- REVIEW
ಇರಾಕ್ ದೇಶವನ್ನು ಹೆಚ್ಚೂಕಮ್ಮಿ 24 ವರ್ಷ ಅನಭಿಷಕ್ತ ದೊರೆಯಾಗಿ ಆಳಿದ ಸದ್ದಾಂ ಹುಸೇನ್ 2003 ಏಪ್ರಿಲ್ 9ರಂದು ಅಕ್ಷರಶಃ ರೋಡಿಗೆ ಬಿದ್ದ. ಅಮೆರಿಕದ ಸೇನೆ ಎದುರು ಸೋತು ಜೀವ ಅಂಗೈಯ್ಯಲ್ಲಿಟ್ಟುಕೊಂಡು ಪಲಾಯನ ಮಾಡಿದ್ದ ಆ ವ್ಯಕ್ತಿ, ಥೇಟ್ ನಿರ್ಗತಿಕನಂತೆ ಅದೇ ವರ್ಷ ಡಿಸೆಂಬರ್ 3ರಂದು ಅಮೆರಿಕ ಪಡೆಗಳಿಗೆ ಸಿಕ್ಕಿಬಿದ್ದ.
ಆಮೇಲೆ ಆತನ ವಿಚಾರಣೆ ಎಂಬ ಜಗನ್ನಾಟಕ, ನಂತರ ನೇಣಿಗೆ ಹಾಕಿದ್ದು ಎಲ್ಲ ನಡೆಯಿತು. ಜೈವಿಕ ಅಸ್ತ್ರಗಳ ನೆಪ ಹೇಳಿ ಇರಾಕಿನ ಮೇಲೆ ಮುಗಿಬಿದ್ದ ಅಮೆರಿಕಕ್ಕೆ ಒಂದು ಸಣ್ಣ ಜೈವಿಕ ಗುಳಿಗೆಯೂ ಅಲ್ಲಿ ಸಿಗಲಿಲ್ಲ. ಆದರೆ, ಸದ್ದಾಂನನ್ನು ಮುಗಿಸುವ ಅದರ ಉದ್ದೇಶ ಈಡೇರಿತು ಮಾತ್ರವಲ್ಲ, ಇಡೀ ಕೊಲ್ಲಿ ಮೇಲೆ ಇಸ್ರೇಲ್ ಜತೆಗೂಡಿ ಆಧಿಪತ್ಯ ಸ್ಥಾಪಿಸಬೇಕೆಂಬ ಅದರ ಕನಸು ನನಸಾಯಿತು. ಇರಲಿ.
ಈಗ ಸದ್ದಾಂ ಬಗ್ಗೆ ಬರೆಯುವ ಅಗತ್ಯವೇನೂ ಇರಲಿಲ್ಲ. ಇಲ್ಲ ಕೂಡ. 16 ಜುಲೈ 1979ಕ್ಕೆ ಇರಾಕಿನ ಅಧಿಕಾರ ಹಿಡಿದ ಸದ್ದಾಂ 9 ಏಪ್ರಿಲ್ 2003ರವರೆಗೂ ಆಳಿದ. ಹಾಗೆನ್ನುವುದಕ್ಕಿಂತ ಇರಾಕನ್ನು ಹಾಳು ಮಾಡಿದ ಅಂತಲೂ ಹೇಳುವವರು ಹೆಚ್ಚೇ ಇದ್ದಾರೆ. ಪ್ರಜಾಪ್ರಭುತ್ವದ ಬೇರು ಬಲವಾಗಿ ಬೇರೂರುತ್ತಿದ್ದ ಕಾಲದಲ್ಲಿ ಗದ್ದುಗೆ ಹಿಡಿದುಬಿಟ್ಟ ಈ ವ್ಯಕ್ತಿ ಎರಡೂವರೆ ದಶಕದ ಕಾಲ ಪ್ರಜಾಪ್ರಭುತ್ವ ಎಂಬ ಶಬ್ದಕ್ಕೂ ತಾವಿಲ್ಲದಂತೆ ಮಾಡಿಬಿಟ್ಟಿದ್ದ. ಅಷ್ಟೂ ವರ್ಷ ಸೊಂಟದ ಬೆಲ್ಟಿಗೆ ಪಿಸ್ತೂಲು ಸಿಗಿಸಿಕೊಂಡೇ ಆಡಳಿತ ನಡೆಸಿಬಿಟ್ಟ. ಹಾಗೆಯೇ, ಬಿಗಿ ಆಡಳಿತಕ್ಕೂ ಹೆಸರಾಗಿದ್ದ ಸದ್ದಾಂ ಕ್ರೂರತ್ವದಿಂದಲೇ ಕುಖ್ಯಾತನಾಗಿದ್ದ. ಆತನ ಹಿರಿ ಮಗ ಉದಯ್ ಹುಸೇನ್ ಪರಮಾತಿ ಪರಮ ಕ್ರೂರಿ ಆಗಿದ್ದ ಎಂಬುದರಲ್ಲಿ ಗುಟ್ಟೇನಿಲ್ಲ. ಇರುವುದರಲ್ಲಿ ಕಿರಿಯ ಮಗ ಕೂಸೆ ಕೊಂಚ ವಾಸಿ. ಉಳಿದಂತೆ ಹೆಣ್ಣು ಮಕ್ಕಳದ್ದು ಸಮಸ್ಯೆ ಇರಲಿಲ್ಲ. ಅದು ಬಿಟ್ಟು ರಾಜಕೀಯ ವಿರೋಧಿಗಳ ಹತ್ಯೆ, ಜೈಲಿಗಟ್ಟುವುದು ಸರ್ವೇ ಸಾಮಾನ್ಯವಾಗಿದ್ದ ಸಂಗತಿಗಳು. ಅನೇಕ ರಾಜಕೀಯ ವಿರೋಧಿಗಳು ಅಮೆರಿಕ, ಯುರೋಪ್‌ನಲ್ಲಿ ತಲೆಮರೆಸಿಕೊಂಡಿದ್ದರು. ಸದ್ದಾಂ ಬದುಕಿರುವ ತನಕ ಅವರೆಲ್ಲ ಬಾಗ್ದಾದಿನತ್ತ ನೋಡಿರಲಿಲ್ಲ.
ಇಂಥ ಸದ್ದಾಂ ಬಗ್ಗೆಯೂ ಸಕಾರಾತ್ಮಕ ಸಂಗತಿಗಳನೇಕ ಕೇಳಿದ್ದೆ. ಭಾರತವೆಂದರೆ ಆ ವ್ಯಕ್ತಿಗೆ ಇಷ್ಟ. ಪಾಕಿಸ್ತಾನದ ಬಗ್ಗೆ ಒಲವಿರದ ನಾಯಕ. ಇಡೀ ಅರಬ್ ಜಗತ್ತಿನಲ್ಲಿ ಭಾರತದ ಪರ ಮಾತನಾಡುತ್ತಿದ್ದ ಏಕೈಕ ಅಧ್ಯಕ್ಷ. ಅಷ್ಟೇ ಅಲ್ಲದೆ, ರಿಯಾಯಿತಿ ಬೆಲೆಯಲ್ಲಿ ಭಾರತಕ್ಕೆ ಕಚ್ಛಾತೈಲ ಪೂರೈಕೆ ಮಾಡುತ್ತಿದ್ದ ದೇಶವೂ ಇರಾಕ್ ಆಗಿತ್ತು. ನಮ್ಮ ದೇಶದ ಅನೇಕ ನಾಯಕರು ಸದ್ದಾಂ ಭೇಟಿ ಮಾಡಿದ್ದರು ಹಾಗೂ ಭಾರತ-ಇರಾಕ್ ನಡುವೆ ಸೌಹಾರ್ದ ಸಂಬಂಧ ಇತ್ತು. (1990ರ ಇರಾಕ್-ಅಮೆರಿಕ ಕೊಲ್ಲಿ ಯುದ್ಧದ ವೇಳೆ ಅಮೆರಿಕ ಯುದ್ಧ ವಿಮಾನಗಳಿಗೆ ಭಾರತ ರಹಸ್ಯವಾಗಿ ಇಂಧನ ತುಂಬಿಸಿ ಕಳಿಸಿದ್ದು, ಕೆಲ ವಿಮಾನ ನಿಲ್ದಾಣಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದು ಗುಟ್ಟಾಗೇನೂ ಇಲ್ಲ ಈಗ. ಆಗ ಚಂದ್ರಶೇಖರ್ ನಮ್ಮ ಪ್ರಧಾನಿ ಆಗಿದ್ದರು.)
