ಡಿವಿಜಿ ಅವರನ್ನು ಒಂದು ಸಾಲಿನಲ್ಲಿ ಹೇಗೆ ಬಣ್ಣಿಸಬಹುದು ಎಂದು ಗಾಢವಾಗಿ ಯೋಚಿಸಿದ ಮೇಲೆ ಹೊಳೆದದ್ದು ಈ ಸಾಲು. “ಡಿವಿಜಿ ಎಂಬ ಹೆಸರು ಪರಿಪೂರ್ಣ ಜ್ಞಾನದ ದಿವ್ಯ ದೀವಿಗೆ”. ಆ ದೀವಿಗೆಗೆ ಅಕ್ಷರ ನಮನ ಸಲ್ಲಿಸಿದ್ದಾರೆ ಡಾ.ಗುರುಪ್ರಸಾದ್ ಎಚ್.ಎಸ್.
ಲೋಕದಲ್ಲಿ ನೆಡೆಯುವ ಎಲ್ಲ ವಿಸ್ಮಯಗಳಿಗೆ ಜಗತ್ತು ಜಡವಾಗಿರುತ್ತದೆ, ಅಂತೆಯೇ ಯಾವುದನ್ನೂ ನಾವು ತೂಗಲಾರದಂಥ ವಿಶೇಷ ಶಕ್ತಿಯನ್ನೂ ಹೊಂದಿರುತ್ತದೆಯೋ ಅಂತಹ ಚೈತನ್ಯಕ್ಕೆ ತಲೆಬಾಗಿ ನಮಿಸು.
ಡಿ.ವಿ.ಗುಂಡಪ್ಪನವರ ಈ ಕಗ್ಗದ ಸಾಲುಗಳಂತೆ ಪ್ರಕೃತಿ ನಮಗೆ ನೀಡಿದ ಎಲ್ಲಾ ಚೈತನ್ಯಗಳಿಗೆ ನಮಿಸಲೇಬೇಕು, ಅಂತೆಯೇ ನಮ್ಮೊಂದಿಗೆ ಇಂತಹ ಅದ್ಭುತ ಸಾಲುಗಳನ್ನು ಕೊಟ್ಟಿರುವಂತಹ ಆಧುನಿಕ ಸರ್ವಜ್ಞರಿಗೆ ನಮ್ಮ ನಮನ ಸಲ್ಲಿಸಲೇಬೇಕು.
ಸಾಹಿತ್ಯ ಒಂದು ರೀತಿ ಮನುಷ್ಯನಿಗೆ ಆದರ್ಶಗಳಿದ್ದಂತೆ ಅಲ್ಲದೆ ಯಾವುದೇ ಬಗೆಯ ಶತ ಶತಮಾನಗಳ ಸಾಹಿತ್ಯವನ್ನು ನೋಡಿದರೂ ಅಲ್ಲಿ ನಾವು ಕಾಣುವುದು ಸಂಸ್ಕೃತಿ, ಅಧ್ಯಾತ್ಮ, ದಾರ್ಶನಿಕ ಚಿಂತನೆ, ಒಳಿತಲ್ಲಿ ನಡೆಸುವ ಹಾದಿಯ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಇದೇ ರೀತಿ ಆಧುನಿಕ ಬದುಕಿನಲ್ಲಿ ʼಮಂಕುತಿಮ್ಮನ ಕಗ್ಗʼದಂಥ ಮಹಾನ್ ಕೃತಿಯ ಮೂಲಕ ನಮ್ಮೆಲ್ಲರಲ್ಲಿ ಸುಸಂಸ್ಕೃತ ಮೌಲ್ಯವನ್ನು ಬಿತ್ತಿದವರು ಡಿ.ವಿ.ಗುಂಡಪ್ಪ.
