ಬೆಂಗಳೂರು: ನೇರವಾಗಿ ಬರುವ ವಿರೋಧಿಗಳನ್ನು ಎದುರಿಸಬಹುದು. ಆದರೆ ಹಿಂದಿನಿಂದ ಬರುವವರನ್ನು ತಡೆಯುವುದು ಹೇಗೆ? ಕೋರ್ಟ್ʼಗೆ ಹೋಗುವುದೇ ಮಹಾಪರಾಧ ಎನ್ನುವುದಾದರೆ ನ್ಯಾಯಾಂಗದ ಮೇಲೆ ಯಾರಿಗೂ ನಂಬಿಕೆ ಇಲ್ಲವೇ? ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರಶ್ನೆ ಮಾಡಿದರು.
ಸದನದಲ್ಲಿ ಸಿಡಿ ವಿಚಾರದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಅವರು; 17 ಜನರ ವಿರುದ್ಧ ಪಿತೂರಿ, ಅಪಪ್ರಚಾರ ಮಾಡಲು ವೇದಿಕೆ ಸಿದ್ಧ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದ್ದರಿಂದ ಮುಂಚಿತವಾಗಿ ಕೋರ್ಟ್ ಮೊರೆ ಹೋಗಲಾಯಿತು. ನಮ್ಮ ಮೇಲೆ ಯಾವುದೇ ಪ್ರಕರಣವೂ ಇರಲಿಲ್ಲ. ನಾಗರಿಕ ಸಮಾಜದಲ್ಲಿ ನಾಗರಿಕ ಏನು ಮಾಡಬೇಕೊ ಅದನ್ನು ನಾವು ಮಾಡಿದ್ದೇವೆ. ಕಾನೂನಿನ ವ್ಯಾಪ್ತಿಯಲ್ಲಿ ಇರುವ ಅವಕಾಶವನ್ನು ನಾವು ಬಳಸಿಕೊಂಡಿದ್ದೇವೆ ಎಂದರು.
ರಾಜಕೀಯ ಷಡ್ಯಂತ್ರ
ಕಾನೂನಿನ ಬಗ್ಗೆ ತಿಳಿದವರೇ ಸದನದಲ್ಲಿ ಈ ವಿಚಾರವನ್ನು ಚರ್ಚೆಗೆ ತಂದಿರುವುದು ಅಚ್ಚರಿ ತಂದಿದೆ. ಅಧಿಕೃತ ಮಾಹಿತಿ ಇಲ್ಲದಿದ್ದರೆ ಅದನ್ನು ಪ್ರಸಾರ ಮಾಡಬಾರದು ಎಂದು ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಇದು ರಾಜಕೀಯ ಷಡ್ಯಂತ್ರವಲ್ಲದೆ ಬೇರೆನೂ ಅಲ್ಲ. ಆಧುನಿಕ ತಂತ್ರಜ್ಞಾನ ಬಳಸಿ ಏನು ಬೇಕಾದರೂ ಮಾಡಬಹುದು. ಹೀಗಾಗಿ ನಾವು ಮುಂಚಿತವಾಗಿ ಕೋರ್ಟ್ಗೆ ಹೋಗಿದ್ದೇವೆ ಎಂದರು.
ಹಿಂದಿನ ಸಚಿವರೊಬ್ಬರದ್ದು ಇದೇ ರೀತಿ ಆಗಿತ್ತು. ಆದರೆ ಮರಳಿ ಅವರ ಗೌರವ ಕಟ್ಟಿಕೊಡಲು ಸಾಧ್ಯವಾಗಿಲ್ಲ. ಸುಪ್ರಿಂ ಕೋರ್ಟ್ ನ್ಯಾಯಾಧೀಶರೇ ಸುದ್ದಿ ಪ್ರಸಾರ ನಿರ್ಬಂಧ ಪಡೆದಿದ್ದಾರೆ. ಈ ರೀತಿ ಮಾಡುವುದು ಮೊದಲ ಸಲವೇನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಅಪಮಾನಕರವಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಯಾವುದೇ ಸಿಡಿ ಬಂದಾಗ ಅದನ್ನು ಪರಾಮರ್ಶಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯಾರು ಬೇಕಾದರೂ ಪ್ರಸಾರ ಮಾಡಬಹುದು ಎಂದರು.
ರಾಜಕೀಯ ಹುನ್ನಾರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ಮೇಲೆ ಯಾವುದೇ ಅಪರಾಧ ಪ್ರಕರಣಗಳಿಲ್ಲ. ನಾವು ಯಾವುದೇ ತಪ್ಪು ಮಾಡಿಲ್ಲ ಎಂದರು.