ಇದೆಲ್ಲವನ್ನು ಎಲ್ಲರೂ ಬಲ್ಲರು ಅಥವಾ ಓದಿಯೇ ಇರುತ್ತಾರೆ. ಇಲ್ಲಿ ನಾನು ಬರೆಯಲು ಹೊರಟಿದ್ದು ಸದ್ದಾಂ ಕಥೆಯನ್ನಲ್ಲ, ಅಲ್ಲಿಲ್ಲಿ ಹೆಕ್ಕಿತೆಗೆದ ಅಥವಾ ನಾನೆಲ್ಲೋ ಓದಿದ್ದ ವಿಷಯಗಳನ್ನಲ್ಲ. ಹಿಟ್ಲರ್, ಮುಸೋಲಿನಿ, ಸ್ಟಾಲಿನ್, ಜಿಯಾ ಉಲ್ ಹಕ್, ಗಡಾಫಿ, ಸ್ಲೊಬೊಡನ್ ಮಿಲೋಶೆವಿಚ್, ಈಗಿನ ರಷ್ಯದ ವ್ಲಾದಿಮೀರ್ ಪುಟಿನ್, ಚೀನಾದ ಕ್ಸಿನ್‌ಪಿನ್ ಸೇರಿದಂತೆ ನನ್ನನ್ನು ಕಾಡುತ್ತಲೇ ಇರುವ ಸರ್ವಾಧಿಕಾರಿಗಳಲ್ಲಿ ಸದ್ದಾಂ ಹುಸೇನ್ ಕೂಡ ಒಬ್ಬರು. ಈ ಕುತೂಹಲದಲ್ಲಿ ನಾನು ನಿರಂತರವಾಗಿ ಓದುವುದು, ಗೂಗಲ್ ಮಾಡುವುದು, ಯುಟ್ಯೂಬಿಗೆ ಅಂಟಿ ಕೂರುವುದು ಹೆಚ್ಚು. ಹೀಗಿದ್ದಾಗ ಒಮ್ಮೆ ನನ್ನ ಕಣ್ಣಿಗೆ ಬಿದ್ದದ್ದೇ ಚಾನೆಲ್ 4 ತಯಾರಿಸಿದ್ದ ಸದ್ದಾಂ ಹುಸೇನ್ ಡಾಕ್ಯುಮೆಂಟರಿ saddam’s tribe. ಯುಟ್ಯೂಬ್ ವಾಲ್‌ನಲ್ಲಿ ಮೊದಲು ಅದು ಕಣ್ಣಿಗೆ ಬಿದ್ದಾಗ ನನಗೆ ಆಸಕ್ತಿ ಹುಟ್ಟಲಿಲ್ಲ. ಆದರೆ, ಕೊಂಚ ಹೊತ್ತಾದ ಮೇಲೆ ಆ ಡಾಕ್ಯುಮೆಂಟರಿ ವಿಡಿಯೋ ಮೇಲಿದ್ದ ತಂಬ್ಲೈನ್ ನನ್ನ ಗಮನವನ್ನು ಸೆಳೆಯಿತು. ಸದ್ದಾಂ ಸೇನೆಯ ಯಾವುದೋ ಅಜ್ಞಾತ ಅಧಿಕಾರಿಯೊಬ್ಬನ ಪಾತ್ರ ಮಾಡಿದ್ದ ಮಿರಿಮಿರಿ ಕರಿಮೀಸೆಯಿದ್ದ ಇಂಗ್ಲೀಷ್ ನಟನೊಬ್ಬನ ತಂಬ್ಲೈನ್ ನನ್ನ ಕುತೂಹಲಕ್ಕೆ ಕಾವು ಕೊಟ್ಟಿತು.
ಸದ್ದಾಂ ಪಾತ್ರದಲ್ಲಿ ಸ್ಟ್ಯಾನ್ಲಿ ಟೌನ್ಸ್ಯಾಂಡ್.
ಜಸ್ಟ್ ಕ್ಲಿಕ್ ಮಾಡಿದೆ! ಒಂದು ಗಂಟೆ 35 ನಿಮಿಷ 20 ಸೆಕೆಂಡುಗಳ, ಹಾಲಿವುಡ್ ಸಿನಿಮಾದಷ್ಟು ಉದ್ದದ ಈ ಡಾಕ್ಯುಮೆಂಟರಿ ಅದ್ಹೇಗೆ ಮುಗಿಯುತೋ ಗೊತ್ತಾಗದಷ್ಟು ನನ್ನನ್ನು ಕಟ್ಟಿಹಾಕಿಬಿಟ್ಟಿತು.
