ಫೇಸ್ಬುಕ್ ಬಳಸುವಾಗ ಇರಲಿ ಎಚ್ಚರ! ಫ್ರೆಂಡ್ ರಿಕ್ವೆಸ್ಟ್ ಬಂದರೆ ಕೂಡಲೇ ಓಕೆ ಮಾಡುತ್ತೀರಾ? ಅಜ್ಞಾತ ಹುಡುಗಿ ಆನ್‌ಲೈನ್‌ನಲ್ಲಿ ಲವ್ ಪ್ರಪೋಸ್ ಮಾಡಿದ್ರೆ ಕುಣಿದು ಕುಪ್ಪಳಿಸುತ್ತೀರಾ? ಹಾಗಾದರೆ, ಈ ವರದಿಯನ್ನೊಮ್ಮೆ ಓದಿ.
ಮೈಸೂರು: ಫೇಸ್‌ಬುಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಖತರ್ನಾಕ್ ವಂಚಕಿಯನ್ನು ಮೈಸೂರಿನ ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವತಿ ಬೆಂಗಳೂರಿನ ಅಂದರಹಳ್ಳಿಯ 2ನೇ ಮುಖ್ಯರಸ್ತೆ, 3ನೇ ಕ್ರಾಸ್ ನಿವಾಸಿ ಮೇಘಾ ಅಲಿಯಾಸ್ ಹರಿಣಿ (25) ಎಂದು ಗುರುತಿಸಲಾಗಿದೆ.
ಫೇಸ್‌ಬುಕ್‍ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸುಂದರವಾದ ಹುಡುಗಿಯರ ಫೋಟೋ ಹಾಕಿ ಅದನ್ನು ತನ್ನದೇ ಫೋಟೋ ಎಂದು ನಂಬಿಸಿ ಯುವಕರನ್ನು ಬಲೆಗೆ ಬೀಳಿಸಿಕೊಂಡು ಅವರಿಂದ ಹಣ, ಆಭರಣ ಪಡೆದು ವಂಚಿಸುತ್ತಿದ್ದ ಈಕೆ ಪೊಲೀಸರ ಸೆರೆ ಆಗಿದ್ದಾಳೆ.
ಫೋಟೋ ಕಳಿಸಿ ವಂಚನೆ
ರಾಮನಗರ ಜಿಲ್ಲೆ ಮಾಗಡಿ ಟೌನ್‍ನಲ್ಲಿ ವಾಸವಾಗಿದ್ದ ಮೇಘಾ ಫೇಸ್‍ಬುಕ್‍ನಲ್ಲಿ ಚಿನ್ನುಗೌಡ ಎಂಬ ಹೆಸರಿನ ಪ್ರೊಫೈಲ್ ಸೃಷ್ಟಿಸಿ, ರವಿ ಎಂಬಾತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾಳೆ. ಆತ ರಿಕ್ವೆಸ್ಟ್ ಒಪ್ಪಿಕೊಂಡ ಮೇಲೆ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ತನ್ನ ಹೆಸರು ಬಿಂದುಗೌಡ ಎಂದು ಹಾಗೂ ಸುಂದರವಾದ ಹುಡುಗಿಯರ ಫೋಟೋಗಳನ್ನು ತನ್ನವೇ ಫೋಟೋಗಳು ಎಂದು ಕಳುಹಿಸಿ ಪರಿಚಯಿಸಿಕೊಂಡಿದ್ದಾಳೆ.
ನಿಮ್ಮನ್ನು ವಿಜಯನಗರದ ವಾಟರ್ ಟ್ಯಾಂಕ್ ಬಳಿ ನೋಡಿದ್ದು, ಮದುವೆಯಾಗಬೇಕೆಂದು ತನ್ನ ಬಯಕೆ ಎಂದು ರವಿಗೆ ನಂಬಿಸಿ ತಾನು ಒಬ್ಬಳೇ ಮಗಳಾಗಿದ್ದು, ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ವಾಸವಾಗಿದ್ದೇನೆ. ತಮ್ಮ ತಂದೆಗೆ ಎರಡು ಪೆಟ್ರೋಲ್ ಬಂಕ್ ಮತ್ತು ಬಾರ್‌ಗಳು ಇರುವುದಾಗಿ ಆತನಿಗೆ ನಂಬಿಸಿದ್ದಾಳೆ.