ಕರ್ನಾಟಕದ ಪಾಲಿನ ದೇವಮೂಲೆ, ಮೂಡಣದ ಬಾಗಿಲು ಮುಳಬಾಗಿಲು ಡಿವಿಜಿ ಅವರ ಜನ್ಮನೆಲೆ. ಸಮೀಪದ ದೇವನಹಳ್ಳಿ ಅವರ ಹುಟ್ಟೂರು. ಅಲಮೇಲು-ವೆಂಕಟರಮಣಯ್ಯ ದಂಪತಿ ಪುತ್ರರು ಅವರು. ಹುಟ್ಟಿದ್ದು 1887 ಮಾರ್ಚ್ 17ರಂದು. ಬಾಲ್ಯದಲ್ಲಿಯೇ ಸಂಸ್ಕೃತಾಭ್ಯಾಸದ ಜೊತೆಗೆ ಇಂಗ್ಲೀಷ್ ಪಾಠವನ್ನು ಗುರುಗಳಾದ ಕೆ.ವಿ.ರಾಮಸ್ವಾಮಿ ಅಯ್ಯರ್ ಅವರ ಬಳಿ ಕಲಿತರು. ಎಲ್.ಎಸ್ (ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆ) ತೇರ್ಗಡೆಯಾದ ನಂತರ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿಕೊಂಡರು.
ಆದರೆ, ಅವರು ತಮ್ಮ ಮೆಟ್ರಿಕ್ಯುಲೇಷನ್ನಲ್ಲಿ ನಪಾಸಾದರು. ಅಲ್ಲದೇ ಅದೇ ಸಮಯದಲ್ಲೇ ಅವರ ಅಜ್ಜ ಮತ್ತು ಅಜ್ಜಿ ಸಾವಿನಿಂದ ಊರಿಗೆ ಬಂದವರು ತಿರುಗಿ ಮೈಸೂರಿಗೆ ತೆರಳಲಿಲ್ಲ. ತದ ನಂತರ ತಮ್ಮ ವಿದ್ಯಾಭ್ಯಾಸವನ್ನು ಕೋಲಾರದ ಹೈಸ್ಕೂಲಿನಲ್ಲಿ ಮುಗಿಸಿದರು.
ಕೋಲಾರದ ವಿದ್ಯಾಭ್ಯಾಸ ಸಮಯದಲ್ಲಿ ಅಲ್ಲಿ ಚರಿತ್ರೆ ಪಾಠ ಮಾಡುತ್ತಿದ್ದಂತ ಕೃಷ್ಣಸ್ವಾಮಿ ಅಯ್ಯರ್ ಅವರು ಲಾರ್ಡ್ ಮಾರ್ಲ್ ಬರೆದ ʼಗ್ಲಾಡ್ ಸ್ಟನ್ʼ ಜೀವನ ಚರಿತ್ರೆಯನ್ನು ಓದಲು ಡಿವಿಜಿ ಅವರಿಗೆ ತಿಳಿಸಿದ್ದರು. ಅಂತೆಯೇ ಡಿವಿಜಿ ಆ ಪುಸ್ತಕದ ಓದುವಿಕೆಯಿಂದಲೇ ತಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಂಡವರು. ಇದೇ ರೀತಿ ತಮ್ಮ ಜ್ಞಾನದ ಬೆಳಕನ್ನು ಬೆಳೆಸುತ್ತ ಬಂದ ಅವರು ನಂತರದ ದಿನಗಳಲ್ಲಿ ಎಷ್ಟೋ ಸಂಸ್ಥೆಗಳಿಗೆ ತರ್ಜುಮೆ ಕೆಲಸವನ್ನು ಮಾಡಿ, ಅದರಿಂದ ಬಂದಿದ್ದ ಹಣದಿಂದ ಮತ್ತಷ್ಟು ಪುಸ್ತಕಗಳನ್ನು ಕೊಂಡು ಓದಲು ಪ್ರಾರಂಭಿಸಿದರು. ಆದರೆ, ಮನೆಯಲ್ಲಿ ಕಷ್ಟವಿತ್ತು. ಕುಟುಂಬ ನಡೆಸಲು ತಾಪತ್ರಯವಿತ್ತು.
