ಅಡಗೂರು ವಿಶ್ವನಾಥ್ ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನೂ ಹುಡುಕುತ್ತಿದ್ದೇನೆ…
Obituary
ಯುಗಾದಿ ಪ್ಲವ ನಾಮ ಸಂವತ್ಸರ ಹಬ್ಬ ಮುಗಿದು ಇನ್ನೇನು ಕೊನೆ ಒಬ್ಬಟ್ಟು ತಿಂದು ಮುಗಿಸಿ ಬೆಳಗಿನ ವರ್ಸತೊಡಕಿನ ಬಗ್ಗೆ ಯೋಚನೆ ಮಾಡುತ್ತಿದ್ದಾಗ ಮಾಜಿ ಮಂತ್ರಿಗಳೂ, ಈ ಕಾಲಘಟ್ಟದ ಸೂಕ್ಷ್ಮ ಮತ್ತು ಪ್ರಜ್ಞಾವಂತ ರಾಜಕಾರಣಿ ಅಡಗೂರು ವಿಶ್ವನಾಥ್ ಅವರು ಕಾಲ್ ಮಾಡಿದರು.
ಬೆಂಗಳೂರು ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿ ಚನ್ನಪಟ್ಟಣದ ಸಿ.ಪಿ.ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿ ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಬೆನ್ನಿಗಿರಿದವರ ಕಥೆಯನ್ನು ಸ್ಫೋಟಗೊಳಿಸಿದ್ದರು. ಆವತ್ತಿನ ನಂತರ ಮತ್ತೆ ನಾನು ಅವರ ಜತೆ ಮಾತನಾಡಿರಲಿಲ್ಲ. ಆದರೆ, ಹಬ್ಬದ ದಿನವೇ ಕಾಲ್ ಮಾಡಿ, “ಚನ್ನಕೇಶವಯ್ಯ, (ಅವರು ಹಾಗೆ ಕರೆಯುತ್ತಾರೆ!) ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು” ಎಂದು ಎನ್ನುತ್ತಲೇ ತಾವು ಬರೆಯುತ್ತಿರುವ ಇನ್ನೊಂದು ಪುಸ್ತಕದ ವಿವರವನ್ನೂ ಹೇಳಿದರು. ಜತೆಗೆ, ʼಬಾಂಬೆ ಡೈರೀಸ್ʼ ಪುಸ್ತಕದ ಬಗ್ಗೆಯೂ ಮಾತನಾಡಿದರು.
ಅವರು ಹಬ್ಬದ ದಿನವೂ ಬರವಣಿಗೆ ಬಗ್ಗೆ ಮಾತನಾಡುವ ಉಮೇದಿನಲ್ಲಿದ್ದರು. ತಮ್ಮ ಹೊಸ ಪುಸ್ತಕದ ಬಗ್ಗೆ ಬಹಳ ಆಳವಾಗಿ ಮಾಹಿತಿ ಹಂಚಿಕೊಂಡರು. ಹೀಗೆ ಬಹುಹೊತ್ತು ಮಾತನಾಡುತ್ತಾ ಸಾಗಿದಾಗ ನಮ್ಮ ಮಾತಿನ ಮಧ್ಯೆ ಇಣುಕಿದವರು ಪೂಜ್ಯ ಕನಕರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು.
