- ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಎರಡು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು: ಕೋವಿಡ್ ಬಗ್ಗೆ ಸ್ವತಃ ನಮ್ಮನ್ನಾಳುವ ನಾಯಕರು ತೋರುತ್ತಿರವ ನಿರ್ಲಕ್ಷ್ಮ. ಎರಡು: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಲಸಿಕೆ ರಾಯಭಾರ. ಎರಡೂ ಮಹತ್ತ್ವದ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಅವರು ಅವಲೋಕನ ಮಾಡಿದ್ದಾರೆ.
ಕಳೆದೊಂದು ವರ್ಷಪೂರ್ತಿ ಕೋವಿಡ್ ಹೆಮ್ಮಾರಿ ಕಾಡಿದ ಪರಿ ವರ್ಣಿಸಲಸದಳ. ಈ ಹೆಮ್ಮಾರಿಯ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕಾಗಿ ಬಂತು. ಲಾಕ್‌ಡೌನ್ ಎಂದರೇನೆಂದು ಸಾಮಾನ್ಯ ಜನರಿಗೆ ಅದರ ಬಿಸಿ ತಟ್ಟಿದ್ದು ಆವಾಗಲೇ. ಕೋವಿಡ್ ಹೆಮ್ಮಾರಿ ನಿಯಂತ್ರಣಕ್ಕೆ ಲಾಕ್‌ಡೌನ್ ಅನಿವಾರ್ಯವಾಗಿದ್ದಿರಬಹುದು. ಆದರೆ ಇದರಿಂದಾದ ಅನಾಹುತಗಳು ಅಷ್ಟಿಷ್ಟಲ್ಲ. ವ್ಯಾಪಾರ ವಹಿವಾಟುಗಳಿಲ್ಲದೆ ಅಂಗಡಿ, ಹೋಟೆಲ್‌ಗಳು ಹೇಳತೀರದಷ್ಟು ನಷ್ಟ ಅನುಭವಿಸಿವೆ. ಸಣ್ಣಪುಟ್ಟ ವರ್ತಕರು, ಬೀದಿಬದಿಯ ವ್ಯಾಪಾರಿಗಳು ಸರ್ವನಾಶ ಹೊಂದಿದರು. ಬಹಳಷ್ಟು ಮಂದಿ ಕೆಲಸ, ಇದ್ದ ನೆಲೆ ಎರಡನ್ನೂ ಕಳೆದುಕೊಂಡು ತ್ರಿಶಂಕುವಾದರು. ಶೈಕ್ಷಣಿಕ ವಲಯ ಈಗಲೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ವಾತಾವರಣ ನಿರ್ಮಾಣವಾಗಿಲ್ಲ. ಸಣ್ಣ ಮಕ್ಕಳ ಮೇಲೆ ಈ ಶೂನ್ಯ ವರ್ಷವು ಉಂಟುಮಾಡಿರುವ ಮಾನಸಿಕ ದುಷ್ಪರಿಣಾಮ ಬಲು ಭೀಕರ. ಯಾವ ವಲಯವೂ ಈ ಒಂದು ವರ್ಷದಲ್ಲಿ ಬೆಳವಣಿಗೆಯನ್ನು ದಾಖಲಿಸಿಲ್ಲ. ಕೆಲವು ವಲಯದಲ್ಲಿ ಕೊಂಚ ಮಟ್ಟಿನ ಚೇತರಿಕೆ ಪ್ರಮಾಣ ನಗಣ್ಯವೆನಿಸುವಷ್ಟು ಕಂಡಿದೆ, ಅಷ್ಟೆ.
