ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡುವುದು ಬೇಡ ಎಂದು ಹಠಕ್ಕೆ ಬಿದ್ದಿರುವ ಖಾಸಗಿ ಶಾಲೆಗಳ ಮಾಲೀಕರ ಜತೆ ಸಮಾಲೋಚನೆ ನಡೆಸಿದ ಸಚಿವ ಎಸ್.ಸುರೇಶ್ ಕುಮಾರ್ ಪರೀಕ್ಷೆಗಳ ಬಗ್ಗೆ ಹೇಳಿದ್ದೇನು?
ಬೆಂಗಳೂರು: 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಅಥವಾ ನಡೆಸಿದಿರುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸೋಮವಾರ ಖಾಸಗಿ ಶಾಲೆ ಮಾಲೀಕರ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ನಿಗಾ ವಹಿಸಿದೆ. ಅದೇ ರೀತಿ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಆದ್ಯತೆ ನೀಡಲಾಗಿದೆ. ಜತೆಗೆ, ಶಾಲೆಗಳ ಪರಿಸ್ಥಿತಿಯ ಬಗ್ಗೆ ಸರಕಾರ ಕಾಳಜಿ ವಹಿಸಿದೆ ಎಂದು ಅವರು ತಿಳಿಸಿದರು.
ಸರಕಾರ ಈಗಾಗಲೇ 6-9 ತರಗತಿಗಳನ್ನು ಏಪ್ರಿಲ್ 20ರವರೆಗೆ ಸ್ಥಗಿತ ಮಾಡಿ ಆದೇಶಿಸಿದೆ. ಇನ್ನು 1ರಿಂದ 9 ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ ಬೇಡವೋ ಎಂಬ ಚರ್ಚೆ ನಡೆದಿದೆ. ಇವತ್ತಿನ ಸಭೆಯಲ್ಲಿ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಪೋಷಕರ ಪ್ರತಿನಿಧಿಗಳು ಭಾಗವಹಿಸಿದ್ದರು. ಜತೆಗೆ; ಶಿಕ್ಷಣತಜ್ಞ ನಿರಂಜನಾರಾಧ್ಯ ಕೂಡ ಸಲಹೆಗಳನ್ನು ನೀಡಿದರು ಎದು ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಕ್ಯಾಮ್ಸ್, ರುಪ್ಸಾ, ಉತ್ತರ ಕರ್ನಾಟಕ ಅನುದಾನ ರಹಿತ ಶಾಲೆಗಳ ಒಕ್ಕೂಟ, ವಿಧ್ಯಾಭಾರತಿ ಸೇರಿದಂತೆ ಒಟ್ಟು 47 ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ ಖಾಸಗಿ ಶಾಲೆಗಳ ಮಾಲೀಕರು ಯಾವುದಾದರೂ ಒಂದು ಮಾರ್ಗದಲ್ಲಿ ಪರೀಕ್ಷೆ ನಡೆಸಲು ಸಲಹೆ ಕೊಟ್ಟಿದ್ದಾರೆ. ಹಾಗೆಯೇ ಕಡ್ಡಾಯ ಶಿಕ್ಷಣ ಕಾಯ್ದೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಸಚಿವರು ಹೇಳಿದರು.
ಪರೀಕ್ಷೆ ಇಲ್ಲದೆ ಪಾಸ್ ಮಾಡಲು ವಿರೋಧ
ಸಭೆ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲು ಖಾಸಗಿ ಶಾಲೆ ಮಾಲೀಕರು ವ್ಯಕ್ತಪಡಿಸಿದರು. ಈ ನಡುವೆ ಪೋಷಕರು ಮಕ್ಕಳನ್ನು ಆಫ್ಲೈನ್ ಪರೀಕ್ಷೆಗೆ ಕಳಿಸುವುದಿಲ್ಲ ಎನ್ನುತ್ತಿದ್ದಾರೆ. ಈ ಬೇಡಿಕೆಯನ್ನು ಆಲಿಸಿದ ಸಚಿವರು, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ರುಪ್ಸಾ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಕ್ಯಾಮ್ಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಹಾಗೂ ಪೋಷಕರ ಸಂಘಟನೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
Courtesy: Lead photo from Suresh Kumar S Facebook