- ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ಮಾತ್ರವಲ್ಲದೆ ಇಡೀ ಬಯಲುಸೀಮೆಯ ನೀರಾವರಿ ಮಾಹಿತಿಯ ಕಣಜವೊಂದು ಚಿಕ್ಕಬಳ್ಳಾಪುರದಲ್ಲಿ ಸಾಕಾರವಾಗಿದೆ. ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ಸ್ಮರಣಾರ್ಥ ಶಾಶ್ವತ ನೀರಾವರಿ ಸಮಿತಿ ಈ ಕಾರ್ಯವನ್ನು ಮಾಡಿದೆ.
ಚಿಕ್ಕಬಳ್ಳಾಪುರ: ಅವಿಭಜಿತ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟದ ವರ್ಷಕ್ಕೆ ಸರಾಸರಿ 6 ಮೀಟರ್ (20 ಅಡಿ)ನಷ್ಟು ಕುಸಿಯುತ್ತಿದೆ. ಇನ್ನು ಕೆಲ ಗಂಬೀರ ಪ್ರದೇಶಗಳಲ್ಲಿ 20ರಿಂದ 30 ಮೀಟರ್‌ವರೆಗೂ ಅಂತರ್ಜಲ ಕುಸಿಯುತ್ತಿದೆ. ಇದು ಅತ್ಯಂತ ಕಳವಳಕಾರಿ ಎಂದು ಖ್ಯಾತ ಜಲ ವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್ ಅವರು ಹೇಳಿದರು,
ವಿಶ್ವ ಜಲ ದಿನಾಚರಣೆ ನಿಮಿತ್ತ ಚಿಕ್ಕಬಳ್ಳಾಪುರದಲ್ಲಿ ಖ್ಯಾತ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ಸ್ಮರಣಾರ್ಥ ಶಾಶ್ವತ ನೀರಾವರಿ ಸಮಿತಿ ವತಿಯಿಂದ ಸ್ಥಾಪನೆ ಮಾಡಲಾಗಿರುವ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಲೋಕಾರ್ಪಣೆ ನೆರೆವೇರಿಸಿ ಮಾತನಾಡಿದರು ಅವರು.
ಇಡೀ ದೇಶದಲ್ಲಿ ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಇದು ಇನ್ನೂ ಹೆಚ್ಚಾಗಲಿದೆ. 2030ರ ಹೊತ್ತಿಗೆ ನಮಗೆ ಲಭ್ಯತೆ ಇರುವ ನೀರಿನಲ್ಲಿ ಅರ್ಧದಷ್ಟು ಕಡಿಮೆಯಾಗಲಿದೆ ಎಂಬ ಅಧ್ಯಯನಗಳೂ ಬಂದಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಲ ಅಧ್ಯಯನಕ್ಕೆ 400 ಶತಕೋಟಿ ಡಾಲರ್
ನೀರಿನ ಸಂರಕ್ಷಣೆ, ಆಧ್ಯಯನಕ್ಕಾಗಿ ನಮ್ಮ ದೇಶವೂ ಸೇರಿ ಜಾಗತಿಕ ಮಟ್ಟದಲ್ಲಿ 400 ಶತಕೋಟಿ ಡಾಲರ್‌ನಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಲಾಗುತ್ತಿದೆ. ಈ ಅಧ್ಯಯನವೇ ದೊಡ್ಡ ಮಾರುಕಟ್ಟೆಯಾಗಲಿದೆ. ಬಳಿಕ ಅಲ್ಲಿ ಒಳ್ಳೆಯ ವರದಿಗಳು ಬರುತ್ತವೆ. ಅಂಥ ಸಮಯದಲ್ಲಿ ನಮಗೆ ಬೇಕಾದ ಅಂಶಗಳನ್ನು ಹೆಕ್ಕಿ ತೆಗೆದು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಇಲ್ಲವಾದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಡಾ.ಪ್ರಕಾಶ್ ಅವರು ಹೇಳಿದರು.