“ಜಿಡ್ಡುಗಟ್ಟಿ ಹೋಗಿದ್ದ ನಮ್ಮ ಸಮಾಜಕ್ಕೆ ವಿಶಾಲ ದೃಷ್ಟಿಕೋನ ತೋರಿದವರು, ಅದಕ್ಕೊಂದು ಸ್ಪಷ್ಟ ಮಾರ್ಗ ಹಾಕಿಕೊಟ್ಟ ಮಹಾನ್ ದಾರ್ಶನಿಕರಲ್ಲಿ ಖಂಡಿತವಾಗಿಯೂ ಕನಕದಾಸರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಪ್ರಾತಃಸ್ಮರಣೀಯರು. ಆದರೆ, ನಾವೇನು ಮಾಡುತ್ತಿದ್ದೇವೆ? ಶತಮಾನಗಳು ಕಳೆದರೂ ಕನಕರ ಜೀವನದ ಬಗ್ಗೆ, ಕಥೆಗಳ ಬಗ್ಗೆ ರಂಜನೀಯವಾಗಿ ಹೇಳುತ್ತಿದ್ದೇವೆ. ಆದರೆ, ಸಮಾಜವನ್ನು ಚಿಕಿತ್ಸೆಗೆ ಒಳಪಡಿಸುವ ಬಗ್ಗೆ ಆ ಮಹನೀಯರಿಬ್ಬರು ಹೇಳಿದ್ದನ್ನು ಆಚರಣೆಗೆ ತರಲು ವಿಮುಖರಾಗಿದ್ದೇವೆ. ಇನ್ನು, ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ಹುಟ್ಟಿದರು, ನೆಹರು ಸಂಪುಟದಲ್ಲಿ ಸಚಿವರಾಗಿದ್ದರು, ಬಾಲ್ಯದಲ್ಲಿ ಶೋಷಣೆಗೆ ಒಳಪಟ್ಟಿದ್ದರು.. ಮತ್ತೆ ಮತ್ತೆ ಇದನ್ನೇ ಮಾತನಾಡುತ್ತಿದ್ದೇವೆ, ಹೇಳುತ್ತಿದ್ದೇವೆ, ಭಾಷಣ ಮಾಡುತ್ತಿದ್ದೇವೆ. ಹಿಂದೆಂದಿಗಿಂತಲೂ ಈಗ ಅಂಬೇಡ್ಕರ್ ಅವರು ಹೇಳಿದ್ದನ್ನು, ಕಂಡ ಕನಸುಗಳನ್ನು, ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯ ಅತ್ಯಂತ ತುರ್ತು ಇದೆ. ಆದರೆ, ನಮ್ಮ ಆಡಳಿತಗಾರರು ಇದನ್ನು ಬೇಕೆಂದೇ ಜಾಣ್ಮೆಯಿಂದ ವಿಸ್ಮರಿಸುತ್ತಿದ್ದಾರೆ” ಎಂದರು ಅಡಗೂರು ವಿಶ್ವನಾಥ್.
ಬೆಳಕರಿದರೆ, ಅಂಬೇಡ್ಕರ್ ಹುಟ್ಟುಹಬ್ಬ ಎಂಬುದು ಗೊತ್ತಿತ್ತು. ಬಾಬಾ ಸಾಹೇಬರಿಗೆ 130 ವರ್ಷ ತುಂಬುವುದಿತ್ತು. ಅವರ ಬಗ್ಗೆ ಬರೆಯಬೇಕೆಂಬ ತಮುಲವೂ ಇತ್ತು. ಆದರೆ, ಅಂಬೇಡ್ಕರ್ ಅಗಾಧದತೆಯ ಮುಂದೆ ನಾನೇನು ಬರೆಯುವುದು? ಮಹಾಸಾಗರದ ಮುಂದೆ ನಿಂತು ದಡಕ್ಕೆ ಬಂದು ಎಡತಾಕುತ್ತಿದ್ದ ಹನಿ ನೀರು ಹಿಡಿಯಲೆತ್ನಿಸುವ ವ್ಯರ್ಥ ಸಾಹಸವಾಗಿತ್ತು ನನ್ನದು.
ಬಾಲ್ಯದಿಂದ ಅವರ ಬಗ್ಗೆ ಕೇಳಿಕೊಂಡು ಬಂದಿದ್ದ ಅದೇ ಏನಕೇನ ಕಥೆಯನ್ನು ಬರೆಯುವುದಾ? ಅಥವಾ ಅವರ ಬಗ್ಗೆ ಏನಾದರೊಂದು ಹೊಸ ಲೈನು ಸಿಗುವುದಾ? ಎಂದು ಆಲೋಚಿಸುತ್ತಿದ್ದ ನನ್ನಲ್ಲಿ ವಿಶ್ವನಾಥರು ಮಾತಿನ ನಡುವೆ ಹೊಸ ಕಿಡಿ ಹೊತ್ತಿಸಿದ್ದರು.