ಸದ್ದಾಂ ಹುಸೇನ್, ಆತನ ಪತ್ನಿ, ಮಕ್ಕಳು, ಜನರಲ್‌ಗಳು, ಪ್ರಜೆಗಳು ಹೇಗಿರುತ್ತಾರೆ? ಎಂಬುದನ್ನು ಹೇಳಬೇಕಿಲ್ಲ. ಯುಟ್ಯೂಬ್ ಜಾಲಾಡಿದರೆ ಅನೇಕ ವಿಡಿಯೋಗಳು ಸಿಗುತ್ತವೆ. ಆದರೆ, ಸದ್ದಾಂನಲ್ಲಿ ಪರಕಾಯ ಪ್ರವೇಶ ಮಾಡಿ ನಟಿಸಿರುವ ಆ ಡಾಕ್ಯುಮೆಂಟರಿ ನಟ ನನಗೆ ಸದ್ದಾಂಗಿಂತಲೂ ಹೆಚ್ಚು ಕಾಡಿಬಿಟ್ಟ. ಐರೀಶ್ ಮೂಲದ ಆ ನಟನ ಹೆಸರು ಸ್ಟ್ಯಾನ್ಲಿ ಟೌನ್ಸ್ಯಾಂಡ್. ಬ್ರಿಟೀಷ್ ರಂಗಭೂಮಿಯಲ್ಲಿ ಬಹುದೊಡ್ಡ ಹೆಸರು. ಅಭಿನಯದಿಂದಲೇ ಅಗಾಧವಾಗಿ ಆವರಿಸಿಕೊಳ್ಳುವ, ಕ್ಷಣಕ್ಷಣಕ್ಕೂ ಬೆಕ್ಕಸ ಬೆರಗು ಮೂಡಿಸುವ ನಟವಿರಾಟ್ ರೂಪ ಆತನದ್ದು.
ಇಡೀ ದೇಹದಲ್ಲಿರುವ; ಅಂದರೆ ಕಣ್ಣಿಗೆ ಕಾಣುವ ಆತನ ಪ್ರತಿ ಅವಯವವೂ ಅಭಿನಯಿಸುತ್ತಿದೆಯೇನೋ ಎನ್ನುವಷ್ಟು ಅಭಿನಯ ತೀವ್ರತೆ ಆತನದ್ದು. ಸ್ಟ್ಯಾನ್ಲಿ ಕಣ್ಣುಗಳಲ್ಲಿ ಉಕ್ಕಿ ಹರಿಯುವ ಗಜ ಗಾಂಭೀರ್ಯ, ಆತನ ಧ್ವನಿಯ ತೂಕ, ಭಾವನೆಗಳ ಪ್ರಖರತೆ ಕ್ಷಣಮಾತ್ರದಲ್ಲಿ ಪ್ರೇಕ್ಷಕರನ್ನು ಕಟ್ಟಿ ಹಾಕಿ ಕೂರಿಸಿಬಿಡುತ್ತದೆ. ಸದ್ದಾಂ ಹಾಗಿದ್ದನೋ ಇಲ್ಲವೋ ಗೊತ್ತಿಲ್ಲ. ಆದರೆ, ಸ್ಟ್ಯಾನ್ಲಿ ಅಭಿನಯವನ್ನು ನೋಡಿದರೆ ಸದ್ದಾಂ ಹೀಗೆಲ್ಲ ಇದ್ದನಾ? ಎಂದು ಅನಿಸದೆ ಇರದು. ಒಂದು ನೈಜ ಪಾತ್ರಕ್ಕೆ ನಟನೊಬ್ಬ ಈ ಮಟ್ಟಕ್ಕೆ ನ್ಯಾಯ ಮಾಡಲು ಸಾಧ್ಯವೇ?
ಟಿವಿ ಪರಧೆಯಲ್ಲಿ ಸ್ಟ್ಯಾನ್ಲಿ ಕಾಣುತ್ತಿದ್ದರೆ, ಆತನ ಸಿಡಿಗುಂಡಿನಂಥ ಡೈಲಾಗ್‌ಗಳು ಎದೆಗೆ ಬಂದು ಬೀಳುತ್ತವೆ. ಆತನ ಕಣ್ಣೋಟಗಳು ಈಟಿಯಂತೆ ತಿವಿಯುತ್ತವೆ. ನಡೆದರೆ, ನಿಂತರೆ, ನಕ್ಕರೆ, ಸಿಟ್ಟಾದರೆ, ಸಿಗಾರ್ ಹಿಡಿದು ಗಾಢವಾಗಿ ಧಂ ಎಳೆದರೆ.. ಫ್ರೇಂ ಟೂ ಫ್ರೇಂ ನೋಡುತ್ತಿದ್ದರೆ ಈತ ನಟನೋ, ನಟರಾಕ್ಷಸನೋ ತಿಳಿಯದಾಗಿಬಿಡುತ್ತದೆ.
ಸೀನ್ ಬೈ ಸೀನ್ ನೋಡುತ್ತಾ ಹೋದರೆ ಉಳಿದೆಲ್ಲ ಪಾತ್ರಗಳು ಗಟ್ಟಿಯಾಗಿ ಸೆಳೆಯುತ್ತವೆಯಾದರೂ, ಹೃದಯದಲ್ಲಿ ಉಳಿಯೋದು ಸ್ಟ್ಯಾನ್ಲಿ ಅಭಿನಯ ಮಾತ್ರವೇ. ಮಗಳು ರಗಾದ್ (ಸದ್ದಾಂ ಪುತ್ರಿ) ಮೇಲಿನ ವಾತ್ಸಲ್ಯ, ಮೊಮ್ಮಕ್ಕಳ ಮೇಲಿನ ಕಾಳಜಿ-ವ್ಯಾಮೋಹ, ಅದೇ ಮಗಳ ಗಂಡನ ಮೇಲೆ ಅಪರಿಮಿತ ದ್ವೇಷ, ಅಂಥ ಪ್ರೀತಿಯ ಮಗಳ ಮಾತಿಗೆ ಲೆಕ್ಕಕೊಡದೆ ಆಕೆಯ ಗಂಡ ಮತ್ತವನ ಮನೆಯವರೆಲ್ಲರನ್ನೂ ತನ್ನ ಮೇಜರುಗಳಿಂದ ಗುಂಡಿಟ್ಟಿಸಿ ಕೊಲ್ಲಿಸುವುದು, ಮೊದಲ ಮಗ ಉದಯ್ ಹುಸೇನ್ʼನ ಅತಿಯಾದ ಕ್ರೂರ-ಹುಚ್ಚು ತಪ್ಪುಗಳನ್ನು ಸಹಿಸಲಾಗದೆ ಚಡಪಡಿಸುವುದು, ಅವನ ಮೇಲೆ ಪ್ರೀತಿಯನ್ನೂ ತೋರಿಸಲಾಗದ ಮತ್ತೂ ದ್ವೇಷವನ್ನೂ ಮಾಡಲಾಗದ ಸಂದಿಗ್ಧ ಅಸಹಾಯಕತೆ, ಹಂತಕರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ನರಳುತ್ತಿರುವ ಅದೇ ಮಗನನ್ನು ಕಂಡು ಬಿಕ್ಕಳಿಸುವ ಸಾಮಾನ್ಯ ಅಪ್ಪನಾಗಿ, ಮತ್ತೂ ಮರುಕ್ಷಣದಲ್ಲಿ ಸೇಡಿಗೆ ಹಂಬಲಿಸುವ ಸರ್ವಾಧಿಕಾರಿಯಾಗಿ.. ವ್ಹಾಹ್!! ಯಾರೇ ಆದರೂ ಸ್ಟ್ಯಾನ್ಲಿಗೆ ಫಿದಾ ಆಗಲೇಬೇಕು.
ರಗಾದ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಮಿಶೆಲ್ ಬೋನಾರ್ಡ್
ಇದಾದ ಮೇಲೆ ಇರಾಕ್-ಅಮೆರಿಕ ಯುದ್ಧದ ಕ್ಲೈಮ್ಯಾಕ್ಸ್, ಬಾಗ್ದಾದ್ ಮೇಲೆ ಬಾಂಬ್‌ಗಳ ಸುರಿಮಳೆ ಆಗುತ್ತಿದ್ದ ಕ್ಷಣದಲ್ಲಿ ಅರಮನೆ ತೊರೆಯುವ ದೃಶ್ಯ. ತನ್ನಿಂದಲೇ ಗಂಡನನ್ನು ಕಳೆದುಕೊಂಡ ಅಕ್ಕರೆಯ ಮಗಳು ಎದುರಾದಾಗ, ಅವಳನ್ನು ದಿಟ್ಟಿಸಿ ನೋಡಲಾಗದ ಸ್ಥಿತಿ, ಅದೇ ಮಗಳಿಗೆ “ಹೋಗಿ ಬರುತ್ತೇನೆ” ಎನ್ನುವ ತಂದೆ, “ಗುಡ್ ಬೈ ಅಪ್ಪ” ಎಂದು ನಿರ್ಭಾವುಕತೆಯಿಂದ ಹೇಳುವ ಮಗಳು… ಹಾಗೆ ಹೇಳುವಾಗ ಮುಖ ಹೊರಳಿಸುವ ಅದೇ ಮಗಳು, ಹೋಗುವಾಗ ಮಗಳನ್ನೇ ನೋಡಿಕೊಂಡು ಅಷ್ಟೇ ನಿರ್ಭಾವುಕತೆಯಿಂದ ಹೊರಟುಹೋಗುವ ಅಪ್ಪ.. ಅವನು ಎಂಥವನೇ ಆಗಿದ್ದರೂ ಅಪ್ಪನೆಂದರೆ ಅಪ್ಪನೇ ಅಲ್ಲವೇ? ಮಗಳು ಹೇಳಿದ್ದೆ ಕೊನೆ ʼಬೈʼ ಸದ್ದಾಂಗೆ. ಉಳಿದಂತೆ ನೇಣಿಗೆ ಹಾಕುವ ತನಕ ಯಾರೂ ʼಬೈʼ ಹೇಳಿದ್ದಿಲ್ಲ ಆತನಿಗೆ.
ಇಡೀ ದೃಶ್ಯದಲ್ಲಿ ಸ್ಟ್ಯಾನ್ಲಿ ಮತ್ತು ರಗಾದ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಮಿಶೆಲ್ ಬೋನಾರ್ಡ್ ನಟನೆ ಅಮೋಘ. ʼಅಮೋಘʼ ಎಂದರೆ ತೀರಾ ಸಣ್ಣ ಪದವಾದೀತು ಎಂದು ನನಗನಿಸುತ್ತಿದೆ.
ಕೊನೆಯದಾಗಿ; ಒಂದು ಬೆಳಗ್ಗೆ ಬಾಗ್ದಾದ್‌ನ ʼಕ್ಯಾಂಪ್ ಕಾಪರ್ʼ ಜೈಲಿನಲ್ಲಿ ತೆರೆದುಕೊಳ್ಳುವ ದೃಶ್ಯ. ವಕೀಲನೊಬ್ಬ ಎಂಟ್ರಿ ಕೊಡುತ್ತಾನೆ. “ನಿಮ್ಮ ಪರವಾಗಿ ನಿಮ್ಮ ಮಗಳು ರಗಾದ್ ಹೋರಾಟ ಮಾಡುತ್ತಿದ್ದಾಳೆ” ಎಂದು ವಕೀಲ ಹೇಳಿದಾಗ ಸದ್ದಾಂ (ಸ್ಟ್ಯಾನ್ಲಿ) ವ್ಯಕ್ತಪಡಿಸುವ ಭಾವನೆಗೆ ಅದ್ಹೇಗೆ ಅಕ್ಷರರೂಪ ಕೊಡಬೇಕೋ ತಿಳಿಯಲಿಲ್ಲ ನನಗೆ. “ನಿಮಗೆ ಹೆಚ್ಚು ಸಮಯ ಕೊಡಲು ಅಮೆರಿಕಕ್ಕೆ ಇಷ್ಟವಿಲ್ಲ” ಎನ್ನುವ ವಕೀಲನ ಮಾತು ಕೇಳುತ್ತಲೇ ಆ ಮನವಿ ಪತ್ರ ಓದಲು ಕನ್ನಡಕ ಹಿಡಿದು ಅದರ ಮೇಲೆ ಕಣ್ಣಾಡಿಸುತ್ತಲೇ ಎದುರಿನತ್ತ, ಐದಕ್ಕೆ ಹತ್ತು ಅಡಿ ಜಾಗದ ಕೋಣೆಯಲ್ಲಿ ಕಾಣದ ದಿಗಂತದತ್ತ ನೋಟ ಬೀರುವ ಆತನ (ಸದ್ದಾಂ) ದೃಷ್ಟಿಯಲ್ಲಿ ಆ ಮಗಳ ಮೇಲೆ ಆ ಗಜ ಗಾಂಭೀರ್ಯದ ಕಡಲಲ್ಲಿಯೂ ಉಕ್ಕುವ ಮಮತೆ.. ಅದ್ಭುತಃ!! ಹೀಗೆನ್ನದೆ ಇನ್ನೇನು ಬರೆಯುವುದು?
