ಬಾಗೇಪಲ್ಲಿ: ಕೇಂದ್ರ ಸರಕಾರದ ಜನ ವಿರೋಧಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಬಸವಕಲ್ಯಾಣದಿಂದ-ಬಳ್ಳಾರಿಯವರೆಗೆ 400 ಕಿ.ಮೀ. ಕಾಲ್ನಡಿಗೆಯನ್ನು ಮಾರ್ಚ್ 5 ರಿಂದ 23ರವರೆಗೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ರೈತಸಂಘ (ಪ್ರೊ.ಎಂ.ಡಿ.ನಂಜುಂಡ ಸ್ವಾಮಿ ಬಣ) ಬಾಗೇಪಲ್ಲಿ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀನಿವಾಸ್ ನೇತೃತ್ವದ ಹೋರಾಟದಲ್ಲಿ ಪಾಲ್ಗೊಳ್ಳಲು ಸುಮಾರು 25ಕ್ಕೂ ಹೆಚ್ಚಿನ ರೈತರು ಪ್ರಯಾಣ ಬೆಳೆಸಿದ್ದಾರೆ.
ನಿರಂಕುಶ ಸರಕಾರ
ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ; “ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕಾನೂನುಗಳು, ಬಹುರಾಷ್ಟ್ರೀಯ ಕಂಪನಿಗಳ ಹಾಗೂ ಅಂಬಾನಿ- ಆದಾನಿಯಂಥ ದೇಶೀಯ ಕಾರ್ಪೊರೇಟ್ ಶಕ್ತಿಗಳ ಹಿತಕ್ಕೆ ಕಂಕಣ ತೊಟ್ಟಿವೆ. ಇದರಿಂದ ಜನ ಸಾಮಾನ್ಯರ ಹಿತವನ್ನು ಬಲಿಕೊಡಲಾಗುತ್ತಿದೆ. ಇವು ರೈತನ ಮತ್ತು ದೇಶದ ಜನರ ಪಾಲಿಗೆ ಕರಾಳ ಕಾನೂನುಗಳಾಗಿವೆ. ಇವು ರದ್ದಾಗದೆ ನಮಗೆ ಬದುಕು ಇಲ್ಲ ಎಂದರು.
ರೈತ ವಿರೋಧಿ ಕಾನೂನೆಂಬ ಶಾಪದಿಂದ ಮುಕ್ತರಾಗುವ ದೇಶದಲ್ಲಿ ಪ್ರಜಾಪ್ರಭುತ್ವ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಸರಕಾರ ಪ್ರಜಾಪ್ರಭುತ್ವದ ನೀತಿ, ತತ್ವ ಮರೆತು ನಿರಂಕುಶವಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳು ರೈತ ವಿರೋಧಿಯಾಗಿವೆ. ನ್ಯಾಯಬದ್ಧ ಹಕ್ಕಿಗಾಗಿ ಎತ್ತಿದ ರೈತ ಧ್ವನಿಯನ್ನು ತುಳಿದು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಎಂದು ಅವರು ಕಿಡಿಕಾರಿದರು.
ಜಿಲ್ಲಾಧ್ಯಕ್ಷ ಎಂ.ಡಿ.ನಂಜುಂಡ ಸ್ವಾಮಿ ಮಾತನಾಡಿ; “ಹಿಂದಿನ ಕಾನೂನಿನ ಪ್ರಕಾರ ಆಹಾರ ಧಾನ್ಯಗಳನ್ನು ಮಿತಿಮೀರಿ ಸಂಗ್ರಹಿಸಲಾಗುತ್ತಿದ್ದಿಲ್ಲ. ಆದರೆ ಯಾವುದೇ ನಿರ್ಬಂಧಗಳಿಲ್ಲದೇ ಎಷ್ಟು ದೊಡ್ಡ ಪ್ರಮಾಣದ ಆಹಾರ ಧಾನ್ಯಗಳನ್ನು ಕಾರ್ಪೋರೇಟ್‌ಗಳು ತಮ್ಮ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಬಹುದು. ಈ ಕಾನೂನಿಂದ ಕಾರ್ಪೋರೇಟ್ʼಗಳಿಗೆ ಭಾರೀ ಲಾಭ ಗಳಿಸುವ ಅವಕಾಶವನ್ನು ಸೃಷ್ಟಿಸಲಾಗಿದೆ. ಇದು ಸರಕುಗಳ ಕೃತಕ ಬೇಡಿಕೆಯನ್ನು ಸೃಷ್ಟಿಸಿ ಬೆಲೆಯನ್ನು ಹೆಚ್ಚಿಸುತ್ತದೆ. ಇದರಿಂದ, ಮುಖ್ಯವಾಗಿ, ಬಡವರು ಮತ್ತು ಮಧ್ಯಮ ವರ್ಗದವರು ಬಲಿಪಶುಗಳಾಗುತ್ತಾರೆ ಎಂದು ದೂರಿದರು.
ಕೃಷಿ ಕಾಯ್ದೆಗಳು ರೈತರಿಗೆ ಮಾರಕ
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಗೌಡ ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರಲ್ಲದೆ,. ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಈ ಕಾಯ್ದೆಗಳ ಮೂಲಕ ದೇಶದ ರೈತಾಪಿ ಕೃಷಿಯನ್ನು ನಾಶ ಮಾಡಿ ಕಂಪೆನಿ ಕೃಷಿಯನ್ನು ಜಾರಿಗೆ ತರುತ್ತಿರುವುದು ಮಾತ್ರವಲ್ಲದೆ ಸಾರ್ವಜನಿಕ ಕ್ಷೇತ್ರವನ್ನು ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ರೈತ ಮಹಿಳೆ ಭಾಗ್ಯರೇಖ ಮಾತನಾಡಿ; ಹೊಸ ಕೃಷಿ ಕಾಯ್ದೆಗಳು ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತು ಹಾಕುತ್ತವೆ. ಈ ಕಾಯ್ದೆಗಳ ನಿಯಮಾವಳಿಗಳನ್ವಯ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಕಾರ ಚಲಾಯಿಸುತ್ತವೆ. ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ ಎಂದು ಆರೋಪಿಸಿದರು.