ಅಡಗೂರು ವಿಶ್ವನಾಥ್
ನಿಜ, ಅವರು ಹೇಳಿದಂತೆ ಭಾರತವು ಡಾ.ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಅರ್ಥ ಮಾಡಿಕೊಳ್ಳಬೇಕಿದೆ. ಅದೂ ಸರಿಯಾಗಿ… ದೇಶದ ಉದ್ದಗಲಕ್ಕೂ ಅವರ ಪ್ರತಿಮೆಗಳನ್ನಿಟ್ಟು ಅವರ ಜನ್ಮದಿನದಂದು, ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನದಂದು ಅಥವಾ ಭೌತಿಕವಾಗಿ ಈ ಜಗತ್ತನ್ನು ತೊರೆದ ದಿನದಂದು ಅವರ ಭಾವಚಿತ್ರವನ್ನು, ಪ್ರತಿಮೆಯನ್ನೋ, ಪುತ್ಥಳಿಯನ್ನೋ ಹುಡುಕಿಕೊಂಡು ಹೋಗಿ ಮಾಲಾರ್ಪಣೆ ಮಾಡಿ, ಆಮೇಲೆ ಆ ಮಾಲೆ ಹಾಕಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿ ಅಬ್ಬಾ! ಅಂಬೇಡ್ಕರ್ ಜಯಂತಿ ಆಯಿತು ಎಂದು ಆರಾಮ ಕುರ್ಚಿಗೆ ಒರಗುವ ಮನಃಸ್ಥಿತಿ ಇವತ್ತು ಭರ್ತಿ ವಿಜೃಂಭಣೆ ಮಾಡುತ್ತಿದೆ.
ಆ ಮಹಾನ್ ನೇತಾರನನ್ನು ಮತ್ತು ಸಂವಿಧಾನ ಶಿಲ್ಪಿಯನ್ನು ವಿಗ್ರಹದಲ್ಲೋ, ಫೊಟೋಗಳಲ್ಲೋ ಹುಡುಕಿಕೊಂಡು ಹೋಗುವ ಬದಲು ಅವರನ್ನು ಪ್ರತಿಯೊಬ್ಬರು ತಮ್ಮ ತಮ್ಮ ಹೃದಯಕ್ಕೆ ಬರಮಾಡಿಕೊಳ್ಳಬೇಕು. ಆಗ ಮಾತ್ರ ಅಂಬೇಡ್ಕರ್ ಅನುಭವಿಸಿದ್ದೇನು? ಆ ಅನುಭವದಿಂದ ಹೇಳಿದ್ದೇನು? ನಾವು ಮಾಡಬೇಕಾದದ್ದು ಏನು? ಎಂಬುದು ಸ್ಪಷ್ಟವಾಗುತ್ತದೆ. ಆಗ ನೋಡಿ ಅಂಬೇಡ್ಕರ್ ತತ್ತ್ವ, ಅವರ ಆದರ್ಶ, ಅವರ ಸಮ ಸಮಾಜದ ಕನಸು, ಬುದ್ಧನ ನಂತರ ಮನುಷ್ಯರನ್ನು ಮನುಷ್ಯರಾಗಿ ನೋಡುವ ಮಾನವೀಯತೆಗಿಂತ ಮಿಗಿಲಾದ ದೈವತ್ವ ಇನ್ನೊಂದಿಲ್ಲ ಎಂದು ಸಾರಿ ಹೇಳಿದ ಆ ಮಹಾನ್ ವ್ಯಕ್ತಿತ್ವ ಫಲ ಸಾಕ್ಷಾತ್ಕಾರವಾಗುತ್ತದೆ.
ವಿಶ್ವನಾಥರ ಈ ಮಾತುಗಳು ಅಕ್ಷರಶಃ ನನ್ನಲ್ಲಿ ದೊಡ್ಡ ಆಲೋಚನೆಯ ಅಲೆಯನ್ನೇ ಎಬ್ಬಿಸಿದವು.
