- ಬಿಜೆಪಿ ಸರಕಾರ ಬರಲು ಕಾರಣರಾಗಿದ್ದ ವಲಸಿಗರಿಂದ ಬಿಜೆಪಿ ಜಾಣ ಅಂತರ ಕಾಯ್ದುಕೊಳ್ಳುತ್ತಿದೆಯಾ? ಯಡಿಯೂರಪ್ಪ ಅವರನ್ನು ಬಿಟ್ಟರೆ ಪಕ್ಷದ ಎಲ್ಲರಿಗೂ ಅವರು ಅಪಥ್ಯವಾಗಿದ್ದಾರಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
NEWS & VIEWS
ಬೆಂಗಳೂರು: ಇಡೀ ಬಿಜೆಪಿಗೆ ಒಂದು ಅಜೆಂಡಾ ಇದ್ದರೆ, ಅಕ್ಕಪಕ್ಕದ ಪಕ್ಷಗಳಿಂದ ವಲಸೆ ಬಂದು ಮಂತ್ರಿಗಳಾದವರ ಅಜೆಂಡಾವೇ ಬೇರೆ ಎನ್ನುವ ಸಂಗತಿ ಮತ್ತೊಮ್ಮೆ ಜಗಜ್ಜಾಹೀರಾಗಿದ್ದು. ಶಿಸ್ತಿನ ಪಕ್ಷದಲ್ಲಿ ಇದು ಮತ್ತಷ್ಟು ಬಿರುಕು ಮೂಡಿಸಿದೆ.
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರ, ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿರುವ ಬಿಜೆಪಿ ನಾಯಕರ ತಲೆಗೆ ವಲಸಿಗರು ಅನಗತ್ಯ ಹುಳ ಬಿಡುತ್ತಿದ್ದಾರಾ? ಎನ್ನುವ ಅಸಮಾಧಾನ ಪಕ್ಷದಲ್ಲಿ ಭುಗಿಲೆದ್ದಿದೆ.
ಒಂದಲ್ಲ ಒಂದು ಕಾರಣಕ್ಕೆ ಸರಕಾರ ಮತ್ತು ಪಕ್ಷಕ್ಕೆ ಹೆಜ್ಜೆ ಹೆಜ್ಜೆಗೂ ಇರಿಸುಮುರಿಸು ಉಂಟು ಮಾಡುತ್ತಿರುವ ವಲಸಿಗರ ಬಗ್ಗೆ ಈಗಾಗಲೇ ಬಿಜೆಪಿಯೊಳಗೆ ದಟ್ಟವಾದ ಅತೃಪ್ತಿ ಹೊಗೆಯಾಡುತ್ತಿದ್ದು, ಮೂಲ ಶಾಸಕರು ಬಹಿರಂಗವಾಗಿಯೇ ಇವರ ವಿರುದ್ಧ ಮಾತನಾಡುತ್ತಿದ್ದಾರೆ.
ಅಂತರ ಸ್ಪಷ್ಟ ಗೋಚರ
ರಮೇಶ್ ಜಾರಕಿಹೊಳಿ ಪ್ರಕರಣದ ನಂತರ ವಲಸಿಗರ ಜತೆ ಬಿಜೆಪಿ ಅಂತರ ಕಾಯ್ದುಕೊಳ್ಳುತ್ತಿರುವುದು ಸ್ಷಷ್ಟವಾಗಿ ಗೋಚರವಾಗುತ್ತಿದೆ. ಅದು ಸದನದಲ್ಲಿ, ಸದನದ ಹೊರಗೂ ಇದು ಢಾಳಾಗಿಯೇ ಕಾಣಿಸುತ್ತಿದೆ. ಇನ್ನೊಂದೆಡೆ, ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದ ಆರು ಸಚಿವರ ವಿಷಯದಲ್ಲಂತೂ ಬಿಜೆಪಿ ಸ್ಪಷ್ಟವಾಗಿ ಅಂತರ ಕಾಯ್ದುಕೊಳ್ಳುತ್ತಿರುವುದು ಗುಟ್ಟಾಗೇನೂ ಇಲ್ಲದ ಸಂಗತಿ.