ಹೀಗಿರುವಾಗಲೇ ಇದೀಗ ದೇಶದಾದ್ಯಂತ ಕೊರೋನಾ ವೈರಸ್‌ನ ಎರಡನೇ ಅಲೆ ಮತ್ತೆ ಅಪ್ಪಳಿಸಿದೆ. ಅನೇಕ ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿದಂತೆ) ಹೊಸ ಸೋಂಕು ಹರಡುವಿಕೆ ಹಚ್ಚಿದೆ. ಮತ್ತೆ ಲಾಕ್‌ಡೌನ್, ನೈಟ್ ಕರ್ಫ್ಯೂ, ಸಭೆ ಸಮಾರಂಭ, ಮದುವೆ ಮುಂಜಿಗಳಿಗೆ ನಿಷೇಧ/ ನಿರ್ಬಂಧ ಹೇರಬೇಕೆ ಎಂಬ ಗಂಭೀರ ಪ್ರಶ್ನೆಗೆ ಚಾಲನೆ ದೊರೆತಿದೆ.
ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಕೊರೋನಾ ವೈರಸ್ ಮತ್ತೆ ಅಟ್ಟಹಾಸದ ದಾಳಿ ನಡೆಸಿರುವುದು ಕಡಿಮೆ ಭಯಾನಕ ಸಂಗತಿಯಂತೂ ಖಂಡಿತ ಅಲ್ಲ. ಕೊರೋನಾ ದಾಳಿ ಮಾಡಿತ್ತು ಎಂಬುದನ್ನೇ ಮರೆತು ಬಿಂದಾಸ್ ಆಗಿ ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ದ್ರಾವಣದ ಗೋಜಿಲ್ಲದೆ ಎಲ್ಲೆಂದರಲ್ಲಿ ತಿರುಗಾಡುವ ಜನರನ್ನು ನೋಡಿದರೆ ಕೋವಿಡ್‌ನ ಎರಡನೇ ಅಲೆ ಅದೆಂಥ ಅನಾಹುತಗಳನ್ನು ಸೃಷ್ಟಿಸಲಿದೆಯೋ ಎಂದು ಗಾಬರಿಯಾಗುವುದು ಸಹಜ.
ಜನರು ಹೀಗೆ ಬಿಂದಾಸ್ ಆಗಿ ಅಡ್ಡಾಡಲು ಕಾರಣಗಳಿಲ್ಲದಿಲ್ಲ. ಲಾಕ್‌ಡೌನ್ ತೆರವಾದ ಬಳಿಕ ದೊಡ್ಡ ಪ್ರಮಾಣದಲ್ಲಿ ಜರುಗಿದ್ದು ಸರ್ಕಾರಿ ಕಾರ್ಯಕ್ರಮಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳು. ಇಂಥ ಕಡೆ ಮಾಸ್ಕ್ ಧರಿಸಬೇಕೆಂಬ ಬಗ್ಗೆ ಸರ್ಕಾರಕ್ಕೇ ಎಚ್ಚರಿಕೆಯಿರಲಿಲ್ಲ. ಯಾವುದೇ ಕೊರೋನಾ ಮುನ್ನೆಚ್ಚರಿಕೆಗಳಿಲ್ಲದೆ ಸಾಕಷ್ಟು ಸರ್ಕಾರಿ, ರಾಜಕೀಯ ಸಮಾರಂಭಗಳು ನಡೆದುಹೋಗಿವೆ. ಆದರೆ ಸರ್ಕಾರ ಜನಸಾಮಾನ್ಯರ ಮದುವೆಗಳಿಗೆ ನೂರು, ಐನೂರು ಎಂದೆಲ್ಲ ಸಂಖ್ಯಾಮಿತಿ ಹೇರಿ, ಮದುವೆಮನೆಗಳಿಗೆ ಮಾರ್ಷಲ್‌ಗಳನ್ನೂ ಕಳಿಸಿ ಕಿರಿಕಿರಿ ಮಾಡಿದ್ದು ಮಾತ್ರ ವಿಪರ್ಯಾಸದಲ್ಲಿ ವಿಪರ್ಯಾಸ. ನೂರು ಮಂದಿ ಸೇರಿದರೆ ವೈರಸ್ ದಾಳಿಯಾಗುತ್ತದೆ; ಆದರೆ ಸಾವಿರಾರು, ಲಕ್ಷಾಂತರ ಮಂದಿ ಸೇರುವೆಡೆ ವೈರಸ್ ಹರಡುವುದಿಲ್ಲ ಎಂಬುದು ಮಾತ್ರ ಬಲು ಸೋಜಿಗವೇ ಸರಿ!
