ಸೂಯೆಜ್ ಒಂದು ಕಾಲುವೆ ಮಾತ್ರವಲ್ಲ, ಬರೀ ವ್ಯಾಪಾರಕ್ಕಾಗಿ ಸೀಮಿತವಾದ ಜಲಮಾರ್ಗವಲ್ಲ. ಯುರೋಪ್ ಮತ್ತು ಏಷ್ಯಾ ಪಾಲಿಗೆ ಒಂದು ಜೀವನಾಡಿ. ಶತಮಾನಗಳಷ್ಟು ಸುದೀರ್ಘ ಇತಿಹಾಸವುಳ್ಳ ಈ ಜಲದಾರಿ ಖಂಡ ಖಂಡಗಳ ನಡುವೆ ಅಂತರ ಕಡಿಮೆ ಮಾಡಿತು ಮಾತ್ರವಲ್ಲ, ಜಗತ್ತಿನ ಸಮೀಕರಣವನ್ನೇ ಬದಲಿಸಿದ ರಾಜತಾಂತ್ರಿಕ ಹಾದಿಯೂ ಆಗಿತ್ತು. ನಮ್ಮ ಅಂಕಣಕಾರ ಡಾ.ಗುರುಪ್ರಸಾದ ಎಚ್ ಎಸ್ ಅಲ್ಲೊಂದು ಸುತ್ತು ಹಾಕಿದ್ದಾರೆ.
ಜಗತ್ತಿನ ಅತಿ ದಟ್ಟಣೆಯ ಮತ್ತು ಮುಖ್ಯ ಜಲಮಾರ್ಗ ಎನಿಸಿಕೊಂಡಿರುವ ಈಜಿಫ್ತ್‌ನ ಸೂಯೆಜ್ ಕಾಲುವೆಯಲ್ಲಿ ತೈವಾನ್ ಕಂಪೆನಿ ಎವರ್‌ಗ್ರೀನ್ ಮರೈನ್ ಹೆಸರಿನ ಹಡಗು ತೆರಳುವಾಗ ಬೀಸಿದ ಭಾರೀ ಗಾಳಿಯಿಂದಾಗಿ ತೀರದಲ್ಲಿನ ಮರಳು ನೀರಿಗೆ ಸೇರಿ ಮುಂದಿನ ಮಾರ್ಗ ಸರಿಯಾಗಿ ಕಾಣಿಸದ ಕಾರಣ ಹಡಗು ಸಾಗಿಸುವುದಕ್ಕೆ ಕಷ್ಟವಾಗಿ, ನಿಯಂತ್ರಣ ಕಳೆದುಕೊಂಡ ನಾವಿಕರು ಅದನ್ನು ಮರಳಿನ ಮೇಲೆ ಸಾಗಿಸಿದ್ದರಿಂದ ಈ ಬೃಹತ್ ಹಡಗು ಅಲ್ಲೇ ಸಿಲುಕಿಕೊಂಡಿತ್ತು.
ಇದರಿಂದ ನೂರಾರು ಇತರ ಹಡಗುಗಳು ಸಾಗಲು ಅವಕಾಶವಾಗದೇ ಅಲ್ಲೇ ಉಳಿದುಕೊಂಡಿತ್ತು.
ಇದರಿಂದ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟವಾಗಿದೆಯಂತೆ. ನೂರಾರು ಹಡಗುಗಳು ಸಂಚಾರಕ್ಕೆ ಅವಕಾಶವಾಗದೇ ನಿಂತಲ್ಲೇ ನಿಂತಿದ್ದು, ಇದರಿಂದ ಜಾಗತಿಕ ವ್ಯಾಪಾರದ ಮೇಲೆ ಕರಿನೆರೆಳು ಅವರಿಸಿತ್ತು.
ಹಲವು ದೇಶಗಳ ವ್ಯಾಪಾರ ವ್ಯವಹಾರಕ್ಕಾಗಿ ಈ ಜಲಮಾರ್ಗವನ್ನೇ ಆಶ್ರಯಸಿರುವುದರಿಂದ ವ್ಯಾಪಾರ ವಹಿವಾಟು ಏರುಪೇರು ಕೂಡ ಆಗಿತ್ತು.
