ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಇದೇ ಏಪ್ರಿಲ್ 12ರಿಂದ ಸರ್ವ ದರ್ಶನ ಟೋಕನ್ ವಿತರಣೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.
ತಿರುಮಲ: ದೇಶಾದ್ಯಂತ ಕೋವಿಡ್ ಎರಡನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಶಿರಡಿಯ ಶ್ರೀ ಸಾಯಿಬಾಬಾ ಆಲಯ ಹಾಗೂ ಮುಂಬಯಿಯ ಶ್ರೀ ಸಿದ್ಧಿವಿನಾಯಕ ದೇವಾಲಯಗಳನ್ನು ಬಂದ್ ಮಾಡಲಾಗಿದೆ. ಈಗ ಜಗತ್ಪ್ರಸಿದ್ಧ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಆಲಯದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ತಿರುಪತಿ ಹಾಗೂ ತಿರುಮಲವೂ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಕೋವಿಡ್ ಸೋಂಕಿತರು ಹೆಚ್ಚುತ್ತಿರುವ ಕಾರಣಕ್ಕೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ (ಟಿಟಿಡಿ) ಇದೇ ಏಪ್ರಿಲ್ 12ರಿಂದ ಸರ್ವ ದರ್ಶನ ಟೋಕನ್ ವಿತರಣೆಯನ್ನು ಪೂರ್ಣವಾಗಿ ಸ್ಥಗಿತಗೊಳಿಸುತ್ತಿರುವುದಾಗಿ ಪ್ರಕಟಿಸಿದೆ.
ಭಾನುವಾರ, ಅಂದರೆ; ಏಪ್ರಿಲ್ 11ರ ಸಂಜೆವರೆಗೂ ಮಾತ್ರವೇ ಸರ್ವ ದರ್ಶನ ಟೋಕನ್ಗಳನ್ನು ನೀಡಲಾಗುವುದು. ಮತ್ತೆ ಟೋಕನ್ಗಳ ವಿತರಣೆ ಯಾವಾಗಿನಿಂದ ಆರಂಭವಾಗುತ್ತದೆ ಎಂಬ ಮಾಹಿತಿಯನ್ನು ತಡವಾಗಿ ತಿಳಿಸುವುದಾಗಿ ಟಿಟಿಡಿ ತಿಳಿಸಿದೆ.
ಬೆಟ್ಟದ ಮೇಲೆ ಮಾತ್ರವಲ್ಲದೆ, ತಿರುಪತಿ ನಗರದಲ್ಲಿ ಕೂಡ ಕೋವಿಡ್ ಸೋಂಕಿತರು ಹೆಚ್ಚುತ್ತಿದ್ದಾರೆ. ಇನ್ನು ಭೂ ದೇವಿ ಕಾಂಪ್ಲೆಕ್ಸ್, ವಿಷ್ಣು ನಿವಾಸಂನಲ್ಲಿ ಟೋಕನ್ಗಳನ್ನು ಪಡೆದುದುಕೊಳ್ಳಲು ಸಾವಿರಾರು ಭಕ್ತಾಧಿಗಳು ನಿಲ್ಲಬೇಕಾಗುತ್ತದೆ. ಹೀಗಾಗಿ ಅಲ್ಲೆಲ್ಲ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಇದೆ. ಈ ಹಿನ್ನೆಲೆ ಸರಕಾರದ ಮಾರ್ಗಸೂಚಿ ಹಾಗೂ ತಜ್ಞರ ಸಲಹೆಯಂತೆ ಸರ್ವ ದರ್ಶನ ಟೋಕನ್ಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕರ್ನಾಟಕದಿಂದ ಭಕ್ತಾಧಿಗಳು ತಿರುಮಲಕ್ಕೆ ಹೋಗುವುದು ಕಡಿಮೆಯಾಗಿದೆ. ಹಾಗೆಯೇ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದಲೂ ಬರುವ ಭಕ್ತರ ಪ್ರಮಾಣ ಕಡಿಮೆಯಾಗಿದೆ. ಹೀಗಿದ್ದರೂ ಟಿಟಿಡಿ ಮುನ್ನೆಚ್ಚರಿಕೆ ವಹಿಸಿ ಈ ಕ್ರಮ ಕೈಗೊಂಡಿದೆ.
ಆನ್ಲೈನ್ನಲ್ಲಿ ಪ್ರತಿದಿನ 15,000 ಟೋಕನ್ಗಳನ್ನು ನೀಡಲಾಗುತ್ತದೆ. ಈ ಮೊದಲು, ಅಂದರೆ; ಮಾರ್ಚ್ನಲ್ಲಿ ದಿನಕ್ಕೆ 22,000 ವರೆಗೂ ಸರ್ವದರ್ಶನ ಟೋಕನ್ಗಳನ್ನು ನೀಡಲಾಗುತ್ತಿತ್ತು. ಬಳಿಕ ಆ ಪ್ರಮಾಣವನ್ನು 15,000ಕ್ಕೆ ಇಳಿಸಲಾಗಿತ್ತು.
ಶ್ರೀ ಕಾಳಹಸ್ತಿ I Photo Courtesy: Wikipedia
ಕಾಳಹಸ್ತಿಯಲ್ಲೂ ಮುನ್ನೆಚ್ಚರಿಕೆ
ಇದೇ ವೇಳೆ ಶ್ರೀ ಕಾಳಹ ಸ್ತಿಯಲ್ಲೂ ಬಿಗಿಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲಿ ನಿತ್ಯವೂ ನಡೆಯುವ ರಾಹುಶಾಂತಿ ಪೂಜೆಯನ್ನು ಬಂದ್ ಮಾಡುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ಭಕ್ತರ ನಡುವೆ ದೈಹಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ.
ತಿರುಪತಿಯಲ್ಲೂ ಹೆಚ್ಚುತ್ತಿರುವ ಸೋಂಕು
ಸದ್ಯಕ್ಕೆ ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹೀಗಾಗಿ ಅಂಕೆ ಇಲ್ಲದೆ ರಾಜಕೀಯ ಸಮಾವೇಶಗಳು, ಸಭೆಗಳು ನಡೆಯುತ್ತಿವೆ. (ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.) ಹೀಗಾಗಿ ನಗರದಲ್ಲಿ ಸೋಂಕು ಹೆಚ್ಚುತ್ತಿದೆ. ಪ್ರಸಿದ್ಧ ಶ್ರೀ ಗೋವಿಂದರಾಜುಲು ದೇವಾಲಯ ಸೇರಿದಂತೆ ಹತ್ತಿರದ ಅಲಮೇಲ ಮಂಗಾಪುರದ ಅಮ್ಮನವರ ಆಲಯದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಲ್ಲೆಲ್ಲ ದೇವರ ದರ್ಶನ ವ್ಯತ್ಯಯವಾಗುವ ನಿರೀಕ್ಷೆ ಇದೆ.
ಶ್ರೀ ಗೋವಿಂದರಾಜುಲು ದೇವಾಲಯ I Photo Courtesy: Wikipedia
Lead photo: CKPhotography ಸಿಕೆಪಿ@ckphotographi