ಬಾಗೇಪಲ್ಲಿ: ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ನಡೆದಿರುವ ಹಲ್ಲೆಯನ್ನು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಘಟಕ ಖಂಡಿಸಿದೆ.
ಬಾಗೇಪಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಾಂತ್ಯ ರೈತ ಸಂಘದ ಜಿಲ್ಲಾ ಮುಖಂಡ ಪಿ.ಮಂಜುನಾಥ ರೆಡ್ಡಿ; “ರಾಜಸ್ಥಾನದ ಅಲ್ವರ್ ಜಿಲ್ಲೆಗೆ ಕಿಸಾನ್ ಮಹಾ ಪಂಚಾಯತ್ʼನಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಹಲ್ಲೆ ನಡೆಸಲು ಯತ್ನಿಸಿದ್ದು, ಈ ಮೂಲಕ ಗೂಂಡಾ ವರ್ತನೆ ತೋರಿದ್ದಾರೆ” ಎಂದು ಕಿಡಿಕಾರಿದರು.
ರೈತ ಚಳವಳಿಯನ್ನು ಹತ್ತಿಕ್ಕಲು ಪ್ರಜಾಪ್ರಭುತ್ವ ದಮನಕಾರಿ ನೀತಿ ಅನುಸರಿಸುತ್ತಿರುವುದು ರಾಷ್ಟ್ರೀಯ ಪಕ್ಷದ ಸರಕಾರಕ್ಕೆ ಶೋಭೆ ತರುವುದಿಲ್ಲ. ಈ ರೀತಿಯ ಗೂಂಡಾ ವರ್ತನೆಗೆ ದೇಶದ ರೈತರು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಮಾತನಾಡಿ; “ಕೃಷಿ ಕಾಯ್ದೆಗಳ ವಿರುದ್ಧ ಕಳೆದ ನಾಲ್ಕು ತಿಂಗಳಿನಿಂದ ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಟಿಕಾಯತ್ ವಹಿಸಿದ್ದಾರೆ. ರಾಜಧಾನಿ ಸುತ್ತಲಿನ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಕಡಿಮೆಯಾಗಿದ್ದರೂ, ರಾಕೇಶ್ ಟಿಕಾಯತ್ ಮತ್ತು ಅವರ ಬೆಂಬಲಿಗರು ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ರೈತರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ದಾಳಿ ಮಾಡಿರುವುದು ಖಂಡನಿಯ ಎಂದರು.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ‘ಮಹಾ ಪಂಚಾಯತ್’ ಸಭೆ ನಡೆಸಿರುವ ಟಿಕಾಯತ್ ಅವರು, ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟ ತೀವ್ರಗೊಳಿಸಲು ರೈತರು ಒಂದುಗೂಡುವಂತೆ ಕರೆ ನೀಡುತ್ತಿದ್ದಾರೆಂದು ಬಯ್ಯಾರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಡಿಎಸ್.ಮುನಿಕೃಷ್ಣಪ್ಪ, ಸಿಪಿಐ(ಎಂ)ಮುಖಂಡ ಲಕ್ಷ್ಮೀನಾರಾಯಣ ರೆಡ್ಡಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀರಾಮ ನಾಯಕ್, ನಾರಾಯಣ ಸ್ವಾಮಿ ಇದ್ದರು.