- ಬಲಿಷ್ಠರ ಕೊಬ್ಬು ಬರಿಸಲು ಬಡವರನ್ನು ಶೋಷಣೆ ಮಾಡುವಂತೆ, ಬೆಂಗಳೂರನ್ನು ಉದ್ಧರಿಸಲು ಪಕ್ಕದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳ ಪ್ರಾಕೃತಿಕ ಸಂಪತ್ತನ್ನು ಯಥೇಚ್ಚವಾಗಿ ಲೂಟಿ ಮಾಡಲಾಗುತ್ತಿದೆ. ವಿಚಿತ್ರವೆಂದರೆ ಬಾಗೇಪಲ್ಲಿ ಪಟ್ಟಣವನ್ನು ಭಾಗ್ಯನಗರ ಮಾಡಬೇಕೆಂದು ಹೋರಾಟವೂ ಆಗಿ ಆ ಹೆಸರನ್ನು ಬದಲಿಸುವ ಸ್ಥಿತಿಯೂ ಬಂದಿದೆ. ಆದರೆ, ಅದಕ್ಕಿಂತ ಮಿಗಿಲಾಗಿ ಆ ತಾಲ್ಲೂಕಿನಲ್ಲಿರುವ ಅನರ್ಘ್ಯ ಪ್ರಾಕೃತಿಕ ಸಂಪತ್ತನ್ನು ಕಾಪಾಡಬೇಕಾದ ಕೆಲಸ ಮೊದಲು ಆಗಬೇಕಿದೆ. ಜನಪ್ರತಿನಿಧಿಗಳ ಮಾತೃ ಕರ್ತವ್ಯ ಇದು. ಪತ್ರಕರ್ತ, ಸಾಹಿತಿಯೂ ಆದ ನರಸಿಂಹಮೂರ್ತಿ ಮಾಡಪ್ಪಲ್ಲಿ
ಜನತಂತ್ರ ವ್ಯವಸ್ಥೆಯೊಳಗೆ ಧನತಂತ್ರಗಳು ಮೇಲುಗೈ ಸಾಧಿಸುತ್ತಿವೆ. ಸರಕಾರಗಳೆಂದರೆ ಜನರ ಜೀವನಮಟ್ಟವನ್ನು ಸುಧಾರಿಸಿ ಉತ್ತಮವಾಗಿರುವಂತೆ ನೋಡಿಕೊಳ್ಳುವುದು. ಆದರೆ, ಇದು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಎಂದು ನೋಡಿದಾಗ ಹಲವು ಬೇಸರದ ಮಜಲುಗಳು ತೆರೆದುಕೊಳ್ಳುತ್ತವೆ.
ಸುಮಾರು ಎರಡು ದಶಕಗಳ ಹಿಂದೆ ಕಲ್ಲು ದಿಮ್ಮಿಗಳ ವ್ಯಾಪಾರಸ್ಥನೊಬ್ಬ ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಂಪಲ್ಲಿ, ಮಾಡಪಲ್ಲಿಗಳ ಸುತ್ತಮುತ್ತಲಿನ ಅಪಾರವಾದ, ಮನಮೋಹಕ ಸೌಂದರ್ಯಯುತ ಪ್ರಕೃತಿ ಸಂಪತ್ತನ್ನು ದೋಚಲು ಬಂದ. ಆ ಸಂದರ್ಭದಲ್ಲಿ ಕೆಲ ಗ್ರಾಮದ ಮುಖಂಡರುಗಳು ಸೇರಿದಂತೆ ಮುಗ್ಧ ಜನತೆಯೇ ಅವರಿಗೆ ಕಲ್ಲು ಗಣಿಗಾರಿಕೆಯ ಉದ್ಯಮಕ್ಕೆ ಸ್ಥಳೀಯವಾಗಿ ದೊರಕಬೇಕಾದ ದಾರಿಗಳನ್ನು ಮಾಡಿಕೊಟ್ಟರು.
