ಅಂತು ಲೆಕ್ಕಕ್ಕೆ ವಿಶ್ವ ಗುಬ್ಬಚ್ಚಿಗಳ ದಿನ ಮುಗಿಯಿತು. ಜಾಲತಾಣಗಳಲ್ಲಿ ಅವುಗಳ ಮೇಲೆ ಪ್ರೀತಿ ಉಕ್ಕಿ ಹರಿಯಿತೇನೋ ಸರಿ. ಆದರೆ, ನಮ್ಮ ಕಣ್ಣೆದುರೇ ನಮ್ಮೆಲ್ಲರ ಬದುಕಿನ ಜೀವನಾಡಿಯಂತೆ ಆಗಿಹೋಗಿದ್ದ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ. ಈ ತಲೆಮಾರಿನ ಮಕ್ಕಳಿಗೆ ಈ ಪುಟ್ಟ ಪಕ್ಷಿಗಳು ಅಪರೂಪವಾಗಿವೆ. ಪರಿಸರ ಮತ್ತು ಮನುಷ್ಯನ ನಡುವೆ ಸಮತೋಲನಕ್ಕೆ ಬೆಟ್ಟದಷ್ಟು ಕೊಡುಗೆ ನೀಡುವ ಈ ಪುಟಾಣಿ ಪಕ್ಷಿಯನ್ನು ಇನ್ನಾದರೂ ಉಳಿಸಿಕೊಳ್ಳೋಣ ಎನ್ನುತ್ತಿದ್ದಾರೆ ನಮ್ಮ ಅಂಕಣಕಾರ ಡಾ. ಗುರುಪ್ರಸಾದ ಎಚ್.ಎಸ್.
All Photos: Ramesh Hirejambur
ಕನ್ನಡದಲ್ಲಿ ಗುಬ್ಬಿ ಎಂದು ಹಿಂದಿ ಭಾಷೆಯಲ್ಲಿ ಗೊರೆಯಾ, ತಮಿಳು ಹಾಗೂ ಮಲೆಯಾಳಿ ಭಾಷೆಯಲ್ಲಿ ಕುರುವಿ, ಚಿಟ್ಟುಕುರುವಿ, ತೆಲುಗು ಭಾಷೆಯಲ್ಲಿ ಪಿಚುಕಾ, ಗುಜರಾತಿ ಭಾಷೆಯಲ್ಲಿ ಚಕ್ಲಿ, ಮರಾಠಿಯಲ್ಲಿ ಚಿಮನಿ, ಪಂಜಾಬಿ ಭಾಷೆಯಲ್ಲಿ ಚಿರಿ ಹಾಗೂ ಉರ್ದು ಭಾಷೆಯಲ್ಲಿ ಚಿರ್ಯಾ, ನಮ್ಮ ಮನೆ ಅಂಗಳದ ಗುಬ್ಬಚ್ಚಿಗಳಿಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಕರೆಯುವ ಹೆಸರುಗಳಿವೆ.
ಲೋಕದಲಿ, ರೆಕ್ಕೆ ಮೂಡುವುದೆನಗೆ!
ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ..!
ಎಂದು ರಾಷ್ಟ್ರಕವಿ ಕುವೆಂಪು ಅವರು ಕರೆಯುವ ಹಾಗೆ ನಾವು ಚಿಕ್ಕಂದಿನಿಂದಲೂ ನೊಡುತ್ತ ಬಂದಿರುವ ಗುಬ್ಬಿಗಳು ಇಂದು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಅವುಗಳ ಬದುಕಿನ ದೈನಂದಿನ ಹೋರಾಟದಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಸಮುದಾಯಿಕ ಪರಿಹಾರ ಹುಡುಕುವುದು ಈ ಆಚರಣೆಯ ಹಿಂದಿರುವ ಉದ್ದೇಶವೇ ಗುಬ್ಬಚ್ಚಿಗಳ ದಿನ (World Sparrow Day) ಆಚರಣೆ.
