- ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರ ಬದಲಿಗೆ ಅಪರ ಜಿಲ್ಲಾಧಿಕಾರಿ ಅಮರೇಶ್ ಅವರು ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆʼ ಕಾರ್ಯಕ್ರಮದಲ್ಲಿ ಭಾಗಿಯಾದರು.
ಚಿಕ್ಕಬಳ್ಳಾಪುರ / ಗುಡಿಬಂಡೆ: ರಾಜ್ಯ ಸರಕಾರದ ವಿವಿಧ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆʼ ಎಂಬ ನೂತನ ಕಾರ್ಯಕ್ರಮವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಆಶ್ರಯದಲ್ಲಿ ಶನಿವಾರ ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆಯಿತು.
ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್, ತಾಲೂಕು ಮಟ್ಟದ ಸಿಬ್ಬಂದಿ ಮುಂತಾದವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಮೊದಲಿಗೆ ಗ್ರಾಮದಲ್ಲಿನ ಶ್ರೀ ಈಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರು ವಿದ್ಯುಕ್ತ ಚಾಲನೆ ನೀಡಿದರು.ನಂತರ ಗ್ರಾಮದಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಗ್ರಾಮದಲ್ಲಿ ಸುತ್ತಾಡಿದ ಅಪರ ಜಿಲ್ಲಾಧಿಕಾರಿ; ಜನರ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮದಲ್ಲಿ ಮಣ್ಣಿನ ಮಡಿಕೆ ತಯಾರಿಸುವ ಕುಂಬಾರಿಕೆ ನಿಪುಣರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ನಂತರ ಗ್ರಾಮದ ಅಂಬೇಡ್ಕರ್ ಕಾಲೋನಿಗೆ ಬೇಟಿ ನೀಡಿ ಅಲ್ಲಿ ಗುಡಿಸಿಲಿನಲ್ಲಿ ವಾಸಿಸುವ ಜನರನ್ನು ಪರಾಮರ್ಶಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಇದೇ ವೇಳೆ ಅಲ್ಲಿನ ವಾಸಿಗಳು ತಮ್ಮ ನೋವು ತೋಡಿಕೊಂಡರು. ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸಿದ ಅವರು, ಗ್ರಾಮ ಸಭೆಯಲ್ಲಿ ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಠರಾವು ಪಾಸ್ ಮಾಡಿ ಮನೆ ಕಟ್ಟಿಕೊಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಸ್ಥರಿಂದ ಅರ್ಜಿ ಸ್ವೀಕಾರ
ಸಮುದಾಯ ಭವನದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ, ರೈತರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲಾಗುವುದು. ಸರಕಾರದ ಮಟ್ಟದ ಸಮಸ್ಯೆಗಳಿದ್ದರೆ ಸರಕಾರಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಗ್ರಾಮಸ್ಥರಿಂದ ಬಂದ ಅರ್ಜಿಗಳ ವಿಲೇವಾರಿ ಜತೆಗೆ ಬಾಕಿ ಉಳಿದ ಅರ್ಜಿಗಳ ಬಗ್ಗೆ ಆದ್ಯತೆ ಮೇಲೆ ಪರಿಹಾರ ಕ್ರಮ ಕೈಗೊಳ್ಳಲಾಗುವದು ಎಂದು ಅಧಿಕಾರಿಗಳು ಭರವಸೆ ನೀಡಿದರು.
66 ಕುಂದುಕೊರತೆ ಅರ್ಜಿ ಸ್ವೀಕಾರ
ಈ ಕಾರ್ಯಕ್ರಮದಲ್ಲಿ ಸುಮಾರು 66 ಕುಂದುಕೊರತೆ ಅರ್ಜಿಗಳನ್ನು ವಿವಿಧ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ವೀಕರಿಸಲಾಗಿದೆ. ಸರಕಾರದ ಆದೇಶದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಅರ್ಜಿಗಳನ್ನು ನೀಡಿದರು. ಈ 66 ಅರ್ಜಿಗಳ ಪೈಕಿ ಸರ್ವೇ ಇಲಾಖೆಗೆ 03, ಬಿಇಒ 2, ಆಹಾರ ಇಲಾಖೆಗೆ 1, ಕಂದಾಯ ಇಲಾಖೆಗೆ 51, ತೊಟಗಾರಿಕೆ ಇಲಾಖೆಗೆ 1, ತಾಲ್ಲೂಕು ಪಂಚಾಯಿತಿಗೆ 8 ಅರ್ಜಿಗಳು ಬಂದಿದ್ದವು.
ಕಂದಾಯ ಇಲಾಖೆಗೆ ಹಾಗೂ ಇತರೆ ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಾಗಿದ್ದು, ತಕ್ಷಣಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯವನ್ನು ಅಧಿಕಾರಿಗಳು ತ್ವರಿತವಾಗಿ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು.
ನಂತರ ಶಾಲಾ ಆವರಣದಲ್ಲಿ ಗ್ರಾಮ ವಾಸ್ತವ್ಯದ ಅಂಗವಾಗಿ ಕೃಷಿ, ರೇಷ್ಮೆ, ತೋಟಗಾರಿಕೆ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜಾಗೃತಿ ಮಳಿಗೆಗಳನ್ನು ಗಣ್ಯರಿಂದ ಉದ್ಘಾಟಿಸಲಾಯಿತು.
ಆರೋಗ್ಯ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ತಜ್ಞ ವೈದ್ಯರ ತಂಡದಿಂದ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮತ್ತು ಕೊರೋನಾ ಸೊಂಕು ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ ಎಸ್.ಎಸ್.ಎಲ್.ಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಗುಡಿಬಂಡೆ ತಾಲೂಕು ತಹಸೀಲ್ದಾರ್ ಸಿಗ್ಬತ್ತುಲ್ಲಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಆರೋಗ್ಯ ಕುರಿತ ಬೀದಿ ನಾಟಕ
ಇದೇ ವೇಳೆ ಆರೋಗ್ಯ ಇಲಾಖೆ ವತಿಯಿಂದ ಹಂಪಸಂದ್ರ ಗ್ರಾಮದಲ್ಲಿ ಎಚ್‌ಐವಿ ಸೋಂಕು, ಅದರ ದುಷ್ಪರಿಣಾಮ ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಬೀದಿ ನಾಟಕ ಕಲಾತಂಡದ ಮೂಲಕ ಅರಿವು ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಇಂದಿರಾ ಕಬಾಡೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಯಲ್ಲಾ ರಮೇಶ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹಾಗೂ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.