ಮೊದಮೊದಲು ಕಬ್ಬಿಣದ ಸರಪಳಿಗಳ ಮೂಲಕ ಒಂದೆರಡು ಲಾರಿಗಳಿಗೆ ಬೃಹತ್ ಕಲ್ಲು ದಿಮ್ಮಿಗಳನ್ನು ತುಂಬಿಸಿ ಸಾಗಿಸಲಾರಂಭಿಸಿದರು. ಹೀಗೆ ಆರಂಭವಾದ ಬೆಟ್ಟಗಳ ನಾಶ ಕಾಲ ಕಳೆದಂತೆ ಬೃಹತ್ ಜೆಸಿಬಿಗಳು ಬೆಟ್ಟಗಳ ನಾಶಕ್ಕೆ ನಿಂತವು. ಕಲ್ಲು ಗಣಿಗಾರಿಕೆಯ ನಡೆಸಲು ಅತಿಥಿಯಾಗಿ ಬಂದಾತನು ಅಕ್ರಮ, ಸಕ್ರಮ ಎನ್ನದೆ ಕಾಂಚಣ ಕುಠೀರವನ್ನೇ ಕಟ್ಟಿಕೊಂಡು ಇಡೀ ವ್ಯವಸ್ಥೆಯನ್ನೆ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಬೊಂಬೆಯಾಟ ಆಡಿಸತೊಡಗಿದ.
ಅಲ್ಲಿಯವರೆಗೂ ಆನಂದದಿಂದ ತಮ್ಮ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಸಿಳ್ಳೆ ಹಾಕಿಕೊಂಡು ದನ-ಕರು, ಕುರಿ, ಮೇಕೆ ಮರಿಗಳನ್ನು ಮೇಯಿಸಿಕೊಂಡು ಜೀವನ ಕಟ್ಟಿಕೊಂಡಿದ್ದ ಬಡವರಿಗೆ ಅಪಾಯದ ಅರಿವಾಗತೊಡಗಿತು. ಅಷ್ಟರಲ್ಲಿ ಗಣಿ ನಡೆಸುವಾತ ಧಣಿಯಾಗಿ ಬದಲಾಗಿದ್ದ ಕಾರಣ ಸ್ಥಳೀಯವಾಗಿ ಮುಖಂಡರೆನಿಸಿಕೊಂಡವರನ್ನು ನಗುಮುಖದ ಗಾಂಧಿ ನೋಟುಗಳಿಂದ ನಗಿಸಿ ತನ್ನವರಾಗಿಸಿಕೊಂಡಿದ್ದ. ಈ ಕಾರಣಕ್ಕಾಗಿ ಮುಗ್ಧ ದನ ಕಾಯುವ, ಕುರಿಗಾಹಿಗಳ ಕೂಗು ಜಿಲ್ಲಾಧಿಕಾರಿಗಳ ಕಚೇರಿ ತಲುಪುವ ಹೊತ್ತಿಗೆ ತಣ್ಣಗಾಗಿ ಹೋಗಿತ್ತು.
ನಾಶವೆಂಬ ನಶೆ
2013ರಲ್ಲಿ ಈ ಭಾಗದ ಅಕ್ರಮ ಕಲ್ಲುಗಣಿಗಾರಿಕೆಯ ಕುರಿತು ಹೈಕೋರ್ಟ್ ಮೆಟ್ಟಿಲು ತಲುಪಿತ್ತಾದರೂ ಕ್ರಮ ಕೈಗೊಳ್ಳಲಾಗಿಲ್ಲ. ಸಿಬಿಐ ತನಿಖೆಗೆ ಒಪ್ಪಿಸಲಾಗದು ಎಂದು ಉಚ್ಚ ನ್ಯಾಯಾಲಯ ತಿಳಿಸಿತು. ಇದರಿಂದಾಗಿ ನಾನಾ ಪೀಕಲಾಟಗಳಿಂದ ನ್ಯಾಯಾಲಯ ಮೆಟ್ಟಿಲೇರಿದ ಕೆಲ ಸ್ಥಳೀಯರಿಗೆ ನ್ಯಾಯ ಸಿಗದೇ ಹೋಯಿತು ಎಂಬ ನೋವಿನಲ್ಲಿ ಎಲ್ಲರಿಗೂ ಆಗಿದ್ದು, ನಮಗೂ ಆಗಲಿ ಬಿಡು ಎಂಬ ತೀರ್ಮಾನಕ್ಕೆ ಬಂದು ಸುಮ್ಮನಾದರು.