ಸರ್ಕಾರ ಕೋವಿಡ್‌ನ ಕಠಿಣ ನಿರ್ಬಂಧಗಳನ್ನು ಮೊದಲು ತಾನು ಪಾಲಿಸಿದರೆ ಜನರೂ ಅದನ್ನು ಅನುಸರಿಸುತ್ತಾರೆ. ಸರ್ಕಾರವೇ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರೆ ಜನರೇಕೆ ಅದನ್ನು ಅನುಸರಿಸುತ್ತಾರೆ? ಗಾದೆಯೇ ಇದೆಯಲ್ಲ- ಯಥಾ ರಾಜಾ ತಥಾ ಪ್ರಜಾ. ಯಾವುದೇ ಸಂದರ್ಭವಿರಲಿ, ಪ್ರಧಾನಿ ಮೋದಿ ಇತ್ತೀಚಿನವರೆಗೂ ಮಾಸ್ಕ್ ಧರಿಸದೆ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಅದರಿಂದಾಗಿ ದೇಶದ ಜನರಿಗೆ ತಾವೂ ಹೀಗೆಯೇ ಮಾಸ್ಕ್ ಧರಿಸಬೇಕು ಎಂದು ಮನವರಿಕೆಯಾಗುವುದು ಸ್ವಾಭಾವಿಕ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಪ್ರತಿಪಕ್ಷ ನಾಯಕರು ಹೇಗೆಲ್ಲ ವರ್ತಿಸಿದರು ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುವ ದೃಶ್ಯಾವಳಿಗಳೇ ಹೇಳುತ್ತವೆ! ಸಿದ್ದರಾಮಯ್ಯ ತೋಳಿಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳುವಾಗಲೂ ಅವರ ಸುತ್ತ ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ಒತ್ತೊತ್ತಾಗಿ ಜನ ನಿಂತಿರುವ ದೃಶ್ಯ ಏನನ್ನು ಸೂಚಿಸುತ್ತದೆ?
ಎರಡನೇ ಅಲೆ ಎದ್ದಿದೆಯೆಂದು ಈಗ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧ ಹೇರಿದರೆ ರಾಜ್ಯ, ದೇಶ ಸರ್ವನಾಶ ಹೊಂದುವುದು ನಿಶ್ಚಿತ. ಅದರ ಬದಲಿಗೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆ ಹೆಚ್ಚಿಸುವುದು, ಲಸಿಕೆ ಅಭಿಯಾನಕ್ಕೆ ಇನ್ನಷ್ಟು ರಭಸ ತಂದುಕೊಡುವುದು, ಕೇರಳ-ಮಹಾರಾಷ್ಟ್ರ- ತಮಿಳುನಾಡು ಗಡಿಗಳಲ್ಲಿ ಇನ್ನಷ್ಟು ನಿಗಾ ವಹಿಸುವುದು, ಸರ್ಕಾರದ್ದಿರಲಿ, ಖಾಸಗಿಯದ್ದಿರಲಿ ಯಾವುದೇ ಕಾರ್ಯಕ್ರಮಗಳಿಗೆ ಸಂಖ್ಯಾ ಮಿತಿಯನ್ನು ಕಡ್ಡಾಯವಾಗಿ ಜಾರಿ ಮಾಡುವುದು ಮೊದಲಾದ ಗರಿಷ್ಟ ನಿಯಂತ್ರಣ ಕ್ರಮ ಕೈಗೊಳ್ಳುವ ಅಗತ್ಯ ತುರ್ತಾಗಿದೆ. ಸಾರ್ವಜನಿಕರು ಕೂಡ ಸ್ವಯಂ ನಿರ್ಬಂಧ ವಿಧಿಸಿಕೊಂಡು ಆದಷ್ಟು ಮನೆಯೊಳಗೇ ಇರುವುದು ಸೂಕ್ತ. ಹಾಗೆ ಮಾಡದಿದ್ದರೆ ಎರಡನೇ ಅಲೆ ಏನೇನು ಅನಾಹುತಗಳನ್ನು ಸೃಷ್ಟಿಸಲಿದೆಯೋ ಯಾರೂ ಊಹಿಸುವಂತಿಲ್ಲ.