ಇನ್ನೂ ಫ್ರೌಢಶಾಲೆಯಲ್ಲಿರುವಾಗಲೇ ಗುಂಡಪ್ಪನವರಿಗೆ ಭಾಗೀರಥಮ್ಮ ಅವರೊಂದಿಗೆ ಮದುವೆ ಆಗುತ್ತಿದ್ದಂತೆ ಸಂಸಾರದ ಹೊರೆಯನ್ನೂ ಹೊರಬೇಕಾಯಿತು. ಕಷ್ಟಗಳ ದರ್ಶನವಾಯಿತು. ಮುಳಬಾಗಿಲು ಶಾಲೆಯಲ್ಲಿ ಬದಲಿ ಉಪಾಧ್ಯಾಯರಾಗಿ ಸೇರಿಕೊಂಡರು. ಆನಂತರ ಕೋಲಾರ ಚಿನ್ನದ ಗಣಿಯೂ ಸೇರಿ ಕೆಲ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು. ಆದರೂ ಸಮಸ್ಯೆಗಳು ಜಗ್ಗಲಿಲ್ಲ.
ಮುಂದೆ ಕೆಲಸ ಹುಡುಕುತ್ತ ಬೆಂಗಳೂರಿಗೆ ಬಂದವರು ಪತ್ರಿಕೋದ್ಯಮ ವೃತ್ತಿಯನ್ನು ಆಯ್ದುಕೊಂಡರು. ಅಂದಿನ ʼಸೂರ್ಯೋದಯ ಪ್ರಕಾಶಿಕʼ, ʼಮೈಸೂರ್ ಟೈಮ್ಸ್ʼ, ʼವೀರಕೇಸರಿʼ, ʼಈವಿನಿಂಗ್ ಮೇಲ್ʼ.. ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ʼದಿ ಹಿಂದುʼ ಪತ್ರಿಕೆಗೂ ಬರೆದರು. ಇದಾವುದೂ ಅವರಿಗೆ ಅನುಕೂಲವಾಗಲಿಲ್ಲ.
ತಿರುವು ಕೊಟ್ಟ ಒಂದು ಲೇಖನ
ದಿವಾನ್ ರಂಗಾಚಾರ್ಯರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿವಿಜಿ ಅವರ ಬದುಕಿನಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜತೆಜತೆಯಲ್ಲೇ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿವಿಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.
ಕನ್ನಡ ಕಾವ್ಯಕ್ಷೇತ್ರದಲ್ಲಿ ʼಮಂಕುತಿಮ್ಮನ ಕಗ್ಗʼ ಹಾಗೂ ʼಮರುಳ ಮುನಿಯನ ಕಗ್ಗʼ ಕೃತಿಗಳ ಮೂಲಕ ಡಿವಿಜಿ ಮನೆಮಾತಾದವರು. ಅವರ ಬಗ್ಗೆ ಇಡೀ ಕನ್ನಡ ನಾಡು ಮಾತನಾಡತೊಡಗಿತು.
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದ
ಕಡೆಗೋಗು ಪದ ಕುಸಿಯೆ ನೆಲವಿಹುದು- ಮಂಕುತಿಮ್ಮ
ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು” ಎಂದ ಡಿವಿಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಆದರೆ, ಇವತ್ತು ಕನ್ನಡ ಭಗವದ್ಗೀತೆ ಎಂದು ಬಣ್ಣಿಸುವ ಮಂಕುತಿಮ್ಮನ ಕಗ್ಗ ಕೃತಿಯಿಂದ ಡಿವಿಜಿ ಅವರ ಜೀವತಾವಧಿಯಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿಲ್ಲ ಎಂಬುದು ವಿಪರ್ಯಾಸ.
ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರ ಲಹರಿಯನ್ನು ಕಾವ್ಯದ ಮುಖೇನ ನೀಡಿದ ಡಿವಿಜಿ ಪತ್ರಕರ್ತರಾಗಿಯೂ ಹೆಸರಾದವರು.
ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ ಮಹನೀಯರು, ಜ್ಞಾಪಕ ಚಿತ್ರಶಾಲೆ ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.ಡಿವಿಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ʼಅಶ್ವತ್ಥವೃಕ್ಷʼ ಎಂದು ಕರೆಯುತ್ತಾರೆ.
ಡಿವಿಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು ಡಿವಿಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ ಎಂದಿದ್ದಾರೆ.