ನಿಮ್ಮನ್ನು ಪ್ರೀತಿಸಿ ಮದುವೆಯಾಗಬೇಕೆಂದು ಆಸೆಪಟ್ಟಿರುವ ಕಾರಣ ನಿಮ್ಮ ಹುಟ್ಟುಹಬ್ಬಕ್ಕೆ ಸುಮಾರು 45 ಲಕ್ಷ ರೂ. ಬೆಲೆಬಾಳುವ ಫಾರ್ಚುನರ್ ಕಾರು ಕೊಡಿಸುವುದಾಗಿಯೂ ಆಕೆ ರವಿಗೆ ನಂಬಿಸಿದ್ದಾಳೆ.
ಕಾರು ಕೊಡಿಸುವ ಆಮಿಷ
ಕಾರು ಖರೀದಿಸಲು ಒಂದೂವರೆ ಲಕ್ಷ ರೂ. ಹಣ ಕಡಿಮೆಯಾಗಿದ್ದು, ಅದನ್ನು ನನ್ನ ಸ್ನೇಹಿತ ಶಿವು ಎಂಬುವನನ್ನು ಕಳುಹಿಸುತ್ತಿದ್ದು, ಅವನ ಕೈಯಲ್ಲಿ ಕೊಟ್ಟು ಕಳುಹಿಸು ಎಂದು ಹೇಳಿ ರವಿಯಿಂದ ಹಣ ಪಡೆದಿದ್ದಾಳೆ.
ರವಿ ಜತೆ ಮೊಬೈಲ್‌ನಲ್ಲಿ ಮಾತನಾಡುವಾಗ ನಿಮ್ಮ ತಾಯಿಯನ್ನು ಪರಿಚಯ ಮಾಡಿಕೊಡುವಂತೆ ಹಾಗೂ ತಮ್ಮಿಬ್ಬರ ಮದುವೆ ವಿಚಾರ ತಿಳಿಸುವಂತೆ ಹೇಳಿದ್ದಾಳೆ. ಅದರಂತೆ ರವಿ ಈಕೆಯನ್ನು ತನ್ನ ತಾಯಿಗೆ ಪರಿಚಯಿಸಿದ್ದಾರೆ. ನಂತರ ಅವರ ತಾಯಿಯ ಮೊಬೈಲ್ ನಂಬರ್ ಪಡೆದು ಅವರ ಜತೆಯೂ ಮಾತನಾಡಿರುವ ವಂಚಕಿ ನಿಮ್ಮ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದಾಳೆ.
ಯುವಕನ ತಾಯಿಗೂ ಯಾಮಾರಿಸಿದ ವಂಚಕಿ
ಫೋಟೋದಲ್ಲಿ ರವಿ ತಾಯಿ ಧರಿಸಿದ್ದ ಚಿನ್ನದ ಸರ ಬಹಳ ಚೆನ್ನಾಗಿದೆ. ಅದೇ ರೀತಿಯ ಸರವನ್ನು ತಾನು ಮಾಡಿಸಿಕೊಳ್ಳುತ್ತೇನೆ. ಅದಕ್ಕಾಗಿ ಆ ಸರವನ್ನು ತಾನು ಕಳುಹಿಸುವ ತನ್ನ ಸ್ನೇಹಿತನ ಬಳಿ ಕೊಡುವಂತೆ ತಿಳಿಸಿ ಆಭರಣದ ಅಂಗಡಿಯಲ್ಲಿ ಡಿಸೈನ್ ತೋರಿಸಿದ ನಂತರ ಸರವನ್ನು ಹಿಂತಿರುಗಿಸುವುದಾಗಿ ಹೇಳಿದ್ದಾಳೆ.
ಆಕೆಯ ಮಾತನ್ನು ನಂಬಿದ ರವಿ, ತಾಯಿಯ 85 ಗ್ರಾಂ ತೂಕದ ಚಿನ್ನದ ಸರ ಮತ್ತು ಅದರೊಂದಿಗೆ ಒಂದು ರೇಷ್ಮೆ ಸೀರೆಯನ್ನು ಸಹ ಕಳುಹಿಸಿಕೊಟ್ಟಿದ್ದಾರೆ.