ನಿಜ, ನಮ್ಮ ದೇಶದಲ್ಲಿ ಆಗಿಹೋದ ಅನೇಕ ಮಹಾನ್ ಬಂಡಾಯಗಾರರಲ್ಲಿ ಅಂಬೇಡ್ಕರ್ ಎಲ್ಲರಂಥವರಲ್ಲ. ವ್ಯವಸ್ಥೆಯ ವಿರುದ್ಧ ವ್ಯವಸ್ಥೆಯೊಳಗಿದ್ದೇ ಆ ಬಂಡಾವನ್ನು ತಪಸ್ಸಿನಂಥೆ ಮಾಡಿದವರು. ಅಧ್ಯಯನಶೀಲತೆ ವಿಚಾರದಲ್ಲಿ ಅವರಲ್ಲಿದ್ದ ಶ್ರದ್ಧೆ, ಹೋರಾಟದಲ್ಲೂ ಫಳಫಳಿಸುತ್ತಿತ್ತು. ಸರ್ದಾರ್ ವಲ್ಲಭಬಾಯ್ ಪಟೇಲರಿಗೆ ಹೇಗೆ ಭಾರತವನ್ನು ಒಗ್ಗೂಡಿಸಬೇಕೆಂಬ ಅಸಾಧಾರಣ ಬದ್ಧತೆ ಇತ್ತೋ ಅದೇ ರೀತಿ ಅಂಬೇಡ್ಕರ್ ಅವರಿಗೆ ಕೂಡ ದೇಗುಲ ಕಟ್ಟಿದ ಮೇಲೆ ಅದೇ ದೇಗುಲದ ಹೊರಗಿನ ಬೀದಿಯ ಕೊನೆಯಲ್ಲಿ, ನೀರಿನ ಬಾವಿ ತೋಡಿದ ಮೇಲೆ ಅದೇ ಬಾವಿಯ ಗುಟುಕು ನೀರಾಗಿ ಊರಾಚೆಯ ಕೇರಿಯ ಕೊನೆಯಲ್ಲಿ ಅಸಹಾಕತೆಯಿಂದ ನಿಲ್ಲುತ್ತಿದ್ದವರನ್ನು ಮುಖ್ಯವಾಹಿನಿಗೆ ತಂದು ಅವರಿಗೂ ಸಮಾನತೆಯೆಂಬ ಅಮೃತಸಿಂಚನ ಮಾಡಿಸುವ ಹಠವಿತ್ತು.
ಆದರೆ, ಆಗಿದ್ದೇನು? ಅವರು ಹಿಂದುವಾಗಿ ಹುಟ್ಟಿ ಬೌದ್ಧರಾಗಿ ಈ ಭೌತಿಕ ಜಗತ್ತು ಬಿಟ್ಟುಹೋದ ಮೇಲೆ ಈ ಭಾರತಕ್ಕೆ ೬೫ ವರ್ಷವಾಗಿದೆ. ಅವರು ಹೇಳಿದ್ದು ಆಗಿದೆಯಾ? ಏನೂ ಆಗಿಯೇ ಇಲ್ಲ ಅಂದು ಹೇಳುವ ಸಿನಿಕತೆ ನನಗಿಲ್ಲ. ಆದರೆ, ಮನುಷ್ಯ ಮನುಷ್ಯನನ್ನು ನೋಡುವ ಬಗೆ ಬದಲಾಗಿದೆಯಾ? ಅವರು-ಇವರು ಎನ್ನುವ ರೀತಿಯಲ್ಲಿ ಆತ್ಮದಲ್ಲಿ ಅಡಗಿದ್ದ ಅಂತರ ಹೋಗಿದೆಯಾ? ಕೇರಿಯ ಕೊನೆಯಲ್ಲಿ, ಗುಡಿಬೀದಿಯ ಕಡೆಯಲ್ಲಿ ನಿಂತು ನಡುಬಗ್ಗಿಸಿ ನಿಲ್ಲುತ್ತಿದ್ದವರು ಸ್ಥಿತಿ ಸುಧಾರಿಸಿದ್ದಾರಾ? ಹಾಗಿದ್ದರೆ, ಎಷ್ಟು ಸುಧಾರಿಸಿದ್ದಾರೆ?
ಬರೆಯಲಿಕ್ಕೆ ಕಷ್ಟ ಎನಿಸುತ್ತಿದೆ. ಹಲವು ಬಾರಿ ಗೆದ್ದು ಲೋಕಸಭೆ, ವಿಧಾಸಭೆ ಪ್ರವೇಶಿಸಿ ಮಂತ್ರಿಯೂ ಆಗಿದ್ದ ಹಿರಿಯ ನಾಯಕ ರಮೇಶ್ ಜಿಗಜಿಣಗಿ ಅಂಥವರು ಯಾವುದೋ ದೇವಾಲಯದೊಳಕ್ಕೆ ಹೋಗಲಿಲ್ಲ, ಯಾರದೋ ಮತದಾರರ ಮನೆಯೊಳಕ್ಕೆ ಹೆಜ್ಜೆ ಇಡಲಿಲ್ಲ. ಯಾಕೆ ಹೀಗೆ? ಜಿಗಜಿಣಗಿ ಅವರಿಗೆ ಹೋಗಬೇಕು ಎಂಬ ಮನಸ್ಸಿದ್ದರೂ ಹೋಗಲಾಗಲಿಲ್ಲ. ಆಮೇಲೆ ಅವರೇ ಆ ಬಗ್ಗೆ ಹೇಳಿಕೊಂಡಿದ್ದರು. ಹೋದರೆ, ಮೇಲ್ಜಾತಿಯ ಮತದಾರರು ಏನಂದುಕೊಳ್ಳುತ್ತಾರೋ ಎಂಬ ಅಂಜಿಕೆ!! ಅಂಥ ದೊಡ್ಡ ವ್ಯಕ್ತಿಗೆ ಹಾಗೆ ಅನಿಸಿರಬೇಕಾದರೆ ಕೇರಿಯ ಕೊನೆಯಲ್ಲಿ, ಗುಡಿಬೀದಿಯ ಕಡೆಯಲ್ಲಿ ನಿಂತು ನಡುಬಗ್ಗಿಸಿ ನಿಲ್ಲುತ್ತಿದ್ದವರ ಸ್ಥಿತಿಯೇನು? ಈ ಘಟನೆ ಕೆಲ ವರ್ಷಗಳ ಹಿಂದಿನದ್ದು ಮಾತ್ರ. ಈಗ್ಗೆಯೂ ಪರಿಸ್ಥಿತಿ ಬದಲಾಗಿದೆಯಾ? ಇದು ಇವತ್ತಿನ ಭಾರತಕ್ಕೆ ಹಿಡಿದ ಕನ್ನಡಿ ಮಾತ್ರ.
ಅಂಬೇಡ್ಕರ್ ಆಶಯದಂತೆ ಮೀಸಲು ನೀಡಿದ್ದೇವೆ, ಅದು ಅವರ ಹಕ್ಕು ಕೂಡ. ಸರಿ, ಅವರಿಗೆ ನಮ್ಮ ಹೃದಯದಲ್ಲೊಂದು ಜಾಗ ಬೇಡವೇ. ಅದನ್ನು ಯಾರು ಮಾಡುತ್ತಿಲ್ಲ.
