ಕೋವಿಡ್ ಮಾರ್ಗಸೂಚಿ ಉಲ್ಲಘಿಸಿದ, ಶುಲ್ಕದ ಬಗ್ಗೆ ಸರಕಾರದ ಆದೇಶ ಕೇರ್ ಮಾಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ
ಚಿಕ್ಕಬಳ್ಳಾಪುರ: ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಮಕ್ಕಳಿಗೆ ʼಸೇತುಬಂಧʼ (ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; “ಸೇತುಬಂಧ ಎಂದರೆ, ಕಳೆದ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಏನು ಕಲಿಯಬೇಕಾಗಿತ್ತು? ಎಷ್ಟಲ್ಲ ಕಲಿತಿದ್ದಾರೆ? ಅವರಿಗೆ ಇನ್ನೇನು ಕಲಿಸಬೇಕು? ಕೊರತೆ ಏನಿದೆ? ಎಂಬ ಅಂಶಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳ ಮುಂದಿನ ಬೆಳವಣಿಗೆಗೆ ಈ ಕಾರ್ಯಕ್ರಮ ಹೆಚ್ಚು ಸಹಾಯಕವಾಗುತ್ತದೆ” ಎಂದರು.
ಅಷ್ಟೇ ಅಲ್ಲದೆ, ಯಾವ ವಿಷಯದಲ್ಲಿ ಅವರು ದುರ್ಬಲರಾಗಿದ್ದಾರೆ ಅನ್ನುವುದನ್ನು ಗಮನಿಸಿ ಮುಂದಿನ ತರಗತಿಗಳಲ್ಲಿ ಆ ವಿಷಯದ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಕ್ಕಳಿಗೆ ಕಲಿಸಲು ಶಿಕ್ಷಕರಿಗೆ ʼಸೇತುಬಂಧʼ ಸಹಕಾರಿಯಾಗುತ್ತದೆ. ಇದಕ್ಕಾಗಿ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಖಂಡಿತವಾಗಿಯೂ ಮಕ್ಕಳಿಗೆ ಈ ಕಾರ್ಯಕ್ರಮದಿಂದ ಹೆಚ್ಚು ಅನುಕೂಲವಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು.
ಪ್ರಾಥಮಿಕ ಹಂತದ ಮಕ್ಕಳ ಮೇಲೆ ಕೋವಿಡ್ ಪರಿಣಾಮದ ಕೆಲ ಅಧ್ಯಯನಗಳು ಪರ-ವಿರೋಧ ಅಭಿಪ್ರಾಯಗಳನ್ನು ನೀಡಿವೆ. ಆದರೆ, ಮಕ್ಕಳ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರ ಶೈಕ್ಷಣಿಕ ಸಾಧನೆಗೆ ಧಕ್ಕೆ ಉಂಟಾಗದಂತೆ ಕಾರ್ಯ ನಿರ್ವಹಿಸುವುದು ಸರಕಾರದ ಜವಾಬ್ದಾರಿ. ಹೀಗಾಗಿ ಅನೇಕ ಎಚ್ಚರಿಕೆಗಳೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಕ್ಕಳ ಯೋಗ ಕ್ಷೇಮ ಮತ್ತು ಅವರ ಶೈಕ್ಷಣಿಕ ಭವಿಷ್ಯ ಎರಡೂ ಮುಖ್ಯ ಎಂದು ಸಚಿವರು ತಿಳಿಸಿದರು.
ಜುಲೈನಿಂದ ಶೈಕ್ಷಣಿಕ ವರ್ಷ
ಪ್ರಸಕ್ತ ಸಾಲಿನ ಪರೀಕ್ಷೆಗಳು ಮುಗಿದ ಮೇಲೆ ಜುಲೈನಿಂದ ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಅದೂ ತಾತ್ಕಾಲಿಕ ಕ್ರಮವಷ್ಟೇ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ, ಕೋವಿಡ್ ಬಂದಷ್ಟೇ ಸುಲಭವಾಗಿ ಹೋಗುವುದಿಲ್ಲ. ಅದರೊಂದಿಗೆ ಬದುಕುವುದನ್ನೂ ಕಲಿಯಬೇಕು ಎಂಬ ವಾದವಿದೆ. ನೋಡೋಣ, ಮುಂದಿನ ದಿನಗಳಲ್ಲಿ ಎಂಥ ಸ್ಥಿತಿ ಎದುರಾಗುತ್ತದೋ ಎಂದು ಎಂದರು ಸಚಿವರು.
