ಒಡಂಬಡಿಕೆ ಅನ್ವಯ ಶ್ರೀ ಸತ್ಯಸಾಯಿ ಸಂಸ್ಥೆಗಳು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ರಕ್ತದಾನ ಶಿಬಿರ, ಆರೋಗ್ಯ, ಶಿಕ್ಷಣ, ನೈರ್ಮಲ್ಯದ ಮಹತ್ವ ಮುಂತಾದ ವಿಚಾರಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ರಾಷ್ಟ್ರಸೇವೆಗೆ ಅಣಿಯಾಗಲಿದ್ದಾರೆ.
ಸತ್ಯಸಾಯಿ ಗ್ರಾಮ: ವ್ಯಕ್ತಿ ಸಮಾಜ ಸಂಘಟನೆ ಒಟ್ಟಾಗಿ ಕಲೆತು ಚಿಂತಿಸಿ ಕಾರ್ಯರಂಗಕ್ಕೆ ಇಳಿದರೆ ಸಮಾಜದ ಒಳಿತಿಗೆ ಅನುಕೂಲಕರ ವಾತಾವರಣವು ಸೃಷ್ಟಿಯಾಗುತ್ತದೆ ಎಂಬ ವಿಚಾರಕ್ಕೆ ಇಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯವು ಸಾಕ್ಷಿಯಾಯಿತು.
ಇಲ್ಲಿನ ಪ್ರೇಮ್ ದೀಪ್ ಮಂದಿರದಲ್ಲಿ ಶ್ರೀ ಸತ್ಯಸಾಯಿ ಒನ್ ನೇಷನ್ ಯೂತ್ ಫೌಂಡೇಶನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಇವುಗಳ ನಡುವೆ ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯದ ಕುರಿತಾದ ಜಂಟಿ ಕಾರ್ಯಯೋಜನೆಗೆ ವೇದಿಕೆಯು ರೂಪುಗೊಂಡ ಒಡಂಬಡಿಕೆಗೆ ಅಂತಿಮರೂಪ ನೀಡಲಾಯಿತು.
ರಕ್ತದಾನ, ನಿರಾಶ್ರಿತರ ಮರು ವಸತಿ, ಆರೋಗ್ಯ ಶಿಕ್ಷಣ ಜಾಗೃತಿ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿ ವಿಶ್ವದಲ್ಲಿ ವ್ಯಾಪಕ ಮನ್ನಣೆ ಪಡೆದು ಜಾಗತಿಕ ಮಟ್ಟದ ಮೊದಲ ನೊಬೆಲ್ ಪಾರಿತೋಷಕಕ್ಕೆ ಪಾತ್ರವಾದ ಸೇವಾ ಸಂಘಟನೆ ರೆಡ್ ಕ್ರಾಸ್ ಸಂಸ್ಥೆ. ಇದು ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಸಂಸ್ಥೆಯಾಗಿದೆ.
ಭಗವಾನ್ ಬಾಬಾರವರ ಮಾರ್ಗದರ್ಶನದಂತೆ ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜಕ್ಕೆ ಸ್ಪಂದಿಸುತ್ತಿರುವ ಉತ್ಸಾಹಿ ಯುವಕರ ಪಡೆಯೇ ಶ್ರೀ ಸತ್ಯಸಾಯಿ ಒನ್ ನೇಷನ್ ಯೂತ್ ಫೌಂಡೇಶನ್. ಇದು ಇಂದು ತನ್ನ ವಿಶಿಷ್ಟ ಸೇವೆಗಳಿಂದ ಭಾರತದ ಗ್ರಾಮೀಣ ಜನರ ಹೃದಯವನ್ನು ಮುಟ್ಟಿದೆ. ಸೇವೆಯನ್ನೇ ಉಸಿರಾಗಿಸಿಕೊಂಡ ಎರಡೂ ಸಂಸ್ಥೆಗಳು ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರಾದ ನಾಗಣ್ಣ ಮತ್ತು ಶ್ರೀ ಸತ್ಯಸಾಯಿ ಒನ್ ನೇಷನ್ ಯೂತ್ ಫೌಂಡೇಶನ್ ಮುಖ್ಯಸ್ಥರಾದ ಡಾ.ಸತೀಶ್ ಬಾಬು ಅವರು ಸದ್ಗುರು ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿದರು.
ಒಡಂಬಡಿಕೆಯ ಅನ್ವಯ ಶ್ರೀ ಸತ್ಯಸಾಯಿ ಸಂಸ್ಥೆಗಳು ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳು ರಕ್ತದಾನ ಶಿಬಿರ, ಆರೋಗ್ಯ, ಶಿಕ್ಷಣ, ನೈರ್ಮಲ್ಯದ ಮಹತ್ವ ಮುಂತಾದ ವಿಚಾರಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ರಾಷ್ಟ್ರಸೇವೆಗೆ ಅಣಿಯಾಗಲಿದ್ದಾರೆ.
ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವ ವಿದ್ಯಾಲಯದ ಕುಲಾಧಿಪತಿ ಬಿ.ಎನ್.ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಸಂಸ್ಥೆಗಳ ಮುಖ್ಯ ಸಮನ್ವಯಾಧಿಕಾರಿ ಗೋವಿಂದರೆಡ್ಡಿ, ಮುರಳಿಧರ ಹಾಲಪ್ಪ, ಪೃಥ್ವಿ ಹಾಲಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.