ಬೆಂಗಳೂರು: ರಾಜ್ಯ ಸರಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಕನಿಷ್ಠ ₹25,000 ವೇತನ ನಿಗದಿ, ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಯಲ್ಲಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ ಡಿಸಿಎಂ ಅವರು; ಮಾನವೀಯತೆ ಆಧಾರದ ಮೇಲೆ ಈ ಬೇಡಿಕೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದರು.
ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿ/ ಸೇವಾ ಭದ್ರತೆಗೆ ಸಂಬಂಧಿಸಿದಂತೆ ಮಾನವೀಯ ನೆಲೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು ಕೂಡ ಮನವಿ ಮಾಡಿದ್ದಾರೆ ಡಿಸಿಎಂ ತಿಳಿಸಿದರು.
ಹತ್ತು ವರ್ಷ ಸೇವಾವಧಿ ಪೂರೈಸಿರುವ ಉಪನ್ಯಾಸಕರ ಸೇವೆಯನ್ನು ಕಾಯಂ ಮಾಡಿ. ಪ್ರತಿ ಹನ್ನೆರಡು ತಿಂಗಳಿಗೊಮ್ಮೆ ಮರು ನೇಮಕ ಮಾಡಿಕೊಳ್ಳುವುದು ಬೇಡ. ಕಾಯಂ ಆಗುವವರೆಗೆ ಅವರ ಸೇವೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿರಬೇಕು. ಇನ್ನು, ಗೌರವ ಧನದ ಮೊತ್ತವನ್ನು ಮಾಸಿಕ ಕನಿಷ್ಠ 25,000 ರೂ.ಗಳನ್ನಾದರೂ ನಿಗದಿ ಮಾಡಬೇಕು ಎಂಬ ಬೇಡಿಕೆಗಳಿವೆ. ಇವೆಲ್ಲವನ್ನು ಪರಿಶೀಲನೆ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಸಭಾಪತಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಅರುಣ್ ಶಹಾಪೂರ್, ಎಸ್.ಎಲ್.ಬೋಜೇಗೌಡ, ಎಸ್.ವಿ.ಸಂಕನೂರು, ಸುಶಿಲ್ ನಮೋಶಿ ಮುಂತಾದವರು ಉಪಸ್ಥಿತರಿದ್ದರು.