ಕೋವಿಡ್ ಮಾರ್ಗಸೂಚಿ ಪಾಲಿಸದಿದ್ದರೆ ಕ್ರಮ
1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ನಡೆಸಬಾರದು. 6ರಿಂದ 12ನೇ ತರಗತಿ ವರೆಗೂ ಕ್ಲಾಸ್ ಮಾಡಬಹುದು ಎಂಬ ಆದೇಶವನ್ನು ಸರಕಾರ ಹೊರಡಿಸಿದೆ. ಆದರೆ, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಆದೇಶವನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಅಂಥ ಸಂಸ್ಥೆಗಳ ವಿರುದ್ಧ ನಮ್ಮ ಇಲಾಖೆಯ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿದ್ದಾರೆ. ಉಳಿದಂತೆ ಎಸ್ಒಪಿಯನ್ನು ಎಲ್ಲೆಡೆ ಪಾಲನೆ ಮಾಡಲಾಗುತ್ತಿದೆ. ಕೆಲ ಕಡೆ ಪಾಲನೆ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಆ ಬಗ್ಗೆಯೂ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ನ್ಯಾಯಾಲಯದ ಮಧ್ಯಂತರ ಆದೇಶವಿದೆ
ಶೇ.30ರಷ್ಟು ಬೋಧನಾ ಶುಲ್ಕ ಕಟ್ಟಿಸಿಕೊಳ್ಳಬಾರಾದು ಎಂದು ಸರಕಾರ ಮಾಡಿರುವ ಆದೇಶವನ್ನು ಪ್ರಶ್ನೆ ಮಾಡಿ ಖಾಸಗಿ ಶಾಲೆಗಳು ಹೈಕೋರ್ಟ್ನಲ್ಲಿ ಅರ್ಜಿ ಅಲ್ಲಿಸಿವೆ. ಈ ಅರ್ಜಿಯನ್ನು ವಿಚಾರಣೆ ಮಾಡಿದ ನ್ಯಾಯಾಲಯ ಒಂದು ಮಧ್ಯಂತರ ನೀಡಿದೆ. ಅದರ ಪ್ರಕಾರ, ಸರಕಾರ ಯಾವುದೇ ಶಾಲೆಯ ಬಲವಂತದ ಕ್ರಮ ಕೈಗೊಳ್ಳಬಾರದು. ಅದೇ ರೀತಿ ಯಾವುದೇ ಶಾಲೆಯೂ ಫೀಸ್ ಕಟ್ಟಿಲ್ಲ ಎಂದು ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕೂರಿಸದಿರುವುದು ಅಥವಾ ಹೊರಹಾಕುವುದನ್ನು ಮಾಡಬಾರದು. ಇನ್ನೂ ಈ ಬಗ್ಗೆ ಅಂತಿಮ ಆದೇಶ ಬರಬೇಕಿದೆ. ಅದಕ್ಕಾಗಿ ಕಾಯುತ್ತಿದ್ದೇವೆ ಎಂದರು ಸುರೇಶ್ ಕುಮಾರ್.
ವಿವಿಧ ಇಲಾಖೆಗಳ ಹಾಸ್ಟೆಲ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಹೊರ ಹಾಕಲಾಗಿದೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದಾಗ; ಈ ಬಗ್ಗೆ ತಕ್ಷಣವೇ ಅಧಿಕಾರಿಗಳಿಗೆ ಸೂಚಿಸಲಾಗುವುದು. ಮಕ್ಕಳು ಹಾಸ್ಟೆಲ್ನಲ್ಲಿ ಉಳಿಯುವ ವ್ಯವಸ್ಥೆ ಮಾಡಲಾಗುವುದು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕ (ಆಡಳಿತ) ಕೆ.ಎಂ.ಜಯರಾಮರೆಡ್ಡಿ ಸೇರಿದಂತೆ ಜಿಲ್ಲೆಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು