- ಮುಂದಿನ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಮೈಸೂರಿನ ತಮ್ಮ ಸ್ವಕ್ಷೇತ್ರಕ್ಕೆ ವಾಪಸ್ಸಾಗುತ್ತಾರಾ? ಅಥವಾ ಬಾದಾಮಿಯಲ್ಲೇ ಕಣಕ್ಕಿಳಿಯುತ್ತಾರಾ? ಇಲ್ಲವೇ, ಹೊಸ ಕ್ಷೇತ್ರಕ್ಕೆ ವಲಸೆ ಹೋಗುತ್ತಾರಾ?
ಕೋಲಾರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಫರ್ಧಿಸಿ ಬಾದಾಮಿಯಲ್ಲಿ ಗೆಲುವು ಕಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಕ್ಷೇತ್ರ ಬದಲಿಸುತ್ತಾರಾ?
ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಕೆಲ ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿ, ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ಬಿಟ್ಟುಕೊಡಲು ರೆಡಿ ಎಂದು ಘೋಷಣೆ ಮಾಡಿದ್ದರು.
ಅದರ ಬೆನ್ನಲ್ಲೇ ಈಗ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಕೋಲಾರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಹೆಸರೇಳಿಕೊಂಡೇ ವರ್ತೂರಿನಿಂದ ಕೋಲಾರಕ್ಕೆ ಬಂದು ಶಾಸಕರಾಗಿದ್ದ ವರ್ತೂರು ಪ್ರಕಾಶ್ ಒಂದು ಕಾಲದಲ್ಲಿ ಸಿದ್ದುಗೆ ಖಾಸಾ ಶಿಷ್ಯರಾಗಿದ್ದವರು. ಈಗ ಮಾಜಿ ಶಿಷ್ಯನ ಕ್ಷೇತ್ರದಿಂದಲೇ (ವರ್ತೂರು ಈಗ ಸೋತಿದ್ದಾರೆ) ಸ್ಪರ್ಧಿಸಲಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿರುವುದು ಎಲ್ಲರ ಹುಬ್ಬೇರಿಸಿದೆ.
ಸಿದ್ದು ಬಂದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ
ಭಾನುವಾರ ಕೋಲಾರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಾರಾಯಣಸ್ವಾಮಿ ಹೇಳಿದ್ದಿಷ್ಟು;
ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿದುಬರಲು ಸಿದ್ದರಾಮಯ್ಯ ಅವರೇ ಕಾರಣ. ಕೋಲಾರ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರೇ ಕಣಕ್ಕೆ ಇಳಿಯಲಿದ್ದಾರೆ. ಅವರನ್ನು ನಾವೆಲ್ಲರೂ ಸೇರಿ ಗೆಲ್ಲಿಸುತ್ತೇವೆ. ಅವರು ಇಲ್ಲಿಂದ ಶಾಸಕರಾಗಿ ಗೆದ್ದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತದೆ.
ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ನಾನು, ಮಾಲೂರು ಶಾಸಕ ನಂಜೇಗೌಡ, ಶ್ರೀನಿವಾಸಪುರದ ರಮೇಶ್ ಕುಮಾರ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುತ್ತೇವೆ. ನಾವೆಲ್ಲರೂ ಇಲ್ಲಿಂದಲೇ ಸ್ಫರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರನ್ನು ಒತ್ತಾಯ ಮಾಡಲಿದ್ದೇವೆ. ಇನ್ನೊಂದೆಡರಡು ತಿಂಗಳಲ್ಲಿ ಅಂತಿಮ ಚಿತ್ರಣ ಸಿಗಲಿದೆ.
ವರ್ತೂರು ಪ್ರಕಾಶ್ ಯಾರು?
