ಚಿಕ್ಕಬಳ್ಳಾಪುರ: ಕನ್ನಡದಲ್ಲಿ ಸರಿಯಾಗಿ ಸಹಿ ಮಾಡಲು ಬರದವರು, ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡವರು, ಜಾತಿ ರಾಜಕಾರಣ ಮಾಡುವವರು, ಬಗೆಬಗೆಯ ಪ್ರಭಾವ ಬಳಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಾದಿ ಮೇಲೆ ಕೂತವರಿಂದ ಕನ್ನಡ ಉದ್ಧಾರ ಆಗಿಲ್ಲ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಗಂಭೀರ ಆರೋಪ ಮಾಡಿದರು.
ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಅವರು ಮತಯಾಚನೆಗಾಗಿ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದರಲ್ಲದೆ, ಇದೇ ವೇಳೆ ಮಾಧ್ಯಮಗಳ ಜತೆಯೂ ಮಾತನಾಡಿದರು. ಕಸಾಪಕ್ಕೆ ಕೆಲಸ ಮಾಡುವವರು ಬರಬೇಕು. ನಿವೃತ್ತಿ ನಂತರ ಕಾಲಕ್ಷೇಪ ಮಾಡಲು ಬರುವವರಲ್ಲ ಎಂದು ಅವರು ಹೇಳಿದರು.
ಪರಿಷತ್ತಿನ ಇತಿಹಾಸವನ್ನು ನೋಡುತ್ತಾ ಬಂದರೆ ವಯಸ್ಸಾದವರು, ಸರಕಾರಿ ಸೇವೆಯಿಂದ ನಿವೃತ್ತರಾದವರು, ಕನ್ನಡದ ಬಗ್ಗೆ ಕಾಳಜಿ, ಹೋರಾಟ ಮನೋಭಾವ ಇಲ್ಲದವರು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರಿಂದ ಕನ್ನಡಕ್ಕೇನೂ ಪ್ರಯೋಜನ ಆಗಿಲ್ಲ. ಪರಿಷತ್ತೂ ಉದ್ಧಾರ ಆಗಿಲ್ಲ ಎಂದು ಮುಲಾಲಿ ಅಭಿಪ್ರಾಯಪಟ್ಟರು.
ಸರಕಾರಿ ಸೇವೆಯಲ್ಲಿದ್ದು, ನಿವೃತ್ತರಾದ ಕೂಡಲೇ ಕೆಲವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೆನಪಾಗುತ್ತದೆ. ಯಾಕೆ ಬೇಕು ಅವರಿಗೆ? ನಿಜವಾದ ಹೋರಾಟಗಾರರಿಗೆ, ಸಾಹಿತಿಗಳಿಗೆ, ನಿಜ ಸಾಹಿತ್ಯಾಸಕ್ತರಿಗೆ ಅವಕಾಶ ಸಿಗಬೇಕು. ಅಂಥ ಬದ್ಧತೆ ಇದ್ದವರಿಂದ ಮಾತ್ರ ಕನ್ನಡಕ್ಕೆ ಒಳ್ಳೆಯದಾಗುತ್ತದೆ ಎಂದು ಮುಲಾಲಿ ಪ್ರತಿಪಾದಿಸಿದರು.
ಕಸಾಪಕ್ಕೆ ಡಿಜಿಟಲ್ ಸ್ಪರ್ಶ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಇನ್ನು ಕಡತಗಳ ಕಾಲದಲ್ಲೇ ಕಸಾಪ ಇದೆ. ಆ ವ್ಯವಸ್ಥೆಯನ್ನು ಬದಲಿಸಲಾಗುವುದು. ಇಡೀ ಕಸಾಪವನ್ನು ಡಿಜಿಟಲೀಕರಣ ಮಾಡಿ ಅದರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು ನನ್ನ ಮಹತ್ವದ ಯೋಜನೆ ಎಂದು ಮುಲಾಲಿ ಪ್ತಶ್ನೆಯೊಂದಕ್ಕೆ ಉತ್ತರ ನೀಡಿದರು.
ಪರಿಷತ್ತಿನಲ್ಲಿ ಮಹಿಳಾ ಘಟಕ
ಅನೇಕ ದಿಗ್ಗಜರು ಮುನ್ನಡೆಸಿದ 105 ವರ್ಷಗಳ ಇತಿಹಾಸವುಳ್ಳ ಕಸಾಪದಲ್ಲಿ ಇನ್ನೂ ಮಹಿಳಾ ಘಟಕ ಸ್ಥಾಪನೆಯಾಗಿಲ್ಲ. ಮಹಿಳಾ ಪ್ರಾತಿನಿಧ್ಯವೂ ಕಡಿಮೆ ಎಂದ ಅವರು; ಸದಸ್ಯರಿಗೆ ಸ್ಮಾರ್ಟ್ ಕಾರ್ಡುಗಳನ್ನು ಕೊಟ್ಟು, ಟೋಲ್‌ಗಳಲ್ಲಿ ಶುಲ್ಕವಿಲ್ಲದೆ ಪ್ರಯಾಣಿಸುವಂತೆ ಮಾಡಿಸಲು ಕಾನೂನಿನಲ್ಲಿ ಅವಕಾಶ ಇದೆ. ಅದಕ್ಕೂ ವ್ಯವಸ್ಥೆ ಮಾಡಲಾಗುವುದು ಎಂದರು ಮುಲಾಲಿ.