ನಂತರ ರವಿಯ ತಾಯಿ ಬಳಿ ಇರುವ ಎಲ್ಲಾ ಒಡವೆಗಳ ಡಿಸೈನ್‍ಗಳನ್ನು ನಿಮ್ಮ ಮನೆ ಸೊಸೆಯಾಗಿ ಬರುವ ನಾನು ಅದೇ ರೀತಿ ಮಾಡಿಸಿಕೊಳ್ಳುತ್ತೇನೆ. ಅದಕ್ಕಾಗಿ ತಮ್ಮ ಎಲ್ಲಾ ಒಡವೆಗಳನ್ನು ತನ್ನ ಸ್ನೇಹಿತನ ಬಳಿ ಕಳುಹಿಸಿಕೊಡಿ. ನಾನು ಆ ರೀತಿಯ ಒಡವೆಗಳನ್ನು ಮಾಡಿಸಿಕೊಂಡ ನಂತರ ತಮಗೆ ಎಲ್ಲಾ ಒಡವೆಗಳನ್ನು ಮರಳಿ ಕೊಡುತ್ತೇನೆ ಎಂದು ಹೇಳಿದ್ದಾಳೆ.
ಆಕೆಯ ಮಾತಿನಲ್ಲಿ ಯಾವುದೇ ಸಂಶಯ ಬಾರದ ಕಾರಣ ತನ್ನ ತಾಯಿ ಬಳಿ ಇದ್ದ ಸುಮಾರು 480 ಗ್ರಾಂನಷ್ಟು ಒಡವೆಗಳನ್ನು ಪಡೆದು ಆಕೆಗೆ ತಲುಪಿಸಿದ್ದಾನೆ ರವಿ. ಹಲವು ದಿನಗಳಾದರೂ ಒಡವೆಗಳನ್ನು ಹಿಂತಿರುಗಿಸದೆ ಇಲ್ಲಸಲ್ಲದ ಕಾರಣಗಳನ್ನು ಹೇಳಿ ನಂಬಿಸಿ ಅವರನ್ನು ವಂಚಿಸಿ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ ಮೇಘ. ಒಟ್ಟು 860 ಗ್ರಾಂ ಚಿನ್ನ ವಂಚಕಿ ಪಾಲಾಗಿತ್ತು.
ಆಕೆಯ ವರ್ತನೆಯಿಂದ ಅನುಮಾನಗೊಂಡ ರವಿ ಮೋಸ ಹೋಗಿರುವುದನ್ನು ಅರಿತು ಮೈಸೂರಿನ ಮೇಟಗಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ವಂಚಕಿ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿ ಬಿಂದುಗೌಡ ಎಂಬಾಕೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಈಕೆಯ ನಿಜವಾದ ಹೆಸರು ಮೇಘ ಅಲಿಯಾಸ್ ಹರಿಣಿ ಎಂಬುದು ಗೊತ್ತಾಗಿದೆ. ಆಕೆಯ ವಂಚನೆಯ ವಿರಾಟ್ ದರ್ಶನವಾಯಿತು ಪೊಲೀಸರಿಗೆ. ಆಗ ಬೆಚ್ಚಿಬೀಳುವ ಸರದಿ ಪೊಲೀಸರದ್ದು.
ಇದೇ ಮೊದಲಲ್ಲ, ಕ್ರೈಂ ಹಿಸ್ಟರಿಯೇ ಇದೆ
ಈಕೆಯು ಚಾಳಿಬಿದ್ದ ಖತರ್ನಾಕ್ ಆರೋಪಿಯಾಗಿದ್ದು, ಈ ಹಿಂದೆ 2018ರಲ್ಲಿ ಮಂಡ್ಯದಲ್ಲಿ ಸಾನ್ವಿ ಸಿರಿಗೌಡ ಎಂಬ ಹೆಸರಿನ ಫೇಸ್‌ಬುಕ್ ಖಾತೆ ತೆರೆದು ಯೋಗಾನಂದ ಎಂಬುವವರಿಗೆ ರಿಕ್ವೆಸ್ಟ್ ಕಳುಹಿಸಿ ತಾನು ಅಗರ್ಭ ಶ್ರೀಮಂತಳು ಹಾಗೂ ತನ್ನ ತಂದೆ ದೊಡ್ಡ ಉದ್ಯಮಿ ಎಂದು ನಂಬಿಸಿ ಆತನಿಗೆ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಕೊಡಿಸುತ್ತೇನೆಂದು 15 ಲಕ್ಷ ರೂ.ಗಳನ್ನು ಆತನಿಂದ ಪಡೆದು ವಂಚಿಸಿದ್ದಳು. ಈ ಸಂಬಂಧ ಮಂಡ್ಯ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದಲ್ಲದೆ, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶ್ರೀನಿವಾಸ್ ಎಂಬುವವರಿಗೆ ಸ್ವಾತಿ ಗೌಡ, ಖುಷಿ ಎಂದು ಫೇಸ್‍ಬುಕ್ ಮೆಸೆಂಜರ್ ಮೂಲಕ ಪರಿಚಯಿಸಿಕೊಂಡು ತನಗೆ 8 ಸಾವಿರದಿಂದ 10 ಸಾವಿರ ಅಡಿ ಕಮರ್ಷಿಯಲ್ ಜಾಗ ಬೇಕಾಗಿದ್ದು, ಸಾಕಷ್ಟು ಕಮಿಷನ್ ಕೊಡುವುದಾಗಿ ನಂಬಿಸಿ 9.70 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದರು.
