- ಈ ಬಾರಿಯ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಸೋಲಿನ ಭೀತಿ ಕಾಣಿಸಿಕೊಂಡಿದೆ. ಸೋಲು ನಿಶ್ಚಿತವಾಗುತ್ತಿದ್ದಂತೆ ಇಲ್ಲ-ಸಲ್ಲದ ಆರೋಪವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ.
ಬೆಳಗಾವಿ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದುಡ್ಡು ಖರ್ಚು ಮಾಡಿ ಚುನಾವಣೆಗಳನ್ನು ಗೆಲ್ಲುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ಕೊಟ್ಟ ಅವರು; ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಈ ಬಾರಿಯ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಸೋಲಿನ ಭೀತಿ ಕಾಣಿಸಿಕೊಂಡಿದೆ. ಸೋಲು ನಿಶ್ಚಿತವಾಗುತ್ತಿದ್ದಂತೆ ಇಲ್ಲ-ಸಲ್ಲದ ಆರೋಪವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಬೆಳವಣಿಗೆಯ ವೇಗವನ್ನು ಸಿದ್ದರಾಮಯ್ಯ ಅವರಿಗೆ ಸಹಿಸಲಾಗುತ್ತಿಲ್ಲ. ವರುಣಾದಲ್ಲಿಯೇ ಅವರ ಮುಂದಿನ ಸ್ಪರ್ಧೆ ಎಂಬ ಹೇಳಿಕೆ ಇತ್ತೀಚೆಗೆ ಹೊರ ಬಿದ್ದ ಹಿನ್ನೆಲೆಯಲ್ಲಿ ಗಾಬರಿಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆಂದು ಸಚಿವರು ಹೇಳಿದರು.
ಬಿಜೆಪಿ, ವಿಜಯೇಂದ್ರ ಅವರು ದುಡ್ಡುಕೊಟ್ಟು ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಹಾಗಾದರೆ ದುಡ್ಡು ಕೊಟ್ಟು ಎಲ್ಲವನ್ನೂ ಕೊಂಡುಕೊಳ್ಳುವುದಾಗಿದ್ದರೆ, ಕಾಂಗ್ರೆಸ್ ಒಂದಾದರೂ ಸೀಟು ಗೆಲ್ಲುತ್ತಿತ್ತಾ? ಹೋಗಲಿ ಸಿದ್ದರಾಮಯ್ಯ ಅವರಾದರೂ ಗೆಲ್ಲುತ್ತಿದ್ದರಾ? ಎಂದವರು ಪ್ರಶ್ನಿಸಿದರು.

ಮೊದಲು ತಮ್ಮ ಪಕ್ಷದೊಳಗಿನ ಗೊಂದಲವನ್ನು ಬಗೆಹರಿಸಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಒಬ್ಬರ ಕಾಲನ್ನು ಒಬ್ಬರು ಎಳೆದುಕೊಳ್ಳುತ್ತಾ, ಕಿತ್ತಾಡುತ್ತಿದ್ದಾರೆ. ಸುಮ್ಮನೆ ಆ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ. ಮೊದಲು ತಮ್ಮ ಖುರ್ಚಿಗಳನ್ನು ಭದ್ರ ಮಾಡಿಕೊಳ್ಳಲಿ, ಆ ನಂತರ ಉಳಿದ ವಿಷಯಗಳ ಬಗ್ಗೆ ಗಮನಹರಿಸಲಿ ಎಂದು ಸಚಿವ ಸೋಮಶೇಖರ್ ಹೇಳಿದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಜನಪರ ಯೋಜನೆ, ಕ್ರಮಗಳು, ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಜನ ಮೆಚ್ಚುಗೆ ಪಡೆದಿದೆ ಎಂದರು ಅವರು.

