ವರ್ತೂರು ಪ್ರಕಾಶ್ ಹೇಳುವುದನ್ನು ನಂಬಬೇಡಿ. ಅವರು ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ. ಅವರು ಕಾಂಗ್ರೆಸ್ ಸೇರುವುದೂ ಸಾಧ್ಯವಿಲ್ಲ. ಅವರು ಸ್ಫರ್ಧಿಸುತ್ತಾರೆ? ಇವರು ಸ್ಫರ್ಧಿಸುತ್ತಾರೆ? ಎಂದು ಹೇಳಲು ಅವರು ಯಾರು? ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸ್ಫರ್ಧೆ ಮಾಡುತ್ತಾರೆ ಎಂದು ಹೇಳಲು ಅವರು ಯಾರು?
ಇಷ್ಟಕ್ಕೆ ಸುಮ್ಮನಾಗದ ನಾರಾಯಣಸ್ವಾಮಿ ಮತ್ತೂ ಮುಂದುವರಿದು ಹೇಳಿದ್ದಿಷ್ಟು. “ಕೆಲವರು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವ ಕನಸು ಕಾಣುತ್ತಿದ್ದಾರೆ. ಅದು ಕನಸಾಗಿಯೇ ಉಳಿಯುತ್ತದೆ ಎಂದರು ನಾರಾಯಣಸ್ವಾಮಿ.
ಜಾಲಪ್ಪ ಆರೋಗ್ಯ ವಿಚಾರಿಸಿದ ಸಿದ್ದು
ಕೋಲಾರದ ದೇವರಾಜ ಅರಸು ಮೆಡಿಕಲ್ ಕಾಲೇಜಿಗೆ ತೆರಳಿದ ಸಿದ್ದರಾಮಯ್ಯ, ಅಲ್ಲಿ ಹಿರಿಯ ರಾಜಕಾರಣಿ ಆರ್.ಎಲ್.ಜಾಲಪ್ಪ ಅವರ ಆರೋಗ್ಯ ವಿಚಾರಿಸಿದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಅವರೊಂದಿಗೆ ತೆರಳಿದ ಸಿದ್ದು ಕೆಲ ಕಾಲ ಜಾಲಪ್ಪ ಅವರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ತಮ್ಮ ಜನತಾ ಪರಿವಾರದ ಕಾಲದ ದಿನಗಳನ್ನು ಮೆಲುಕು ಹಾಕಿದ ಸಿದ್ದರಾಮಯ್ಯ, ಜಾಲಪ್ಪ ಅವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದರು.
ಸೀಡಿ ಬಗ್ಗೆ ಮಾತನಾಡಲ್ಲ ಎಂದ ಸಿದ್ದು
ರಮೇಶ್ ಜಾರಕಿಹೊಳಿ ಸೀಡಿ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮತ್ತೆ ನಾನು ಮಾತನಾಡುವುದು ಏನೂ ಇಲ್ಲ. ಈ ಬಗ್ಗೆ ಪ್ರತಿಕ್ರಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು; ಸಂತ್ರಸ್ತ ಯುವತಿ ಮೊದಲು ಆಚೆ ಬರಬೇಕು. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು. ಆಗಿರುವ ಅನ್ಯಾಯದ ಬಗ್ಗೆ ಮಾತನಾಡಬೇಕು ಎಂದು ಸಲಹೆ ಮಾಡಿದರು.
ಇಂಥ ಪರಿಸ್ಥಿತಿಗೆ ಆ ಯುವತಿ ಮಾತ್ರವಲ್ಲ, ಯಾರೇ ಸಿಕ್ಕಿಕೊಂಡರೂ ನಾವು ನೆರವಾಗುತ್ತೇವೆ. ನೆರವು ಕೇಳಿದಾಗ ಕೊಡಲಾಗದು ಎನ್ನಲು ಸಾಧ್ಯವೇ? ಇನ್ನು ಇಡೀ ಸೀಡಿ ಕೇಸಿನಲ್ಲಿ ಪೊಲೀಸರ ವೈಫಲ್ಯ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಆ ಯುವತಿಯನ್ನು ಹುಡುಕಲು ಇಪ್ಪತ್ತಾರು ದಿನ ಬೇಕೆ? ಎಂದು ಖಾರವಾಗಿ ಪ್ರಶ್ನಿಸಿದರು ಸಿದ್ದು.