ಮೈಸೂರು: ಕೋವಿಡ್ ನಿಯಂತ್ರಣಕ್ಕೆ ಅರಮನೆ ನಗರಿ ಮೈಸೂರಿನಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು; ಏಪ್ರಿಲ್ 10ರಿಂದ 20ರವೆರೆಗೆ ಮೈಸೂರಿನ ಪ್ರವಾಸಿ ತಾಣಗಳು, ರೆಸಾರ್ಟ್, ಹೊಟೇಲ್, ಚಿತ್ರಮಂದಿರಗಳಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಕುರಿತು ಆದೇಶ ಹೊರಡಿಸಿದ್ದು, ಈ ತಿಂಗಳ 10ರಿಂದ ಸಾಲು ಸಾಲು ರಜೆಗಳಿದ್ದು ಮೈಸೂರಿನ ಯಾವುದೇ ಪ್ರವಾಸಿ ತಾಣಗಳಿಗೆ ನಿರ್ಬಂಧವಿಲ್ಲ. ಆದರೆ, ಈ ಸ್ಥಳಗಳಿಗೆ ಭೇಟಿ ನೀಡುವವರಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಕಡ್ಡಾಯ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರವಾಸಿ ತಾಣಗಳಲ್ಲಿ ಕೊರೊನಾ ವರದಿ ತಪಾಸಣೆಗಾಗಿ 300 ಮಂದಿ ಹೋಮ್ ಗಾರ್ಡ್ʼಗಳನ್ನು ನೇಮಕ ಮಾಡಲಾಗುವುದು. ನಗರ ಪ್ರದೇಶದಲ್ಲಿ ಕೋವಿಡ್ ಹೆಚ್ಚಾಗುತ್ತಿದೆ. ಹಾಗಾಗಿ ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೊರೊನಾ ನೆಗೆಟಿವ್ ವರದಿ ತಂದರೆ ಒಳ್ಳೆಯದು ಎಂದು ಅವರು ಹೇಳಿದರು.
ಸಭೆ, ಸಮಾರಂಭ ನಡೆಸುವುದಕ್ಕೆ ಪೊಲೀಸರ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉಪಸ್ಥಿತರಿದ್ದರು.