- ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಆರೋಪಿಗಳು ಸಿಕ್ಕಿದ್ದಾರೆ. ಆ ಮಾಹಿತಿಯನ್ನು ಎಸ್‌ಪಿ ಹಂಚಿಕೊಂಡಿದ್ದಾರೇನೋ ಸರಿ. ಆದರೆ, ಆ ಕೊಲೆಯ ಮಗ್ಗುಲುಗಳು ಇಷ್ಟೇನಾ? ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆ ಆಗುತ್ತಿರುವ ಸಂಗತಿ ಇದು.
ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವುಲನಾಗೇನಹಳ್ಳಿ ಗ್ರಾಮಕ್ಕೆ ಸೇರಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಮಾಂಜನೇಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ತಮ್ಮ ಕಚೇರಿಯಲ್ಲಿ ಗುರುವಾರ ಈ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್; “ಭೂ ವಿವಾದ ಹಾಗೂ ಹಳೆಯ ವೈಷಮ್ಯದಿಂದ ಈ ಹತ್ಯೆ ನಡೆದಿದೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮಾಂಜನೇಯ ಪತ್ನಿ ಮಂಜುಳಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದರು.
ಒಂಟು ಎಂಟು ಜನ ಈ ಕೊಲೆಯಲ್ಲಿ ಭಾಗಿಯಾಗಿದ್ದು, ಆ ಪೈಕಿ ಒಬ್ಬ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋದ ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ಕೊಲೆಗೆ ಕಾರಣವಾಗಿದ್ದಾದರೂ ಏನು?
ಇಡೀ ಘಟನೆ ಬಗ್ಗೆ ಮಿಥುನ್ ಕುಮಾರ್ ಅವರು ಬ್ರೀಫ್ ಮಾಡಿದ್ದು ಹೀಗೆ:
ಆವುಲನಾಗೇನಹಳ್ಳಿ ಗ್ರಾಮಕ್ಕೆ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ರಾಮಾಂಜನೇಯಗೆ ಸೇರಿದ ಜಮೀನಿತ್ತು. ಅದಕ್ಕೆ ಸಂಬಂಧಿಸಿದಂತೆ ಪಕ್ಕದ ಜಮೀನಿನವರ ಜತೆ ವಿವಾದ ಕೂಡ ಇರುತ್ತದೆ. ಸಾಕಷ್ಟು ಸಲ ಗಲಾಟೆಯಾಗಿ ಪೊಲೀಸ್ ಠಾಣೆಯಲ್ಲಿ ಕೇಸುಗಳು ದಾಖಲಾಗಿರುತ್ತವೆ. ಪರಸ್ಪರ ದೂರು ಪ್ರತಿದೂರು ನೀಡಲಾಗಿರುತ್ತದೆ. ಆಗ ರಾಮಾಂಜನೇಯ ಮೇಲೆ ಹಾಗೂ ಈಗ ಬಂಧನಕ್ಕೊಳಗಾಗಿರುವ ಆರೋಪಿಗಳ ಮೇಲೂ ಕೇಸುಗಳು ದಾಖಲಾಗಿರುತ್ತವೆ.
ಇದೇ ಕೇಸಿಗೆ ಸಂಬಂಧಿಸಿದಂತೆ ಘಟನೆ ನಡೆದ ದಿನ ಗುಡಿಬಂಡೆ ಪೊಲೀಸ್ ಠಾಣೆಗೆ ರಾಮಾಂಜನೇಯ, ಆತನ ಪತ್ನಿ ಮಂಜುಳಮ್ಮ ಹಾಗೂ ಅವರ ಮಗ ಹಾಜರಾಗಿರುತ್ತಾರೆ. ಈ ಕೇಸಿನ ಕೆಲಸ ಮುಗಿಸಿಕೊಂಡು ಅಲ್ಲಿಂದ ಸಂಜೆ ನಾಲ್ಕೂವರೆ-ಐದು ಗಂಟೆ ಹೊತ್ತಿಗೆ ಊರಿಗೆ ವಾಪಸ್ ಬಂದು ಮಗನನ್ನು ಮನೆಯಲ್ಲಿ ಬಿಟ್ಟು ಗಂಡ-ಹೆಂಡತಿ ಇಬ್ಬರೂ ಜಮೀನಿನ ಬಳಿ ಹೋಗುತ್ತಾರೆ. ಅಷ್ಟೊತ್ತಿಗೆ ಅಲ್ಲಿ ನಾಲ್ಕು ಜನ ಇರ್ತಾರೆ. ರಾಘವೇಂದ್ರ, ಅವನ ಅಣ್ಣ ಪ್ರಸನ್ನ, ಅವರ ತಂದೆ ಅಮರ ನಾರಾಯಣಾಚಾರಿ ಹಾಗೂ ದಿಲೀಪ್ ಅಲ್ಲಿದ್ದವರು. ಈ ದಿಲೀಪ ಅನ್ನುವವ ಪ್ರಸನ್ನನ ಸ್ನೇಹಿತ.
ಇಷ್ಟು ಜನ ರಾಮಾಂಜನೇಯ ಬರುವುದಕ್ಕೇ ಕಾಯ್ಕೊಂಡು ಇರ್ತಾರೆ. ಅವರಿಬ್ಬರು ಬಂದ ತಕ್ಷಣವೇ ತಕರಾರು ಶುರುವಾಗಿ ಎರಡೂ ಕಡೆಯವರ ನಡುವೆ ಚಿಕ್ಕದಾಗಿ ಗಲಾಟೆ ಶುರುವಾಗುತ್ತದೆ. ಆಗ ಪ್ರಸನ್ನ, ಅರವಿಂದ ಎಂಬಾತನಿಗೆ ಫೋನ್ ಮಾಡುತ್ತಾನೆ. ಸ್ವಲ್ಪ ಹೊತ್ತಿನಲ್ಲಿಯೇ ಎರಡು ಬೈಕುಗಳಲ್ಲಿ ಅರವಿಂದನ ಜತೆ ಇನ್ನೂ ಮೂವರು ಸ್ಥಳಕ್ಕೆ ಬರುತ್ತಾರೆ. ಅರ್ಧ ದಾರಿಗೆ ಅವರೆಲ್ಲರನ್ನೂ ಪ್ರಸನ್ನ ಕರೆದುಕೊಂಡು ಬರುತ್ತಾನೆ. ಅವರಲ್ಲಿ ಅರವಿಂದ ಸೇರಿ ಚಿಕ್ಕ ಮಂಜ, ದೊಡ್ಡ ಮಂಜ, ಗಿರೀಶ್ ಎಂಬುವವರು ಇರುತ್ತಾರೆ. ಬರುವಾಗಲೇ ಇವರು ಮೂರು ಮಚ್ಚುಗಳನ್ನು ತಂದಿರುತ್ತಾರೆ. ಇವರೆಲ್ಲರೂ ರಾಮಾಂಜನೇಯ ಮೇಲೆ ಮಚ್ಚುಗಳಿಂದ ದಾಳಿ ನಡೆಸುತ್ತಾರೆ. ಅಡ್ಡಿಪಡಿಸಲು ಹೋದ ರಾಮಾಂಜನೇಯನ ಪತ್ನಿ ಮಂಜುಳಮ್ಮ ಮೇಲೂ ದಾಳಿಯಾಗಿ ಆಕೆ ತೀವ್ರವಾಗಿ ಗಾಯಗೊಳ್ಳುತ್ತಾರೆ. ಆಕೆಯ ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿ ಈಗ ಸರ್ಜರಿಯೂ ಆಗಿದೆ.
ಇಷ್ಟಕ್ಕೂ ರಾಮಾಂಜನೇಯ ಹಿನ್ನೆಲೆ ಏನು?
ಈ ಬಗ್ಗೆ ಮಿಥುನ್ ಕುಮಾರ್ ಅವರು ಹೇಳಿದ್ದಿಷ್ಟು. “ರಾಮಾಂಜನೇಯ ಸರಕಾರಿ ನೌಕರ ಆಗಿರುತ್ತಾನೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಾ ಇರ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ಮಾಡ್ತಾ ಇರ್ತಾರೆ. ಅವರು ಕೆಲವಾರು ಸಿವಿಲ್ ವಿವಾದಗಳಲ್ಲಿ ತಲೆಹಾಕಿರುತ್ತಾರೆ. ಈ ಕಾರಣಕ್ಕೆ ರಾಮಾಂಜನೇಯ ಮೇಲೆ ಕೆಲ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಅವರ ಕೊಲೆ ಮಾಡಿದವರ ಮೇಲೆಯೂ ಕೆಲ ಕೇಸುಗಳು ಆಗಿವೆ. ಇನ್ನು ಬಂಧನಕ್ಕೆ ಒಳಗಾಗಿರುವ ಆರೋಪಿಗಳ ಮೇಲೆ ಪ್ರಕರಣಗಳು ದಾಖಲಾಗಿವೆಯೆ ವಿನಾ ಅವರ ವಿರುದ್ಧ ರೌಡಿಶೀಟ್ ಇರೋದಿಲ್ಲ. ಅವರ ಮೇಲೆ ರಾಮಾಂನೇಯ ಎಸ್‌ಸ್ಸಿಎಸ್‌ಟಿ ಕೇಸುಗಳನ್ನೂ ದಾಖಲಿಸಿದ್ದಾರೆ.
ಆದರೆ, ರಾಮಾಂಜನೇಯ ತನ್ನ ವಿರೋಧಿಗಳ ಮೇಲೆ ಹಲವಾರು ಸಂದರ್ಭಗಳಲ್ಲಿ ಅಟ್ರಾಸಿಟಿ ಕೇಸುಗಳನ್ನು ಹಾಕಿರುವುದು, ವಿರೋದಿಗಳಿಗೆ ಕಿರುಕುಳ ನೀಡಿರುವುದು ಹಾಗೂ ಆತನ ರಾಜಕೀಯ ಪ್ರಭಾವದ ಬಗ್ಗೆ ಎಸ್‌ಪಿ ಮಾತನಾಡಲು ಬಯಸಲಿಲ್ಲ. ಆತ ಕೆಲಸ ಮಾಡಿದ ಜಾಗಗಳಲ್ಲಿ ಆತನ ವಿರುದ್ಧ ಬಂದಿರುವ ದೂರುಗಳ ಬಗ್ಗೆಯೂ ಅವರು ನಮಗೆ ಏನನ್ನೂ ಹೇಳಲಿಲ್ಲ.
ಈ ಕೊಲೆಯ ಮೂಲವೇನು?
ಆವುಲನಾಗೇನಹಳ್ಳಿ ಬಳಿ ರಾಮಾಂಜನೇಯಗೆ ಸರಕಾರದಿಂದ ಎರಡೂವರೆ ಎಕರೆ ಜಮೀನು ಮಂಜೂರಾಗಿರುತ್ತದೆ. ಅದರ ಪಕ್ಕದಲ್ಲಿ ಆರೋಪಿ ಅರವಿಂದ ಅವರ ಜಮೀನೂ ಇರುತ್ತದೆ. ಇವೆರಡೂ ಜಮೀನುಗಳ ನಡುವೆ ಸಣ್ಣ ಪ್ರಮಾಣದ ಕರಾಬ್ ಜಮೀನು ಇರುತ್ತದೆ. ಅದರಲ್ಲಿ ಯಾರಿಗೆಷ್ಟು ಬರಬೇಕೆಂದು ವಿವಾದ ಉಂಟಾಗಿತ್ತು. ಎರಡು ತಿಂಗಳ ಹಿಂದೆ ಈ ಬಗ್ಗೆ ಗಲಾಟೆ ಆಗಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುತ್ತದೆ. ಈ ವಿವಾದಕ್ಕೆ ಸಂಬಂಧಿಸಿ ಹಲವಾರು ಸಲ ಹೊಡೆದಾಟಗಳು, ಗಲಾಟೆಗಳು ನಡೆದಿವೆ. ಇನ್ನೂ ಈ ಕೇಸಿನ ಬಗ್ಗೆ ತನಿಖೆ ನಡೆಯುತ್ತಿದೆ. ಯಾರಾದರೂ ಕೊಲೆಗೆ ಕುಮ್ಮಕ್ಕು ನೀಡಿದ್ದಾರಾ ಎನ್ನುವುದು ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ಮಾಡ್ತಾ ಇದ್ದೇವೆ.
ಬಂಧನದ ಸುತ್ತ ಅನುಮಾನ
ಘಟನೆ ನಡೆದ ದಿನ ದಿನವೇ ನಾಲ್ವರು ಆರೋಪಿಗಳನ್ನು ಬಂಧಿಸುವ ಬಗ್ಗೆ ಮಾಹಿತಿ ಇತ್ತು. ಆ ಬಗ್ಗೆ ನಾಲ್ಕು ದಿನ ತಡವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರಾ? ಎಂಬ ಅನುಮಾನವೂ ದಟ್ಟವಾಗಿದೆ. ರಾಮಾಂಜನೇಯ ಕೊಲೆಯ ಸುತ್ತ ತನಿಖೆ ಮಾಡುತ್ತಿರುವ ಪೊಲೀಸರು; ತಮ್ಮ ಅಧಿಕಾರ ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ತಮ್ಮ ವಿರೋಧಿಗಳಿಗೆ ಕಿರುಕುಳ ನೀಡಿರುವ ಬಗ್ಗೆ ಬಂದಿರುವ ದೂರುಗಳ ಬಗ್ಗೆ ಮೌನ ವಹಿಸಿದ್ದಾರಾ? ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.
ಮತ್ತೊಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಡಾ,ಕೆ.ಸುಧಾಕರ್ ಘಟನೆ ನಡೆದ ಮರುದಿನವೇ ರಾಮಾಂಜನೇಯ ಮನೆಗೆ ಭೇಟಿ ನೀಡಿದ್ದರು. ಹಿರೇನಾಗವೇಲಿ ಸ್ಫೋಟದಲ್ಲಿ ಜೀವ ಕಳೆದಕೊಂಡ ಆರು ಕಾರ್ಮಿಕರ ಮನೆಗಳತ್ತ ಎಡತಾಕದ ಸಚಿವರು, ರಾಮಾಂಜನೇಯ ಮನೆಗೆ ಮಾತ್ರ ಕೂಡಲೇ ಭೇಟಿ ನೀಡಿ ಸಾಂತ್ವನ ಹೇಳಿದ್ದರ ಬಗ್ಗೆಯೂ ಜಿಲ್ಲೆಯಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ, ರಾಮಾಂಜನೇಯ ಹೊಂದಿದ್ದ ರಾಜಕೀಯ ಪ್ರಭಾವದ ಬಗ್ಗೆಯೂ ತನಿಖೆಯಾಗಬೇಕು ಎಂದು ಹೆಸರು ಹೇಳಲಿಚ್ಚಿಸದ ಕೆಲ ರಾಜಕೀಯ ಮುಖಂಡರು ಹೇಳುವ ಮಾತು.
ಜಿಲ್ಲೆಯಲ್ಲಿ ಲಾ ಅಂಡ್ ಆರ್ಡರ್ ಸಮಸ್ಯೆ ಇಲ್ಲ
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಹಾಡು ಹಗಲೇ ಕೊಲೆ ಪ್ರಕರಣಗಳು ನಡೆಯುತ್ತಿವೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಿಥುನ್ ಕುಮಾರ್ ಅವರು; “ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಭೂ ವಿವಾದ, ಹಳೆಯ ದ್ವೇಷ, ಹಣಕಾಸು ವ್ಯವಹಾರ, ಅನೈತಿಕ ಸಂಬಂಧದಂಥ ವಿಚಾರಗಳಿಗೆ ಮಾತ್ರ ಕೊಲೆಗಳು ಆಗುತ್ತಿವೆ. ಗುಂಪು ಘರ್ಷಣೆ ಆಥವಾ ದೊಡ್ಡ ಗಲಭೆಗಳೇನೂ ಆಗಿಲ್ಲ” ಎಂದರು.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..