ಈ ರೀತಿ ತಿರುವು ಪಡೆದುಕೊಂಡ ಕಲ್ಲು ಗಣಿಗಾರಿಕೆಯ ಉದ್ಯಮವು ನೋಡು ನೋಡುತ್ತಿದ್ದಂತೆಯೇ ಬೆಟ್ಟಗಳನ್ನು ನುಂಗಿ ಹಾಕಿತು. ಈ ಎರಡು ಗ್ರಾಮಗಳ ಸುತ್ತಲಿನ ಬೆಟ್ಟಗುಡ್ಡಗಳು ನೆಲಸಮವಾಗ ತೊಡಗಿದವು. ಸ್ಥಳೀಯರೂ ಸೇರಿ ಬೇರೆ ಬೇರೆ ರೀತಿಯಲ್ಲಿ ಪ್ರಕೃತಿ ಸಂಪತ್ತು ದೋಚಲು ಶುರು ಮಾಡಿದರು. ಈ ಕುರಿತು ಶಾಸಕರು, ಸಚಿವರು, ಜಿಲ್ಲಾಧಿಕಾರಿಗಳು ಕಣ್ಣಿದ್ದು ಕುರುಡರಂತಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಕಲ್ಲುಗಣಿಗಾರಿಕಾ ವ್ಯಕ್ತಿಗಳಿಗೆ ಸಂಬಂಧಿಸಿದ ಯಾವುದೇ ತಪ್ಪುಗಳಿಗೂ ಅಡ್ಡಿಪಡಿಸಿದರೆ ನೇರವಾಗಿ ವಿಧಾನಸೌಧದ ಕಡೆಯಿಂದ ಎಚ್ಚರಿಕೆಗಳು ಬರ ತೊಡಗಿದವು. ಅಷ್ಟರ ಮಟ್ಟಿಗೆ ಗಣಿಧಣಿಗಳ ನಂಟು ವ್ಯಾಪಕವಾಗಿದೆ. ಹೀಗಾಗಿಯೇ ನಾಶವನ್ನೂ ನಶೆಯಾಗಿಸಿಕೊಂಡಿದ್ದಾರೆ.
ರಸ್ತೆಗಳು ಸಂಪೂರ್ಣ ಗುಣಿಗಳಾಗಿ ಪರಿಣಮಿಸಿದವು, ರಸ್ತೆ ಬದಿಗಳಲ್ಲಿ ಧೂಳುಮಯವಾದವು. ಜಲಮೂಲಗಳಿಗೆ ಹೂಳು ತುಂಬಿಕೊಂಡು ನಾಶವಾದವು. ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಮನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಿದ ಚೆಕ್ ಡ್ಯಾಂಗಳು, ಕಾಲುವೆ ಕಾಮಗಾರಿಗಳು ನೀರಿನಲ್ಲಿ ಮಾಡಿದ ಹೋಮದಂತೆ ವ್ಯರ್ಥವಾದವು. ಸಹಸ್ರಾರು ಕಾಡು ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳು ಸರ್ವ ನಾಶವಾದವು. ಸ್ವಚ್ಛವಾಗಿದ್ದ ಪರಿಸರ, ಮಾಲಿನ್ಯದ ಮಂಟಪವಾಗತೊಡಗಿತು. ಈ ಎರಡು ಗ್ರಾಮಗಳ ಅಕ್ಷರಶಃ ಅನಾಥವಾದವು.
