ಚಿಕ್ಕಬಳ್ಳಾಪುರ: ಶಿಕ್ಷಣವು ಮಕ್ಕಳ ಜೀವನದಲ್ಲಿ ಅವರ ಮೌಲ್ಯವನ್ನು ಹೆಚ್ಚು ಮಾಡಲಿದೆ ಹಾಗೂ ದೇಶದ ಅಭಿವೃದ್ದಿಗೂ ಸಹಕಾರಿಯಾಗಲಿದೆ ಎಂದು ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ವಾಪಸಂದ್ರ ಸರಕಾರಿ ಬಾಲಕಿಯರ ಪ್ರೌಢಶಾಲೆಯನ್ನು ದತ್ತು ಪಡೆದ ಯುವ ನಾಯಕ ಸಂದೀಪ್ ಬಿ.ರೆಡ್ಡಿ ಹೇಳಿದರು.
ಅವರು ಶನಿವಾರ ನಗರದ ವಾಪಸಂದ್ರ ಸರಕಾರಿ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಸೊಲಾರ್ ದೀಪಗಳನ್ನು ವಿತರಣೆ ಮಾಡಿ ಮಾತನಾಡಿದರು.
ಗುಣಾತ್ಮಕ ಶಿಕ್ಷಣದಿಂದ ಮಕ್ಕಳ ಶೈಕ್ಷಣಿಕ ಮೌಲ್ಯಗಳು ಬಲಿಷ್ಠಗೊಳ್ಳಲಿವೆ, ಅದಕ್ಕೆ ಪೂರಕವಾಗಿ ಶಿಕ್ಷಕರು ಕ್ರಮಬದ್ದವಾದ ಭೋಧನೆ ಮಾಡಬೇಕು. ಪ್ರಾಥಮಿಕ ಹಾಗೂ ಪ್ರೌಢ ಹಂತದಿಂದಲೇ ಶಿಕ್ಷಣದ ಮೌಲ್ಯ ಅರಿಯುವುದಲ್ಲದೆ, ಅದರ ಲಾಭ ಪಡೆದು ಉನ್ನತ ಮಟ್ಟದಲ್ಲಿ ಅವಕಾಶ ಸಿಕ್ಕಾಗ ಸಮಾಜದ ಅಭಿವೃದ್ಧಿಗೆ ಕಿಂಚಿತ್ತಾದರೂ ಸೇವೆ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು. ನಮ್ಮ ಸ್ವಶ್ರಮದಿಂದ ಇನ್ನಿತರೆ ಬಡ ಮಕ್ಕಳಿಗೆ ನೆರವಾಗಿ ಸಮಸಮಾಜ ನಿರ್ಮಾಣದತ್ತ ನಮ್ಮ ಚಿತ್ತ ಹರಿಸಬೇಕು ಎಂದು ಅವರು ನುಡಿದರು.
ನಮ್ಮ ಜನ, ನಮ್ಮ ನಾಡು ನಮ್ಮ ದೇಶದ ಹಸನು ಮಾಡುವ ಸಂಕಲ್ಪವನ್ನು ತೊಡಬೇಕು. ನಾನು ನನ್ನ ಕರ್ತವ್ಯ ಎಂದು ತಿಳಿದು ವಿದ್ಯಾರ್ಥಿಗಳಾದ ನಿಮ್ಮ ಜತೆಗಿದ್ದು ಶಾಲಾ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಲು ಪಣ ತೊಟ್ಟಿದ್ದೇನೆ. ಶಾಲೆ ಮತ್ತು ಶಾಲೆಯ ವಿದ್ಯಾರ್ಥಿಗಳು ಸಮಸಮಾಜ ನಿರ್ಮಾಣ ಮಾಡುವತ್ತ ಒಂದಷ್ಡು ಬದಲಾವಣೆಯಾದರೆ ಸಾಕೆಂಬುದು ನನ್ನ ಭಾವನೆ ಅದಕ್ಜೆ ಅನುಗುಣವಾಗಿ ನನ್ನ ಶ್ರಮದ ಅಲ್ಪ ಲಾಭವನ್ನು ಸಮಾಜದ ಒಳಿತಿಗೆ ವಿನಿಯೋಗಿಸುತಿದ್ದೆನೆ ಎಂದು ಅವರ ಹೇಳಿದರು.