ಇದನ್ನು ಪ್ರಾರಂಭಿಸಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವಲ್ಲಿ ‘ನೇಚರ್ ಫಾರ್ ಎವರ್ ಸೊಸೈಟಿ’. ಈ ಕೊಡುಗೆ ಅನನ್ಯವಾದದ್ದು. ಈ ಸಂಸ್ಥೆಗೆ ಬೆನ್ನೆಲುಬಾದವರು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ -ಮುಂಬಯಿ, ಅಮೆರಿಕೆಯ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ, ಫ್ರಾನ್ಸ್ ದೇಶದ ಇಕೋ-ಸೇಯ್ಸ್ ಆಕ್ಷನ್ ಫೌಂಡೇಶನ್, ಯುನೈಟೆಡ್ ಕಿಂಗ್‌ಡಂಗೆ ಸೇರಿದ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಪ್ರಮುಖವಾದವರು. ಇವರೊಂದಿಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಜೋಡಿಸಿವೆ.
ಭಾರತದಲ್ಲಿ ಇಂಡಿಯಾಸ್ ನೇಚರ್ ಫಾರ್ ಎವರ್ ಸೊಸೈಟಿಯ ಮೊಹಮದ್ ದಿಲಾವರ್ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಸಾರಥ್ಯ ವಹಿಸಿದ್ದಾರೆ. ತನ್ನ ʼಚಿಂವ್..ಚಿಂವ್ʼ ಸದ್ದಿನಿಂದ ಯಾವತ್ತೂ ನಮ್ಮ ಮನೆಯ ಅಂಗಳಗಳನ್ನು ಸಿಂಗರಿಸಿದ್ದ ರೆಕ್ಕೆಯ ಮಿತ್ರರನ್ನು ಪುನಾ ಆಹ್ವಾನಿಸಲು ಸಹ ವ್ಯಾಪಕ ಕ್ರಮಗಳನ್ನು ಅವರು ಶೋಧಿಸುತ್ತಾ, ಸಮುದಾಯದ ಸಹಭಾಗಿತ್ವದಲ್ಲಿ ‘ಪಕ್ಷಿಸ್ನೇಹಿ ಬದುಕು’ ರೂಢಿಸಿಕೊಳ್ಳುವುದು ಹೇಗೆ ಎಂದು ಅವರು ಮಹಾದಾರಿಗಳನ್ನು-ಕಾಲುದಾರಿಗಳನ್ನು ಹುಡುಕುತ್ತಿದ್ದಾರೆ.
ಪರಿಸರ ಅಧ್ಯಯನ ವಿಷಯದ (ಮಾಜಿ) ಪ್ರಾಧ್ಯಾಪಕರಾದ ನಾಸಿಕ್ ನಿವಾಸಿ ಮೊಹಮದ್ ದಿಲಾವರ್, ಇತರೆ ಪ್ರಾಣಿಶಾಸ್ತ್ರಜ್ಞರಂತೆ ಕಳೆದ 1990ರಲ್ಲಿಯೇ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ವ್ಯಾಪಕ ಕುಸಿತ ಉಂಟಾಗಿರುವುದನ್ನು ‘ಪರಿಸರದ ನೆತ್ತಿಗೇರಿದ ಜ್ವರ’ ಎಂದೇ ವ್ಯಾಖ್ಯಾನಿಸಿದ್ದಾರೆ. ನಮ್ಮ ಮನೆಗಳ ದೇವರು, ಅಜ್ಜ-ಅಮ್ಮನ ಕಟ್ಟುಹಾಕಿಸಲಾದ ಫೊಟೋಗಳ ಹಿಂದೆ ಸಂಸಾರ ಹೂಡುತ್ತಿದ್ದ ಹಾಗೂ ಮಹಡಿ ಮನೆ, ವಾಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಹುಲ್ಲಿನ ಸಿಂಬೆಯಾಕಾರದ ಗೂಡು ಹೆಣೆಯುತ್ತಿದ್ದ ಗುಬ್ಬಚ್ಚಿ ಈಗಿಲ್ಲವಾಗಿರುವುದು ಕಳವಳ ಮೂಡಿಸಿದೆ.
ಯುನೈಟೆಡ್ ಕಿಂಗಡಂನ ಬ್ರಿಸ್ಟಾಲ್‍ನಲ್ಲಿ ಸೇವಾ ನಿರತವಾಗಿರುವ ಸ್ವಯಂಸೇವಾ ಸಂಘಟನೆಯೊಂದು ಕಳೆದ 2010ರಿಂದ ಪ್ರಥಮ ಬಾರಿಗೆ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಸಹಯೋಗದಲ್ಲಿ ಭಾರತ, ಕೀನ್ಯಾ ಹಾಗೂ ಹಾಂಗ್‍ಕಾಂಗ್ ಸೇರಿದಂತೆ ಇತರೆ ದೇಶಗಳಲ್ಲಿ ಗುಬ್ಬಚ್ಚಿಗಳ ದಾಖಲೀಕರಣಕ್ಕೆ ವಿಶೇಷ ಪ್ರಯತ್ನ ನಡೆಸಿದೆ.
ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವುದು ಏಕೆ?
ಗುಬ್ಬಚ್ಚಿಗಳು ಕಣ್ಮರೆಯಾಗಲು ಸಾಕಷ್ಟು ಕಾರಣಗಳನ್ನು ಶೋಧಿಸಲಾಗಿದ್ದರೂ, ಆ ಸಮಸ್ಯೆಗಳಿಗೆ ವ್ಯಾಪಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದಿರುವ ವಯಕ್ತಿಕ ಮಟ್ಟದ ಪ್ರಯತ್ನಗಳು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅರೆದಂತಾಗಿದೆ. ಹಾಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ‘ಮಜ್ಜಿಗೆ ಅರೆಯುವ ಕೆಲಸಕ್ಕೆ’ ಈ ಆಂದೋಲನ ಸ್ಫೂರ್ತಿ ನೀಡಬೇಕಿದೆ. ವ್ಯಾಪಕವಾಗಿ ಸೀಸ ಮಿಶ್ರಿತ ಪೆಟ್ರೋಲ್ ಬಳಕೆ, ಅದರಿಂದಾಗಿ ಮಿಥೈಯಿಲ್ ನೈಟ್ರೇಟ್ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತಿರುವುದು ಗುಬ್ಬಚ್ಚಿ ಸಮೂಹಕ್ಕೆ ಮಾರಣಾಂತಿಕವಾಗಿ ಪರಿಣಮಿಸಿದೆ.
ಕ್ರಿಮಿ, ಕೀಟ, ಹ್ಯಾತೆ, ಪಾತರಗಿತ್ತಿ ಮೊದಲಾದವು ಸಹ ಅವುಗಳ ಆಹಾರದ ಭಾಗವಾಗಿದ್ದು ಅವುಗಳ ದೇಹದಲ್ಲಿ ವಾತಾವರಣದ ಕಲ್ಮಶಗಳು ತುಂಬಿಕೊಂಡು, ಇವುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ.
ಜತೆಗೆ ನಮ್ಮ ಹಳೆ ಕಾಲದ ಮನೆಗಳು ಅವುಗಳ ಸಂತಾನೋತ್ಪತಿಗೆ ಪೂರಕವಾದ ನಿರ್ಮಿತಿ ಹೊಂದಿದ್ದವು. ಅದರೆ ಈಗಿನ ಆಧುನಿಕ ಮನೆಗಳಿಂದಾಗಿ, ಜೊತೆಗೆ ಅಂಗಳದಲ್ಲಿ ಒಂದೂ ಗಿಡ ನೆಡುವಷ್ಟು ಜಾಗ ಉಳಿಸಿಕೊಳ್ಳದೇ ಕಾಂಕ್ರೀಟ್ ಮನೆ ಕಟ್ಟಿರುವುದು, ಕೊನೆಪಕ್ಷ ಹೂವಿನ ಗಿಡಗಳಿವೆ ಎಂದಾದರೆ ಹೂವಿನ ಅಂದ ಅರಳಿಸಲು ಥರಹೇವಾರಿ ಕ್ರಿಮಿನಾಶಕ ಸಿಂಪಡಿಸಿ, ಸುಂದರ ಗೊಳಿಸುವಂತೆ ಮಾತ್ರ ಮಾಡುತ್ತೇವೆ. ಅದರೆ ಗಿಡ, ಬಳ್ಳಿಗಳನ್ನು ಆಶ್ರಯಿಸಿ ಬದುಕುವ ಕ್ರಿಮಿ, ಕೀಟಗಳನ್ನು ತಿನ್ನುವ, ಕಾಳುಗಳನ್ನು ನೆಚ್ಚಿಕೊಂಡು ಬದುಕುವ ಗುಬ್ಬಿಗಳ ಬದುಕಿಗೇ, ವಂಶ ಅಭಿವೃದ್ಧಿಗೆ ಸಂಚಕಾರ ತಂದಿದ್ದೇವೆ.