ನನ್ನ ಪ್ರಕಾರ ಭಾರತದ ಇತಿಹಾಸದಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲರು ಹಾಗೂ ಅಂಬೇಡ್ಕರ್ ಅವರಿಬ್ಬರೂ ಬಹಳ ವಿಭಿನ್ನ. ಮೇರುಸದೃಶ್ಯರು. ಆದರೆ, ಕಾಂಗ್ರೆಸ್‌ನಿಂದ ಅನ್ಯಾಯಕ್ಕೆ ಒಳಗಾಗಿದ್ದ ಪಟೇಲರಿಗೆ ಬಿಜೆಪಿಯಿಂದ ನ್ಯಾಯ ಒದಗಿಸುವ ಕೆಲಸ ಆಯಿತು (ನರ್ಮದಾ ತೀರದಲ್ಲಿ ಅವರ ಪ್ರತಿಮೆ ಮಾಡಿದ್ದು) ಎಂದು ನನ್ನನ್ನೂ ಸೇರಿದಂತೆ ಅನೇಕರು ಭಾವಿಸಿದ್ದಾರೆ. ಅದು ಹಾಗಲ್ಲ ಎನ್ನುವ ಅಂಶ ನನಗೆ ಕೆಲ ದಿನಳಿಂದೆ ಮನವರಿಕೆ ಆಯಿತು. ಖ್ಯಾತ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅವರು ಕೆಲ ದಿನಗಳ ಹಿಂದೆ ʼದುಡ್ಡಿಗೆ ಸೋತ ಭಾರತʼ ಎನ್ನುವ ಪುಸ್ತಕ ಬರೆದಿದ್ದರು. ಅದನ್ನು ಓದಿದ ಮೇಲೆ ನನ್ನ ನಿಲುವು ಇನ್ನೂ ಸ್ಪಷ್ಟವಾಗಿ ಗಟ್ಟಿಯಾಯಿತು. ಭಾರತದ ಒಳಗಿನ ಗಟ್ಟಿತನ ಮೆಲ್ಲಗೆ ಶಿಥಿಲವಾಗುತ್ತಿದೆ. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಎಂಬ ತೊಳಲಾಟ ಕೆಲ ವರ್ಷಗಳಿಂದೀಚೆಗೆ ದೇಶದೊಳಗೆ ಹೆಚ್ಚುತ್ತಿದೆ. ದೇಶವೇ ಆರ್ಥಿಕ ದಾರಿದ್ರ್ಯದತ್ತ ಸಾಗುತ್ತಿರುವ ಹೊತ್ತಿನಲ್ಲಿ ಒಂದಿಬ್ಬರು ಉದ್ಯಮಗಳ ಸಂಪತ್ತು ರಭಸವಾಗಿ ಹೆಚ್ಚಾಗುತ್ತಿದೆ. ಪಟೇಲರು ಕೂಡಿಸಿ ಕಟ್ಟಿದ ಬಲಿಷ್ಠ ಭಾರತದ ಗೋಡೆಗಳಲ್ಲಿ ರಂಧ್ರಗಳು ಬಿದ್ದು ನೀರು ಜಿನುಗುತ್ತಿದೆ. ಎಚ್ಚೆತ್ತುಕೊಳ್ಳಬೇಕು, ಇದಕ್ಕೆ ದಿವ್ಯೌಷಧ ಎಂದರೆ ಅಂಬೇಡ್ಕರ್ ತತ್ತ್ವ ಮಾತ್ರ.
