- ಚಲನಚಿತ್ರ ಮಂದಿರಗಳ 50% ಆಸನ ಭರ್ತಿಗೆ ಅವಕಾಶ ನೀಡಿರುವ ಕೋವಿಡ್ ಮಾರ್ಗಸೂಚಿಯನ್ನು ಬದಲಿಸಬೇಕೆಂದು ಚಿತ್ರರಂಗ ಮಾಡಿರುವ ಮನವಿಯನ್ನು ಸರಕಾರ ತಿರಸ್ಕರಿಸಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ನಟನೆಯ ʼಯುವರತ್ನʼ ಚಿತ್ರತಂಡವು 100% ಆಸನ ಭರ್ತಿಗೆ ಡಿಮಾಂಡ್ ಮಾಡಿತ್ತು.
ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.
ಜತೆಗೆ; ಬೆಂಗಳೂರು ನಗರ ಸೇರಿ ಒಟ್ಟು 8 ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕೊಡುವ ನಿರ್ಧಾರವೂ ಬದಲಾಗುವುದಿಲ್ಲ ಎಂದು ತಿಳಿಸಿದೆ. ಇದರೊಂದಿಗೆ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ʼಯುವರತ್ನʼ ಚಿತ್ರತಂಡ ಮಾಡಿದ್ದ ಮನವಿಯನ್ನು ಸರಕಾರ ತಿರಸ್ಕರಿಸಿದಂತಾಗಿದೆ.
ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿದೆ. ಅದರ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಜ್ಞರ ಸಲಹೆ ಹಾಗೂ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಇದು ಏಕಾಏಕಿ ಜಾರಿ ಮಾಡಿದ ಮಾರ್ಗಸೂಚಿ ಅಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಎರಡನೇ ಅಲೆಗೆ ಕಡಿವಾಣ ಹಾಕಲೇಬೇಕು. ಪರಿಸ್ಥಿತಿ ಕೈಮೀರಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಈ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿರುವ ಮಾರ್ಗಸೂಚಿಯನ್ನು ಬದಲಿಸುವ ಅಥವಾ ಆ ಬಗ್ಗೆ ರಾಜಿ ಮಾಡಿಕೊಳ್ಳುವ ಪ್ರಮೇಯವಿಲ್ಲ ಎಂದು ಅವರು ಹೇಳಿದರು.
ತಾಂತ್ರಿಕ ಸಲಹಾ ಸಮಿತಿ ಅನೇಕ ಕಟು ಎಚ್ಚರಿಕೆಗಳನ್ನು ನೀಡಿದೆ. ಇನ್ನೂ ಎರಡು ತಿಂಗಳು ಎರಡನೇ ಅಲೆಯ ಅಬ್ಬರ ಇರುತ್ತದೆ. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಏಪ್ರಿಲ್ 20ರವರೆಗೂ ಹೊಸ ಮಾರ್ಗಸೂಚಿ ಜಾರಿಯಲ್ಲಿ ಇರುತ್ತದೆ ಎಂದು ಅವರು ತಿಳಿಸಿದರು.
ಇನ್ನು; ಹೊಸ ಮಾರ್ಗಸೂಚಿಯನ್ನು ಬದಲಾಯಿಸುವಂತೆ ಕೆಲವರು ಮನವಿ ಮಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಬಾರದ ಹೊರತು ಈ ಮಾರ್ಗಸೂಚಿ ಬದಲಾವಣೆ ಇಲ್ಲ. ಸದ್ಯಕ್ಕೆ ಇಂಥ ಮನವಿಗಳನ್ನು ಪುರಸ್ಕರಿಸಿಸುವುದು ಕಷ್ಟ ಎಂದು ಅವರು ಸ್ಪಷ್ಟಪಡಿಸಿದರು.
ಈಗ ಮಕ್ಕಳಲ್ಲೇ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಹೀಗಾಗಿ ಸಿನಿಮಾ ಥಿಯೇಟರ್ ಪ್ರೇಕ್ಷಕರ ಭರ್ತಿ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆಯುವ ಪ್ರಶ್ನೆ ಇಲ್ಲ. ಅದೇ ರೀತಿ ಸಾಮಾಜಿಕ ಕೂಟಗಳು, ಜಾತ್ರೆಗಳು ಮತ್ತಿತರೆ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದರಲ್ಲಿ ದಯವಿಟ್ಟು ರಾಜಕೀಯ ಬೆರೆಸುವುದು ಬೇಡ ಎಂದು ಅವರು ಮನವಿ ಮಾಡಿದರು.
ʼಈಗ ಲಸಿಕೆ ಸಹ ಲಭ್ಯವಿರುವುದರಿಂದ ಹೆಚ್ಚು ಮಂದಿ ಲಸಿಕೆ ಪಡೆದು, ಕೆಲ ದಿನಗಳ ಕಾಲ ಕಠಿಣ ನಿಯಮಗಳನ್ನು ಪಾಲಿಸಿಬೇಕು. ನಿಮ್ಮೆಲ್ಲರ ಸಹಕಾರದಿಂದ ಪ್ರಕರಣಗಳು ಕಡಿಮೆಯಾದರೆ ಮತ್ತೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಬಹುದು. ಈ ನಿರ್ಧಾರ ವೈಜ್ಞಾನಿಕ ನೆಲೆಗಟ್ಟಿಯಲ್ಲಿ ರಾಜ್ಯದ ಜನರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಆಡಳಿತಾತ್ಮಕ ನಿರ್ಧಾರವಾಗಿದೆ. ಇದನ್ನು ರಾಜಕೀಯ ಅಥವಾ ಇನ್ಯಾವುದೇ ದೃಷ್ಟಿಯಿಂದ ಪರಿಗಣಿಸಬಾರದು’ ಎಂದು ಡಾ.ಸುಧಾಕರ್ ಅವರು ಟ್ವೀಟ್ ಮಾಡಿ ಕೋರಿದ್ದಾರೆ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…