ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಅಲೆಯನ್ನು ಕಟ್ಟಿಹಾಕಲು ದೃಢ ನಿರ್ಧಾರ ಮಾಡಿರುವ ಮುಖ್ಯಮಂತ್ರಿ ಯಡಿಯೂಪ್ಪ 7 ಜಿಲ್ಲಾ ಕೇಂದ್ರ ಸೇರಿ 9 ನಗರಗಳಲ್ಲಿ ಕೊರೊನ ನೈಟ್ ಕರ್ಫ್ಯೂ ಜಾರಿ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಎಲ್ಲ ರಾಜ್ಯಗಳ ವರ್ಚುಯಲ್ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು; ಕೋವಿಡ್ ಸೋಂಕಿತರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶನಿವಾರದಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಕೆಲ ಕಠಿಣ ಕ್ರಮಗಳು ಅನಿವಾರ್ಯ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ಅದರಂತೆ ಜನರ ಹಿತದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದರು.
ಬೆಂಗಳೂರು, ಮೈಸೂರು, ಮಂಗಳೂರು, ಕಲ್ಬುರ್ಗಿ, ಬೀದರ್, ತುಮಕೂರು, ಉಡುಪಿ, ಮಣಿಪಾಲದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಏನೆಲ್ಲ ಇರಲ್ಲ
ನೈಟ್ ಕರ್ಫ್ಯೂ ಜಾರಿಯಿಂದ ರಾತ್ರಿ 10 ಗಂಟೆಗೆ ಬಾರ್, ಪಬ್, ಹೊಟೇಲ್, ಸಿನಿಮಾ ಇತ್ಯಾದಿಗಳೆಲ್ಲ ಬಂದ್ ಆಗಲಿವೆ. ಹತ್ತು ಗಂಟೆ ನಂತರ ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಬೆಂಗಳೂರಿನಲ್ಲಿ ಎಲ್ಲ ಮುಖ್ಯ ರಸ್ತೆಗಳನ್ನು, ಫ್ಲೈಓವರ್‌ಗಳನ್ನು ಮುಚ್ಚಲಾಗುವುದು. ಆದರೆ ನೈಟ್ ಕರ್ಫ್ಯೂ ವೇಳೆ ಅಗತ್ಯ ಸೇವೆಗಳು, ಬಸ್ ಮತ್ತು ಮೆಟ್ರೋ ಸಂಚಾರ ಇರುತ್ತದೆ.
ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಇಲ್ಲವಾದರೆ ದುಬಾರಿ ದಂಡ ವಿಧಿಸಲಾಗುವುದು. ಕಠಿಣ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
Lead photo by CKPhotography ಸಿಕೆಪಿ@ckphotographi