ಇದರ ಬಗ್ಗೆ ಇವತ್ತು ಒಬ್ಬ ನಾಯಕನೂ ಮಾತನಾಡಲಿಲ್ಲ. ಅವರಿಗೆ ಅಂಬೇಡ್ಕರ್ ಹೇಳಿದ್ದು ಬೇಕಾಗಿಲ್ಲ. ಅವರ ಕಂಡ ಕನಸು ಬೇಕಾಗಿಲ್ಲ. ಅದು ಬಿಜೆಪಿ ಇರಬಹುದು ಅಥವಾ ಕಾಂಗ್ರೆಸ್ ಇರಬಹುದು. ಟ್ವಿಟರಿನಲ್ಲಿ ಸಂವಿಧಾನ ಶಿಲ್ಪಿಯನ್ನು ಮೆರವಣಿಗೆ ಮಾಡಿಸಿ, ಪ್ರತಿಮೆಗೆ ಹಾರ ಹಾಕಿ ಅವರನ್ನು ಇನ್ನೊಂದು ಜಯಂತಿ ವರೆಗೂ ಜೋಪಾನ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಇದರೊಟ್ಟಿಗೆ ಇನ್ನೊಂದು ದೊಡ್ಡ ಸತ್ಯಶೋಧನೆಯನ್ನು ಬಿಜೆಪಿ ಮಾಡಿದೆ. 1952ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರು ಚುನಾವಣೆಯಲ್ಲೇ ಆಗಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಲೋಕಸಭೆಗೆ ಗೆದ್ದು ಬರಲಿಲ್ಲ. ಅವರು ಗೆದ್ದು ಬರಲಿಲ್ಲ ಅನ್ನುವುದಕ್ಕಿಂದ ಕಾಂಗ್ರೆಸ್ ಪಕ್ಷ ಅವರು ಸೋಲುವಂತೆ ನೋಡಿಕೊಂಡಿತು. ಇದು ನಿಜವೂ ಇರಬಹದು. ಆದರೆ, ಈ ವಿಷಯವನ್ನು ಅಂಬೇಡ್ಕರ್ ಅವರು ಹುಟ್ಟಿ ೧೩೦ ವರ್ಷದ ನಂತರ, ಅವರು ಅಗಲಿದೆ ೬೫ ವರ್ಷದ ನಂತರ ಬಿಜೆಪಿ ಪ್ರಸ್ತಾಪ ಮಾಡುತ್ತಿದೆ. ಆ ಪಕ್ಷದ ಕೆಲ ನಾಯಕರು ದೇಶದುದ್ದಕ್ಕೂ ಇದೇ ವಿಷಯವನ್ನು ಇವತ್ತು ಉಲ್ಲೇಖಿಸಿದ್ದಾರೆ.
ರಾಷ್ಟ್ರಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ ನಂತರವಂತೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿನ ಮನೆಮಾತಾಗಿಬಿಟ್ಟರು. ಆ ಕಾಲದ ವಿಶ್ವದ ಪ್ರತಿ ಮೂಲೆಯಲ್ಲಿದ್ದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬಾಬಾ ಸಾಹೇಬರ ಬಗ್ಗೆ ಚರ್ಚೆಯಾಗುತ್ತಿತ್ತು. ಶ್ರೇಷ್ಠ ರಾಜಕೀಯ ಚಿಂತಕರು, ಅರ್ಥಶಾಸ್ತ್ರಜ್ಞರು, ವಿದೇಶಿ ನೀತಿ ನಿರೂಪಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನದ ಬಗ್ಗೆ ಬೆರಗಾಗಿದ್ದರು. ಆದರೆ, ಈ ಜಗತ್ಪ್ರಸಿದ್ಧಿಯೇ ಬಾಬಾ ಸಾಹೇಬರಿಗೆ ಮುಳುವಾಯಿತೇನೋ..? ಗೊತ್ತಿಲ್ಲ.
ಈ ದೇಶಕ್ಕೆ ಪ್ರಧಾನಮಂತ್ರಿ, ರಾಷ್ಟ್ರಪತಿ ಆಗುವಂಥ ಎಲ್ಲ ಅರ್ಹತೆ ಇದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸಂಪುಟದಲ್ಲಿ ಇರಲಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಯಿತು. ಇದನ್ನು ಯಾರು ಅಲ್ಲಗಳೆಯುವಂತಿಲ್ಲ. ಕಾಂಗ್ರೆಸ್ ಮತ್ತು ನೆಹರು ಕೃಪಾಪೋಷಿತ ರಾಜಕೀಯ ವ್ಯವಸ್ಥೆ ಅವರನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಂಡಿತು ಎಂಬುದು ರಹಸ್ಯ ಇತಿಹಾಸವೇನಲ್ಲ. ದುರಂತವೆಂದರೆ, ಈವರೆಗೂ ತಾನು ಮಾಡಿದ ತಪ್ಪಿನ ಬಗ್ಗೆ ಕಾಂಗ್ರೆಸ್ ಪಶ್ಚಾತ್ತಾಪ ಪಟ್ಟಿಲ್ಲ ಹಾಗೂ ಆ ಮಹಾನ್ ವ್ಯಕ್ತಿಯ ಕ್ಷಮೆಯನ್ನೂ ಕೇಳಿಲ್ಲ.