ಸುತ್ತಿಗೆ, ಉಳಿ ಹಿಡಿದವರಿಗೆ ಗೇಟ್‌ಪಾಸ್
ಅಲ್ಲಿಯವರೆಗೂ ಕೆಲವರು ಸುತ್ತಿಗೆ, ಉಳಿ ಹಿಡಿದು ತಮ್ಮ ಗ್ರಾಮದ ಹಾಸುಪಾಸಿನಲ್ಲಿ ಸಣ್ಣ ಪುಟ್ಟ ಅಡಿಪಾಯ ಕಲ್ಲು, ಚಪ್ಪಡಿ ಕಲ್ಲುಗಳನ್ನು ಹೊಡೆದು ಜೀವನ ಸಾಗಿಸುತ್ತಿದ್ದ ಕಲ್ಲುಕುಟ್ಟಿಗರಿಗೆ ಈ ಗಣಿಧಣಿಗಳು ತಲೆನೋವಾಗಿ ಪರಿಣಮಿಸಿದರು. ಇಲ್ಲಿಂದ ಅಲ್ಲಿಯವರೆಗೂ ನಾನು ಸರಕಾರದಿಂದ ಗಣಿಗಾರಿಕೆ ನಡೆಸಲು ಅನುಮತಿ ಪಡೆದುಕೊಂಡಿದ್ದೇನೆ. ನೀವು ಆ ಕಡೆ ಹೆಜ್ಜೆ ಹಾಕಬಾರದು ಎಂದು ಗಣಿಗಾರಿಕೆಯವರು ಮೌಖಿಕ ಆದೇಶಗಳನ್ನು ಹೊರಡಿಸಿದರು.
ತಮಗೆಟುಕುವ ಕಲ್ಲುಗಳನ್ನು ಹೊಡೆದು ಅದರಿಂದ ಬಂದ ದುಡಿಮೆಯಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕಲ್ಲುಕುಟ್ಟುವ ಜನತೆಗೆ ಕಲ್ಲುಗಳು ಸಿಗದಂತಾಯಿತು. ನಂಬಿಕೊಂಡಿದ್ದ ಕೆಲಸಕ್ಕೆ ಕುತ್ತು ಬಂದು, ಗಣಿಗಾರಿಕಾ ಪ್ರದೇಶದಲ್ಲಿನ ತ್ಯಾಜ್ಯವನ್ನು ಉಪಯೋಗಿಸಿ ಪಾಯ ಕಲ್ಲು, ಚಪ್ಪಡಿ ಕಲ್ಲುಗಳನ್ನು ಹೊಡೆಯಲು ಮುಂದಾದರು. ಆದರೆ ಗಣಿಧಣಿಗೆ ಸ್ಥಳೀಯರ ಪಾಲಿಗೆ ಕರುಣೆ ತೋರಲಿಲ್ಲ. ಪಾಯ ಕಲ್ಲು ಹೊಡೆಯಲು ಕಮೀಷನ್ ಕೊಡಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಅದಕ್ಕೂ ಹೊರಗಿನ ಆಂಧ್ರ ಪ್ರದೇಶದ ಗ್ರಾಮಸ್ಥರಿಗೆ ಇರುವ ಅನುಮತಿ, ಅವರ ಬಗೆಗಿನ ಅನುಕಂಪ ಮಾಡಪಲ್ಲಿ, ಹೊನ್ನಂಪಲ್ಲಿ ಕಲ್ಲುಕುಟ್ಟುವ ಜನರ ಮೇಲೆ ಇಲ್ಲವಾಯಿತು. ಸರಕಾರಗಳು ಇಂತಹ ಗ್ರಾಮಗಳ ಬಗೆಗಿನ ನಿರ್ಲಕ್ಷ್ಯ ಧೋರಣೆಯಿಂದ ಸ್ಥಳೀಯವಾಗಿ ಬದುಕನ್ನು ಕಟ್ಟಿಕೊಂಡವರಿಗೆ ಅಪಾಯಗಳನ್ನು ತಂದೊಡ್ಡಿ ಗ್ರಾಮೀಣ ಜನತೆಯ ಪಾಲಿಗೆ ಶಾಪಗಳಾದವು. ಈ ಭಾಗದ ಮಕ್ಕಳ ಭವಿಷ್ಯಕ್ಕೆ ಸರ್ಕಾರವೇ ಕುತ್ತು ತಂದೊಡ್ಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇದರಿಂದಾಗಿ ಬಹಳಷ್ಟು ಕಲ್ಲು ಹೊಡೆಯುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡವರು ನಿರುದ್ಯೋಗಿಗಳಾಗಿ ಮಾರ್ಪಟ್ಟರು. ಕುರಿಮೇಕೆ ಸಾಕಾಣಿಕೆ ಮಾಡಿಕೊಂಡು ಬದುಕುತ್ತಿದ್ದ ಬಹಳಷ್ಟು ಜನರು ಗ್ರಾಮಗಳನ್ನು ತೊರೆದು ನಗರಗಳಿಗೆ ವಲಸೆ ಹೋದರು. ಮತ್ತೆ ಕೆಲವರು ಅನಿವಾರ್ಯವಾಗಿ ಲಭ್ಯವಿರುವ ಕೂಲಿನಾಲಿ ಮಾಡಿಕೊಂಡು ಬದುಕ ಬಂಡಿ ಉರುಳಿಸುತ್ತಿದ್ದಾರೆ.
ಒಟ್ಟಿನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಸ್ಥಳೀಯ ಬಡವರಿಗೆ ಸದುಪಯೋಗವಾಗುವ ಬದಲು ಬಂಡವಾಳಿಗರ ಪಾಲಾಗಿ, ಬಡಜನರಿಗೆ ಸಿಗದಂತೆ ಮಾಡುವ ಉದ್ಯಮವಾದರೂ ಎಂತದ್ದು? ಈ ಅನ್ಯಾಯವನ್ನು ರಾಜಕಾರಣಿಗಳು, ಅಧಿಕಾರಿಗಳೂ ಮೌನವಾಗಿ ಒಪ್ಪಿಕೊಂಡು ಸ್ವಲಾಭ, ಸ್ವ ಪ್ರತಿಷ್ಠೆಯನ್ನು ಕಾಪಾಡಿಕೊಂಡಿರುವುದಾದರೂ ಏತಕ್ಕೆ.? ಪ್ರಕೃತಿಯ ನಾಶದ ಜೊತೆಗೆ ಪ್ರಜೆಗಳ ನಾಶವನ್ನು ಕಣ್ಣಾರೆ ನೋಡಿಕೊಂಡಿರುವ ಸರ್ಕಾರವಾದರೂ ಯಾರ ಪರವಾಗಿ ಕೆಲಸ ಮಾಡುತ್ತಿದೆ.? ಎಂಬಿತ್ಯಾದಿ ಜನ ವಿರೋಧಿ ಸತ್ಯಗಳನ್ನು ಕೇಳಿಬರುತ್ತಿವೆ.
ಅಭಿವೃದ್ಧಿ ಎಂದರೆ ನಾಶ ಮಾಡಿಯೇ ನಡೆಯಬೇಕೆ?
ಗಣಿಗಾರಿಕೆಯು ಅಭಿವೃದ್ಧಿಗೆ ಸಹಕಾರಿ ಎಂದು ಹೇಳುವ ಸಚಿವರಿಗೆ ಜನರ ಪ್ರಾಣ, ಜನರ ಆರೋಗ್ಯ, ಗ್ರಾಮಗಳ ಅಸ್ತಿತ್ವವನ್ನು ಕಾಪಾಡುವುದು ಅಭಿವೃದ್ಧಿಯ ಭಾಗವಲ್ಲವೇ?.
ಅಷ್ಟಕ್ಕೂ ಅಭಿವೃದ್ಧಿಯಾಗಬೇಕೆಂದರೆ ಪ್ರಾಕೃತಿಕ ಸೌಂದರ್ಯ ಹೆಚ್ಚಿಸುವ ಬೆಟ್ಟಗುಡ್ಡಗಳನ್ನು ಗಣಿಗಾರಿಕೆಗೆ ೨೦,೩೦ ವರ್ಷಗಳು ಗುತ್ತಿಗೆ ನೀಡಿ ಸರ್ವನಾಶ ಮಾಡಿಸುವುದು. ಬೆಟ್ಟಗುಡ್ಡಗಳ ಸುತ್ತಲಿನ ಗ್ರಾಮಗಳನ್ನು ನಿರ್ಣಾಮ ಮಾಡುವುದೊಂದೆ ಮಾರ್ಗವೇ?