ವಾಪಸಂದ್ರ ಸರಕಾರಿ ಪ್ರೌಢಶಾಲೆ ದತ್ತು
ಇನ್ನು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ವಿಭಿನ್ನವಾಗಿ ಕಾಣಬೇಕು ಎಂಬುದು ನನ್ನ ಆಸೆ. ಆ ನಿಟ್ಟಿನಲ್ಲಿ ವಾಪಸಂದ್ರ ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದಿದ್ದೆನೆ. ಕೇವಲ ಇದೊಂದು ಶಾಲೆ ಮಾತ್ರವಲ್ಲ, ಇಡೀ ತಾಲ್ಲೂಕಿನ ಸರಕಾರಿ ಶಾಲೆಗಳು ಎಲ್ಲಾ ವ್ಯವಸ್ಥಿತ ರೀತಿಯಲ್ಲಿ ಬದಲಾವಣೆಯಾಗಿ ಮೇಲ್ಪಂಕ್ತಿಯಲ್ಲಿ ಕಾಣಬೇಕು. ಆಗ ತಂತಾನೆ ವಿದ್ಯಾರ್ಥಿಗಳು ಸರಕಾರಿ ಶಾಲೆಗಳತ್ತ ಮುಖ ಮಾಡಲಿವೆ. ಎಲ್ಲವನ್ನು ಸರಕಾರ ಮಾಡಲಾಗದು. ಹಾಗಂತ ಎಲ್ಲವನ್ನು ನಾವೊಬ್ಬರೇ ಮಾಡಲು ಸಾದ್ಯವಿಲ್ಲ. ಇದಕ್ಕೆ ಸಹಭಾಗಿತ್ವಗಳು ಅತಿ ಮುಖ್ಯ ಹೀಗಾದಾಗ ಗ್ರಾಮೀಣ ಮಕ್ಕಳ ಅದರಲ್ಲೂ ಇಂಥಹ ಶಾಲೆಗಳಲ್ಲಿ ಕ್ರಮಬದ್ದವಾದ ಶಿಕ್ಷಣ ಸಿಗಲು ಸಾಧ್ಯವಾಗಿರಲಿದೆ ಎಂದರು ಅವರು.
ಇನ್ನು ನಾನು ದತ್ತು ಪಡೆದಿರುವ ಈ ಶಾಲೆಯಲ್ಲಿ ಮುಖ್ಯಶಿಕ್ಷಕರ ಹಾದಿಯಾಗಿ ಎಲ್ಲಾ ಶಿಕ್ಷಕರ ಬದ್ಧತೆ ನನಗೆ ಇಷ್ಟವಾಗಿದೆ. ಇದು ಮಕ್ಕಳ ಕಲಿಕೆಗೆ ಪರಿಣಾಮಕಾರಿಯಾಗಿ ನೆರವಾಗಲಿದೆ. ದತ್ತು ಪಡೆದ ಈ ಶಾಲೆಯ ಅಭಿವೃದ್ದಿಯ ಮೇಲೆ ನಾನು ಸಾಕಷ್ಟು ಕನಸು ಇಟ್ಟುಕೊಂಡು ಅಭಿವೃದ್ಧಿಗೆ ಮುಂದಾಗಿದ್ದೇನೆ. ಇವೆಲ್ಲವು ಮಕ್ಕಳ ಕಲಿಕೆಗಷ್ಟೇ ಸೀಮಿತವಾಗಬೇಕು. ಅವರು ಸತ್ಪ್ರಜೆಗಳಾಗಿ ಶಿಕ್ಷಣದಲ್ಲಿ ಹೊರಹೊಮ್ಮಬೇಕು ಎಂದು ಸಂದೀಪ್ ರೆಡ್ಡಿ ಹೇಳಿದರು.