ಕೋವಿಡ್ ಹೆಮ್ಮಾರಿ ದೇಶದ ಪ್ರಗತಿಯನ್ನು ರಸಾತಳಕ್ಕೆ ತಳ್ಳಿರುವುದು ನಿಜ. ಆದರೆ ಕೋವಿಡ್ ಕಾರಣದಿಂದಾಗಿಯೇ ಇಂದು ಭಾರತದ ಕೀರ್ತಿ ಜಗದಗಲಕ್ಕೆ ಪಸರಿಸಿರುವುದೂ ಅಷ್ಟೇ ನಿಜ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ನಂಥ ಬಲಾಢ್ಯ ದೇಶಗಳು ಕೋವಿಡ್ ನಿಯಂತ್ರಿಸಲು ಈಗಲೂ ಹೆಣಗುತ್ತಿರುವಾಗಲೇ ಭಾರತ ಮಾತ್ರ ಅಷ್ಟರೊಳಗೇ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಉತ್ಪಾದಿಸಿ, 70 ದೇಶಗಳಿಗೆ ಪೂರೈಸಿ ದಾಖಲೆ ನಿರ್ಮಿಸಿರುವುದು ಕಡಿಮೆ ಸಾಧನೆಯಲ್ಲ.
ಈಗಾಗಲೇ 70 ದೇಶಗಳಿಗೆ 5 ಕೋಟಿ 85ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಭಾರತ ರವಾನಿಸಿದೆ. ಈ ಪೈಕಿ ಸುಮಾರು 80 ಲಕ್ಷ ಡೋಸ್‌ಗಳಷ್ಟು ಲಸಿಕೆ 35 ದೇಶಗಳಿಗೆ ಉಚಿತವಾಗಿ ಪೂರೈಕೆಯಾಗಿದೆ. ಸುಮಾರು 3 ಕೋಟಿ 39 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ಶುಲ್ಕ ಸಹಿತವಾಗಿ 15 ದೇಶಗಳಿಗೆ ಪೂರೈಸಿದೆ. ಸುಮಾರು 1 ಕೋಟಿ 64 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು 18 ದೇಶಗಳಿಗೆ ಕೋವ್ಯಾಕ್ಸ್ ಸೌಲಭ್ಯ ಒಪ್ಪಂದದಂತೆ ರವಾನೆಯಾಗಿದೆ. ಕಳೆದ ಜನವರಿ 20ರಿಂದಲೇ ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್ ಮೊದಲಾದ ನೆರೆಯ ದೇಶಗಳಿಗೆ ಕೊರೋನಾ ಲಸಿಕೆಯ ಪೂರೈಕೆ ಆರಂಭಗೊಂಡಿದೆ. ನಮ್ಮನ್ನು ನಖಶಿಖಾಂತವಾಗಿ ದ್ವೇಷಿಸುವ ಭಾರತದ ಪರಮವೈರಿ ಪಾಕಿಸ್ತಾನಕ್ಕೂ ಇದೇ ಮಾರ್ಚ್ ತಿಂಗಳಲ್ಲಿ ಭಾರತದಿಂದ 4.5 ಕೋಟಿ ಡೋಸ್ ಲಸಿಕೆ ಉಚಿತವಾಗಿ ರವಾನೆಯಾಗಲಿದೆ!
ಶತ್ರು ದೇಶದಲ್ಲಿ ನಮ್ಮ ಲಸಿಕೆ!!