ಕರ್ನಾಟಕ ಸರಕಾರ ಡಿವಿಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ ಡಿವಿಜಿ ಕೃತಿ ಶ್ರೇಣಿಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ 1-2, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ. ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ.ಜಿ.ಎಲ್.ಸ್ವಾಮಿ, ಡಿವಿಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.
ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲೀಷ್-ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದವರು ಡಿವಿಜಿ.
ಇವರ ಇಂಗ್ಲೀಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ.ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್.ಸತ್ಯಮೂರ್ತಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರುಗಳೂ ಅಂದಿನ ಕಾಲಘಟ್ಟದ ನಮ್ಮ ದೇಶದ ಪ್ರಮುಖ ಪತ್ರಿಕೆಗಳಾಗಿದ್ದ ʼಸವೆರ್ಂಟ್ ಆಫ್ ಇಂಡಿಯʼ ಹಾಗೂ ʼಬಾಂಬೆ ಕ್ರಾನಿಕಲ್ʼ ಪತ್ರಿಕೆಗಳು ಮನಸೋಕ್ತವಾಗಿ ಮೆಚ್ಚಿಕೊಂಡಿವೆ.
ಇನ್ನು, ಬದುಕಿನ ಬಗ್ಗೆ ಸ್ಪಷ್ಟ ದರ್ಶನವನ್ನೇ ಕಟ್ಟಿಕೊಟ್ಟವರು ಡಿವಿಜಿ ಅವರು.
ವಿಶದಮಾದೊಂದು ಜೀವನಧರ್ಮದರ್ಶನವ|
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು-ಮಂಕುತಿಮ್ಮ ||
ಜೀವನ ಎಂದ ಮೇಲೆ ಕಷ್ಟ-ಸುಖ, ಒಳಿತು-ಕೆಡುಕು ಎಲ್ಲವೂ ಇದ್ದೇ ಇರುತ್ತದೆ. ಕಷ್ಟವನ್ನು ಸುಖವನ್ನಾಗಿ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಪ್ರಯತ್ನವೇ ಜೀವನದ ಜೀವಾಳವಾಗಬೇಕು ಎಂದು ಹೇಳುತ್ತಾರೆ ಅವರು. ಅಂತೆಯೇ ಡಿವಿಜಿ ಅವರ ಬದುಕಿನ ದೃಷ್ಟಿಯೂ ಕೂಡ ಅದೇ. ಇಂತಹ ದಾರ್ಶನಿಕರ ಉಪದೇಶಗಳು ಸದಾ ಮನುಕುಲದ ಯಶಸ್ಸಿಗೆ ಕಾರಣವಾಗುತ್ತವೆ.
ಮಂಕುತಿಮ್ಮನ ಕಗ್ಗ ಡಿವಿಜಿ ಅವರ ಮಹತ್ತ್ವದ ಸೃಷ್ಠಿ ಎನ್ನುವುದಕ್ಕಿಂತ ಕನ್ನಡಿಗರ ಪಾಲಿಗೆ ಅದೊಂದು ಆಚಾರ್ಯ ಕೃತಿ ಹಾಗೂ ಮನೆಯಲ್ಲಿಟ್ಟುಕೊಂಡು ನಿತ್ಯವೂ ಒಮ್ಮೆಯಾದರೂ ನಾಲ್ಕು ಸಾಲುಗಳನ್ನು ಓದಿಕೊಂಡು ಮನನ ಮಾಡಿಕೊಂಡರೆ ಬದುಕಿಗೊಂದು ಸಾರ್ಥಕತೆ ಬರುವುದರಲ್ಲಿ ಎರಡು ಮಾತಿಲ್ಲ. ಹೀಗೆ ಹೇಳುತ್ತ ಡಿವಿಜಿ ಎಂಬ ದಿವ್ಯ ದೀವಿಗೆಗೆ ಮತ್ತೊಮ್ಮೆ ನಮಿಸೋಣ.
ಡಾ.ಗುರುಪ್ರಸಾದ ಎಚ್ ಎಸ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.
Lead photo courtesy: Wikipedia