ಯುರೋಪ್ ಹಾಗೂ ಏಷ್ಯಾ ಖಂಡವನ್ನು ಸಂಪರ್ಕಿಸುವ ಈ 193 ಕಿ.ಮೀ. ಉದ್ದದ ಸೂಯೆಜ್ ಕಾಲುವೆ 1859ರಿಂರ 1869ರವರೆಗೂ ಸುಮಾರು ಹತ್ತು ವರ್ಷಗಳ ಕಾಲ ಕಟ್ಟಲಾದ 152 ವರ್ಷಗಳ ಈ ಈಜಿಫ್ತ್‌ನ ಸೂಯೆಜ್ ಕಾಲುವೆಯ ಇತಿಹಾಸ ನೋಡಿದರೆ, ಈ ಕಾಲುವೆಯನ್ನು ಮೆಡಿಟರೇನಿಯನ್ ಸಮುದ್ರ ಹಾಗೂ ಕೆಂಪು ಸಮುದ್ರ ಸಂಪರ್ಕಿಸಲು ನಿರ್ಮಿಸಲಾಯಿತು. ಈ ಕಾಲುವೆ ಅಟ್ಲಾಂಟಿಕ್ ಸಮುದ್ರ ಹಾಗೂ ಭಾರತ, ಪಶ್ಚಿಮ ಪೆಸಿಫಿಕ್ ಭೂಪ್ರದೇಶಕ್ಕೆ ಅತಿ ವೇಗವಾಗಿ ತಲುಪಬಹುದಾದ ಮಾರ್ಗವೂ ಎನಿಸಿಕೊಂಡಿದೆ.
ವಿಶ್ವದಲ್ಲೇ ಸದಾ ಕಾರ್ಯನಿರತ ಮಾರ್ಗ ಎಂದು ಈ ಕಾಲುವೆಯನ್ನು ಕರೆಯಲಾಗುತ್ತದೆ. ಮೊದಲಿಗೆ ಇದರ ಆಲೋಚನೆ ಮತ್ತು ರೂಪುರೇಷೆ ಹಾಕಿದ್ದು ನೆಪೋಲಿಯನ್, ಈತನ ಕಾಲಾವಧಿ ನಂತರ ಬಂದ ರಾಜರೂ ಈ ಕಾಲುವೆಯು ಹಂತಹಂತವಾಗಿ ಅಭಿವೃದ್ಧಿಯಾಗುವಲ್ಲಿ ಕೊಡುಗೆ ನೀಡಿದರು.
ಯುರೋಪ್ ಹಾಗೂ ಏಷ್ಯಾ ದೇಶಗಳ ನಡುವಿನ ಕಡಲ ವ್ಯಾಪಾರ ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾದ್ದರಿಂದ ಸುಮಾರು 300 ವರ್ಷಗಳ ಹಿಂದೆ ಈ ನಿರ್ಮಾಣ ಕಾರ್ಯರೂಪಕ್ಕೆ ಬಂದಿತ್ತು,
1799ರಲ್ಲಿ ನೆಪೋಲಿಯನ್ ಇದಕ್ಕೆ ಪಕ್ಕಾ ರೂಪುರೇಷೆ ಹಾಕಿದರು. 1800ರಲ್ಲಿ ಫ್ರೆಂಚ್ ಎಂಜಿನಿಯರ್ ಫರ್ಡಿನಾಂಡ್ ಡಿ ಲೆಸೆಪ್ ಈ ಕಾಲುವೆ ನಿರ್ಮಾಣಕ್ಕೆ ಈಜಿಫ್ತ್ ವೈಸರಾಯ್ ಅವರನ್ನು ಒತ್ತಾಯಿಸಿದರು. 1858ರಲ್ಲಿ ಸೂಯೆಜ್ ಶಿಪ್ ಚಾನೆಲ್ ಕಂಪನಿ ಇದರ ನಿರ್ಮಾಣ ಕಾರ್ಯ ಕೈಗೊಂಡು 99 ವರ್ಷಗಳ ಕಾಲ ಕಾಲುವೆಯನ್ನು ಬಳಕೆ ಮಾಡಿತ್ತು. ಆ ನಂತರ ಈಜಿಫ್ತ್ ಸರಕಾರಕ್ಕೆ ಇದರ ಹಕ್ಕನ್ನು ಹಸ್ತಾಂತರಿಸಿತು. ಹಲವು ಸಮಸ್ಯೆಗಳ ನಡುವೆಯೂ, 1869ರಲ್ಲಿ ಈ ಕಾಲುವೆಯನ್ನು ಅಂತಾರಾಷ್ಟ್ರೀಯ ಸಂಚಾರಕ್ಕೆ ತೆರೆಯಲಾಯಿತು.