ಜೊತೆಗೆ, ನವ್ಯ ತಂತ್ರಜ್ಞಾನಗಳನ್ನು ಇಂದು ನಾವು ಬಳಸುವ ಕಾರಣದಿಂದಾಗಿ, ಅಂದರೆ; ಮೊಬೈಲ್ ಟವರ್‌ಗಳಿಂದ ಸೂಸುವ ವಿದ್ಯುತ್ ಕಾಂತೀಯ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ವಿರೂಪುಗೊಳ್ಳದಂತೆ ಮಾಡುತ್ತಿವೆ ಎನ್ನಲಾಗಿದೆ. ಅಲ್ಲದೇ ಗಿಡ ಮರಗಳಲ್ಲಿ ಕೇಬಲ್ ವೈರುಗಳು, ಜಾಹೀರಾತುಗಳು, ಪ್ಲೆಕ್ಸ್‌ಗಳು, ಬ್ಯಾನರ್‌ಗಳು ಹೆಚ್ಚಿನ ಗಾಜುಗಳ ಬಳಕೆ ಅವುಗಳ ಸ್ವಚ್ಛಂದ ಬದುಕಿಗೆ ಮಾರಕವಾಗಿವೆ. ಅವುಗಳ ಬದುಕಿಗೆ ನಮ್ಮ ಆಸರೆ ಅನಿವಾರ್ಯ.
ಮನೆ ಅಂಗಳದಲ್ಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಗಿಡ ಬೇಲಿ ಮೊರೆ ಹೋಗುವುದೂ ಅಡ್ಡಿ ಇಲ್ಲ. ಆ ಗಿಡಗಳಲ್ಲಿ ಮಣ್ಣಿನ ಅಥವಾ ಬಿದಿರಿನ ಪಕ್ಷಿಯ ಊಟದ ತಟ್ಟೆ -‘ಬರ್ಡ್ ಫೀಡರ್ಸ್’ ತೂಗುಬಿಟ್ಟು ಒಂದು ಹಿಡಿ ಕಾಳು ಹಾಕಿಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆ ವಹಿಸಿ. ಗಿಡದ ಬುಡದಲ್ಲಿ ಅಥವಾ ಮನೆ ಅಂಗಳದಲ್ಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿಸಿ ಇಡಿ. ಬೇಸಿಗೆಯಲ್ಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟಿ ತುಸು ಭತ್ತದ ಹುಲ್ಲು ಹಾಸಿಡಿ. ಹಾಗೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.
ನಮ್ಮ ಮನೆಯ ಹೂದೋಟ, ಕಾಯಿಪಲ್ಲೆ ಕೈತೋಟಗಳಿಗೆ ಲಗ್ಗೆ ಹಾಕುವ ಹತ್ತಾರು ರೀತಿಯ ಕ್ರಿಮಿಕೀಟಗಳನ್ನು ತಾನು ತಿನ್ನುವುದಲ್ಲದೇ, ಗೆಳೆಯರನ್ನೂ ಸಹ ಕರೆತಂದು ನೈಸರ್ಗಿಕವಾಗಿಯೇ-ಸಾವಯವ ಮಾದರಿಯಲ್ಲಿ ನಿಯಂತ್ರಿಸುವುದನ್ನು ನೀವು ಕಣ್ಣಾರೆ ನೋಡಬಹುದು! ಮನೆಯ ಒಳಗೆ ಜೇಡ ಬಲೆ ಕಟ್ಟದಂತೆ, ಹಲ್ಲಿಗಳ ಉಪದ್ರವ ನೀಡದಂತೆ, ಜಿರಳೆ, ಇರುವೆ ಅಡುಗೆ ಮನೆ ಮುತ್ತದಂತೆ ಮಾಡುವುದು, ಹೀಗೆ ಅನೇಕ ಕಾರ್ಯಗಳನ್ನು ಮಾಡುವ ನಮ್ಮ ಮನೆ ಮನಗಳ ಜೊತೆ ಸಂಬಂಧ ಹೊಂದಿರುವ ಗುಬ್ಬಿಗಳ ವಂಶವನ್ನು ಉಳಿಸುವ, ಸಲುಹುವ, ಜವಾಬ್ದಾರಿ ನಮ್ಮಲ್ಲರ ಮೇಲಿದೆ.
ಡಾ.ಗುರುಪ್ರಸಾದ ಎಚ್ ಎಸ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.