ಬೆಂಗಳೂರು: ಪ್ರತಿಷ್ಟಿತ ಜಯದೇವ ಹೃದ್ರೋಗ ಆಸ್ಪತ್ರೆಯ ಇನ್ನೊಂದು ಘಟಕ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಲಿದ್ದು, ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಮಂಗಳವಾರ ಒಪ್ಪಂದ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ ಅವರು ಒಪ್ಪಂದಕ್ಕೆ ಅಂಕಿತ ಹಾಕಿದ್ದು, ಇದೇ ಅಗಸ್ಟ್ ತಿಂಗಳ ಹೊತ್ತಿಗೆ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಡಿಸಿಎಂ ಹೇಳಿದರು.
ಬೆಂಗಳೂರು ಉತ್ತರದ ಜನರಿಗೆ ಅನುಕೂಲ
ಮಲ್ಲೇಶ್ವರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳೂ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಜನರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಥಾಪನೆ ಆಗುತ್ತಿರುವ ಹೃದ್ರೋಗ ಘಟಕ ಹೆಚ್ಚು ಉಪಯುಕ್ತವಾಗುತ್ತಿದೆ. ಜಯದೇವ ಹೃದ್ರೋಗ ಘಟಕದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇಲ್ಲಿಯೂ ಲಭ್ಯ ಇರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಕೆ.ಸಿ.ಜನರಲ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ 20,000 ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಈ ಘಟಕದಲ್ಲಿ 50 ಸುಸಜ್ಜಿತ ಬೆಡ್ಗಳಿರುತ್ತವೆ. ಹೃದಯದ ಸಮಸ್ಯೆ ಕಂಡುಬಂದಾಗ ಈ ಭಾಗದ ಜನರು ಜಯದೇವ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಟ್ರಾಫಿಕ್ ಮತ್ತಿತರೆ ಸಮಸ್ಯೆಗಳನ್ನು ಎದುರಿಸುವ ಅಗತ್ಯವಿಲ್ಲ. ಮಲ್ಲೇಶ್ವರದಲ್ಲಿ ಜಯದೇವ ಆಸ್ಪತ್ರೆಯ ಘಟಕವನ್ನು ಸ್ಥಾಪಿಸಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಈ ಘಟಕ ಸ್ಥಾಪಿಸಲು ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ, ಸೂಕ್ತ ಸಹಕಾರ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೂ ನನ್ನ ಕೃತಜ್ಞತೆಗಳು ಎಂದು ಡಿಸಿಎಂ ಹೇಳಿದರು.
ಒಪ್ಪಂದದ ಪ್ರಕಾರ, ಜಯದೇವ ಹೃದ್ರೋಗ ಘಟಕಕ್ಕೆ ಅಗತ್ಯವಾದ ಜಾಗ, ನೀರು ಮತ್ತಿತರೆ ಮೂಲಸೌಕರ್ಯಗಳನ್ನು ಕೆ.ಸಿ.ಜನರಲ್ ಆಸ್ಪತ್ರೆ ಒದಗಿಸುತ್ತದೆ. ಉಳಿದಂತೆ ವೈದ್ಯಕೀಯ ಪರಿಕರಗಳು, ಯಂತ್ರೋಪಕರಣಗಳು, ಸಿಬ್ಬಂದಿ ಇತ್ಯಾದಿಗಳನ್ನು ಜಯದೇವ ಆಸ್ಪತ್ರೆ ವ್ಯವಸ್ಥೆ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದರು.
ಕೆಸಿಜೆಯಲ್ಲಿ ಇನ್ನಷ್ಟು ಸೌಲಭ್ಯ
ಈಗಾಗಲೇ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾಡ್ಯುಲರ್ ತುರ್ತು ನಿಗಾ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇದರ ಜತೆಗೆ, ಟ್ರಾಮಾ ಕೇಂದ್ರವನ್ನು ಸ್ಥಾಪನೆ ಮಾಡುವ ಉದ್ದೇಶವೂ ಇದೆ. ಇವುಗಳ ಜತೆಗೆ, ಕೆಸಿ ಜನರಲ್ ಆಸ್ಪತ್ರೆಯನ್ನು ಇನ್ನೂ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.