ಇದೆಲ್ಲ ಹೀಗಿದ್ದರೆ, ಬುಧವಾರ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೀಡಿದ ಹೇಳಿಕೆ ಬಿಜೆಪಿಗೆ ಶಾಸಕರಿಗೆ ಮಾತ್ರವಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೂ ಸಿಟ್ಟು ಬರುವಂತೆ ಮಾಡಿದೆ. ಬಿಜೆಪಿ ಶಾಸಕರಾದ ರಾಜೂಗೌಡ, ರೇಣುಕಾಚಾರ್ಯ ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿದ್ದಾರೆ. ರೇಣುಕಾಚಾರ್ಯ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಸುಧಾಕರ್ ಬಹಿರಂಗವಾಗಿ ಎಲ್ಲರ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು. ಸಚಿವೆ ಶಶಿಕಲಾ ಜೊಲ್ಲೆ, ಆಡಳಿತ ಪಕ್ಷದ ಶಾಸಕಿ ರೂಪಾ ಶಶಿಧರ್ ಅವರೂ ಸುಧಾಕರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಿಷ್ಟು
“ನಮ್ಮ ಮೇಲೆ ಆರೋಪ ಮಾಡುವವರು ತಮ್ಮ ಜೀವನದಲ್ಲಿ ಏನೇನು ನಡೆಯಿತು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅವರವರ ವೈಯಕ್ತಿಕ ಜೀವನದಲ್ಲಿ ಹೇಗಿದ್ದಾರೆ ಎಂಬುದು ಕೂಡ ತನಿಖೆ ಆಗಲಿ. ಸುಖಾಸುಮ್ಮನೆ ಬೇರೆಯವರ ಮೇಲೆ ಗೂಭೆ ಕೂರಿಸುವುದು ಸರಿಯಲ್ಲ. ಕೆಲ ಮಾಜಿ ಮುಖ್ಯಮಂತ್ರಿಗಳ ವೈಯಕ್ತಿಕ ಜೀವನದಲ್ಲಿ ಏನೇನು ಮಾಡಿದ್ದರು ಎಂಬುದೆಲ್ಲ ತನಿಖೆಯಾಗಲಿ. ಕೆಲವರು ಬೇರೆಯವರಿಗೆ ನೈತಿಕತೆಯ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ಬೋಧನೆ ಮಾಡಲು ಅವರಿಗೇನು ಹಕ್ಕಿದೆ?”
“ನ್ಯಾಯಾಲಯಕ್ಕೆ ಮೊರೆ ಹೋಗಿರುವ ನಮ್ಮನ್ನು ಟಾರ್ಗೆಟ್ ಮಾಡಿ ಆರೋಪ ಮಾಡುತ್ತಿರುವ ಪ್ರತಿಪಕ್ಷ ನಾಯಕರುಗಳು ಒಮ್ಮೆ ಯೋಚನೆ ಮಾಡಬೇಕು. ಜೀವನದಲ್ಲಿ ತಾವೆಷ್ಟು ಮಾದರಿಯಾಗಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ, ಎಲ್ಲಾ ಸಚಿವರುಗಳು, ಶಾಸಕರ ಬಗ್ಗೆ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ? ಯಾರಿಗೆ ವಿವಾಹೇತರ ಸಂಬಂಧಗಳಿವೆ ಎಂಬ ಬಗ್ಗೆ ವಿಧಾನಸಭೆಯಲ್ಲಿರುವ ಎಲ್ಲ 224 ಶಾಸಕರ ಮೇಲೆ ತನಿಖೆಯಾಗಿ ಸತ್ಯ ಹೊರಬರಲಿ. ನಾನು ಬಹಿರಂಗ ಸವಾಲು ಹಾಕುತ್ತಿದ್ದೇನೆ.”
ಆಡಳಿತ ಪಕ್ಷವೇ ಬೇಸ್ತು
ಸದನದ ಹೊರಗೆ ಸುಧಾಕರ್ ಕೊಟ್ಟ ಈ ಹೇಳಿಕೆ ಪ್ರತಿಪಕ್ಷ ಶಾಸಕರನ್ನಷ್ಟೇ ಅಲ್ಲದೆ ಆಡಳಿತ ಪಕ್ಷದವರನ್ನೂ ಬೆಚ್ಚಿಬೀಳುವಂತೆ ಮಾಡಿತು. ಅವರ ವಿದುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ವಿಷಯವೆಲ್ಲವೂ ಸಿಎಂ ಯಡಿಯೂರಪ್ಪ ಅವರ ಕಿವಿಗೂ ಬಿತ್ತು. ವಿಷಯ ಗೊತ್ತಾದ ಕೂಡಲೇ ಯಡಿಯೂರಪ್ಪ ಅವರೂ ಸಿಡಿಮಿಡಿಗೊಂಡಿದ್ದಾರೆ. ಇನ್ನು; ಹೇಳಿಕೆ ಕೊಡುವ ಭರದಲ್ಲಿ ಸುಧಾಕರ್ ತಮ್ಮ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಫುಲ್ ಗರಂ ಆಗಿಬಿಟ್ಟರು.
