ಥಿತಿಯನ್ನು ವಿವರವಾಗಿ ಸಭೆಗೆ ತಿಳಿಸಿದರು.
ಕಳೆದ 14 ದಿನಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆಯಾಗಿದೆ. ಆದರೂ ಎಚ್ಚೆತ್ತುಕೊಳ್ಳಲೇಬೇಕಾಗಿದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಉಡುಪಿ, ತುಮಕೂರು, ದಕ್ಷಿಣ ಕನ್ನಡ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಇದು ಕೋವಿಡ್ 19ರ ಎರಡನೇ ಅಲೆಯ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಉಪೇಕ್ಷೆ ಮಾಡುವುದು ಬೇಡ ಎಂದು ಅವರು ಎಚ್ಚರಿಸಿದರು.
ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಬೇಕಾಗಿದೆ ಎಂದು ಅಧಿಕಾರಿಗಳು ಸಲಹೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಿಎಂ; ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕೂಡಲೇ ಮಾಡುವಂತೆ ಆರೋಗ್ಯ ಸಚಿವರಿಗೆ ಸೂಚಿಸಿದರು.
ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದಿದ್ದಾರೆ. ಆದರೆ ಇತರ ಮುಂಚೂಣಿಯ ಸಿಬ್ಬಂದಿಯಲ್ಲಿ ಶೇ.58ರಷ್ಟು ಮಾತ್ರ ಲಸಿಕೆ ಪಡೆದಿದ್ದಾರೆ. ದೊಡ್ಡ ಅಪಾರ್ಟ್ ಮೆಂಟ್ ಗಳಲ್ಲಿ ಲಸಿಕೆ ಹಾಕಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದಲ್ಲದೆ, ಮತದಾರರ ಪಟ್ಟಿಯನ್ನು ಆಧರಿಸಿ, ಹಿರಿಯ ನಾಗರಿಕರನ್ನು ಗುರುತಿಸಿ, ಲಸಿಕೆ ಹಾಕುವುದು ಕಡ್ಡಾಯ ಎಂದರು.
ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್ ನಿಯಂತ್ರಣಕ್ಕಾಗಿ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ತಾಂತ್ರಿಕ ಸಲಹಾ ಸಮಿತಿ ಮಾಡಿರುವ ಸಲಹೆಗಳನ್ನು ಪಾಲಿಸಬೇಕು ಎಂದು ಸಿಎಂ ಹೇಳಿದರು.
ತಾಂತ್ರಿಕ ಸಲಹಾ ಸಮಿತಿ ಮಾಡಿರುವ ಸಲಹೆಗಳು ಹೀಗಿವೆ
- ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಉಲ್ಲಂಘನೆಗೆ ಕಟ್ಟುನಿಟ್ಟಾಗಿ ದಂಡ ವಿಧಿಸುವುದು.
- ಮದುವೆ ಮತ್ತಿತರ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ನಿಯಂತ್ರಿಸುವುದು.
- ಪರೀಕ್ಷೆಯ ಪ್ರಮಾಣ ಹೆಚ್ಚಿಸುವುದು, ವಿಶೇಷವಾಗಿ ರೋಗ ಲಕ್ಷಣ ಇರುವವರು, ಅಂಗಡಿ ಮಾಲೀಕರು, ಬಸ್ ನಿರ್ವಾಹಕರು ಮತ್ತಿತರರಿಗೆ ಪರೀಕ್ಷೆ ನಡೆಸುವುದು.
- ಸಂಪರ್ಕಿತರ ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸುವುದು.
- ಕೋವಿಡ್ ಆಸ್ಪತ್ರೆಗಳು, ಆಕ್ಸಿಜನ್ ಪೂರೈಕೆ ಇರುವ ಹಾಸಿಗೆಗಳು, ಐಸಿಯು ಲಭ್ಯತೆ ಹಾಗೂ ಕೋವಿಡ್ ಕೇರ್ ಸೆಂಟರುಗಳ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳುವುದು.
- ಖಾಸಗಿ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಿ, ಹಿಂದಿನಂತೆ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವುದು.
- ಹಿರಿಯ ನಾಗರಿಕರಿಗೆ ಲಸಿಕೆ ಹಾಕುವ ಕಾರ್ಯವನ್ನು ಚುರುಕುಗೊಳಿಸುವುದು. ವಿಶೇಷವಾಗಿ ಗ್ರಾಮೀಣ ಪ್ರದೇಶ ಹಾಗೂ ಕೊಳೆಗೇರಿಗಳಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸುವುದು. ಎಲ್ಲ ಇಲಾಖೆಗಳು ಹಾಗೂ ರೋಟರಿ, ಲಯನ್ಸ್ ಕ್ಲಬ್ ಗಳಂತಹ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವುದು.
- ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ನಿಗದಿತ ಸಂಖ್ಯೆ ಮೀರಿ ಪ್ರಯಾಣಿಕರನನ್ನು ಕರೆದೊಯ್ಯದಿರುವುದು.
- ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್, ಡಾ. ಸುದರ್ಶನ್, ಡಾ. ರವಿ, ಪ್ರೊ. ಗಿರಿಧರಬಾಬು, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಮೊದಲಾದವರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದರು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣರೆಡ್ಡಿ ಮತ್ತಿತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.