ಪಾಕಿಸ್ತಾನ ಸದ್ಯ ಚೀನಾದಿಂದ ಪೂರೈಕೆಯಾದ ಕೋವಿಡ್ ಲಸಿಕೆಯನ್ನು ಬಳಸುತ್ತಿದೆ. ಆದರದು ತೀರಾ ದುಬಾರಿ. ಲಸಿಕೆಯೊಂದಕ್ಕೆ 2000ರೂ. ಬೆಲೆ ತೆರಬೇಕಾಗಿದೆ. ಪಾಕಿಸ್ತಾನ ಸರ್ಕಾರದ್ದು ಈಗ ತೀರಾ ಆರ್ಥಿಕ ದುಸ್ಥಿತಿ. ಹಾಗಾಗಿ ಭಾರತದಿಂದ ಉಚಿತ ಲಸಿಕೆಯ ಬೇಡಿಕೆಯ ಪ್ರಸ್ತಾಪ ಸಲ್ಲಿಸಿದೆ. ಭಾರತ ಪೂರೈಸುವ ಲಸಿಕೆಯಿಂದ ದೇಶದ ಶೇ.೨೦ರಷ್ಟು ಮಂದಿಗೆ ಲಸಿಕೆ ಹಾಕಬಹುದು. ಭಾರತದ ಲಸಿಕೆಯ ಬಗ್ಗೆ ಪಾಕ್ ಪ್ರಜೆಗಳಿಗೆ ವಿಶ್ವಾಸವಿದೆ. ಆದರೆ ಚೀನಾದಿಂದ ಪಡೆದ ಲಸಿಕೆಯ ಬಗ್ಗೆ ಅನುಮಾನ ಮಾತ್ರ ಇದೆ.
ಭೂತಾನ್, ಮಾಲ್ಡೀವ್ಸ್, ಫಿಜಿ ಸೇರಿದಂತೆ ಭಾರತದಿಂದ ಲಸಿಕೆ ಪಡೆದ ಅಲ್ಲಿಯ ಪ್ರಜೆಗಳು ಭಾರತದ ತ್ರಿವರ್ಣ ಬಾವುಟ ಹಿಡಿದು, ಮೆರವಣಿಗೆ ಮಾಡಿ ಭಾರತಕ್ಕೆ, ಭಾರತದ ಪ್ರಧಾನಿಗೆ ಉಘೇ ಉಘೇ ಹೇಳುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಸಡಗರ, ಸಂಭ್ರಮದಿಂದ ನಲಿದಿದ್ದಾರೆ.
ಆದರೆ ಇಲ್ಲಿ ಭಾರತದಲ್ಲಿ ಮಾತ್ರ ಪ್ರಗತಿಪರರು, ಎಡಪಂಥೀಯ ಎಡ-ಬಿಡಂಗಿಗಳು ದಿನ ಬೆಳಗಾದರೆ ಪ್ರಧಾನಿ ಮೋದಿಯನ್ನು ವಾಚಾಮಗೋಚರವಾಗಿ ನಿಂದಿಸುತ್ತಾ, ಮೋದಿ ಜನವಿರೋಧಿ ಎಂದು ಜರೆಯುತ್ತಾ ದೇಶದ ಮಾನ ಹರಾಜು ಹಾಕುವುದರಲ್ಲೇ ವಿಕೃತ ಸಂತಸ ಕಾಣುತ್ತಿದ್ದಾರೆ. ವಿಪರ್ಯಾಸವೆಂದರೆ ಇದೇ ಅಲ್ಲವೆ?
ನಾವು ಬದುಕಬೇಕು. ಇತರರ ಬದುಕನ್ನೂ ಹಸನುಗೊಳಿಸಬೇಕು. ಇದೇ ನಮ್ಮ ಪ್ರಾಚೀನ ಭಾರತೀಯ ಪರಂಪರೆ ನಮಗೆ ಹೇಳಿಕೊಟ್ಟ ಪಾಠ. ಮೋದಿ ಅದನ್ನೇ ಅನುಸರಿಸುತ್ತಾರೆ.
***
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.