ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಂಗರೇಖನಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅರ್ಥಪೂರ್ಣವಾಗಿ ಗ್ರಾಹಕರ ರಕ್ಷಣಾ ದಿನವನ್ನು ಸೋಮವಾರ ಆಚರಿಸಲಾಯಿತು.
ಮೊದಲಿಗೆ ಶಾಲಾ ಗ್ರಾಹಕರ ರಕ್ಷಣಾ ಕ್ಲಬ್ ವಿದ್ಯಾರ್ಥಿ ಸದಸ್ಯರೇ ಗ್ರಾಹಕರ ರಕ್ಷಣಾ ದಿನದ ಆಚರಣೆಗೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಅದರಂತೆ ಈ ದಿನದ ವಿಶೇಷತೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಲು ಶಾಲಾ ವಿದ್ಯಾರ್ಥಿಗಳಿಂದಲೇ ಕಾಯ್ದೆ ಕುರಿತು ಭಾಷಣ ನಡೆಯಿತು.
ಇದೇ ವೇಳೆ ವಿದ್ಯಾರ್ಥಿಗಳು ಗ್ರಾಹಕರ ರಕ್ಷಣಾ ವೇದಿಕೆಯ ಕೆಲಸ ಹಾಗೂ ಗ್ರಾಹಕರಿಗೆ ಯಾವ ರೀತಿಯಲ್ಲಿ ನ್ಯಾಯ ದೊರಕಿಸುತ್ತದೆ ಎಂಬ ಕುರಿತು ಶಾಲಾ ಗ್ರಾಹಕರ ರಕ್ಷಣಾ ವೇದಿಕೆಯಿಂದ ಪ್ರಾತ್ಯಕ್ಷಿಕೆ ನಡೆಯಿತು.
ಇನ್ನು ವಿದ್ಯಾರ್ಥಿಗಳ ತಂಡವೊಂದು ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಮೇಲಿರುವ ವಿವಿಧ ಚಿಹ್ನೆಗಳ ಮಹತ್ವ. ಪ್ಯಾಕಿಂಗ್, ದಿನಾಂಕ ಸೇರಿದಂತೆ ಗ್ರಾಹಕರನ್ನು ವಂಚಿಸುವ ರೀತಿಯ ಮಹತ್ವದ ಅಂಶಗಳನ್ನು ಉದಾಹರಣೆಗಳ ಮೂಲಕ ತಿಳಿಸಿದರು.
ವಿಶೇಷ ಎಂದರೆ; ಶಾಲಾ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿಗಳ ಎರಡು ತಂಡ ಜಾಹೀರಾತು ಪ್ರದರ್ಶನ ಮಾಡಿಸಿದ್ದು ಅದರಂತೆ ಒಂದು ಕೊಲ್ಗೇಟ್ ಪೌಡರ್, ಸೋಪಿನ ತಯಾರಿಕೆ, ಅದರ ಮಾರ್ಕೆಟ್ ಕುರಿತಾಗಿ ಸವಿಸ್ತಾರವಾಗಿ ಮಾಹಿತಿ ಒದಗಿಸಿದರು.
ಇದೇ ವೇಳೆ ರಸಪ್ರಶ್ನೆ ಆಯೋಜಿಸಲಾಗಿತ್ತು ಶಾಲೆಯ ಆಯ್ದ 9 ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗ್ರಾಹಕರ ರಕ್ಷಣಾ ಕಾಯ್ದೆಯ ಕುರಿತಂತೆ ಪ್ರಶ್ನೆಗಳು ಇದ್ದವು.
ಈ ವೇಳೆ ಶಾಲಾ ಮಾರ್ಗದರ್ಶಕ ಹಾಗೂ ಸಹ ಶಿಕ್ಷಕ ರಾಮಲಿಂಗಪ್ಪ ಮಾತನಾಡಿ; ಗ್ರಾಹಕರ ರಕ್ಷಣಾ ಕಾಯ್ದೆಯ ಉಪಯೋಗಗಳು ಹಾಗೂ 10ನೇ ತರಗತಿ ಪರೀಕ್ಷೆಯಲ್ಲಿ ಈ ಪಾಠವಿದ್ದು ಅದರಲ್ಲಿ ಸುಲಭವಾಗಿ 3 ಅಂಕಗಳನ್ನು ತಗೆದುಕೊಳ್ಳಲು ಇಂದಿನ ಪ್ರಾತ್ಯಕ್ಷಿಕೆ ಹಾಗೂ ರಸಪ್ರಶ್ನೆ ಸಹಾಕಾರಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಬಂದಿದ್ದ ಅಶೋಕ್ ಮಾತನಾಡಿ; ಶಾಲೆಯಲ್ಲಿ ನಡೆಯುವ ಈ ರೀತಿಯ ದಿನಾಚರಣೆ ಹಾಗೂ ಚಟುವಟಿಕೆಗಳು ವಿಷಯವನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಆಶಾ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ದಿನಾಚರಣೆಯ ಮಹತ್ವವನ್ನು ತನ್ನದೇ ಆದ ಚಟುವಟಿಕೆಗಳಲ್ಲಿ ತಾನೇ ಭಾಗವಹಿಸಿ ಕಲಿತರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎನ್ನುವ ಉದ್ದೇಶದಿಂದ ಎಲ್ಲಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಮಾಡಿಸಲಾಗುತ್ತದೆ ಎಂದರು.
ಶಿಕ್ಷಕರಾದ ರಮೇಶ್, ನಾಗರತ್ನಮ್ಮ, ಮಂಜುನಾಥ್, ಅರ್ಷಿಯಾ ಅಂಜುಮ್, ಲಕ್ಷ್ಮೀದೇವಮ್ಮ ಹಾಗೂ ರೂಪಶ್ರೀ, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಇದ್ದರು.