ಆ ಬೆಟ್ಟಗುಡ್ಡಗಳಲ್ಲಿನ ಕಲ್ಲುಬಂಡೆಗಳನ್ನು ಗಣಿಗಾರಿಕೆಗೆ ಗುತ್ತಿಗೆ ಕೊಡುವ ಬದಲು, ಅವುಗಳ ಆಕರ್ಷಕ ಜೋಡಣೆಯನ್ನು ಮತ್ತಷ್ಟು ಕಲಾಕಾರರಿಂದ ವಿವಿಧ ಆಕರ್ಷಕ ಕಲಾಕೃತಿಗಳನ್ನಾಗಿಸಬಹುದಲ್ಲವೇ? ಇತಿಹಾಸದಲ್ಲಿ ರಾಜಮಹಾರಾಜರು ಬೆಟ್ಟಗುಡ್ಡಗಳಲ್ಲಿ ಮಾಡಿದ್ದನ್ನೆ ಈಗ ಮಾಡಬಹುದಿತ್ತಲ್ಲವೇ? ಪ್ರಸ್ತುತ ನಾವು ಐತಿಹಾಸಿಕ, ಪಾರಂಪರಿಕ ತಾಣಗಳೆಂದು ಗುರುತಿಸಿ ಪ್ರವಾಸಿಗರನ್ನು ಅಚ್ಚುಮೆಚ್ಚಿನ ಪ್ರದೇಶಗಳು ಆ ರೀತಿಯೇ ನಿರ್ಮಾಣವಾಗಿದ್ದು. ಅವುಗಳಿಂದ ಅಭಿವೃದ್ಧಿಗೆ ಪೂರಕವೂ ಆಗಿದೆ. ಕಲ್ಲುಬಂಡೆಗಳ ಜೋಡಣೆಯನ್ನು ರಾಕ್ ಗಾರ್ಡನ್ ಗಳನ್ನಾಗಿಸಿ ದೇಶಿ,ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಪ್ರದೇಶಗಳನ್ನಾಗಿಸಬಹುದಲ್ಲವೇ? ಆಗ ತಾನಾಗಿಯೇ ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ, ಮಾಲಿನ್ಯ ರಹಿತ ವಾತಾವರಣ ಸೃಷ್ಟಿಸಬಹುದು.
ಹೀಗೆ ಹೇಳುತ್ತಾ ಹೋದರೆ ಉತ್ತಮ ಮಾರ್ಗಗಳಲ್ಲಿ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಬಹುದು. ಆದರೆ ಪ್ರಭಾವಿಗಳು ತಮ್ಮ ಸ್ವಾರ್ಥ ಸಾಧನೆ ಮತ್ತು ಸಂಪಾದನೆಗಾಗಿ ಅಭಿವೃದ್ಧಿ ನೆಪದಲ್ಲಿ ಗ್ರಾಮೀಣ ಬದುಕುಗಳು ನಾಶವಾದರೂ ಪರವಾಗಿಲ್ಲ ಸ್ವಲಾಭವಾದರೆ ಸಾಕೆಂದು ಪರಿಸರನಾಶಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಇದು ಬದಲಾಗುವುದೇ? ಜನಸಾಮಾನ್ಯರು ಪ್ರಜ್ಞಾವಂತರಾಗುವರೇ? ಅಥವಾ ಮತ್ತಷ್ಟು ಪ್ರಜ್ಞಾ ಹೀನರಾಗುವರೆ ಎಂಬುದೇ ಪ್ರಶ್ನೆ?
ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ನಡೆದಿದಿಯೇ?
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡ್ಮೂರು ದಶಕಗಳಿಂದಲೂ ಅಕ್ರಮ, ಸಕ್ರಮ ಕಲ್ಲು ಗಣಿಗಾರಿಕಾ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಇಂತಹ ಗಣಿಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಮಾಡಬೇಕೆಂಬ ಕಾನೂನುಗಳಿವೆ. ಆದರೆ ಗಣಿಬಾಧಿತ ಪ್ರದೇಶಗಳಲ್ಲಿ ಈವರೆಗೆ ಮಾಡಿದ ಅಭಿವೃದ್ಧಿ ಕೆಲಸಗಳೆಷ್ಟರ ಮಟ್ಟಿಗರ ಕೈಗೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕಗೊಳಿಸಬೇಕಿದೆ.