ಕೆಂಪು ಸಮುದ್ರಕ್ಕೆ ಟಚ್ ಆಗುವ ಸೂಯೆಜ್ ಕಾಲುವೆ.
ಸೂಯೆಜ್ ಕಾಲುವೆ ತನ್ನದಾಗಿಸಿಕೊಂಡ ಈಜಿಫ್ತ್
ಈ ಕಾಲುವೆಯ ಕಂಪನಿಯಲ್ಲಿ ಫ್ರೆಂಚ್ ಹಾಗೂ ಬ್ರಿಟೀಷ್ ಪಾಲು ಹೊಂದಿದ್ದು, 1936ರ ಒಪ್ಪಂದದ ಭಾಗವಾಗಿ ಸೂಜೆಯ್ ಕಾಲುವೆ ಉದ್ದಕ್ಕೂ ರಕ್ಷಣಾ ಪಡೆ ನೇಮಿಸಿ ಬ್ರಿಟೀಷ್ ಸರಕಾರ ತನ್ನ ಹಕ್ಕು ಉಳಿಸಿಕೊಳ್ಳಲು ಮುಂದಾಗಿತ್ತು.
1954ರಲ್ಲಿ ಈಜಿಫ್ತ್ ರಾಷ್ಟ್ರೀಯವಾದಿಗಳ ಒತ್ತಡ ಎದುರಿಸುತ್ತಿದ್ದ ಉಭಯ ದೇಶಗಳು ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದ ಬ್ರಿಟೀಷ್ ಸೈನ್ಯವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.
1956ರಲ್ಲಿ ಈಜಿಫ್ತ್ ಅಧ್ಯಕ್ಷ ಅಬ್ದುಲ್ ನಾಸೀರ್, ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿ ನೈಲ್ ನದಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಹಣ ನೀಡಿದರು. ಇದು ಬ್ರಿಟನ್, ಫ್ರಾನ್ಸ್ ಮತ್ತು ಇಸ್ರೇಲ್ ಜೊತೆಗಿನ ಈಜಿಫ್ತ್ ಬಿಕ್ಕಟ್ಟನ್ನು ಹೆಚ್ಚಿಸಿತು.
1957ರಲ್ಲಿ ಕೊನೆಯಾದ ಸಂಘರ್ಷ
ವಿಶ್ವಸಂಸ್ಥೆ ಮಧ್ಯಪ್ರವೇಶದ ನಂತರ 1957ರಲ್ಲಿ ಈ ಸಂಘರ್ಷ ಕೊನೆಗೊಂಡಿತು. ವಿಶ್ವದಲ್ಲೇ ಮೊದಲ ಬಾರಿ ಅಮೆರಿಕ ಶಾಂತಿಪಾಲನಾ ಪಡೆ ನಿಯೋಜಿಸಿದ ಮೊದಲ ಉದಾಹರಣೆ ಇದಾಗಿದೆ.
ಆಕ್ರಮಣಕಾರಿ ಪಡೆಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುತ್ತಿದ್ದದಂತೆ ಈಜಿಫ್ತ್ ಹಾಗೂ ಇಸ್ರೇಲ್ ನಡುವೆ ಶಾಂತಿ ಕಾಪಾಡಲು ಅಮೆರಿಕ ಸೇನೆ ಸಿನಾಯ್‍ನಲ್ಲಿ ಬೀಡುಬಿಟ್ಟಿತು. 1967ರಲ್ಲಿ ನಾಸೀರ್, ಶಾಂತಿಪಾಲನಾ ಪಡೆಗಳನ್ನು ಸಿನಾಯ್ʼನಿಂದ ಹೊರಹೋಗುವಂತೆ ಆದೇಶಿಸಿದ್ದು ಉಭಯ ದೇಶಗಳ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಯಿತು.
ಇಸ್ರೇಲಿಗಳು ಸಿನಾಯ್ ಆಕ್ರಮಿಸಿಕೊಂಡರೆ, ಪ್ರತಿಯಾಗಿ ಈಜಿಫ್ತ್ ಎಲ್ಲಾ ಹಡಗುಗಳಿಗೆ ಕಾಲುವೆಯನ್ನು ನಿರ್ಬಂಧಿಸಿತು. ಇದು 1975ರವರೆಗೂ ಮುಂದುವರಿಯಿತು. ಈ ಕಾಲುವೆ 1973ರಲ್ಲಿ ಅರಬ್- ಇಸ್ರೇಲಿ ಯುದ್ಧದ ಕೇಂದ್ರ ಬಿಂದುವಾಗಿತ್ತು. ಆ ನಂತರ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು.
ಅತಿ ಹೆಚ್ಚು ಹಡಗುಗಳು, ಕಂಟೇನರ್ʼಗಳು ಸಂಚರಿಸುವುದರಿಂದ ಸದಾ ಕಾರ್ಯನಿರತ ಮಾರ್ಗ ಎಂದು ಈ ಕಾಲುವೆಯನ್ನು ಕರೆಯಲಾಗುತ್ತದೆ. ರಾಜಕೀಯ, ಆರ್ಥಿಕ, ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಸುಮಾರು ಐದು ಬಾರಿ ಈ ಕಾಲುವೆ ಸಂಚಾರ ಸ್ಥಗಿತಗೊಂಡಿತ್ತು. ಎಂಟು ವರ್ಷಗಳ ಹಿಂದೆ ಒಮ್ಮೆ ಇದು ಸ್ಥಗಿತಗೊಂಡಿದ್ದು ಬಿಟ್ಟರೆ ಇದೇ ಕಳೆದ ಮಾರ್ಚ್ 23ಕ್ಕೆ ಸ್ಥಗಿತಗೊಂಡಿತ್ತು.
ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಸೂಯೆಜ್ ಕಾಲುವೆ.
ದಿನಕ್ಕೆ ಈ ಮಾರ್ಗದಲ್ಲಿ ಸರಾಸರಿ 50 ಹಡಗುಗಳು ಸಂಚರಿಸುತ್ತವೆ. ಕೆಲ ಸಮಯದಲ್ಲಿ ಇನ್ನೂ ಹೆಚ್ಚಿನ ಹಡಗುಗಳು ಓಡಾಡುತ್ತವೆ. ಜಾಗತಿಕ ವ್ಯಾಪಾರದ ಶೇ.12ರಷ್ಟು ಉತ್ಪನ್ನಗಳು ಇಲ್ಲಿಂದಲೇ ಸಾಗಾಟವಾಗುತ್ತವೆ.
ತೈವಾನ್ ಸಾರಿಗೆ ಕಂಪನಿಯ ಎವರ್‌ಗ್ರೀನ್ ಮರೈನ್ ಎಂಬ ಹಡಗು ಸುಮಾರು 400 ಮೀಟರ್ ಉದ್ದವಿದ್ದು, ಅಂದಾಜು 200,000 ಮೆಟ್ರಿಕ್ ಟನ್ ತೂಕವಿದೆ. ಅದರ ಬೃಹತ್ ಗಾತ್ರದ ಕಾರಣ ತೆರವು ಕಾರ್ಯಾಚರಣೆಗೆ ನಿಧಾನವಾಯಿತು. ಇದರಲ್ಲಿ ಸುಮಾರು 12 ಮಹಡಿ ಕಟ್ಟಡದ ಎತ್ತರದಷ್ಟು ಕಂಟೇನರ್ ಇದೆ. ಹಡಗಿನ ಅಡಿಯಲ್ಲಿನ ಹೂಳನ್ನು ತೆರವುಗೊಳಿಸಲು ಹಡಗಿನ ಪಕ್ಕ ನಿಲ್ಲಿಸಿದ್ದ ಬೃಹತ್ ಎಸ್ಕವೇಟರ್, ಹಡಗಿನ ಎದುರು ಆಟದ ಸಾಮಾನಿನಂತೆ ಕಾಣಿಸುತ್ತಿತ್ತು. ಕಾಲುವೆಯಲ್ಲಿ ಟ್ರಾಫಿಕ್ ಜಾಮ್‍ಗೆ ಕಾರಣವಾಗಿರುವ ನೌಕೆಯನ್ನು ಬದಿಗೆ ಸರಿಸಲು ಭಾರೀ ಸಂಖ್ಯೆಯ ಟಗ್‍ಬೋಟ್‍ಗಳು, ಡ್ರೆಡ್ಜರ್‍ಗಳನ್ನು ನಿಯೋಜಿಸಿ ಬದಿಗೆ ಸೇರಿಸಲಾಯಿತು.
ಇದರ ನಡುವೆಯೇ, ಕಾಲುವೆಯಲ್ಲಿ ಸಂಚರಿಸಲಾಗದೇ ಅನೇಕ ಸರಕು ಸಾಗಣೆ ಹಡಗುಗಳು ಪರ್ಯಾಯ ಮಾರ್ಗಗಳ ಮೊರೆ ಹೋಗಿದ್ದು, ಕಡಲ್ಗಳ್ಳರ ಜಾಲಕ್ಕೆ ಸಿಲುಕುವ ಭೀತಿ ಮೂಡಿತ್ತು. ದ್ರವೀಕೃತ ನೈಸರ್ಗಿಕ ಅನಿಲವನ್ನು ಹೊತ್ತ ಕನಿಷ್ಠ 7 ನೌಕೆಗಳು ಪಥ ಬದಲಿಸಿ, ದೀರ್ಘಾವಧಿಯ ದಾರಿಯ ಮೂಲಕ ಅಂದರೆ ದಕ್ಷಿಣ ಆಫ್ರಿಕದ ಕೇಪ್ ಆಫ್ ಗುಡ್ ಹೋಪ್ ಮೂಲಕ ಯುರೋಪ್‍ಗೆ ತೆರಳುತ್ತಿವೆ.
ಇನ್ನೂ 9 ಟ್ಯಾಂಕರ್‌ಗಳು ಇದೇ ದಾರಿಯಲ್ಲಿ ಸಾಗಲು ಮುಂದಾಗಿವೆ. ಆದರೆ, ಈ ದಾರಿಯಲ್ಲಿ ಸಾಗಿದರೆ ನೌಕೆಗಳ ಇಂಧನ ವೆಚ್ಚವು ವಿಪರೀತವಾಗಿ ಹೆಚ್ಚುವುದು ಮಾತ್ರವಲ್ಲ, ಈ ಹಡಗುಗಳು ಕಡಲ್ಗಳ್ಳರ ಕಪಿಮುಷ್ಟಿಯೊಳಗೆ ಸಿಲುಕುವ ಭೀತಿಯಿದೆ. ಏಕೆಂದರೆ, ಈ ಮಾರ್ಗವು ಜಗತ್ತಿನಲ್ಲೇ ಶಿಪ್ಪಿಂಗ್‍ಗೆ ಅತಿ ಅಪಾಯಕಾರಿ ಪ್ರದೇಶವಾಗಿದೆ. ಇಲ್ಲಿ ಕಡಲ್ಗಳ್ಳರ ಹಾವಳಿ ಹೆಚ್ಚಿರುವ ಕಾರಣ, ನೌಕೆಯಲ್ಲಿರುವ ಜನರಿಗೂ, ಸರಕುಗಳಿಗೂ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.
ಎವರ್‌ಗ್ರೀನ್ ಮರೈನ್ ಹಡಗು ಅಪಾಯದಿಂದ ಪಾರಾಗಿದ್ದರೂ ಕೂಡ ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆಗಳು ಬರುತ್ತಲೇ ಇರುತ್ತವೆ. ಹಾಗಾಗಿ ಇಂಥ ಸಮಸ್ಯೆಗಳು ಉದ್ಭವಿಸದಂತೆ ಪರ್ಯಾಯ ಮಾರ್ಗದ ಬಗ್ಗೆ ಜಗತ್ತಿನ ವ್ಯಾಪಾರ ವಹಿವಾಟು ಮಾಡುವ ದೇಶಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.
Lead photo courtesy: Suez Canal Authority / story photos from Wikipedia
ಡಾ.ಗುರುಪ್ರಸಾದ ಎಚ್ ಎಸ್
- ಮೂಲತಃ ಉಪನ್ಯಾಸಕರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನ ಹಳ್ಳಿಯವರು. ಪ್ರಸ್ತುತ ಹಗರಿಬೊಮ್ಮನಹಳ್ಳಿ ಜಿವಿಪಿಪಿ ಪದವಿ ಕಾಲೇಜನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತ ಜೊತೆಗೆ ಪತ್ರಿಕೆಗಳಿಗೆ ವೆಬ್ ನ್ಯೂಸ್ ಪೋಟ್೯ಲ್ ಗಳಿಗೆ ಲೇಖನ ಬರೆಯುತ್ತಿದ್ದಾರೆ.