- ಚುನಾವಣೆ ನಡುವೆಯೇ ಕೇಂದ್ರ ಸರಕಾರ ತಮಿಳುನಾಡು ಜನರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ! ಸೂಪರ್ಸ್ಟಾರ್ ರಜನೀಕಾಂತ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ!!
ಬೆಂಗಳೂರು/ಚೆನ್ನೈ/ನವದೆಹಲಿ: ಎರಡು ಹಂತಗಳ ತಮಿಳುನಾಡು ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 6ರಂದು ನಡೆಯಲಿದೆ. ಎರಡನೇ ಹಂತದ ವೋಟಿಂಗ್ ಮೇ 2ರಂದು ಮುಗಿಯಲಿದೆ. ಚುನಾವಣೆ ನಡುವೆಯೇ ಕೇಂದ್ರ ಸರಕಾರ ತಮಿಳುನಾಡು ಜನರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ!
ಸೂಪರ್ಸ್ಟಾರ್ ರಜನೀಕಾಂತ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ!!
2019ನೇ ಸಾಲಿನ 51ನೇ ದಾದಾಸಾಹೇಬ್ ಫಾಲ್ಕೆ ಪುರಸ್ಕಾರವನ್ನು ಖ್ಯಾತ ನಟ, ಸೂಪರ್ಸ್ಟಾರ್ ರಜನೀಕಾಂತ್ ಅವರಿಗೆ ನೀಡಲಾಗುತ್ತಿದೆ. ಅವರನ್ನು ಆಯ್ಕೆ ಮಾಡಿದ ಪ್ರಶಸ್ತಿ ಆಯ್ಕೆ ಸಮಿತಿಗೆ ನನ್ನ ಧನ್ಯವಾದಗಳು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ಅಲ್ಲದೆ; ಮೇ 3ರಂದು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರಜನಿ ಅವರಿಗೆ ಪ್ರದಾನ ಮಾಡಲಾಗುವುದೆಂದು ಜಾವ್ದೇಕರ್ ತಿಳಿಸಿದ್ದಾರೆ. ಜತೆಗೆ, ಅವರು ಸೂಪರ್ಸ್ಟಾರ್ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ರಜನೀಕಾಂತ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಲೆಮಾರುಗಳಿಂದ ಜನರನ್ನು ತಮ್ಮ ಅಭಿನಯದಿಂದ ಮನರಂಜಿಸುತ್ತಿರುವ ತಲೈವ ಅವರಿಗೆ ದಾದಾಸಾಹೇಬ್ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಅಭಿಮಾನಿಗಳಿಗೆ ಖುಷಿ, ಆದರೆ ಪ್ರಶಸ್ತಿ ಕೊಟ್ಟ ಸಮಯದ ಬಗ್ಗೆ ಚರ್ಚೆ
ರಜನೀಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ಸಂದ ಬಗ್ಗೆ ಎಲ್ಲೆಲ್ಲೂ ಸ್ವಾಗತ, ಸಂಭ್ರಮ ವ್ಯಕ್ತವಾಗುತ್ತಿದೆ. ತಲೈವ ಅಭಿಮಾನಿಗಳ ಸಂಭ್ರಮಕ್ಕಂತೂ ಪಾರವೇ ಇಲ್ಲ. ಆದರೆ, ಅನೇಕರು ಈ ಪ್ರಶಸ್ತಿಯನ್ನು ಘೋಷಣೆ ಮಾಡಿದ ಸಂದರ್ಭದ ಬಗ್ಗೆ ತಕರಾರು ತೆಗೆದಿದ್ದಾರೆ.
ತಮಿಳುನಾಡು ರಾಜ್ಯದಲ್ಲಿ ಸದ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಡಿಎಂಕೆ, ಎಐಡಿಎಂಕೆ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್, ಎಐಡಿಎಂಕೆ ಜತೆ ಕೈಜೋಡಿಸಿರುವ ಬಿಜೆಪಿ ಹೇಗಾದರೂ ಮಾಡಿ ರಾಜ್ಯದಲ್ಲಿ ಅಸ್ತಿತ್ವ ಹೊಂದಲು ಹೆಣಗಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರೆಲ್ಲ ರಾಜ್ಯಕ್ಕೆ ಬಂದು ಭರ್ತಿ ಪ್ರಚಾರ ಮಾಡುತ್ತಿದ್ದಾರೆ. ರಣಬಿಸಿಲ ನಡುವೆ ಬೆವರು ಹರಿಸುತ್ತಿದ್ದಾರೆ.
ಏಪ್ರಿಲ್ 6 ಮತ್ತು ಮೇ 2ರಂದು ಎರಡು ಹಂತಗಳಲ್ಲಿ ನಡೆಯುವ ಚುನಾವಣೆ ಹೊತ್ತಿನಲ್ಲಿ ಈ ಪ್ರಶಸ್ತಿ ಘೋಷಣೆ ಮಾಡಬಾರದಿತ್ತು. ಚುನಾವಣೆ ಮುಗಿದ ಮೇಲೆ ಅನೌನ್ಸ್ ಮಾಡಬೇಕಿತ್ತು. ತಲೈವ ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದೆ ಎಂದು ಜಾಲತಾಣಗಳಲ್ಲಿ ತೀವ್ರ ಚರ್ಚೆ ಆಗುತ್ತಿದೆ.
ಇನ್ನು ಕೆಲವರು, ತಲೈವ ಅವರು ಖಂಡಿತಾ ಪ್ರಶಸ್ತಿಗೆ ಅರ್ಹರು. ಆದರೆ, ಚುನಾವಣೆ ಹೊತ್ತಿನಲ್ಲಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿ ಅವರನ್ನು ಅಪಮಾನಿಸಲಾಗಿದೆ ಎಂದು ಟ್ವಿಟ್ಟಿಸಿದ್ದಾರೆ.
ಇನ್ನೊಂದೆಡೆ, ಪ್ರಕಾಶ್ ಜಾವ್ದೇಕರ್ ಈ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆಯೇ ರಾಜ್ಯ, ರಾಷ್ಟ್ರ ಮಟ್ಟದ ಬಿಜೆಪಿ ಮುಖಂಡರಂತೂ ಮುಗಿಬಿದ್ದು ಟ್ವೀಟ್ ಮಾಡುತ್ತಿದ್ದಾರೆ. ಈಗಾಗಲೇ ಟ್ವೀಟ್ ಮಾಡಿದವರ ಪೈಕಿ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ, ಮುಖ್ಯಮಂತ್ರಿ ಯಡಿಯೂರಪ್ಪ ಮುಂತಾದವರು ಇದ್ದಾರೆ.
ವಿಪರ್ಯಾಸ ಎಂದರೆ, ರಜನೀ ಅವರಿಗೆ ಪದ್ಮವಿಭೂಷಣ ಪುರಸ್ಕಾರ ನೀಡುವಾಗಲೂ ಹೀಗೆಯೇ ಆಗಿತ್ತು. 2016 ಮೇ 16ಕ್ಕೆ ರಾಜ್ಯದ 232 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಿಗದಿ ಆಗಿತ್ತು. ಆದರೆ, ಕೆಲ ತಿಂಗಳ ಮೊದಲು ಅವರಿಗೆ ಆ ಪುರಸ್ಕಾರ ಘೋಷಣೆ ಆಗಿತ್ತು. ಚುನಾವಣೆಗೆ ಒಂದು ತಿಂಗಳ ಮೊದಲು, ಅಂದರೆ; 2016 ಏಪ್ರಿಲ್ 12ರಂದು ರಜನಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.