ಮತ್ತೊಂದೆಡೆ ಸದನದಲ್ಲಿ ಸಿ.ಡಿ. ರಗಳೆ ನಡೆಯುತ್ತಿರುವಾಗ ಆಡಳಿತ ಪಕ್ಷಕ್ಕೆ ದನಿಯಾಗಿದ್ದವರು ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ. ಜೆಡಿಎಸ್ ಮೌನಕ್ಕೆ ಶರಣಾಗಿದ್ದರೂ ಕಾಂಗ್ರೆಸ್ ಕಡೆಯಿಂದ ಸಿದ್ದರಾಮಯ್ಯ, ರಮೇಶ್ ಕುಮಾರ್ ಬಿಟ್ಟ ಬಾಣಗಳಿಗೆ ಆಡಳಿತ ಪಕ್ಷದಿಂದ ಬ್ಯಾಕ್‌ಫೈರ್ ಸಾಧ್ಯವಾಗಲಿಲ್ಲ. ಇದೆಲ್ಲಕ್ಕೂ ಬಿಜೆಪಿ ತನ್ನದೇ ಆದ ಕಾರ್ಯಸೂಚಿ ಹೊಂದಿದೆ ಎನ್ನುವುದು ಆ ಪಕ್ಷದ ಮುಖ್ಯ ಮೂಲವೊಂದು ಹೇಳುವ ಮಾತು.
ನ್ಯಾಯಾಲಕ್ಕೆ ಮೊರೆ ಹೋಗಿರುವ ಆರು ಸಚಿವರು ರಾಜೀನಾಮೆ ನೀಡಬೇಕು ಹಾಗೂ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಬೇಕು ಹಾಗೂ ಇಡೀ ಪ್ರಕರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂಬ ಒತ್ತಾಯದ ನಡುವೆಯೇ ಕಲಾಪ ಕಳೆಯಿತಾದರೂ ಹೆಚ್ಚು ಮಾತನಾಡಿದ್ದು ವಲಸಿಗರು ಮಾತ್ರ. ಬಿಜೆಪಿ ಮೂಲ ನಿವಾಸಿಗಳಲ್ಲಿ ಮುಖ್ಯರು ಎನಿಸಿಕೊಂಡವರೆಲ್ಲ ಸಿಡಿ ಮತ್ತು ವಲಸಿಗರ ರಾಡಿ ಕಡೆ ಮೂಗು ತೂರಿಸಲೇ ಇಲ್ಲ.
ಇದೆಲ್ಲವನ್ನೂ ನೋಡುತ್ತಿದ್ದರೆ ಬಿಜೆಪಿಯೇ ವಲಸಿಗರಿಂದ ಅಂತರ ಕಾಯ್ದುಕೊಳ್ಳುತ್ತಿದೆಯಾ ಅಥವಾ ವಲಸಿಗರೇ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಆರ್.ಟಿ.ವಿಠ್ಠಲಮೂರ್ತಿ.
ಇನ್ನು; ಸಿಕೆನ್ಯೂಸ್ ನೌ ಜತೆ ಮಾತನಾಡಿದ ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದು ಹೀಗೆ; “ಡಾ.ಸುಧಾಕರ್ ಅವರು ೨೨೪ ಶಾಸಕರ ವಿರುದ್ಧ ತನಿಖೆ ನಡೆಸುವಂತೆ ಹೇಳಿಕೆ ನೀಡಿದ್ದು ಅನಪೇಕ್ಷಿತ. ಅನೈತಿಕತೆ, ಅಕ್ರಮ ಸಂಬಂಧ ಇಂಥ ಶಬ್ದಗಳೆಲ್ಲ ಬಿಜೆಪಿಗೆ ಆಗಿಬರುವುದಿಲ್ಲ. ಇನ್ನು, ಸಿ.ಡಿ. ವಿಚಾರ ಇರಬಹುದು ಅಥವಾ ಆರು ಸಚಿವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಿರಬಹುದು, ಇದಕ್ಕೆ ಪಕ್ಷ ಹೊಣೆಯಲ್ಲ. ಪಕ್ಷಕ್ಕೆ ಇದನ್ನು ಸಹಿಸಿಕೊಳ್ಳಲೂ ಸಾಧ್ಯವಿಲ್ಲ.” ನನ್ನ ಹೆಸರು ಬರೆಯಬೇಡಿ. ಸುಮ್ಮನೆ ರಗಳೆ ಏಕೆ ಎಂದು ಹೇಳಲು ಅವರು ಮರೆಯಲಿಲ್ಲ.
ಹಾಗೆಯೇ ಮತ್ತೊಬ್ಬರು ಮುಖ್ಯ ಮುಖಂಡರು ಹೇಳುವಂತೆ; “ಕಾಂಗ್ರೆಸ್ ಮತ್ತು ಬಿಜೆಪಿ ಬಿಟ್ಟು ಬಿಜೆಪಿಗೆ ಬಂದ ಎಲ್ಲರೂ ತಾವಿರುವ ಪಕ್ಷದ ರೀತಿ-ರಿವಾಜುಗಳನ್ನು ಪಾಲಿಸಬೇಕು. ಅವುಗಳಿಗೆ ಬದ್ಧವಾಗಿರಬೇಕು. ಅದನ್ನು ಹೊರತುಪಡಿಸಿ ಅವರಿನ್ನೂ ಮೂಲಪಕ್ಷಗಳ ಮುಖಂಡರಂತೆ ವರ್ತನೆ ಮಾಡುತ್ತಿದ್ದಾರೆ. ನೋಡುತ್ತಿದ್ದರೆ ಅವರೇ ಕಮಲ ಪಾಳೆಯದಿಂದ ದೂರ ಸರಿಯುತ್ತಿದ್ದಾರೆನೋ ಎನಿಸುತ್ತಿದೆ” ಎನ್ನುತ್ತಾರೆ.
ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ, ವಲಸಿಗರಲ್ಲಿ ಕೆಲವರು ಯಡಿಯೂರಪ್ಪ, ಬಿ.ಎಲ್.ಸಂತೋಷ್ ಅವರನ್ನು ಕ್ರಾಸ್ ಮಾಡಿ ಹೈಕಮಾಂಡ್ ಜತೆ ವ್ಯವಹರಿಸಲು ಮುಂದಾಗಿರುವುದು ಪಕ್ಷದ ಮೌನಕ್ಕೆ ಕಾರಣ. ರಮೇಶ್ ಜಾರಕಿಹೊಳಿ ಮಾತೆತ್ತಿದರೆ ದಿಲ್ಲಿ ಅಂಗಳದಲ್ಲಿ ವಾರಕ್ಕೆರಡು ಬಾರಿ ಪ್ರತ್ಯಕ್ಷರಾಗಿಬಿಡುತ್ತಿದ್ದರು. ಇನ್ನೂ ಒಂದಿಬ್ಬರು ಇದೇ ಚಾಳಿ ಬೆಳೆಸಿಕೊಂಡಿದ್ದಾರೆ. ಇದು ರಾಜ್ಯ ಘಟಕಕ್ಕೆ ಹಾಗೂ ಹಿರಿಯ ಮೂಲ ನಿವಾಸಿ ಸಚಿವರಿಗೆ ಅಸಮಾಧಾನ ಉಂಟು ಮಾಡಿದೆ.
ಇದು ಬಿಟ್ಟರೆ, ವಲಸಿಗರು ಯಾವತ್ತಿದ್ದರೂ ವಲಸಿಗರೇ. ಅವರು ಇನ್ನೊಂದು ಪಕ್ಷಕ್ಕೆ ಕೈಕೊಟ್ಟು ಬಂದವರು ಬಿಜೆಪಿಗೆ ಕೈಕೊಡುವುದಿಲ್ಲ ಎಂಬ ಖಾತರಿ ಏನು? ಎನ್ನುವ ಪ್ರಶ್ನೆ ಪಕ್ಷದ ಹುರಿಯಾಳುಗಳನ್ನು ಕಾಡುತ್ತಲೇ ಇದೆ. ಈ ಕಾರಣಕ್ಕೆ ವಲಸಿಗರ ಕ್ಷೇತ್ರಗಳಲ್ಲಿ ಪರ್ಯಾಯ ನಾಯಕತ್ವವನ್ನು ಬೆಳೆಸಲು ಪಕ್ಷ ಈಗಾಗಲೇ ಕೆಲಸ ಶುರು ಮಾಡಿದೆ. ಪಕ್ಷದ ಕಟ್ಟಳೆಗಳನ್ನು ಕ್ರಾಸ್ ಮಾಡುತ್ತಿರುವ ಇವರನ್ನು ಸಹಿಸಲು ಪಕ್ಕಕ್ಕಂತೂ ಇಷ್ಟವಿಲ್ಲ ಎನ್ನುತ್ತಾರೆ ವಿಠ್ಠಲಮೂರ್ತಿ.