ಅಲ್ಲದೆ, ಈಕೆ ಮಾಗಡಿಯಲ್ಲಿ ಇದೇ ರೀತಿ ಯುವಕನೊಬ್ಬನಿಗೆ ಮತ್ತು ಯುವತಿಯೊಬ್ಬರಿಗೆ ವಂಚಿಸಿದ್ದು, ಈಕೆಯ ಕುಟುಂಬಸ್ಥರು ಹಾಗೂ ಸ್ನೇಹಿತರು ವಂಚನೆಗೊಳಗಾದ ಯುವಕ ಮತ್ತು ಯುವತಿಯ ನಷ್ಟವನ್ನು ಪಾವತಿಸಿ ಅವರೊಂದಿಗೆ ರಾಜಿ ಮಾಡಿಸಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗದೆ ಇರುವುದು ತಿಳಿದುಬಂದಿದೆ.
ಕೇವಲ 10ನೇ ತರಗತಿಯಷ್ಟೇ ಓದಿರುವ ಮೇಘ ಅಲಿಯಾಸ್ ಹರಿಣಿ ಪ್ರತಿ ಬಾರಿಯೂ ಇಂತಹ ಅಪರಾಧ ಮಾಡುವಾಗ ಮಧ್ಯವರ್ತಿಗಳನ್ನಾಗಿ ಹೊಸಬರನ್ನೇ ಬಳಸಿಕೊಂಡು ತನ್ನ ಕೆಲಸ ಮುಗಿದ ನಂತರ ತನ್ನ ಮೊಬೈಲ್ ಸಂಖ್ಯೆ ಬದಲಾಯಿಸಿ ಅವರ ಸಂಪರ್ಕ ಕಡಿತಗೊಳೊಸುವ ಚಾಲಾಕಿ ವಂಚಕಿ ಆಗಿದ್ದಳು.
ಈಕೆಯ ವಂಚನೆ ಜಾಲದ ಬಗ್ಗೆ ಮತ್ತು ಇದರ ಹಿಂದೆ ಯಾರು ಯಾರು ಇದ್ದಾರೆಂಬ ಬಗ್ಗೆ ಸಮಗ್ರ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಡಿಸಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಲ್ಲೇಶ್, ಪಿಎಸ್‍ಐಗಳಾದ ವಿಶ್ವನಾಥ್, ನಾಗರಾಜ್ ನಾಯ್ಕ್, ಎಎಸ್‍ಐ ಮಹದೇವ ಹಾಗೂ ಸಿಬ್ಬಂದಿಗಳಾದ ರಾಜೇಶ್, ಮಧುಕುಮಾರ್, ಶಿವಕುಮಾರ್, ಲಿಖಿತ್, ಶ್ರೀಶೈಲ ಹುಗ್ಗಿ, ರೂಪಾ, ಆಶಾ, ಉಮಾ, ಮಣಿ ಅವರ ತಂಡ ಮಾಡಿ ಆರೋಪಿಯನ್ನು ಬಂಧಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಈ ಕಾರ್ಯವನ್ನು ಪ್ರಶಂಸಿಸಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ನಾನಾ ರೀತಿಯ ಆಮಿಷವೊಡ್ಡಿ ಬಲೆಗೆ ಕೆಡವಲು ಪ್ರಯತ್ನಿಸುವ ಜಾಲಗಳಿಂದ ಜಾಗರೂಕರಾಗಿರಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Courtesy : www.gnews5.com