ಚಿಕ್ಕಬಳ್ಳಾಪುರ: ಕೋವಿಡ್, ಲಾಕ್‌ಡೌನ್ ಹಾಗೂ ಕೆಲ ಕಾರಣಗಳಿಂದ ಜಿಡಿಎಸ್ ಸಂಘಟನೆಗೆ ಹಿನ್ನಡೆಯಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಪಕ್ಷವನ್ನ ಕಟ್ಟಬೇಕು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳೀದರು.
ನಗರದ ಶಿಡ್ಲಘಟ್ಟ ರಸ್ತೆಯ ಜಯಮ್ಮ ಪಿಳ್ಳಪ್ಪ ಕಾಂಪ್ಲೆಂಕ್ಸ್‌ನಲ್ಲಿ ಮಂಗಳವಾರದಂದು ಜೆಡಿಎಸ್ ನೂತನ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು;
“ಕೋವಿಡ್ ಸಂದರ್ಭದಲ್ಲಿ ಪಕ್ಷದ ಕಚೇರಿಯನ್ನು ಮುಚ್ಚಲಾಗಿತ್ತು. ಇದರಿಂದ ಪಕ್ಷದ ಸಂಘಟನೆಗೂ ಹಿನ್ನಡೆಯಾಗಿತ್ತು. ಮುಂದಿನ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ, 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಮುಖಂಡರಿಂದ ಹಿಡಿದು ಜಿಲ್ಲಾ ಮುಖಂಡರೆಲ್ಲ ಒಗ್ಗೂಡಿ ಪಕ್ಷವನ್ನು ಸಂಘಟನೆ ಮಾಡಲಾಗುತ್ತದೆ” ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಮುನೇಗೌಡ ಮಾತನಾಡಿ; “ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಜೆಡಿಎಸ್ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ.
ಕೊರೊನ ಕಾರಣದಿಂದ ಪಕ್ಷದ ಸಂಘಟನೆ ಕುಂಠಿತವಾಗಿತ್ತು. ಪಕ್ಷದ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು ಯಾವುದೇ ಗೊಂದಲಕ್ಕೀಡಾಗದೆ ನೂತನ ಕಚೇರಿಗೆ ಬಂದು ತಮ್ಮ ಸಮಸ್ಯೆ, ಪಕ್ಷದ ಸಂಘಟನೆ, ಇತರೆ ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಬಹುದು” ಎಂದರು.
ಮುಂದಿನ ದಿನಗಳಲ್ಲಿ ಉತ್ತಮವಾಗಿ ಪಕ್ಷದ ಸಂಘಟನೆ ಮಾಡಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಮುನೇಗೌಡ ಕರೆ ನೀಡಿದರು.
ನಗರಸಭೆ ಸದಸ್ಯ ಮಟಮಪ್ಪ ಮಾತನಾಡಿ; “ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಲಾಗುವುದು. ರಾಜ್ಯ-ಜಿಲ್ಲೆ ಹಾಗೂ ತಾಲ್ಲೂಕಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ದುಡಿದು ಪಕ್ಷವನ್ನು ಸಂಘಟನೆ ಮಾಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ವೀಕ್ಷಕ ರೋಷನ್ ಅಬ್ಬಾಸ್, ನಗರಸಭೆ ಉಪಾಧ್ಯಕ್ಷೆ ವೀಣಾ ರಾಮು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಕೆ.ಆರ್.ರೆಡ್ಡಿ, ಕಿಸಾನ್ ಕೃಷ್ಣಪ್ಪ, ಮುಕ್ತ ಮುನಿಯಪ್ಪ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ರಾಜಾಕಾಂತ್, ಶಿಲ್ಪ ಸೇರಿದಂತೆ ಅನೇಕರು ಹಾಜರಿದ್ದರು.