130ನೇ ಜನ್ಮದಿನದ ನಿಮಿತ್ತ ಇಡೀ ದೇಶವೇ ಬಾಬಾ ಸಾಹೇಬರನ್ನು ಸ್ಮರಣೆ ಮಾಡುತ್ತಿದೆ. ಮುಖ್ಯಮಂತ್ರಿಗಳು, ಮಂತ್ರಿ ಮಹೋದಯರು, ಅಧಿಕಾರಿಗಳು ಎಲ್ಲರೂ ಎಲ್ಲ ಕಡೆ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಂದಲೇ ಸಂವಿಧಾನ, ಅವರಿಂದಲೇ ಪ್ರಜಾಪ್ರಭುತ್ವ ಎಂದೆಲ್ಲ ಚರ್ಚೆ ಮಾಡುತ್ತಿದ್ದೇವೆ. ಆದರೆ, ಅವರು ಹೇಳಿದ್ದ ಒಂದು ಮಾತು, “ನಾವು.. ಮನುಷ್ಯರೆಲ್ಲ ಒಂದು, ಎಲ್ಲರೂ ಸಮಾನರು” ಎನ್ನುವುದನ್ನು ಮಾತ್ರ ಮರೆಯುತ್ತಿದ್ದೇವೆ. ಕೇವಲ ಅರೆ ಗಂಟಲಿನಿಂದ ಬರುವ ಅಂಬೇಡ್ಕರ್ ವಾದ, ತತ್ತ್ವಜಪ ಇನ್ನೂ ಕೊಂಚ ಆಳದಲ್ಲಿರುವ ಹೃದಯದಿಂದ ಏಕೆ ಬರುತ್ತಿಲ್ಲ?
ಕಾಂಗ್ರೆಸ್‌ಗೆ ಅಧಿಕಾರವಿಲ್ಲ, ಸುಮ್ಮನಿದೆ! ಆದರೆ, ಬಿಜೆಪಿಗೆ ಅಧಿಕಾರವಿದೆ, ಬಹುಶಃ ನರ್ಮದಾ ತೀರದಲ್ಲಿ ಪಟೇಲರಿಗೆ ʼನ್ಯಾಯʼ ಸಿಕ್ಕಿದಂತೆ ಇನ್ನಾವುದೋ ನದಿ ದಂಡೆಯಲ್ಲಿ ಬಾಬಾ ಸಾಹೇಬರಿಗೂ ನ್ಯಾಯ ಸಿಗಬಹುದು.
ಆದರೆ, ಸಿರಿತನ-ಬಡತನದಲ್ಲಿ ಆಕಾಶ-ಭೂಮಿಯಷ್ಟು ವ್ಯತ್ಯಾಸವನ್ನು ಮೈಮೇಲೆ ಹೇರಿಕೊಡಿರುವ ಮುಂಬಯಿಯಲ್ಲಿ ಮಹಾರಾಷ್ಟ್ರ ಸರಕಾರ ಈಗಾಗಲೇ ಇಂಥ ಯೋಜನೆಯೊಂದನ್ನು ಸಂವಿಧಾನ ಶೀಲ್ಪಿಗಾಗಿ ರೂಪಿಸಿದೆ!
ಕಾಲವೂ ಕರಗುತ್ತಿದೆ. ಸ್ಥಾವರಗಳಿಗೆ ಕೊರತೆ ಇಲ್ಲ, ಜಂಗಮಕ್ಕೆ ಉಳಿವಿಲ್ಲ. ಇವತ್ತಿನ ಭಾರತಕ್ಕೆ ನನ್ನ ಪ್ರಣಾಮಗಳು!! ಜತೆಗೆ, ಅಡಗೂರು ವಿಶ್ವನಾಥ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ.
****ʼ
- Dr B R Ambedkar photos courtesy: Wikipedia