ಯೋಜನೆಗಳಲ್ಲಿ ಅಡಗಿವೆ ಹಿತಾಸಕ್ತಿಗಳು
ನಮ್ಮಲ್ಲಿ ಯೋಜನೆಗಳನ್ನು ರೂಪಿಸಬೇಕಾದರೆ ಹಿತಾಸಕ್ತಿಗಳೇ ಹೆಚ್ಚಾಗಿ ಪರಿಗಣಿಸಲ್ಪಡುತ್ತವೆ. ಎಲ್ಲ ಯೋಜನೆಗಳಲ್ಲೂ ಸ್ವಹಿತಾಸಕ್ತಿಗಳು ಅಡಗಿವೆ. ಇದು ದುರದೃಷ್ಟಕರ ಸಂಗತಿ. ತಮಗೆ ಬೇಕಾದ ಹಾಗೆ ಯೋಜನಾ ವರದಿಗಳನ್ನು ತಯಾರು ಮಾಡಲಾಗುತ್ತದೆ. ಯಾವ ವರದಿ ಸರಿ? ಯಾವುದು ತಪ್ಪು? ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಅಂಥ ವರದಿಗಳ ಬಗ್ಗೆ ಈ ಗ್ರಂಥಾಯದಲ್ಲಿ ಕೂತು ಅಧ್ಯಯನ ಮಾಡಿ ಸತ್ಯ ಸಂಗತಿಯನ್ನು ತಿಳಿಯಬಹುದು ಎಂದರು ಡಾ.ಪ್ರಕಾಶ್.
ನೀರಿನ ವಿಷಯದಲ್ಲಿ ಕಾಲ ಕಾಲಕ್ಕೆ ದೊಡ್ಡ ಪ್ರಮಾಣದ ಬದಲಾವಣೆ ಆಗುತ್ತಾ ಬಂದಿದೆ. ಆದರೆ, ಆ ಬದಲಾವಣೆಯನ್ನು ನಾವು ಗ್ರಹಿಸಿಕೊಂಡಿದ್ದೇವೆಯೇ? ಇಲ್ಲ. ನೀರಿನ ನಿರ್ವಹಣೆಯಲ್ಲಿ, ಕಲಿಕೆಯಲ್ಲಿ ನಾವಿನ್ನೂ ಬ್ರಿಟೀಷರ ಕಾಲದಲ್ಲೇ ಇದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಗ್ರಂಥಾಯಲಯ ಅತ್ಯಂತ ವಿಶಿಷ್ಟ್ಯವಾದದ್ದು. ನೀರಿಗಾಗಿಯೇ ಮೀಸಲಾದ ಒಂದು ಅಧ್ಯಯನ ಕೇಂದ್ರವೂ ಹೌದು. ಅದರಲ್ಲೂ ಡಾ.ಜಿ.ಎಸ್.ಪರಮಶಿವಯ್ಯ ಅವರ ಹೆಸರಿನಲ್ಲಿ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಅರಿವು, ಜ್ಞಾನ, ಒಳನೋಟ, ಹೊರನೋಟ, ಅಧ್ಯಯನ, ತಪ್ಪು, ತಿದ್ದುಪಡಿ ಇತ್ಯಾದಿ ಅಂಶಗಳ ಬಗ್ಗೆ ಈ ಗ್ರಂಥಾಲಯ ದೊಡ್ಡ ಕಾಣಿಕೆ ನೀಡುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಗ್ರ ಮಾಹಿತಿ ಸಂಗ್ರಹವಾಗಲಿ
ನಾಯನಹಳ್ಳಿ ತೋಟದಲ್ಲಿ ಸ್ಥಾಪನೆಯಾಗಿರುವ ಈ ಗ್ರಂಥಾಲಯ ಸಣ್ಣ ಪ್ರಮಾಣದ ಜಲ ಸಂಸ್ಥೆ ರೀತಿಯಲ್ಲಿದೆ. ಈ ಜಿಲ್ಲೆ ಹಾಗೂ ಬಯಲುಸೀಮೆ ನೀರಿನ ಸ್ಥಿತಿಗತಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಈ ಕೇಂದ್ರದಲ್ಲಿರಬೇಕು. ಅಧ್ಯಯನಾಸಕ್ತರಿಗೆ ಸಮಗ್ರ ಮಾಹಿತಿ ಸಿಗಬೇಕು. ಡೇಟಾ ಸಂಗ್ರಹ ಮಾಡುವುದರ ಜತೆಗೆ ಅರಿವು ಮೂಡಿಸಬೇಕು ಎಂದು ರಾಜ್ಯ ಜಲ ಸಂಸ್ಥೆಯ ನಿರ್ದೇಶಕ ಡಾ.ಎಂ. ಇನಾಯತುಲ್ಲಾ ಹೇಳಿದರು.
ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲತಜ್ಞರು ಹಾಗೂ CSIR-Fourth Paradigm Institute ಮುಖ್ಯಸ್ಥರಾದ ಡಾ.ವಿದ್ಯಾಧರ ಮುದ್ಕವಿ, ವಿಶ್ರಾಂತ ಅರಣ್ಯ ಮತ್ತು ಪರಿಸರ ಸಂರಕ್ಷಣಾಧಿಕಾರಿ ಡಾ.ಎಂ.ಎಚ್.ಸ್ವಾಮಿನಾಥ್ ಮಾತನಾಡಿದರು.
ನೀರಿನ ಭದ್ರತೆ ಮರೀಚಿಕೆ!
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಅವರು; “ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆಯ ಅನೇಕ ಜಿಲ್ಲೆಗಳಲ್ಲಿ ನೀರಾವರಿ ಉದ್ದೇಶ ಇಟ್ಟುಕೊಂಡು ನೂರಾರು, ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಫಲಶ್ರುತಿ ಮಾತ್ರ ಶೂನ್ಯವಾಗಿದೆ. ನೀರಿನ ಭದ್ರತೆಯೂ ಸಿಕ್ಕಲ್ಲ” ಎಂದರು.
ಈ ಭಾಗದಲ್ಲಿ ಪರಿಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ ಎಂಬ ಅಂಶವನ್ನು ಸರಕಾರದ ವರದಿಗಳು, ಅಂಕಿ-ಅಂಶಗಳೇ ಹೇಳುತ್ತವೆ. ಸಾಗುವಳಿ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಪಾತಾಳಕ್ಕೆ ಹೋಗುತ್ತಲೇ ಇದೆ. ಮುಂದಿನ ಕೆಲವೇ ವರ್ಷಗಳಲ್ಲಿ ಈ ಭಾಗವೆಲ್ಲ ಮರುಭೂಮಿಯಾಗಿ ಪರಿವರ್ತನೆಯಾಗುವ ಅಪಾಯವೂ ಇದೆ. ಈ ಎಲ್ಲ ಎಚ್ಚರಿಕೆ ಗಂಟೆಯೂ ನಮ್ಮ ಮುಂದಿದೆ ಎಂದು ರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಆದರೆ ಈ ಭಾಗದಲ್ಲಿ ವಾಸ ಮಾಡುವ ನಾವು ಎಚ್ಚರಿಕೆ ತಪ್ಪುತ್ತಿದ್ದೇವೆ ಎಂಬ ಭಯ ನನ್ನನ್ನು ಕಾಡುತ್ತಿದೆ. ಪುರಾಣ ಕಾಲದಲ್ಲಿ ಭಗೀರಥ ಮಹರ್ಷಿ ಗಂಗೆಯನ್ನು ಧರೆಗೆ ತಂದಂತೆ, ಈಗಲೂ ರಯಾರಾದರೊಬ್ಬರು ಭಗೀರಥರು ಬರುತ್ತಾರೆಂಬ ಭ್ರಮೆ ಬೇಡ. ನಮ್ಮ ನೀರನ ಹಕ್ಕುಗಳಿಗಾಗಿ ನಾವು ಹೋರಾಟ ನಡೆಸಲೇಬೇಕಿದೆ ಎಂದು ಅವರು ಹೇಳಿದರು.
ನಮ್ಮ ಭಾಗದ ನೀರಾವರಿಗೆ ಸಂಬಂಧಿಸಿದ ಮಾಹಿತಿ, ಕಾರ್ಯಗತವಾಗಿರುವ ಯೋಜನೆಗಳು, ವಿಫಲವಾಗಿರುವ ಯೋಜನೆಗಳು, ಮಾಡಿರುವ ಖರ್ಚು, ವಿವಿಧ ಇಲಾಖೆಗಳ ಕಾರ್ಯಚಟುವಟಿಕೆ, ವಿಜ್ಞಾನಿಗಳು ಮತ್ತು ಸರಕಾರದ ಸಂಘ-ಸಂಸ್ಥೆಗಳು ನೀಡಿರುವ ವರದಿಗಳು ಇತ್ಯಾದಿಗಳ ಸಂಪೂರ್ಣ ಮಾಹಿತಿ ಈ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಲಭ್ಯವಾಗಲಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.
ರೈತಪರ ಹೋರಾಟಗಾರ ಎಸ್.ಲಕ್ಷ್ಮಯ್ಯ, ಮಳ್ಳೂರು ಹರೀಶ್, ಸುಷ್ಮಾ ಶ್ರೀನಿವಾಸ್, ಪ್ರಭಾ ನಾರಾಯಣಗೌಡ, ಆಯಿಷಾ ಸೇರಿದಂತೆ ಯುವ ಶಕ್ತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.