ಈ ಎಲ್ಲ ಅಂಶಗಳನ್ನಿಟ್ಟುಕೊಂಡು ನೋಡಿದರೆ ಬಿಜೆಪಿಯು ವಲಸಿಗರಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಮೊದಲು ಸಮರ್ಥಿಸಿಕೊಂಡ ಸುಧಾಕರ್, ನಂತರ ವಿಷಾದ
ಇನ್ನೊಂದೆಡೆ ತಮ್ಮ ಹೇಳಿಕೆಯನ್ನು ಸಚಿವ ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. “ನನ್ನ ಹೇಳಿಕೆ ಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು .
ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ .
ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ.” ಎಂದು ಟ್ವೀಟ್ ಮಾಡಿದ್ದಾರೆ ಅವರು.
ಸದನದ ಹೊರಗೆ ನಡೆದ ಈ ಪ್ರಹಸನದ ನಂತರ ಅಸೆಂಬ್ಲಿಯಲ್ಲಿ ಮಧ್ಯಾಹ್ನದ ನಂತರ ಸುಧಾಕರ್ ಹೇಳಿಕೆಯೇ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಂತೂ ಸುಧಾಕರ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷೆಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.
ಮತ್ತೊಂದೆಡೆ ತಮ್ಮ ಹೇಳಿಕೆ ಎಲ್ಲೆಮೀರಿ ಎಲ್ಲೆಲ್ಲೋ ಕಂಪನ ಉಂಟು ಮಾಡುತ್ತಿದೆ ಎಂಬುದು ಅರಿವಿಗೆ ಬರುತ್ತಲೇ ಸುಧಾಕರ್ ಟ್ವಿಟರ್ ಮೂಲಕ ವಿಷಾದವನ್ನೂ ವ್ಯಕ್ತಪಡಿಸಿದರು.
ಈ ವಿಷಾದದ ನಂತರವೂ ಬಿಜೆಪಿ ಮೌನಕ್ಕೆ ಶರಣಾಗಿತ್ತೆ ಹೊರತು ಸುಧಾಕರ್ ಪರವಾಗಿ ಆಗಲಿ ಅಥವಾ ಸಿ.ಡಿ. ಪ್ರಕರಣದ ವಿಷಯದಲ್ಲಿ ರಮೇಶ್ ಜಾರಕಿಹೊಳಿ ಪರವಾಗಿ ಆಗಲಿ, ಇಲ್ಲವೇ ಆರು ಸಚಿವರ ಪರವಾಗಿ ಆಗಲಿ ಬ್ಯಾಟಿಂಗ್ ಮಾಡಲಿಲ್ಲ.
ಸ್ಪೀಕರ್‌ಗೆ ಕಾಂಗ್ರೆಸ್ ಪತ್ರ
ಇನ್ನೊಂದೆಡೆ ಮಧ್ಯಾಹ್ನದ ನಂತರ ಅಸೆಂಬ್ಲಿಯಲ್ಲಿ ಸುಧಾಕರ್ ಮೇಲೆ ಮುಗಿಬಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷವು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು, ಸುಧಾಕರ್ ಮಾಡಿರುವ ಆರೋಪ ಹಾಗೂ ಮಾಡಿರುವ ಬಹಿರಂಗ ಸವಾಲಿನ ಬಗ್ಗೆ ತನಿಖೆ ನಡೆಸಲು ಕೋರಿದೆ. ಇನ್ನೊಂದೆಡೆ ಸದನದಲ್ಲಿಯೇ ಸಚಿವ ಸುಧಾಕರ್ ರಾಜೀನಾಮೆಗೆ ಒತ್ತಾಯ ಮಾಡಿದ ಸಿದ್ದರಾಮಯ್ಯ ಸದನದ ಹೊರಗೂ ಇದೇ ಡಿಮಾಂಡ್ ಮಾಡಿದರು.