ಬೆಳಗಾವಿ: ನಮ್ಮ ಮಗಳು ಒತ್ತಡದಲ್ಲಿದ್ದು, ಈ ಸಂದರ್ಭದಲ್ಲಿ ಆಕೆಯ ಹೇಳಿಕೆಗಳನ್ನು ಪರಿಗಣಿಸಬಾರದು ಎಂದು ಸೀಡಿ ಯುವತಿ ಪೋಷಕರು ಮನವಿ ಮಾಡಿದ್ದಾರೆ.
ಆ ಯುವತಿ ಪ್ರತ್ಯಕ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ ಸಂತ್ರಸ್ತೆ ಪೋಷಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನಮ್ಮ ಮಗಳು ಒತ್ತಡದಲ್ಲಿದ್ದಾಳೆ. 3-4 ದಿನಗಳ ನಂತರ ಆಕೆಯ ಹೇಳಿಕೆಯನ್ನ ನ್ಯಾಯಾಧೀಶರು ಮತ್ತು ಪೊಲೀಸರು ದಾಖಲಿಸಿಕೊಳ್ಳಬೇಕು ಎಂದು ಯುವತಿ ತಂದೆ ಮನವಿ ಮಾಡಿದರು.
ನಮ್ಮ ಮಗಳನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅಣತಿಯಂತೆ ಆಕೆ ಕೆಲಸ ಮಾತನಾಡುತ್ತಿದ್ದಾಳೆ. ಆಕೆಯನ್ನು ರಾಜಕಾರಣದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಆಕೆ ಯಾವುದೇ ಹೇಳಿಕೆ ನೀಡುತ್ತಿಲ್ಲ. ಆಕೆ ಕಡೆಯಿಂದ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡಲಾಗುತ್ತಿದೆ ಎಂದ ಅವರು, ಇದಕ್ಕೆಲ್ಲಾ ಡಿ.ಕೆ.ಶಿವಕುಮಾರ್ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ನಾವು ಸುರಕ್ಷಿತವಾಗಿದ್ದು, ಪೊಲೀಸರು ಭದ್ರತೆ ನೀಡಿದ್ದಾರೆಂದರು ಯವತಿ ಕುಟುಂಬದವರು. ಅವಳು ಯಾವ ಪರಿಸ್ಥಿತಿಯಲ್ಲಿದ್ದಾಳೆ ಎಂಬುವುದು ನಮಗೆ ಗೊತ್ತಾಗುತ್ತಿಲ್ಲ. ಹಾಗಾಗಿ ಮಗಳನ್ನು ನಮ್ಮ ವಶಕ್ಕೆ ನೀಡಬೇಕೆಂದು ಕೇಳಿಕೊಂಡರು. ನಮ್ಮ ಬಳಿಯಲ್ಲಿರಲು ಇಷ್ಟವಿದ್ದರೆ ನಾವು ನಿನ್ನನ್ನು ಕರೆದುಕೊಳ್ಳುತ್ತೇವೆ. ಏನೇ ಆದ್ರೂ ಆಕೆ ನನ್ನ ಮಗಳು ಎಂದು ಯವತಿ ತಂದೆ ಭಾವುಕರಾಗಿ ಹೇಳಿದರು.
ಇದೇ ವೇಳೆ ಪೊಲೀಸ್ ಅಧಿಕಾರಿ ಡಿವೈಎಸ್ʼಪಿ ಕಟ್ಟಮನಿ ನಮಗೆ ಒತ್ತಡ ಹಾಕಿಲ್ಲ. ಎಸ್ʼಐಟಿ ಮುಂದೆ ಹೇಳಿಕೆ ದಾಖಲಿಸಿ, ಅವರ ಭದ್ರತೆಯಲ್ಲಿಯೇ ಬಂದಿದ್ದೇವೆ ಎಂದು ಯವತಿ ಪೋಷಕರು ತಿಳಿಸಿದರು.