- ಉತ್ತಮ ಆರೋಗ್ಯದಿಂದ ಉತ್ತಮ ರಾಜ್ಯ ನಿರ್ಮಾಣದ ಉದ್ದೇಶ ಹೊಂದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಹೊಸ ಕನಸುಗಳನ್ನು ಕಾಣುತ್ತಿದ್ದಾರೆ.
ಉಡುಪಿ: ವಿಜಯನಗರ ಸಾಮ್ರಾಜ್ಯದಲ್ಲಿ ಸೃಷ್ಟಿಯಾಗಿದ್ದ ವೈಭವದಂತೆ ಆರೋಗ್ಯ ಕ್ಷೇತ್ರದಲ್ಲೂ ವೈಭವ ತರಬೇಕಿದೆ. ಇದಕ್ಕಾಗಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಮೂಲಸೌಕರ್ಯವನ್ನು ಉದ್ಘಾಟನೆ ಹಾಗೂ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಉಡುಪಿಯಿಂದ ವರ್ಚುವಲ್ ಆಗಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಮೂರು ಹಂತಗಳ ಆರೋಗ್ಯ ಸೇವೆಯನ್ನು ಬಲಪಡಿಸಲಾಗುತ್ತಿದೆ. ಪಿಎಚ್’ಸಿಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ರೋಗಗಳ ಬಂದ ನಂತರ ಔಷಧಿ ನೀಡುವುದಕ್ಕಿಂತ ಮುಂಚಿತವಾಗಿ ರೋಗ ಬಾರದಂತೆ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವೈದ್ಯರು ಕೆಲಸ ಮಾಡುವುದನ್ನು ಉತ್ತೇಜಿಸಲು ಕಾನೂನುಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಹಳ್ಳಿಗಳಲ್ಲಿ ಹೆಚ್ಚು ಜನರು ವಾಸಿಸುತ್ತಿದ್ದು, ವೈದ್ಯರ ಸೇವೆ ಅಗತ್ಯ ಎಂದರು ಸಚಿವರು.
ನಾಲ್ಕು ವೈದ್ಯಕೀಯ ಕಾಲೇಜು
ರಾಜ್ಯದ ನಾಲ್ಕು ಕಡೆಗಳಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ನಿರ್ಮಾಣ ಆರಂಭವಾಗಿದೆ. ದೇಶದಲ್ಲಿ 157 ಮೆಡಿಕಲ್ ಕಾಲೇಜುಗಳ ನಿರ್ಮಾಣವಾಗುತ್ತಿದೆ. ಇದು ಪೂರ್ಣವಾದರೆ ಸುಮಾರು 27 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಕಾಶ ಸಿಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ವೈದ್ಯರ ನೇರ ನೇಮಕ ನಡೆಯುತ್ತಿದೆ ಎಂದರು ಅವರು.
ಸಚಿವ ಡಾ.ಕೆ.ಸುಧಾಕರ್, ಉಡುಪಿಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ಮಣಿಪಾಲ್ ಕ್ಯಾಂಪಸ್ ದೊಡ್ಡದಿದ್ದು, ಸುಮಾರು 11 ಸಾವಿರ ಜನರಿದ್ದಾರೆ. ಇಲ್ಲಿ 900 ಮಂದಿಗೆ ಸೋಂಕಿತರಾಗಿದ್ದು, ನಿರ್ದಿಷ್ಟ ಕ್ರಮ ವಹಿಸಲು ಸೂಚಿಸಲಾಗಿದೆ. ಇಡೀ ಕ್ಯಾಂಪಸ್ ಅನ್ನು ಕಂಟೇನ್ಮೆಂಟ್ ಮಾಡಲಾಗಿದೆ. ಯಾರಿಗೂ ಸೋಂಕಿನ ತೀವ್ರತೆ ಇಲ್ಲ ಎಂಬುದು ಸಮಾಧಾನಕರ ಸಂಗತಿ. ನೆಗೆಟಿವ್ ಇರುವವರನ್ನು ಮಾತ್ರ ಮನೆಗೆ ಕಳುಹಿಸಲಾಗುತ್ತಿದೆ ಎಂದರು.
ಒಂದೇ ಕ್ಯಾಂಪಸ್ ನಲ್ಲಿ ಹೆಚ್ಚು ಜನರಿರುವುದು ಸೋಂಕು ಬೇಗ ಹರಡಲು ಕಾರಣ. ವಿದ್ಯಾರ್ಥಿಗಳು ಕೋವಿಡ್ ಸುರಕ್ಷತಾ ಕ್ರಮ ಪಾಲಿಸುವುದಿಲ್ಲ. ಪರೀಕ್ಷೆ ನಂತರ ಪಾರ್ಟಿ ಮಾಡುವುದು, ಸುತ್ತುವುದು ಕೂಡ ಕಾರಣ ಇರಬಹುದು. ಈಗ ಎಲ್ಲ ಮುನ್ನಚ್ಚರಿಕೆ ವಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆಯೇ ಹೊರತು ಮರಣ ದರ ಹೆಚ್ಚಿಲ್ಲ. ಮುಖ್ಯಮಂತ್ರಿಗಳು ಅವಲೋಕಿಸಿ ಎಲ್ಲ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.