ಖನಿಜ ಪ್ರತಿಷ್ಠಾನಕ್ಕೆ ಉಸ್ತುವಾರಿ ಸಚಿವರು ಅಧ್ಯಕ್ಷರು!!
ಜಿಲ್ಲೆಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನವಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿಗಳು ಉಪಾಧ್ಯಕ್ಷರಾಗಿದ್ದು, ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಗಣಿ ಬಾಧಿತ ಪ್ರದೇಶಗಳಲ್ಲಿ ಯಾವುದಾದರೂ ಮಾದರಿ ಅಭಿವೃದ್ಧಿ ಕೆಲಸಗಳು ನಡೆದಿದ್ದಾವೆಯೇ ಎಂಬ ಮಾಹಿತಿ ಇಲ್ಲವಾಗಿದೆ.
ಬಾಗೇಪಲ್ಲಿ ತಾಲ್ಲೂಕಿನ ಹೊನ್ನಂಪಲ್ಲಿ, ಮಾಡಪಲ್ಲಿ ಗ್ರಾಮಗಳಲ್ಲಿ ಜಲಮೂಲಗಳು ಕಲುಷಿತಗೊಂಡಿವೆ. ಶಾಲೆ, ಕೆಲ ಮನೆಗಳು ನೆರೆ ಬಿಟ್ಟಿವೆ. ರಸ್ತೆಗಳು ಹಾಳಾಗಿದ್ದು ಧೂಳುಮಯವಾಗಿವೆ. ಇವುಗಳನ್ನು ಸರಿಪಡಿಸುವಲ್ಲಿ ಕೈಗೊಂಡ ಕ್ರಮಗಳೇನು? ಪರಿಸರದ ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಂತಹ ಗಣಿಭಾದಿತ ಪ್ರದೇಶಗಳ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸರ್ಕಾರಗಳು ಕ್ರಮಗಳನ್ನು ಕೈಗೊಂಡಿಲ್ಲ.
ಈ ಕಲ್ಲುಗಣಿಗಾರಿಕೆ ನಡೆಯಬೇಕಾದರೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆರ್‌ಟಿಓ ಕಚೇರಿ, ಕಂದಾಯ, ಕಾರ್ಮಿಕ ಇಲಾಖೆ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಹಿಡಿದು ವಿಧಾನಸೌಧದವರೆಗಿನ ಪ್ರಭಾವಿಗಳವರೆಗೂ ನಂಟನ್ನು ಹೊಂದಿರುತ್ತಾರೆ. ಇವರಲ್ಲಿ ಕಲ್ಲುಗಣಿಗಾರಿಕೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಚಕಾರ ಎತ್ತದಿರುವುದೇ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಚಿತ್ರಗಳು: ಹೊನ್ನಂಪಲ್ಲಿ, ಮಾಡಪಲ್ಲಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುಡಿಪುಡಿಯಾಗಿರುವ ಬೆಟ್ಟಗುಡ್ಡಗಳು.
- ಎಲ್ಲ ಚಿತ್ರಗಳು: ನರಸಿಂಹಮೂರ್ತಿ ಮಾಡಪಲ್ಲಿ
- ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿಯ ಹೊನ್ನಂಪಲ್ಲಿ, ಮಾಡಪಲ್ಲಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಕ್ವಾರಿಗಳ ಕಾರಣದಿಂದ ಜಲಮೂಲಗಳು ನಾಶವಾಗುತ್ತಿದೆ. ಈ ಭಾಗಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವುದಾಗಿ 2020 ಅಕ್ಟೋಬರ್ 17ರಂದು ಟ್ವೀಟ್ ಮಾಡಿದ್ದರು.