ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವವಿಮಾ ಪ್ರತಿನಿಧಿಗಳು ಮಂಗಳವಾರ ನಗರದ ಎಲ್‍ಐಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿಮಾ ನಿಗಮ ಹಾಗೂ ಕೇಂದ್ರ ಸರಕಾರದ ಧೋರಣೆ ಖಂಡಿಸಿದ ಪ್ರತಿಭಟನಾಕಾರರು ಕೂಡಲೇ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಎಲ್‍ಐಸಿ ಬೆಂಗಳೂರು ವಿಭಾಗೀಯ ಅಧ್ಯಕ್ಷ ವಿ.ರವೀಂದ್ರನಾಥ್, “ಕಳೆದ ಹಲವು ವರ್ಷಗಳಿಂದ ಜೀವ ವಿಮಾ ನಿಗಮದ ಪ್ರತಿನಿಧಿಗಳು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ವಿಮಾ ನಿಗಮಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಮಾಡಿದರೂ ಇದುವರೆಗೂ ಬೇಡಿಕೆಗಳನ್ನು ಈಡೇರಿಸಿಲ್ಲ” ಎಂದು ಆರೋಪಿಸಿದರು.
ಪಾಲಿಸಿದಾರರಿಂದ ಇಂದು ಎಲ್‍ಐಸಿ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಸಂಸ್ಥೆ ಪ್ರತಿನಿಧಿಗಳಿಗೆ ಹಾಗೂ ಪಾಲಸಿದಾರರಿಗೆ ಬೋನಸ್ ಹೆಚ್ಚಳ ಮಾಡಿದರೆ ಸಂಸ್ಥೆ ಇನ್ನಷ್ಟು ಬಲಿಷ್ಠಗೊಳ್ಳಲಿದೆ. ಈ ವಿಚಾರವನ್ನು ಹಲವು ಬಾರಿ ಸಂಸ್ಥೆಗೆ ಮನವಿ ಮಾಡಿದರೂ ಇದುವರೆಗೂ ಪರಿಗಣಿಸಿಲ್ಲ ಎಂದು ಅವರು ದೂರಿದರು.
ವಿದೇಶಿ ಬಂಡವಾಳ ಮಿತಿ ಹೆಚ್ಚಳ ಬೇಡ
ಎಲ್‍ಐಸಿ ಪ್ರತಿನಿಧಿಗಳ ಒಕ್ಕೂಟದ ಚಿಕ್ಕಬಳ್ಳಾಪುರ ಶಾಖೆ ಅಧ್ಯಕ್ಷ ಬಿ.ಬಯ್ಯಾರೆಡ್ಡಿ ಮಾತನಾಡಿ, “ಪ್ರಸ್ತುತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್‍ಐಸಿ ಕ್ಲಬ್ ಸದಸ್ಯರಿಗೆ ವ್ಯವಹಾರದ ವಿನಾಯಿತಿಯನ್ನು ಮುಂದುವರಿಸಬೇಕು. ಐಆರ್‍ಡಿ ಯ ರೇಗುಲೇಷನ್ಸ್ 2013 ಮತ್ತು 2016ರ ಪ್ರಕಾರ ಪ್ರತಿನಿಧಿಗಳ ಕಮಿಶನ್ ಹೆಚ್ಚಿಸಬೇಕು. ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳದ ಪ್ರಮಾಣದ ಮಿತಿಯನ್ನ ಶೇ.74ರಷ್ಟು ಹೆಚ್ಚಳ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು” ಎಂದು ಒತ್ತಾಯ ಮಾಡಿದರು.
ಜೀವ ವಿಮಾ ನಿಗಮವನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಈ ದುಸ್ಸಾಹಸಕ್ಕೆ ಕೇಂದ್ರ ಕೈಹಾಕಬಾರದು. ಆನ್ಲೈನ್ ಮುಖಾಂತರ ಪಾಲಿಸಿ ಮಾರಾಟ ಮಾಡುವುದನ್ನು ಮತ್ತು ರಿಯಾಯಿತಿ ಕೊಡುವುದನ್ನು ನಿಲ್ಲಿಸಬೇಕು. ಎಲ್ಲಾ ಪ್ರತಿನಿಧಿಗಳಿಗೆ ಮತ್ತು ಕ್ಲಬ್ ಸದಸ್ಯರಿಗೆ ಗ್ರೂಪ್ ಇನ್ಶೂರೆನ್ಸ್ ಹೆಚ್ಚಿಸಬೇಕು, ಗ್ರಾಚ್ಯುಟಿಯನ್ನು 10 ಲಕ್ಷದವರೆಗೆ ಹೆಚ್ಚಿಸುವುದು. ಎಲ್ಲಾ ವಿಮೆಯ ಹಣಕಾಸು ವ್ಯವಹಾರದ ಮೇಲೆ ಹಾಕುತ್ತಿರುವ ಬಡ್ಡಿಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರತಿನಿಧಿಗಳ ಸಂಘದ ಮಾಜಿ ಶಾಖಾ ಅಧ್ಯಕ್ಷ ಎಂ.ಸೋಮಶೇಖರ್, ಪ್ರತಿನಿಧಿಗಳಾದ ವೆಂಕಟೇಶ್ ಪ್ರಸಾದ್, ಮಂಜುನಾಥ್, ವೆಂಕಟೇಶ್, ನಂಜುಂಡಯ್ಯ, ಕೆ.ಎಲ್ ವೆಂಕಟೇಶ್, ಕೆ.ಎಂ.ವೆಂಕಟಶಿವಾರೆಡ್ಡಿ, ವಿ.ವೆಂಕಟರೋಣಪ್ಪ, ಶಶಿಧರ್, ರಮೇಶ್ ಗುಪ್ತ, ಶ್ರೀನಿವಾಸಚಾರಿ, ಎನ್.ರಾಮಚಂದ್ರರೆಡ್ಡಿ, ಕೆ.ಎನ್.ಶ್ರೀಕಾಂತ್, ಟಿ.ಎಲ್.ಲಕ್ಷ್ಮಣ್, ಮೋಹನ್ ಬಾಬು ಸೇರಿದಂತೆ ಅನೇಕ ಪ್ರತಿನಿಧಿಗಳು ಇದ್ದರು.