ಚಿಕ್ಕಬಳ್ಳಾಪುರ ಜಿಲ್ಲೆ ಅಂಚೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಚಿಕ್ಕಬಳ್ಳಾಪುರ: ಅಂಚೆ ಇಲಾಖೆ ಇಡೀ ದೇಶದ ಮನಸ್ಸುಗಳನ್ನು ಒಂದು ಮಾಡುವ ಕ್ರಿಯೆಯಲ್ಲಿ ತೊಡಗಿದೆ. ಈ ಇಲಾಖೆ ನಮ್ಮ ಹೆಮ್ಮೆ. ಇದು ಸ್ಪರ್ಧಾತ್ಮಕ ಯುಗದಲ್ಲಿ ತನ್ನದೇ ಆದ ಕಾಯಕವನ್ನು ಮಾಡುವ ಮೂಲಕ ಕೊಟ್ಯಂತರ ಜನತೆಯ ಮೂಲ ಆಶಯದ ಸಂಸ್ಥೆಯು ಇದಾಗಿದೆ ಎಂದು ಡಾ.ಕೋಡಿರಂಗಪ್ಪ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನಾಚರಣೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಅಂಬೇಡ್ಕರ್ ಅವರು ಎಷ್ಟೋ ಮಂದಿಯ ಬದುಕು ಕಟ್ಟಿಕೊಳ್ಳಲು ಭರವಸೆಯ ಬೆಳಕು ಆಗಿದ್ದರು. ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನವು ಇಡೀ ಪ್ರಪಂಚ ಮೆಚ್ಚುವಂತದ್ದು. ಸಂವಿಧಾನವನ್ನು ಓದುವ ಹುಮ್ಮಸ್ಸು ಮಾಡಬೇಕು, ಅಂಬೇಡ್ಕರ್ ಅವರ ಆಶಯದಂತೆ ನಡೆದಾಗ ಇಡೀ ದೇಶವು ಸಮಾನತೆಯಲ್ಲಿ ಸುಸಂಸ್ಕೃತದಲ್ಲಿ ಸಾಗಲು ಸಾಧ್ಯವಾಗಲಿದೆ. ಭಕ್ತಿ ಚಳವಳಿ, ಕಾಯಕ ಚಳವಳಿಗಳಲ್ಲಿ ತೊಡಗಿಸಿಕೊಂಡ ಅಂಬೇಡ್ಕರ್ ಅವರು ದೇಶ ಕಾಯುವ ಕಾಯಕದಲ್ಲೂ ದೊಡ್ಡ ಮೇಧಾವಿ ಆಗಿದ್ದವರು ಎಂದರು.
ನಗರದ ಪ್ರಧಾನ ಅಂಚೆಪಾಲಕರಾದ ಎನ್.ಬಿ.ಗಂಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಚಿಕ್ಕಬಳ್ಳಾಪುರ ಉಪ ವಿಭಾಗದ ಅಂಚೆ ನಿರೀಕ್ಷಕ ಬಿ.ವಿ.ಶಿವಕುಮಾರ್, ಸಾಹಿತಿ ಹಾಗೂ ಕಲಾವಿದ ಗ.ನ.ಅಶ್ವತ್ಥ್, ಚಿಕ್ಕಬಳ್ಳಾಪುರ ಉಪ ವಿಭಾಗದ ಐಪಿಪಿ ಬ್ಯಾಂಕ್‌ನ ವ್ಯವಸ್ಥಾಪಕ ಶ್ರೀಕಾಂತ್ ಸೇರಿದಂತೆ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ಉಪ ವಿಭಾಗದ ಎಲ್ಲಾ ಅಂಚೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.