- Saddam’s Tribe ಲಿಂಕ್ ಇಲ್ಲಿದೆ. ಆಸಕ್ತರು ವೀಕ್ಷಿಸಬಹುದು.
ನನ್ನ ಮಟ್ಟಿಗೆ ಸದ್ದಾಂ ಸತ್ತು ಹೋಗಿರಬಹುದು. ಆದರೆ, ಆತನ ಪ್ರಭೆಯನ್ನು ಕೊಲ್ಲಿ ಕಣ್ಮರೆಗೊಳಿಸುವುದು ಸಾಧ್ಯವಿಲ್ಲವೇನೋ. ಬಹುಶಃ ಸ್ಟ್ಯಾನ್ಲಿಯ ನಟನೆ ನೋಡಿದರೆ ಈ ಮಾತು ಹೆಚ್ಚೆಚ್ಚು ಸತ್ಯ ಎಂದೆನಿಸುತ್ತದೆ.
ಉಳಿದಂತೆ; ಇತರೆ ತಾರೆಯರು, ನಿರ್ದೇಶಕ, ಕ್ಯಾಮೆರಾಮನ್, ಬ್ಯಾಂಗ್ರೌಂಡ್ ಸ್ಕೋರ್ ಇತ್ಯಾದಿಗಳ ಬಗ್ಗೆ ನನಗೆ ಬರೆಯಬೇಕೆನಿಸುತ್ತಿಲ್ಲ. ಎಲ್ಲವೂ, ಎಲ್ಲರೂ ಹೆಚ್ಚು ಎಂದರೆ ಹೆಚ್ಚೇ.
ಇದು ಸದ್ದಾಂ ಮಗಳೇ ಹೇಳಿರುವ ನೈಜ ಕಥೆ. ಈ ಡಾಕ್ಯುಮೆಂಟರಿ ಬಗ್ಗೆ ಚಾನೆಲ್ 4 ಡೈರೆಕ್ಷನ್ ಟೀಮ್ 2004ರ ಸುಮಾರಿಗೆ ಅನೇಕ ಸಲ ರಗಾದ್ ಜತೆ ಮಾತುಕತೆಯಾಡಿದ್ದಾನೆ. ಹೀಗಾಗಿ, ಸದ್ದಾಂ ಬಗ್ಗೆ ಬಂದಿರುವ ಡಾಕ್ಯುಮೆಂಟರಿ ಇತ್ಯಾದಿಗಳಲ್ಲಿ ಇದು ʼಸತ್ಯʼಕ್ಕೆ ಹತ್ತಿರದಲ್ಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ಅಂತಿಮವಾಗಿ ಬರೆದು ಮುಗಿಸುವುದಾದರೆ; ಕ್ರೂರತೆ, ಕೋಪ, ಕರುಣೆ, ದ್ವೇಷ, ಪುತ್ರ ವ್ಯಾಮೋಹ, ಅಸಹಾಯತೆ, ಅಪನಂಬಿಕೆ, ಆತ್ಮರತಿ, ಆಕ್ರಮಣಶೀಲತೆ. ಹೀಗೆ ಅನೇಕ ರೂಪಗಳಲ್ಲಿದ್ದ ಸದ್ದಾಂ ಹುಸೇನ್ ಎಂಬ ವಿಲಕ್ಷಣ ಸರ್ವಾಧಿಕಾರಿಯನ್ನು ಸ್ಟ್ಯಾನ್ಲಿ ಎಂಬ ಈ ದೈತ್ಯ ಪ್ರತಿಭೆ ಅಸಾಧಾರಣವಾಗಿ ಆವರಿಸಿಕೊಂಡಿದೆ ಎಂದಷ್ಟೇ ಹೇಳಿ ಈ ಬರಹವನ್ನು ಕನ್‌ಕ್ಲೂಡ್ ಮಾಡಬಹುದು.
***
Saddam Hussein photo courtesy: Wikipedia I other screenshots from Saddam’s Tribe