ಇನ್ನು ಮಕ್ಕಳ ಬಗ್ಗೆ ಕೆಲ ನೀತಿ ಮಾತುಗಳನ್ನು ತಿಳಿಹೇಳಿದ ಸಂದೀಪ್ ರೆಡ್ಡಿ; ಶಿಕ್ಷಣ ಪಡೆಯುವ ಹಂತದಲ್ಲಿ ಕಲಿಕೆಗೆ ಯಾವುದರಲ್ಲೂ ಕೊರತೆ ಎಂದು ಭಾವಿಸಬೇಡಿ. ಅದನ್ನು ಪೂರ್ಣಗೊಳಿಸಲು ನಾನಿದ್ದೇನೆ. ಶ್ರದ್ಧೆ ಹಾಗೂ ಶಿಸ್ತು ಮೈಗೂಡಿಸಿಕೊಂಡು ಮೊಬೈಲ್ ಗೀಳಿಗೆ ಒಳಗಾಗದೆ ಕಲಿಯಬೇಕೆಂದು ಕಿವಿಮಾತು ಹೇಳಿದರು.
ಸರಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕೃಷ್ಣಕುಮಾರಿ ಮಾತನಾಡಿ; ಜೀವನದ ಭದ್ರ ಬುನಾದಿಯು ಒಳ್ಳೆಯ ಶಿಕ್ಷಣದ ಮೇಲೆ ಅಡಗಿದೆ. ಅಂಥಹ ಶಿಕ್ಷಣ ನೀಡಲು ಶಿಕ್ಷಕರಾಗಿ ನಾವಿದ್ದೇವೆ. ಸರಕಾರ ಶಿಕ್ಷಣಕ್ಕೆ ಸಾಕಷ್ಟು ಹಣ ವಿನಿಯೊಗಿಸುತ್ತಿದೆ. ಅದಕ್ಕೆ ಪೂರಕವಾಗಿ ಆಗಬೇಕಿರುವ ಇನ್ನಷ್ಟು ಕೊರತೆ ನೀಗಿಸಲು ಸಂದೀಪ್ ಬಿ. ರೆಡ್ಡಿ ಅವರಂಥ ದಾನಿಗಳು ನಮ್ಮ ಶಾಲೆಗೆ ಸಿಕ್ಕಿರುವುದು ಸಂತೋಷದ ಸಂಗತಿ ಎಂದರು.
ಇದೇ ವೇಳೆ ಸಂದೀಪ್ ರೆಡ್ಡಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ವಿದ್ಯುತ್ ದೀಪ ವಂಚಿತ ವಿದ್ಯಾರ್ಥಿನಿಯರಿಗೆ ಸೊಲಾರ್ ದೀಪವನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಸದಸ್ಯರುಗಳಾದ ಹೆಚ್.ಕೆ. ದೇವರಾಜ್, ಮಲ್ಲಿಕಾ, ಪವನ್, ಮಂಜುನಾಥ್, ಯುವ ಮುಖಂಡ ಕಿರಣ್, ಶಾಲಾ ಸಹ ಶಿಕ್ಷಕರಾದ ನರಸಿಂಹಮೂರ್ತಿ, ಮುನಿ ನಾರಾಯಣಸ್ವಾಮಿ, ಚಿಕ್ಕನರಸರೆಡ್ಡಿ, ಎನ್.ಶಿವಣ್ಣ, ಆರ್.ಟಿ.ಮಹಾಂತೇಶ್, ನಾಜೀಮಾ, ಸಂಗೀತ ಶಿಕ್ಷಕ ಮಹಾಲಿಂಗಯ್ಯ, ಕ್ರೀಡಾ ಶಿಕ್ಷಕಿ ರಾಧಾಮಣಿ ಸೇರಿದಂತೆ ಇನ್ನಿತರ ಭೋಧಕೇತರ ಸಿಬ್ಬಂದಿ ಹಾಜರಿದ್ದರು.